ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಅಪನಂಬಿಕೆ ನಿವಾರಣೆಗೆ ಸತತ ಯತ್ನ: ನಿರುಪಮಾ ರಾವ್

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಪಾಕಿಸ್ತಾನದ ಜತೆಗಿನ ಅಪನಂಬಿಕೆ ಹೋಗಲಾಡಿಸಲು ಭಾರತ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ, ಆದರೆ ನೆರೆಯ ರಾಷ್ಟ್ರದ ಜತೆಗೆ ಸಂಬಂಧ ಸುಧಾರಣೆ ಮಾಡಿಕೊಳ್ಳುವುದು ಅಷ್ಟೊಂದು ಸುಲಭದ ಕೆಲಸವಲ್ಲ ಎಂದು ಅಮೆರಿಕದಲ್ಲಿನ ಭಾರತದ ರಾಯಭಾರಿ ನಿರುಪಮಾ ರಾವ್  ತಿಳಿಸಿದ್ದಾರೆ.

`ಅಪನಂಬಿಕೆ ಹೋಗಲಾಡಿಸಿ ಹದಗೆಟ್ಟಿರುವ ಸಂಬಂಧವನ್ನು ಸುಧಾರಿಸಲು ಭಾರತ ಸರ್ಕಾರವು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದೆ. ಆದರೆ ಈ ಕೆಲಸ ಸಾಧಿಸುವುದು ಅಷ್ಟೊಂದು ಸುಲಭವಲ್ಲ, ಆದರೂ ನಾವು ಆಶಾವಾದಿಗಳಾಗಿದ್ದೇವೆ~ ಎಂದು ಅವರು ತಿಳಿಸಿದ್ದಾರೆ.

ಕಳೆದ ಆರು ದಶಕಗಳಿಂದ ನೆರೆಯ ಪಾಕಿಸ್ತಾನದ ಜತೆ ಭಾರತವು ತುಂಬಾ ಕ್ಲಿಷ್ಟಕರವಾದ ಸಂಬಂಧವನ್ನು ಹೊಂದಿದೆ. ಒಮ್ಮೆಲೇ ಸಂಪೂರ್ಣ ಸುಧಾರಣೆ ಅಸಾಧ್ಯ. ಎರಡೂ ರಾಷ್ಟ್ರಗಳ ಜನತೆಯ ಮಧ್ಯೆ ಬಾಂಧವ್ಯ ಏರ್ಪಡಬೇಕಾದರೆ ವ್ಯಾಪಾರ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು ಎಂದು ರಾವ್ ಅಭಿಪ್ರಾಯಪಟ್ಟಿದ್ದಾರೆ.

ಗಡಿಯಲ್ಲಿ ಅದರಲ್ಲೂ ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ವಿಶ್ವಾಸರ್ಹತೆ ಮೂಡಿಸಲು ಎಲ್ಲಾ ಕ್ರಮ ತೆಗೆದುಕೊಳ್ಳಲಾಗಿದೆ. ಎರಡೂ ರಾಷ್ಟ್ರಗಳ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ನಡೆಸಲು ಅಗತ್ಯ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ಭಯೋತ್ಪಾದನೆ ನಿಯಂತ್ರಣಕ್ಕೆ ಪಾಕಿಸ್ತಾನ ಹೆಚ್ಚಿನ ಗಮನ ಹರಿಸಬೇಕು ಎಂಬುದು ಭಾರತದ ಒತ್ತಾಯವಾಗಿದೆ ಎಂದು ರಾವ್ ತಿಳಿಸಿದ್ದಾರೆ.

ತಾಲಿಬಾನ್ ಉಗ್ರರ ಜತೆ ಮಾತುಕತೆ- ಎಚ್ಚರಿಕೆ:  ತಾಲಿಬಾನ್ ಉಗ್ರರರ ಜತೆ ಅಮೆರಿಕದ ನೆರವಿನೊಂದಿಗೆ ನಡೆಯುತ್ತಿರುವ ಶಾಂತಿ ಮಾತುಕತೆಯು ದೀರ್ಘ ಕಾಲ ನಡೆದರೆ ಉಗ್ರರು ಮೇಲುಗೈ ಸಾಧಿಸುವ ಸಾಧ್ಯತೆಗಳು ಇರುತ್ತದೆ ಎಂದು ಭಾರತ ಎಚ್ಚರಿಕೆಯನ್ನು ನೀಡಿದೆ.

ಉಗ್ರರ ಸಮಸ್ಯೆಗೆ ರಾಜಕೀಯ ಪರಿಹಾರ ಸಿಗಬೇಕು ಎಂಬುದರ ಬಗ್ಗೆ ಎರಡು ಮಾತಿಲ್ಲ. ಆದರೆ ಮಾತುಕತೆ ದೀರ್ಘವಾದಷ್ಟು ಉಗ್ರಗಾಮಿಗಳು ಮೇಲುಗೈ ಸಾಧಿಸುತ್ತಾರೆ ಎಂಬುದನ್ನು ಮರೆಯಬಾರದು ಎಂದು ನಿರುಪಮಾ ರಾವ್ ತಿಳಿಸಿದ್ದಾರೆ.

ಆಫ್ಘಾನಿಸ್ತಾನದಲ್ಲಿನ ಭಯೋತ್ಪಾದನೆ ನಿರ್ಮೂಲನೆಗೆ ಅಮೆರಿಕ ನಡೆಸುತ್ತಿರುವ ಹೋರಾಟಕ್ಕೆ ಭಾರತದ ಸಂಪೂರ್ಣ ಬೆಂಬಲವಿದೆ ಮತ್ತು ಆಫ್ಘಾನಿಸ್ತಾನದಲ್ಲಿ ಸ್ಥಿರತೆ ನೆಲೆಸಬೇಕು ಎಂಬುದು ಭಾರತದ ಬಯಕೆ. ಆದ್ದರಿಂದ ಸಂಧಾನ ಮಾತುಕತೆಯ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಉಗ್ರಗಾಮಿಗಳ ಜತೆ ನಡೆಯುತ್ತಿರುವ ಮಾತುಕತೆ ದೀರ್ಘವಾಗಬಾರದು. ೀಗ ಮುಗಿಸಿದರೆ ಆಫ್ಘಾನಿಸ್ತಾನಕ್ಕೆ ಒಂದೇ ಅಲ್ಲ ಇಡೀ ಏಷ್ಯಾ ವಲಯಕ್ಕೆ ಒಳಿತಾಗುತ್ತದೆ ಎಂದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT