ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮಾಭಿಮುಖ ಹರಿಯುವ ಹಳ್ಳಗಳ ಯೋಜನೆ

Last Updated 22 ಜನವರಿ 2011, 7:20 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಜಿಲ್ಲೆ  ಸೇರಿದಂತೆ ರಾಜ್ಯದ 20 ಜಿಲ್ಲೆಗಳ ಸುಮಾರು 25 ಸಾವಿರ ಕೆರೆಗಳಿಗೆ ನದಿ ನೀರು ಹರಿಸುವ ಯೋಜನೆಯ ಪ್ರಾಥಮಿಕ ಮುಖ್ಯ ಸಮೀಕ್ಷಾ ವರದಿಯನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಹೈದರಬಾದ್‌ನ ಎನ್‌ಆರ್‌ಎಸ್‌ಎ ಸಿದ್ಧಪಡಿಸಿ, ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.

ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಯ ಸಮೀಕ್ಷೆ ಜವಾಬ್ದಾರಿಯನ್ನು ಎನ್‌ಆರ್‌ಎಸ್‌ಎಗೆ ವಹಿಸಿದ್ದರು. ನಂತರ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಮೀಕ್ಷೆಗೆ ಬೇಕಾದ ಹಣ ಒದಗಿಸಿತು. ತ್ವರಿತಗತಿಯಲ್ಲಿ ಸಮೀಕ್ಷಾ ವರದಿ ಸಿದ್ಧವಾಗಲು ಶ್ರಮಿಸಿರುವ ಮುಖ್ಯಮಂತ್ರಿ ಮತ್ತು  ಜಲಸಂಪನ್ಮೂಲ ಸಚಿವರನ್ನು ಅಭಿನಂದಿಸುವುದಾಗಿ ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅವರ 3 ಯೋಜನೆಗಳ ಸಮೀಕ್ಷಾ ವರದಿಯನ್ನು ಸರ್ಕಾರ ಪಡೆದಿದೆ. ಅದರಲ್ಲಿ 1ನೇ ಯೋಜನೆಯಿಂದ ಹಾಸನ, ಮಂಡ್ಯ,        ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳಿಗೆ ಹಾಗೂ ಬೆಂಗಳೂರಿಗೆ ಕುಡಿಯುವ ನೀರು ಕೊಡುವ ಯೋಜನೆಯನ್ನು ‘ಪೈಲಟ್ ಪ್ರಾಜೆಕ್ಟ್’ ಆಗಿ ಕೈಗೆತ್ತಿಕೊಂಡು, ವಿಸ್ತೃತ ಯೋಜನಾ ವರದಿ ತಯಾರಿಸಲು ಆದೇಶ ನೀಡಿರುವುದು ಸ್ವಾಗತಾರ್ಹ ಎಂದರು.

ಜಲಸಂಪನ್ಮೂಲ ಸಚಿವ ಎಸ್.ಆರ್.ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಆರು  ತಿಂಗಳೊಳಗಾಗಿ ವರದಿ ತಯಾರಿಸಲು ಕಾಲಮಿತಿ              ನಿಗದಿಪಡಿಸಿರುವುದು ಯೋಜನೆಯ ಶೀಘ್ರ ಚಾಲನೆಗೆ  ಅನುಕೂಲವಾಗಲಿದೆ ಎಂದು ವಿಶ್ವಾಸದ ವ್ಯಕ್ತಪಡಿಸಿದರು. ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸಲು ರೂ. 20 ಕೋಟಿ ಅಗತ್ಯವಿದೆ. ಹಣವನ್ನು ತಕ್ಷಣ ಬಿಡುಗಡೆ ಮಾಡಿ, ನೀರಾವರಿ ಇಲಾಖೆಯಿಂದಲೇ ವರದಿ ಸಿದ್ಧಪಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯ ಎಲ್ಲ 2537 ಹಳ್ಳಿಗಳಲ್ಲಿ ಸುಮಾರು 1457  ಕೆರೆಗಳಿಗೂ ಹಾಗೂ ಕೆರೆಗಳಿಲ್ಲದ ಗ್ರಾಮಗಳಲ್ಲಿ ಹೊಸ  ಕೆರೆಗಳನ್ನು ನಿರ್ಮಾಣ ಮಾಡಿ ಅಗತ್ಯವಿರುವ ನೀರನ್ನು ವಿವಿಧ ನದಿ ಮೂಲಗಳಿಂದ ತುಂಬಿಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕೆರೆಗಳಿಗೆ ಕುಡಿಯುವ ನೀರಿಗಾಗಿ ಯೋಜನೆ ರೂಪಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಾಗೂ  ವಿಶ್ವ ಬ್ಯಾಂಕ್ ಯೋಜನೆಯಡಿ ನೆರವು ಪಡೆಯಲು  ಯೋಜಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಹೇಮಾವತಿ ವ್ಯಾಪ್ತಿಯಲ್ಲಿನ ಕೆರೆಗಳಿಗೆ ನೀರು ತುಂಬಿಸಲು ನಿರ್ಣಯ ಕೈಗೊಳ್ಳಬೇಕು; ಏತ ನೀರಾವರಿ ತುಂಬಿಸುವ ಕೆರೆಗಳು, ಭದ್ರಾ ಮೇಲ್ದಂಡೆ ಎ ಸ್ಕೀಂ ವ್ಯಾಪ್ತಿಯ ಕೆರೆಗಳು, ಕುಡಿಯುವ ನೀರಿನ ಯೋಜನೆಗಾಗಿ ಹೇಮಾವತಿ ನದಿಯಿಂದ ತುಂಬುವ ಕೆರೆಗಳನ್ನು ಹೊರತುಪಡಿಸಿ ಉಳಿದ ಕೆರೆಗಳಿಗೆ ಭದ್ರಾ ಮೇಲ್ದಂಡೆ ಬಿ ಸ್ಕೀಂ ಹಾಗೂ ಹೇಮಾವತಿ ಪ್ಲಡ್ ಸ್ಕೀಂ ಯೋಜನೆಯಲ್ಲಿ ನೀರು ತುಂಬಿಸುವ ಬೇಡಿಕೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಸೇರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದರು.

ಮುಖ್ಯಮಂತ್ರಿಯವರು ನೀರಾವರಿ ದಶಕವೆಂದು ಘೋಷಿಸಿ ಆ ಅವಧಿಯಲ್ಲಿ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕೈಗೊಂಡಿರುವ ಕ್ರಮ ಸ್ವಾಗತಾರ್ಹ. ಪ್ರಗತಿಯಲ್ಲಿರುವ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವುದರ ಜತೆಗೆ ರಾಜ್ಯದ ಎಲ್ಲ 36,500 ಕೆರೆಗಳಿಗೆ ನದಿ ನೀರು ತುಂಬಿಸುವ ವಿಶೇಷ ಯೋಜನೆಗೆ ಗಮನ ಹರಿಸಬೇಕು. ನೀರಾವರಿ ವಿಷಯದಲ್ಲಿ ರಾಜಕೀಯ ಬದಿಗೊತ್ತಿ ಜಿಲ್ಲೆಯ ಎಲ್ಲ ಮುಖಂಡರು ಪಕ್ಷಭೇದ ಮರೆತು ಬೆಂಬಲಿಸಬೇಕು ಎಂದು ಸಂಸದರು ಮನವಿ ಮಾಡಿದರು.ಗೋಷ್ಠಿಯಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ, ಮುಖಂಡರಾದ ಕುಂದರನಹಳ್ಳಿ ರಮೇಶ್, ಟಿ.ಆರ್.ರಘೋತ್ತಮರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT