ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ನಲ್ಲಿ ಮತ್ತೆ ತಳಮಳ

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಪಾಕಿಸ್ತಾನ ಮತ್ತೆ ರಾಜಕೀಯ ಅಸ್ಥಿರತೆಯತ್ತ ಹೊರಳುತ್ತಿರುವಂತೆ ಕಾಣುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯನ್ನು ರದ್ದು ಮಾಡಿ ಮಿಲಿಟರಿ ಅಧಿಕಾರ ಕಬಳಿಸುವ ಭೀತಿಗೆ ದೇಶ ಒಳಗಾಗಿದೆ. ತೀವ್ರಗತಿಯಲ್ಲಿ ಬೆಳವಣಿಗೆಗಳು ನಡೆಯುತ್ತಿದ್ದು ದೇಶ ತಳಮಳಕ್ಕೆ ಸಿಕ್ಕಿದೆ.
 
ಪಾಕಿಸ್ತಾನದಲ್ಲಿಯೇ ಅಡಗಿದ್ದ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ರಹಸ್ಯವಾಗಿ ಹತ್ಯೆ ಮಾಡಿದ ಬೆನ್ನಲ್ಲಿ ಆರಂಭವಾದ ಬಿಕ್ಕಟ್ಟು ಕೆಲವು ತಿಂಗಳ ಹಿಂದೆಯಷ್ಟೇ ಬಯಲಾದ ಮೆಮೊಗೇಟ್ ಹಗರಣ, ಸರ್ಕಾರ ಮತ್ತು ಮಿಲಿಟರಿಯ ಮಧ್ಯೆ ಸಂಘರ್ಷವನ್ನು ಸೃಷ್ಟಿಸಿದೆ.
 
ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಯುಸುಫ್ ರಾಜಾ ಗಿಲಾನಿ ಅವರು ನಾಗರಿಕ ಸರ್ಕಾರದ ಸಾರ್ವಭೌಮತ್ವವನ್ನು ಎತ್ತಿ ಹೇಳುತ್ತಿದ್ದರೆ ಮಿಲಿಟರಿ ಮುಖ್ಯಸ್ಥ ಕಯಾನಿ ಮತ್ತು ರಹಸ್ಯದಳ ಐಎಸ್‌ಐ ಮುಖ್ಯಸ್ಥ ಅಹಮದ್ ಶೂಜಾ ಪಾಶಾ ಅವರು ಮಿಲಿಟರಿಯ ಅಧಿಕಾರ ಮತ್ತು ಮಹತ್ವವನ್ನು ಎತ್ತಿ ಹೇಳುವಂತೆ ನಡೆದುಕೊಳ್ಳುತ್ತಿದ್ದಾರೆ.

ಈಗಾಗಲೇ ಪ್ರಧಾನಿ ಗಿಲಾನಿ ಅವರು ರಕ್ಷಣಾ ಕಾರ್ಯದರ್ಶಿಯನ್ನು ವಜಾ ಮಾಡಿದ್ದು ತಮಗೂ ಅದೇ ಗತಿ ಬರಬಹುದೆಂಬ ಭೀತಿಗೆ ಕಯಾನಿ ಮತ್ತು ಪಾಶಾ ಒಳಗಾದಂತಿದೆ.

ಹೀಗಾಗಿ ಸರ್ಕಾರದ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಈ ಮಧ್ಯೆ ಸುಪ್ರೀಂ ಕೋರ್ಟ್ ಜರ್ದಾರಿ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ತನಿಖೆ ನಡೆಸದ ಪ್ರಧಾನಿ ಬಗ್ಗೆ ಆಡಿರುವ ಕಟು ಮಾತುಗಳು ಮಿಲಿಟರಿ ಅಧಿಕಾರಿಗಳಿಗೆ ಬಲ ತಂದುಕೊಟ್ಟಿವೆ. ಮಿಲಿಟರಿ ಅಧಿಕಾರ ಕಬಳಿಸುವುದು, ಹಿಂದಿನಷ್ಟು ಸುಲಭವಲ್ಲ ಎನ್ನುವುದು ನಿಜವಾದರೂ ಆತಂಕ ಇದ್ದೇ ಇದೆ.
 
ಈ ಬಿಕ್ಕಟ್ಟಿನಿಂದ ದೇಶವನ್ನು ಹೊರತರಲು ಅಧ್ಯಕ್ಷ ಜರ್ದಾರಿ ಮತ್ತು ಪ್ರಧಾನಿ ಗಿಲಾನಿ ಅವರಿಗೆ ಇರುವ ಒಂದೇ ದಾರಿ: ರಾಜೀನಾಮೆ ನೀಡಿ ಹೊಸದಾಗಿ ಚುನಾವಣೆ ಘೋಷಿಸುವುದು.

ಪಾಕಿಸ್ತಾನ ತನ್ನ ಹುಟ್ಟಿನಿಂದಲೂ ರಾಜಕೀಯ ಅಸ್ಥಿರತೆಯನ್ನು ಎದುರಿಸುತ್ತ ಬಂದಿದೆ. ಆರು ದಶಕಗಳಿಗೂ ಹೆಚ್ಚು ಕಾಲದ ತನ್ನ ಅಸ್ತಿತ್ವದಲ್ಲಿ ಅರ್ಧಕ್ಕಿಂತ ಹೆಚ್ಚು ಕಾಲ ಮಿಲಿಟರಿ ಅಧಿಕಾರಕ್ಕೆ ಒಳಪಟ್ಟಿದೆ. ಪ್ರಜಾತಂತ್ರ ವ್ಯವಸ್ಥೆ ಅಲ್ಲಿ ಗಟ್ಟಿಯಾಗಿ ನೆಲೆಯೂರಲು ಅವಕಾಶವೇ ಆಗುತ್ತಿಲ್ಲ.
 
ಅತಂತ್ರ ರಾಜಕೀಯ ಪರಿಸ್ಥಿತಿಯಿಂದಾಗಿ ದೇಶದ ವ್ಯವಹಾರಗಳಲ್ಲಿ ಮಿಲಿಟರಿಯ ಪಾತ್ರವೂ ಹೆಚ್ಚಾಗುತ್ತ ಬಂದಿದೆ. ಅಸ್ಥಿರತೆ ಮತ್ತು ಅಭಿವೃದ್ಧಿ ಸಾಧಿಸುವಲ್ಲಿ ಆಡಳಿತಗಾರರ ವೈಫಲ್ಯ ಮುಸ್ಲಿಮ್ ಮೂಲಭೂತವಾದ ಗರಿಗೆದರಲು ಕಾರಣವಾಗಿದೆ. ಭಯೋತ್ಪಾದಕರ ನೆಲೆಯಾಗಿ ದೇಶ ಬೆಳೆದಿದೆ. ಪರಮಾಣು ತಂತ್ರಜ್ಞಾನವನ್ನು ಹೊರ ದೇಶಗಳಿಗೆ ರಹಸ್ಯವಾಗಿ ಮಾರಿದವನೇ ಪಾಕಿಸ್ತಾನದ ವಿಜ್ಞಾನಿ. ಹೀಗಾಗಿ ಪಾಕಿಸ್ತಾನವು ನೆರೆಯ ಭಾರತಕ್ಕಷ್ಟೇ ಅಲ್ಲ, ವಿಶ್ವಕ್ಕೇ ದೊಡ್ಡ ಕಂಟಕಕಾರಿ ದೇಶವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಈಗ ಕಂಡುಬಂದಿರುವ ಬಿಕ್ಕಟ್ಟು ಆಘಾತಕಾರಿಯಾದುದು.

ಪಾಕಿಸ್ತಾನದ ಮಿಲಿಟರಿ ಮತ್ತು ಭಯೋತ್ಪಾದಕ ಸಂಘಟನೆಗಳ ನಡುವಣ ಮೈತ್ರಿ ಅಪಾಯಕಾರಿಯಾದುದು. ದೇಶದಲ್ಲಿ ಪರಮಾಣು ಅಸ್ತ್ರಗಳಿರುವುದರಿಂದ ಅವುಗಳ ರಕ್ಷಣೆ ದೃಷ್ಟಿಯಿಂದಲೂ ಅಲ್ಲಿ ಮತ್ತೆ ಮಿಲಿಟರಿ ಅಧಿಕಾರ ತಲೆ ಎತ್ತಲು ಅವಕಾಶ ಕೊಡಬಾರದು. ಅಲ್ಲಿ ಪ್ರಜಾತಂತ್ರ ಉಳಿಯಲು ನೆರವಾಗುವಂಥ ಎಲ್ಲ ಕ್ರಮಗಳನ್ನು ಅಂತರರಾಷ್ಟ್ರೀಯ ಸಮುದಾಯ ತೆಗೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT