ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ನಲ್ಲಿ ಭಾರಿ ಭೂಕಂಪ, ಭಾರತದಲ್ಲೂ ಕಂಪನ

Last Updated 19 ಜನವರಿ 2011, 9:40 IST
ಅಕ್ಷರ ಗಾತ್ರ

ಇಸ್ಲಾಮಾಬಾದ್, (ಎಎಫ್ ಪಿ): ಪಾಕಿಸ್ತಾನದ ನೈಋತ್ಯ ಭಾಗದಲ್ಲಿ ಬುಧವಾರ ನಸುಕಿನಲ್ಲಿ  ದೊಡ್ಡ ಪ್ರಮಾಣದ ಭೂಕಂಪ ಸಂಭವಿಸಿದ್ದು, ಭಯಭೀತರಾದ ನಾಗರಿಕರು ಪ್ರಾಣಭಯದಿಂದ ತಮ್ಮ ಮನೆಗಳಿಂದ ಹೊರಗೋಡಿದ ಪ್ರಕರಣಗಳು ವರದಿಯಾಗಿವೆ. ದೂರದ ದುಬೈ ಮತ್ತು ಭಾರತದಲ್ಲೂ ಈ ಭೂಕಂಪದ ಕಂಪನ ಅನುಭವವಾಗಿದೆ.

ಅಫಘಾನಿಸ್ತಾನ ಗಡಿಯ ಸಮೀಪದಲ್ಲಿರುವ ಪಾಕಿಸ್ತಾನದ ದಲಬಂದಿನ್ ಪಟ್ಟಣದ 50 ಕಿ.ಮೀ ದೂರದಲ್ಲಿ ಬುಧವಾರ ನಸುಕಿನ 1 ಗಂಟೆ 23 ನಿಮಿಷದಲ್ಲಿ ರಿಕ್ಟರ್ ಮಾಪಕದ ಪ್ರಕಾರ 7.4 ರಷ್ಟು ಪ್ರಮಾಣದ ಭೂಕಂಪ ಸಂಭವಿಸಿದೆ ಎಂದು  ಅಮೆರಿಕದ ಭೂ ವಿಜ್ಞಾನ ಸರ್ವೆ ಇಲಾಖೆ ತಿಳಿಸಿದೆ. 

ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ ಸುದ್ದಿಯ ದೃಶ್ಯದ ತುಣುಕುಗಳಲ್ಲಿ, ಭಯಭಿತರಾದ ನಾಗರಿಕರು ಚಳಿಯಲ್ಲೂ ಕುರಾನಿನ ಶ್ಲೋಕಗಳನ್ನು ಪಠಿಸುತ್ತಾ ಮನೆಗಳಿಂದ ಹೋರಗೋಡಿ ಬಂದುದು ಕಂಡುಬಂದಿದೆ.

ಅತಿ ವಿರಳ ಜನವಸತಿ ಇರುವ ಆ ಪ್ರದೇಶದಿಂದ ಇದುವರೆಗೂ ತುರ್ತು ಕರೆಗಳು ಬಂದಿಲ್ಲ, ಜೊತೆಗೆ ಯಾವುದೇ ಸಾವುನೋವಿನ ಘಟನೆಗಳು ವರದಿಯಾಗಿಲ್ಲ ಎಂದು ಪರಿಹಾರ ಕಾರ್ಯಕರ್ತರು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿನ ಈ ಭೂಕಂಪ ಕಂಪನ, ಭೂಕಂಪದ ಕೇಂದ್ರದಿಂದ 1300 ಕಿಲೋ ಮೀಟರ್ ದೂರದ ನವದೆಹಲಿಯಲ್ಲೂ ಅನುಭವಕ್ಕೆ ಬಂದಿದೆ. ಆದರೆ ಯಾವುದೇ ಬಗೆಯ ಹಾನಿಯ ಬಗ್ಗೆ ವರದಿಯಾಗಿಲ್ಲ. ಇದಲ್ಲದೇ ಅಬುಧಾಬಿ ಮತ್ತು ದುಬೈನಲ್ಲೂ ಕಂಪನದ ಅನುಭವವಾಗಿದೆ.

ಭೂಕಂಪದ ಕೇಂದ್ರವು ಭೂಮಿಯ ಅಡಿ 10 ಕಿ.ಮೀ ಕೆಳಗಿದ್ದು, ಈ ಪ್ರಮಾಣದ ಭೂಕಂಪದಿಂದ ಅಪಾರ ಸಾವುನೋವು ಸಂಭವಿಸಬಹುದೆಂದು ಅಮೆರಿಕದ ಭೂ ವಿಜ್ಞಾನ ಸರ್ವೆ ಇಲಾಖೆಯು ತನ್ನ ಜಾಲ ತಾಣದಲ್ಲಿ ಆತಂಕ ವ್ಯಕ್ತಪಡಿಸಿದೆ. 

ಇರಾನ್ ಮತ್ತು ಅಫಘಾನಿಸ್ತಾನ ಗಡಿಯ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ನೈಋತ್ಯದಲ್ಲಿರುವ ಅತಿ ಕಡಿಮೆ ಜನಸಂಖ್ಯೆ ಇರುವ ಖರನ್ ಪಟ್ಟಣದಿಂದ 55 ಕಿ. ಮೀ ದೂರದಲ್ಲಿ ರಿಕ್ಟರ್ ಮಾಪಕದ ಪ್ರಕಾರ 7.3 ರಷ್ಟು ಪ್ರಮಾಣದ ಭೂಕಂಪ  ಸಂಭವಿಸಿದೆ, ಇದರ ಹಿಂದೆಯೇ ವಾರದಲ್ಲಿ  ಕೆಲವು ಲಘು ಪ್ರಮಾಣದ ಭೂಕಂಪಗಳು ಸಂಭವಿಸಬಹುದು ಎಂದು ಅಲ್ಲಿನ ಪವನ ಇಲಾಖೆಯು ತಿಳಿಸಿದೆ.

ಹವಾಯಿಯಲ್ಲಿರುವ ಶಾಂತಿಸಾಗರದಲ್ಲಿನ ಸುನಾಮಿ ಮುನ್ನೆಚ್ಚರಿಕೆ ನೀಡುವ ಕೇಂದ್ರವು, ಪಾಕಿಸ್ತಾನದಿಂದ ಬುಧವಾರ ನಡೆದ ಭೂಕಂಪದಿಂದ ಶಾಂತಸಾಗರದಲ್ಲಿ ಸುನಾಮಿಗಳು ಉಂಟಾಗುವ ಸಾಧ್ಯತೆ ಕಡಿಮೆ ಎಂದು ತಿಳಿಸಿದೆ.

ಐದು ವರ್ಷಗಳ ಹಿಂದೆ 2005ರ ಅಕ್ಟೋಬರ್ 8ರಂದು 73,000 ಮಂದಿಯನ್ನು ಬಲಿತೆಗೆದುಕೊಂಡ ಭೀಕರ ಭೂಕಂಪದ ಐದನೇ ವರ್ಷಾಚರಣೆಯ ಸಂದರ್ಭದಲ್ಲಿ ಉತ್ತರ ಪಾಕಿಸ್ತಾನದಲ್ಲಿ ಕಳೆದ ವರ್ಷದ ಅಕ್ಟೋಬರ್ 10 ರಂದು ರಿಕ್ಟರ್ ಮಾಪಕದ ಪ್ರಕಾರ 5.3 ರಷ್ಟು ಪ್ರಮಾಣದ ಭೂಕಂಪ ಸಂಭವಿಸಿತ್ತು. ಪಾಕಿಸ್ತಾನದ ನೈಋತ್ಯ ಭಾಗದಲ್ಲಿ ಬುಧವಾರ ನಡೆದ ಭೂಕಂಪದ ಪ್ರಮಾಣ ಅದಕ್ಕಿಂತಲೂ ಹೆಚ್ಚಾಗಿದ್ದು ಆತಂಕ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT