ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ನಲ್ಲಿ ರಾಜಕೀಯ ಸಂಚಲನ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಜತೆ  ಹೊಂದಾಣಿಕೆ ಮಾಡಿಕೊಳ್ಳಲು ಮಾಜಿ ಕ್ರಿಕೆಟ್ ಆಟಗಾರ ಮತ್ತು ರಾಜಕಾರಣಿ ಇಮ್ರಾನ್ ಖಾನ್ ಅವರ ತೆಹರಿಕ್- ಎ-ಇನ್ಸಾಫ್ ಪಕ್ಷವು ಒಲವು ತೋರಿರುವುದರಿಂದ ಪಾಕಿಸ್ತಾದ ರಾಜಕೀಯ ವಲಯದಲ್ಲಿ ಸಂಚಲನ ಉಂಟಾಗಿದೆ.

ರಾಜಕೀಯ ಸ್ಥಿತಿಗತಿಗಳ ಲೆಕ್ಕಾಚಾರ ನಡೆಸಿದ ನಂತರ ಮುಷರಫ್ ಅವರ ಅಖಿಲ ಪಾಕಿಸ್ತಾನ ಮುಸ್ಲಿಂ ಲೀಗ್ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ತೆಹರಿಕ್- ಎ-ಇನ್ಸಾಫ್ ಪಕ್ಷದ ಉಪಾಧ್ಯಕ್ಷ ಶಹಾ ಮಹಮೂದ್ ಖುರೇಶಿ ತಿಳಿಸಿದ್ದಾರೆ.

ಮೆಮೊಗೇಟ್ ಹಗರಣದಿಂದಾಗಿ ದೇಶದ ಸೇನೆ ಮತ್ತು ಸರ್ಕಾರದ ಮಧ್ಯೆ ಸಂಘರ್ಷವೇರ್ಪಟ್ಟಿರುವುದರಿಂದ ಅವಧಿಗೆ ಮೊದಲೇ ಚುನಾವಣೆ ನಡೆಯುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದ್ದು, ಈಗ ತೆಹರಿಕ್- ಎ-ಇನ್ಸಾಫ್ ಮತ್ತು ಮುಷರಫ್ ಪಕ್ಷ ಕೈಜೋಡಿಸುತ್ತಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಆಸ್ಪದ ಉಂಟು ಮಾಡಿದೆ.

2009ರಿಂದ ದೇಶದ ಹೊರಗೆ ರಾಜಕೀಯ ಆಶ್ರಯ ಪಡೆದಿರುವ ಮುಷರಫ್, ಈ ಮಾಸಾಂತ್ಯದಲ್ಲಿ ಸ್ವದೇಶಕ್ಕೆ ಮರಳುವುದಾಗಿ ತಿಳಿಸಿದ್ದಾರೆ. ಜ.8ರಂದು ಕರಾಚಿಯಲ್ಲಿ ನಡೆಯಲಿರುವ ರ‌್ಯಾಲಿ ಉದ್ದೇಶಿಸಿ ಮುಷರಫ್ ದೂರವಾಣಿ ಮೂಲಕ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಸ್ವದೇಶಕ್ಕೆ ಮರಳುವ ದಿನಾಂಕವನ್ನೂ ಪ್ರಕಟಿಸಲಿದ್ದಾರೆ.

ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯಕರ್ತರೂ ತೆಹರಿಕ್- ಎ-ಇನ್ಸಾಫ್ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದು ಖುರೇಶಿ ಮುಲ್ತಾನ್‌ನಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ಬದಲಾವಣೆ ತಮ್ಮ ಪಕ್ಷದ ಸಿದ್ಧಾಂತವಾಗಿರುವುದರಿಂದ ಜನರು ಪಕ್ಷಕ್ಕೆ ಸೇರುತ್ತಿದ್ದಾರೆ ಎಂದಿರುವ ಅವರು, ಪಿಎಂಎಲ್-ಎನ್ ಪಕ್ಷದ ಎಲ್ಲಾ ಸಂಸದರೂ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದರಿಂದ ಸರ್ಕಾರ ಚುನಾವಣೆ ಘೋಷಿಸುವುದು ಅನಿವಾರ್ಯವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT