ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ದಿನಪತ್ರಿಕೆಗೆ ಭಾರತದ ಕಾಗದ

Last Updated 3 ಮೇ 2012, 19:30 IST
ಅಕ್ಷರ ಗಾತ್ರ

ಚಂಡೀಗಢ(ಪಿಟಿಐ): ಅಕ್ಷರ ಅರಬ್ಬಿ, ಪತ್ರಿಕೆ ಮುದ್ರಣ ಇಸ್ಲಾಮಾಬಾದ್‌ನಲ್ಲಿ, ಓದುಗರು ಪಾಕಿಸ್ತಾನದಾದ್ಯಂತದ ಜನ, ಆದರೆ ಕಾಗದ ಮಾತ್ರ ಭಾರತದ್ದು!

ಉಭಯ ದೇಶಗಳ ವಾಣಿಜ್ಯ ಸಂಬಂಧ ದಿನೇ ದಿನೇ ಉತ್ತಮಗೊಳ್ಳುತ್ತಿದೆ. ಪಾಕಿಸ್ತಾನವೂ ಭಾರತದ ಕೆಲವು ಸರಕುಗಳಿಗೆ ವಿಧಿಸಿದ್ದ ಆಮದು ನಿರ್ಬಂಧವನ್ನು ತೆಗೆದುಹಾಕುತ್ತಿದೆ. ಬದ್ಧ ವೈರಿಗಳಂತಿದ್ದ ಎರಡೂ ದೇಶಗಳ ನಡುವೆ ಈಗ ಆಗಿರುವ ಬೆಳವಣಿಗೆ ಬಿಳಿಯ ಹಾಳೆಯಷ್ಟೇ ಸ್ವಚ್ಛವಾದ ಆತ್ಮೀಯ ನಂಟು, ಕಪ್ಪು-ಬಿಳಿ ಬಣ್ಣದ ಬೆಸುಗೆ!

ವಾಘಾ ಗಡಿ ಮಾರ್ಗದಲ್ಲಿ ಇದೇ ಮೊದಲ ಬಾರಿಗೆ ಭಾರತದ ಮುದ್ರಣ ಕಾಗದ ಪಾಕಿಸ್ತಾನಕ್ಕೆ ರವಾನೆಯಾಯಿತು. ಮುದ್ರಣ ಕಾಗದದ ದೊಡ್ಡ ಸುರಳಿಗಳನ್ನು ಹೊತ್ತ ಲಾರಿ ಚಂಡೀಗಢದ ಕಾಗದ ಕಾರ್ಖಾನೆಯಿಂದ ಇಸ್ಲಾಮಾಬಾದ್‌ದತ್ತ ಗುರುವಾರ ಸಾಗಿತು.

ಪಾಕ್‌ನ ಪ್ರಮುಖ ದಿನಪತ್ರಿಕೆಗಳಾದ `ದಿ ಡಾನ್~ ಮತ್ತು `ಜಂಗ್ ಗ್ರೂಪ್~ ಚಂಡೀಗಢದ `ಖನ್ನಾ ಪೇಪರ್ ಮಿಲ್~ನಿಂದ 10 ಮೆಟ್ರಿಕ್ ಟನ್ ನ್ಯೂಸ್ ಪ್ರಿಂಟ್ ಸರಬರಾಜಾಗಿದೆ.ಭಾರತದಿಂದ ರಸ್ತೆ ಮಾರ್ಗವಾಗಿ ಆಮದಾಗುವ ಹಲವು ಸರಕುಗಳ ಮೇಲೆ ನಿರ್ಬಂಧ ವಿಧಿಸಿದ್ದ ಪಾಕ್, ಇದೀಗ ಅಟ್ಟಾರಿ-ವಾಘಾ ಗಡಿ ಮೂಲಕ ಮುದ್ರಣ ಕಾಗದ ಸೇರಿದಂತೆ 157 ಬಗೆ ಸಾಮಗ್ರಿ ಆಮದಿಗೆ ಅವಕಾಶ ನೀಡಿದೆ.

ಮುಂಬರುವ ದಿನಗಳಲ್ಲಿ ಪಾಕ್‌ಗೆ 2000ದಿಂದ 3000 ಮೆಟ್ರಿಕ್ ಟನ್ ಮುದ್ರಣ ಕಾಗದ ರಫ್ತು ಅವಕಾಶವಾಗಬಹುದು ಎಂದು ಖನ್ನಾ ಪೇಪರ್ ಮಿಲ್ ನಿರ್ದೇಶಕ ಸುನೀತ್ ಕೊಚ್ಛಾರ್ ಹೇಳಿದ್ದಾರೆ.
ಸದ್ಯ ಪಾಕಿಸ್ತಾನದಲ್ಲಿ ಒಂದು ದಿನಪತ್ರಿಕೆ ಮುದ್ರಿಸಲು ರೂ 28 ವೆಚ್ಚವಾಗುತ್ತಿದೆ. ಕೇವಲ 60 ಕಿ.ಮೀ. ದೂರದಲ್ಲಿರುವ ನಮ್ಮಲ್ಲಿಂದ ನ್ಯೂಸ್ ಪ್ರಿಂಟ್ ತರಿಸಿಕೊಂಡಲ್ಲಿ ಪಾಕ್ ದಿನಪತ್ರಿಕೆಗಳ ಮುದ್ರಣ ವೆಚ್ಚ ಬಹಳಷ್ಟು ಕಡಿಮೆ ಆಗಲಿದೆ ಎಂದು ಸುನೀತ್ ತಿಳಿಸಿದರು.

ಇದಕ್ಕೂ ಮುನ್ನ ಭಾರತದ ಮುದ್ರಣ ಕಾಗದ ದುಬೈ ಮಾರ್ಗವಾಗಿ ಪಾಕ್ ತಲುಪುತ್ತಿತ್ತು. ಇದರಿಂದ ಸಾಗಣೆ ವೆಚ್ಚ ವಿಪರೀತವಾಗುತ್ತಿತ್ತು. ಪರಿಣಾಮ ಪಾಕ್‌ನಲ್ಲಿ ದಿನ ಪತ್ರಿಕೆ ಬೆಲೆ ದುಬಾರಿಯಾಗಿದೆ. ಭಾರತದಲ್ಲಿ ಪತ್ರಿಕೆ ಬೆಲೆ ರೂ 2ರಿಂದ 4 ಇದ್ದರೆ ಪಾಕ್‌ನಲ್ಲಿ ರೂ 25ಕ್ಕೂ ಅಧಿಕ ಇದೆ. ಮುಂದಿನ ದಿನಗಳಲ್ಲಿ ಅಲ್ಲಿಯೂ ಪತ್ರಿಕೆ ಮುಖಬೆಲೆ ಇಳಿಯಲಿದೆ ಎಂದರು.

ತೈಲೋತ್ಪನ್ನ ಆಮದು ಗರಿಷ್ಠ ಶೇ 10ರ ಮಿತಿ!
ಮುದ್ರಣ ಕಾಗದ ಸೇರಿದಂತೆ 137 ಬಗೆಯ ಸರಕುಗಳ ಆಮದಿಗೆ ಹಸಿರು ನಿಶಾನೆ ತೋರಿಸಿದ ಪಾಕ್, ಇನ್ನೊಂದೆಡೆ ತೈಲೋತ್ಪನ್ನ ಆಮದು ಮೇಲೆ ಮಿತಿ ಹೇರಲು ಯೋಚಿಸುತ್ತಿದೆ`ದೇಶಕ್ಕೆ ಒಟ್ಟಾರೆಯಾಗಿ ಅಗತ್ಯವಿರುವ ತೈಲೋತ್ಪನ್ನಗಳಲ್ಲಿ ಶೇ 5ರಿಂದ 10ರಷ್ಟನ್ನು ಮಾತ್ರ ಭಾರತದಿಂದ ತರಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ~ ಎಂದು ಪಾಕ್‌ನ ಪ್ರಮುಖ ದಿನಪತ್ರಿಕೆ `ದಿ ಡಾನ್~ ಗುರುವಾರ ವರದಿ ಪ್ರಕಟಿಸಿದೆ.

ಸದ್ಯ ಪಾಕ್ ವಾರ್ಷಿಕ 1450 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ (ಈಗಿನ ಲೆಕ್ಕದಲ್ಲಿ ರೂ 76792 ಕೋಟಿ) ತೈಲೋತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಈ ನೆರೆಯ  ರಾಷ್ಟ್ರಕ್ಕೆ ಕನಿಷ್ಠ 7.25 ಕೋಟಿ ಡಾಲರ್(ರೂ383.50 ಕೋಟಿ) - ಗರಿಷ್ಠ 14.50 ಕೋಟಿ ಡಾಲರ್(ರೂ 767 ಕೋಟಿ) ಮೌಲ್ಯದ ತೈಲ ರಫ್ತು ಮಾಡುವ ಅವಕಾಶವಷ್ಟೇ ಭಾರತಕ್ಕೆ ಲಭಿಸಬಹುದು ಎಂದು ಪತ್ರಿಕೆ ವಿಶ್ಲೇಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT