ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಮಕ್ಕಳಿಗೆ ಜಯದೇವದಲ್ಲಿ ಶಸ್ತ್ರಚಿಕಿತ್ಸೆ

Last Updated 4 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: ಹುಟ್ಟಿನಿಂದಲೇ ಸಂಕೀರ್ಣ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಪಾಕಿಸ್ತಾನದ ಎರಡು ಮಕ್ಕಳಿಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ತಜ್ಞರು ಯಶಸ್ವಿಯಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸುಮಾರು 12 ವರ್ಷದ ಹಸೀಬ್ ಎಂಬ ಬಾಲಕ ಹಾಗೂ ಕುನೂಟ್ ಬೇಗ್ (13) ಎಂಬ ಬಾಲಕಿ ಆರೋಗ್ಯದಿಂದಿದ್ದು, ಸೋಮವಾರ ಸ್ವದೇಶಕ್ಕೆ ಮರಳಲಿದ್ದಾರೆ.

‘ಹಸೀಬ್ ಹಾಗೂ ಕುನೂಟ್ ಅವರು ಹುಟ್ಟಿನಿಂದಲೇ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಹೃದಯಕ್ಕೆ ರಕ್ತ ಪೂರೈಸುವ ರಕ್ತನಾಳಗಳು ಅದಲು ಬದಲಾಗಿದ್ದವು. ಹೃದಯದ ಎಡ ಭಾಗದಲ್ಲಿರಬೇಕಿದ್ದ ರಕ್ತನಾಳವು ಬಲ ಭಾಗದಲ್ಲೂ ಮತ್ತು ಬಲ ಭಾಗದಲ್ಲಿರಬೇಕಿದ್ದ ನಾಳ ಎಡ ಭಾಗದಲ್ಲಿತ್ತು. ಪರಿಣಾಮ ಶುದ್ಧ ರಕ್ತವು ಅಶುದ್ಧ ರಕ್ತದೊಂದಿಗೆ ಸೇರ್ಪಡೆಯಾಗಿ ತೊಂದರೆಯಾಗುತ್ತಿತ್ತು’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪ್ರತಿ ಒಂದು ಸಾವಿರ ಮಕ್ಕಳಲ್ಲಿ ಎರಡು- ಮೂರು ಮಕ್ಕಳಿಗೆ ಈ ರೀತಿಯ ತೊಂದರೆ ಕಾಣಿಸಿಕೊಳ್ಳುತ್ತದೆ. ಇಂಥ ಮಕ್ಕಳು ಜನಿಸಿದ ಒಂದು ವರ್ಷದೊಳಗೆ ಸಾವನ್ನಪ್ಪುವ ಸಾಧ್ಯತೆ ಹೆಚ್ಚು.’ ಎಂದರು.‘ಕರಾಚಿಯಲ್ಲಿ ಚಿಕಿತ್ಸೆ ಕೊಡಿಸಲು  ಪೂರಕ ಸೌಲಭ್ಯವಿಲ್ಲದ ಕಾರಣ ಪೋಷಕರು ರೋಟರಿ ಇಂಟರ್‌ನ್ಯಾಷನಲ್ ಸಂಸ್ಥೆಯ ನೆರವಿನೊಂದಿಗೆ  ಇಲ್ಲಿಗೆ ಬಂದರು’ ಎಂದರು.

‘ಹೃದಯದ ಎರಡೂ ಭಾಗದಲ್ಲಿರುವ ರಕ್ತನಾಳಗಳನ್ನು ಕತ್ತರಿಸಿ ತೆಗೆದು ಅದಲು ಬದಲು ಮಾಡಿ ಸೇರ್ಪಡೆ ಮಾಡಬೇಕಿತ್ತು.
 ತಜ್ಞರಾದ ಡಾ.ದೇವಾನಂದ್, ಡಾ.ಪಿ.ಎಸ್.ಸೀತಾರಾಮಭಟ್ ಹಾಗೂ ಡಾ.ಜಗದೀಶ್ (ಅರಿವಳಿಕೆ) ಅವರ ತಂಡ ಎರಡೂ ಮಕ್ಕಳಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದೆ. ಇದೀಗ ಮಕ್ಕಳು ಆರೋಗ್ಯವಾಗಿದ್ದಾರೆ’ ಎಂದರು.

‘ಈ ಶಸ್ತ್ರಚಿಕಿತ್ಸೆಗೆ ಕನಿಷ್ಠ ತಲಾ ಒಂದು ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಆದರೆ ನಗರದ ರೋಟರಿ ಬೆಂಗಳೂರು ಇಂಟರ್‌ನ್ಯಾಷನಲ್ 3190 ಸಂಸ್ಥೆ ಹಾಗೂ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಸ್ವಲ್ಪ ಹಣಕಾಸು ನೆರವು ನೀಡಿವೆ.

ಉಳಿದಂತೆ ಸಂಸ್ಥೆ ವತಿಯಿಂದ ರಿಯಾಯ್ತಿ ದರದಲ್ಲಿ ಚಿಕಿತ್ಸೆ ನೀಡಲಾಗಿದೆ’ ಎಂದು ಅವರು ವಿವರಿಸಿದರು.

ಕರಾಚಿಯ ರೋಟರಿ ಸಂಸ್ಥೆಯ ಕಾರ್ಯದರ್ಶಿ ಶೇಖ್ ಆಶಿಕ್ ಅಲಿ ಮಾತನಾಡಿ, ‘ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಜಯದೇವ ಸಂಸ್ಥೆಯ ತಜ್ಞರು ಯಶಸ್ವಿ ಚಿಕಿತ್ಸೆ ನೀಡಿರುವುದಕ್ಕೆ ಋಣಿಯಾಗಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT