ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ: ಸೇನೆ- ಸರ್ಕಾರ ಸಂಧಾನ ಯತ್ನ

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ):  ಸರ್ಕಾರ ಮತ್ತು ಸೇನೆಯ ನಡುವೆ ಸಂಘರ್ಷ ಆರಂಭವಾಗಿ, ಕ್ಷಿಪ್ರ ಕ್ರಾಂತಿಯ ವದಂತಿ ಹಬ್ಬಿದ ಬೆನ್ನಲ್ಲೇ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಅವರು ದಿಢೀರ್ ದುಬೈಗೆ ತೆರಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹಾಗಾಗಿ ಅಲ್ಲಿನ (ಪಾಕ್) ಸ್ಥಿತಿ ಅನಿಶ್ಚಿತ ಹಾಗೂ ಕುತೂಹಲಕಾರಿಯಾಗಿದೆ.

ಜರ್ದಾರಿ ಅವರು ಒಂದು ದಿನದ ಖಾಸಗಿ ಭೇಟಿಯ ನಿಮಿತ್ತ ದುಬೈಗೆ ತೆರಳಿದ್ದು, ಆರೋಗ್ಯ ತಪಾಸಣೆ ಹಾಗೂ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, 24 ಗಂಟೆಗಳಲ್ಲಿಯೇ ಪಾಕಿಸ್ತಾನಕ್ಕೆ ಹಿಂತಿರುಗಲಿದ್ದಾರೆ ಎಂದು ಅಧ್ಯಕ್ಷರ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಪ್ರಧಾನಿ ಯೂಸುಫ್ ರಜಾ ಗಿಲಾನಿ ಮತ್ತು ಸೇನೆಯ ಮುಖ್ಯಸ್ಥ ಜನರಲ್ ಅಶ್ಫಾಕ್ ಪರ್ವೇಜ್ ಕಯಾನಿ ನಡುವೆ ರಾಜಿ ಸಂಧಾನ ನಡೆಸಲು ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮಿತ್ರ ಪಕ್ಷವಾಗಿರುವ ಪಿಎಂಎಲ್-ಕ್ಯೂ ನಾಯಕ ಚೌಧರಿ ಶುಜಾತ್ ಹುಸೇನ್ ಸಂಧಾನಕಾರರಾಗಿ ಹೊರಹೊಮ್ಮಿದ್ದಾರೆ.

ಸಂಧಾನಕ್ಕಾಗಿ ಹುಸೇನ್ ಅವರನ್ನು ಸರ್ಕಾರದ ವತಿಯಿಂದಲೇ ನಿಯುಕ್ತಿ ಮಾಡಲಾಗಿದೆ. ಮುಷರಫ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹುಸೇನ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದು, ಭದ್ರತಾ ಪಡೆಗಳು ಹಾಗೂ ಸೇನೆಯ ಮುಖ್ಯಸ್ಥರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಗಮನ ಸೆಳೆದ ಕೋರ್ಟ್ ವಿಚಾರಣೆ: ಮೆಮೊಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ಹಾಗೂ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಅವರು ಹೊಂದಿರುವ ಅಕ್ರಮ ಆಸ್ತಿ ಕುರಿತು ತನಿಖೆ ನಡೆಸದ ಪ್ರಧಾನಿ ಗಿಲಾನಿ ಅವರ ಬಗ್ಗೆ ಛೀಮಾರಿ ಹಾಕಿರುವ ಸುಪ್ರಿಂ ಕೋರ್ಟ್ ಜ.16ರಂದು ವಿಚಾರಣೆ ಮುಂದುವರೆಸುತ್ತಿದ್ದು, ಎಲ್ಲರ ಗಮನ ಅತ್ತ ಕೇಂದ್ರೀಕೃತವಾಗಿದೆ.

ಸುಪ್ರೀಂ ಕೋರ್ಟ್ ಸೋಮವಾರ ನಡೆಸುವ ವಿಚಾರಣೆ ಸಂದರ್ಭದಲ್ಲಿ ಪ್ರಧಾನಿ ಗಿಲಾನಿ ಇನ್ನಷ್ಟು ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ.

ನಡೆಯದ ಸೇನಾಧಿಕಾರಿಗಳ ಸಭೆ: ಬುಧವಾರ ರಕ್ಷಣಾ ಕಾರ್ಯದರ್ಶಿ ಲೋಧಿ ವಜಾ ಹಾಗೂ ಕಯಾನಿ ಸಲಹೆ ಕೇಳದೇ ರಾವಲ್ಪಿಂಡಿ ಸೇನಾ ನೆಲೆಗೆ ನೂತನ ಮುಖ್ಯಸ್ಥರನ್ನು ನೇಮಿಸಿದ್ದರ ಹಿನ್ನೆಲೆಯಲ್ಲಿ ಜನರಲ್ ಕಯಾನಿ ಗುರುವಾರ ಹಿರಿಯ ಸೇನಾಧಿಕಾರಿಗಳ ತುರ್ತು ಸಭೆ ಕರೆದಿದ್ದರೂ ಅದು ರಾತ್ರಿಯವರೆಗೆ ನಡೆಯಲಿಲ್ಲ.

ಕಯಾನಿ ವಜಾ ತಡೆಗೆ ಅರ್ಜಿ: ಮೆಮೊಗೇಟ್ ಹಗರಣದ ಹಿನ್ನೆಲೆಯಲ್ಲಿ ಪಾಕ್ ಸರ್ಕಾರ, ಸೇನಾ ಮುಖ್ಯಸ್ಥ ಕಯಾನಿ ಮತ್ತು ಐಎಸ್‌ಐ ಮುಖ್ಯಸ್ಥ ಅಹಮದ್ ಶುಜಾ ಪಾಷಾ ಅವರನ್ನು ವಜಾ ಮಾಡುವ ಸಾಧ್ಯತೆ ಇದ್ದು, ಇಂತಹ ಕ್ರಮ ಕೈಗೊಳ್ಳದಂತೆ ಅಧ್ಯಕ್ಷರು ಮತ್ತು ಪ್ರಧಾನಿಗೆ ಸೂಚನೆ ನೀಡುವಂತೆ ಕೋರಿ ಇಸ್ಲಾಮಾಬಾದ್ ಹೈಕೋರ್ಟಿನಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿದ್ದು, ನ್ಯಾಯಾಲಯ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದೆ. ಮೌಲ್ವಿ ಇಕ್ಬಾಲ್ ಹೈದರ್ ಎನ್ನುವವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.

`ಇನ್ನೊಂದು ದಂಗೆ ಬೇಡ~: ಮೆಮೊಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ ದುರ್ಬಲ ಸರ್ಕಾರ ಮತ್ತು ಪ್ರಭಾವಿ ಸೇನೆ ಮಧ್ಯೆ ಸಂಘರ್ಷ ಉಂಟಾಗಿರುವ ಹಿನ್ನೆಲೆಯಲ್ಲಿ ಮತ್ತೊಂದು ಸೇನಾ ಕ್ರಾಂತಿಗೆ ಅವಕಾಶ ಮಾಡಿಕೊಡದಂತೆ ಪಾಕ್ ಮಾಧ್ಯಮಗಳು ಸೇನೆಗೆ ಮನವಿ ಮಾಡಿವೆ.

10-15 ವರ್ಷಗಳ ಹಿಂದಾದರೆ, ಸೇನೆ ಮತ್ತು ಐಎಸ್‌ಐ ಮುಖ್ಯಸ್ಥರ ಕುರಿತು ಪ್ರಧಾನಿ ಗಿಲಾನಿ ಮಾಡಿರುವ ಟೀಕೆಗಳು ಸೇನಾ ಕ್ರಾಂತಿಗೆ ದಾರಿ ಮಾಡಿಕೊಡುತ್ತಿದ್ದವು. ಆದರೆ, ಮಾಧ್ಯಮಗಳ ಕಟ್ಟೆಚ್ಚರ ಹಾಗೂ ಪ್ರಬಲ ನ್ಯಾಯಾಂಗದ ಹಿನ್ನೆಲೆಯಲ್ಲಿ ಸೇನೆ ನೇರವಾಗಿ ಹಾಗೂ ಅಸಾಂವಿಧಾನಿಕವಾಗಿ ದೇಶದ ಆಡಳಿತ ಕೈಗೆ ತೆಗೆದುಕೊಳ್ಳುವಂತಿಲ್ಲ ಎಂದು ಪ್ರಭಾವಿ ಪತ್ರಿಕೆ `ಡಾನ್~ ಅಭಿಪ್ರಾಯಪಟ್ಟಿದೆ.

ಅಮೆರಿಕ ನಿಗಾ

ವಾಷಿಂಗ್ಟನ್: ಪಾಕ್‌ನಲ್ಲಿನ ಬೆಳವಣಿಗೆಗಳನ್ನು ಗಮನಿಸುತ್ತಿರುವುದಾಗಿ ಹೇಳಿರುವ ಅಮೆರಿಕ, ಆ ದೇಶದಲ್ಲಿ ನಾಗರಿಕ ಸರ್ಕಾರವನ್ನು ಬೆಂಬಲಿಸುವುದಾಗಿ ಪುನರುಚ್ಚರಿಸಿದೆ.

`ಪಾಕ್ ಸೇನೆಯ ಜತೆ ನಮಗೆ ಬಲವಾದ ಸಂಬಂಧವಿದೆ. ನಾವು ನಾಗರಿಕ ಸರ್ಕಾರವನ್ನು ಬೆಂಬಲಿಸುತ್ತೇವೆ. ಉಭಯ ಬಣಗಳು (ಸರ್ಕಾರ ಮತ್ತು ಸೇನೆ) ಜತೆಯಾಗಿ ಕೆಲಸ ಮಾಡಬೇಕು ಎನ್ನುವುದು ನಮ್ಮ ಆಶಯ. ಸಮಸ್ಯೆಯನ್ನು ಪಾಕಿಸ್ತಾನವೇ ಬಗೆಹರಿಸಿಕೊಳ್ಳಬೇಕು. ಅವರ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದು ಸರಿಯಾಗಲಾರದು~ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರರಾದ ವಿಕ್ಟೋರಿಯಾ ನಲಂಡ್  ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT