ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಘಟ್ಟದಲ್ಲಿ ಜಲ ವಿದ್ಯುತ್ ಘಟಕ: ಕೇಂದ್ರದ ಉನ್ನತಾಧಿಕಾರ ತಂಡದ ಪರಿಶೀಲನೆ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ಹಾಸನ: ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ತಂಡವೊಂದು ಶುಕ್ರವಾರ ಪಶ್ಚಿಮ ಘಟ್ಟದ ಹೊಂಗಡಹಳ್ಳ ಹಾಗೂ ಯಡಕುಮರಿಯಲ್ಲಿ ನಿರ್ಮಾಣವಾಗುತ್ತಿರುವ ಜಲ ವಿದ್ಯುತ್ ಘಟಕದ ಪರಿಶೀಲನೆ ನಡೆಸಿತು.

ತಂಡವು ಹೈಕೋರ್ಟ್ ಸೂಚನೆಯ ಮೇರೆಗೆ ಪರಿಶೀಲನೆ ನಡೆಸಲು ಬಂದಿದ್ದು, ಬರುವ 23ರಂದು ನಡೆಯಲಿರುವ ವಿಚಾರಣೆಗೂ ಮೊದಲು ವರದಿ ಸಲ್ಲಿಸಬೇಕಾಗಿದೆ.

ಹಿನ್ನೆಲೆ: ಪಶ್ಚಿಮ ಘಟ್ಟದ ಸಕಲೇಶಪುರ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರ ಹಲವು ಕಿರು ವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡಿದ್ದು, ಪರಿಸರವಾದಿಗಳ ವಿರೋಧದಿಂದ ಇವುಗಳಲ್ಲಿ ಕೆಲವು ಯೋಜನೆಗಳಿಗೆ ತಡೆಯಾಜ್ಞೆ ನೀಡಲಾಗಿತ್ತು. ಆದರೆ ಎರಡು ಘಟಕಗಳ ಕಾಮಗಾರಿ ಆರಂಭಿಸಿರುವ ಮಾರುತಿ ಪವರ್ ಝೆನ್ ಕಂಪೆನಿಯವರು `ಶೇ 70ರಷ್ಟು ಕೆಲಸ ಮುಗಿದಿರುವುದರಿಂದ ಯೋಜನೆ ಪೂರ್ಣಗೊಳಿಸಲು ಅನುಮತಿ ನೀಡಬೇಕು~ ಎಂದು ಮನವಿ ಮಾಡಿದ್ದರು. ಅದರಂತೆ ಅಂತಿಮ ತೀರ್ಪಿಗೆ ಬದ್ಧರಾಗಬೇಕು ಎಂಬ ನಿಬಂಧನೆಯ ಮೇಲೆ ಯೋಜನೆ ಮುಂದುವರಿಸಲು ಅನುಮತಿ ನೀಡಿತ್ತು. ಇದಾದ ಬಳಿಕ ಕೆಲವು ಪರಿಸರವಾದಿ ಸಂಘಟನೆಗಳು ಮತ್ತೆ ಸಾರ್ವಜನಿಕ ಹಿತಾಸಕ್ತಿ ದಾವೆ ಹಾಕಿ, `ಮಾರುತಿ ಸಂಸ್ಥೆ ಶೇ 50ರಷ್ಟು ಕಾಮಗಾರಿಯನ್ನೂ ಮುಗಿಸಿಲ್ಲ, ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದೆ ಮತ್ತು ಸರ್ಕಾರದ ಜತೆಗೆ ಮಾಡಿರುವ ಹಲವು ಒಪ್ಪಂದಗಳನ್ನು ಉಲ್ಲಂಘನೆ ಮಾಡಿದೆ~ ಎಂದಿದ್ದರು. ಕೆಲವು ತಿಂಗಳ ಹಿಂದೆ ವನ್ಯಜೀವಿ ಸಂರಕ್ಷಣಾ ಮಂಡಳಿಯ ಉಪಾಧ್ಯಕ್ಷ ಅನಿಲ್ ಕುಂಬ್ಳೆ ಹಾಗೂ ಸದಸ್ಯ ಸಂಜಯ್ ಗುಬ್ಬಿ ಅವರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಯೋಜನೆಯಿಂದ ಅಪಾಯವಿದೆ ಎಂಬ ವರದಿಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಜ.6ರಂದು ಉಚ್ಚ ನ್ಯಾಯಾಲಯ `ಉನ್ನತ ಸಮಿತಿಯಿಂದ ಪರಿಶೀಲನೆ ನಡೆಸಿ ವರದಿ ನೀಡಬೇಕು~ ಎಂದು ಸರ್ಕಾರಕ್ಕೆ ಸೂಚನೆ ನೀಡಿತ್ತು. ಶುಕ್ರವಾರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ ಗೋಗಿ, ಅರಣ್ಯ ಸಂರಕ್ಷಣಾಧಿಕಾರಿಗಳಾದ ಸೋಮಶೇಖರ್ ಹಾಗೂ ಮುರಳಿ ಬಂದು ಪರಿಶೀಲನೆ ನಡೆಸಿದ್ದಾರೆ.

ಭೇಟಿಯ ಬಗ್ಗೆ ಪತ್ರಿಕೆಗಳಿಗೆ ಹೇಳಿಕೆ ನೀಡಲು ನಿರಾಕರಿಸಿದ ಅವರು, `ವಿಚಾರ ನ್ಯಾಯಾಲಯದಲ್ಲಿದೆ. ನಾವು ಯಾವುದೇ ವಿವರ ನೀಡುವಂತಿಲ್ಲ. ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತೇವೆ~ ಎಂದರು.

ತಂಡ ಬರುತ್ತಿರುವ ವಿಚಾರ ತಿಳಿದು ಕೆಲವು ಸ್ಥಳೀಯರು ಮತ್ತು ಪರಿಸರವಾದಿ ಸಂಘಟನೆಯ ಪ್ರತಿನಿಧಿಗಳೂ ಸ್ಥಳಕ್ಕೆ ಬಂದಿದ್ದರು. ಆದರೆ `ಅಧಿಕಾರಿಗಳು ನಮ್ಮ ಅಭಿಪ್ರಾಯಗಳನ್ನು ಆಲಿಸಿಲ್ಲ~ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಅದಕ್ಕಿಂತ ಮುಖ್ಯವಾಗಿ ಕೇಂದ್ರದಿಂದ ಬಂದಿದ್ದ ಅಧಿಕಾರಿಗಳ ತಂಡ ಕಾಡಿನೊಳಗೆ ಹೋಗಲು ಅರಣ್ಯ ಇಲಾಖೆಯ ವಾಹನದ ಬದಲು ಮಾರುತಿ ಝೆನ್ ಕಂಪೆನಿಯವರ ವಾಹನದಲ್ಲೇ ಓಡಾಡಿದ್ದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳೂ ಸಹ ಅದೇ ವಾಹನದಲ್ಲಿ ಓಡಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT