ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪಶ್ಚಿಮಘಟ್ಟಗಳಲ್ಲಿ ಮಳೆ ಪ್ರಮಾಣ ಕುಸಿತ'

ಡಾ.ಎ.ಜೆ.ಟಿ.ಜಾನ್‌ಸಿಂಗ್ ಆತಂಕ
Last Updated 10 ಏಪ್ರಿಲ್ 2013, 6:22 IST
ಅಕ್ಷರ ಗಾತ್ರ

ಮೈಸೂರು: `ವಾತಾವರಣದಲ್ಲಿನ ಬದಲಾವಣೆಯಿಂದ ಪಶ್ಚಿಮಘಟ್ಟ ಗಳಲ್ಲೂ ಮಳೆಯ ಪ್ರಮಾಣ ಕಡಿಮೆ ಆಗುತ್ತಿದೆ' ಎಂದು ನೇಚರ್ ಕನ್ಸರ್‌ವೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎ.ಜೆ.ಟಿ. ಜಾನ್‌ಸಿಂಗ್ ಆತಂಕ ವ್ಯಕ್ತಪಡಿಸಿದರು.

ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ 7ನೇ ಸಂರಕ್ಷಣಾ ನುಡಿ ಮಾಲಿಕೆ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ `ಪಶ್ಚಿಮಘಟ್ಟಗಳ ಸಂರಕ್ಷಣೆ' ವಿಷಯ ಕುರಿತು ಮಾತನಾಡಿದರು.

`ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಮಧ್ಯಪ್ರದೇಶಗಳ ಪಶ್ಚಿಮಘಟ್ಟಗಳಲ್ಲಿ ಮಳೆ ಪ್ರಮಾಣ ಕಡಿಮೆ ಆಗುತ್ತಿದೆ. ಇದರಿಂದಾಗಿ ಬಂಡೀಪುರದಲ್ಲಿ ನೀರಿನ ಪ್ರಮಾಣವೂ ಕಡಿಮೆ ಆಗುತ್ತಿದೆ. ಪ್ರಾಣಿಗಳು ನೀರಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಹಾರಾಷ್ಟ್ರ ಹೊರತು  ಪಡಿಸಿದರೆ ಉಳಿದ ರಾಜ್ಯಗಳ ಪಶ್ಚಿಮ ಘಟ್ಟಗಳಲ್ಲಿ ಕನಿಷ್ಠ 2,500 ಮಿ.ಮೀ ಮಳೆಯಾಗುತ್ತದೆ. ಆದರೆ, ಕರ್ನಾಟಕದಲ್ಲಿ ಈ ಪ್ರಮಾಣ ಕಡಿಮೆ ಆಗಿದೆ. ಹೀಗಾಗಿ ಕಾಡು ಪ್ರಾಣಿಗಳು ನೀರಿಲ್ಲದೆ ನಾಡಿನತ್ತ ಮುಖಮಾಡುವಂತೆ ಆಗಿದೆ' ಎಂದರು.

`ಇತ್ತೀಚಿನ ದಿನಗಳಲ್ಲಿ ಪಶ್ಚಿಮಘಟ್ಟಗಳಲ್ಲಿ ಕಾಡುಗಳ ಒತ್ತುವರಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ರಸ್ತೆಗಳ ಅಗಲೀಕರಣ, ಅನಧಿಕೃತ ಒತ್ತುವರಿ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮಘಟ್ಟಗಳ ಅರಣ್ಯ ಪ್ರದೇಶವನ್ನು ನಾಶ ಮಾಡಲಾಗುತ್ತಿದೆ. ಜತೆಗೆ ಪ್ರಾಣಿಗಳನ್ನು ಬೇಟೆ ಆಡುವ ಮೂಲಕ ವೈವಿಧ್ಯಮಯ ಪ್ರಾಣಿ ಸಂಕುಲವನ್ನು ನಾಶ ಮಾಡಲಾಗುತ್ತಿದೆ. ಅಲ್ಲದೆ ಅಪಾಯದ ಅಂಚಿನಲ್ಲಿರುವ ಸಸ್ಯವರ್ಗ ಕಾಣಸಿಗುತ್ತಿಲ್ಲ. ಆನೆ, ಕೋತಿ, ಹುಲಿ, ಬ್ಲಾಕ್ ಬಕ್, ಚೌಸಿಂಗ್, ಅಳಿಲು, ಆನೆಗಳು, ಕಾಡು ಕುರಿ, ಮೌಸ್ ಡೀರ್, ವೈಲ್ಡ್ ಬೋರ್ ಮತ್ತು 508 ಪಕ್ಷಿ ಸಂಕುಲಗಳ ಪೈಕಿ ಕಾಡುಕೋಳಿ, ಮಮ್ಮಲ್ಸ್‌ಗಳು ಬಂಡೀಪುರ ಮತ್ತು ಮದುಮಲೈಗಳಲ್ಲಿ ಮಾತ್ರ ಕಾಣಸಿಗುತ್ತಿವೆ' ಎಂದು ಹೇಳಿದರು.

`ಪಶ್ಚಿಮಘಟ್ಟಗಳು ಅಲ್ಲಿನ ಗುಡ್ಡಗಾಡು ಪ್ರದೇಶದ ಜನರಿಗೆ ಅರಣ್ಯ ಮೂಲದ ಆಹಾರ ಮತ್ತು ನೈಸರ್ಗಿಕ ನೆಲೆ ಒದಗಿಸಿವೆ. ದೇಶದಲ್ಲಿ ಶೇ 5ರಷ್ಟು ಅರಣ್ಯವಿದ್ದರೂ 4 ರಿಂದ 15 ಸಾವಿರ ಪ್ರಭೇದದ ಸಸ್ಯವರ್ಗ ಇದೆ. ಪಶ್ಚಿಮಘಟ್ಟದಲ್ಲಿ ಇದುವರೆಗೂ ಅನ್ವೇಷಣೆ ಮಾಡಲಾಗದ ಕೆಲವೊಂದು ವರ್ಗದ ಜೀವಿಗಳು ಇಲ್ಲಿ ಜೀವಿಸುತ್ತಿವೆ. ಪ್ರಾಣಿಗಳ ಓಡಾಟಕ್ಕೆ ನಿರ್ಮಿಸಲಾಗಿರುವ ಕಾರಿಡಾರ್‌ಗಳೂ ಇತ್ತೀಚಿನ ದಿನಗಳಲ್ಲಿ ಒತ್ತುವರಿ ಆಗು ತ್ತಿದ್ದು, ಇದು ಜೀವ ವೈವಿಧ್ಯತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT