ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಠ ಕಲಿಯುವುದೆಂದು?

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ದೇಶದ ಅಭಿವೃದ್ಧಿಗೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ರೂಪಿಸುವುದು ಶಿಕ್ಷಣವಾದರೆ, ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದು ಒಳ್ಳೆಯ ತರಬೇತಿ ಪಡೆದಿರುವ ಶಿಕ್ಷಕವರ್ಗ. ಆದರೆ ನಮ್ಮ ಸರ್ಕಾರಗಳಿಗೆ ಶಿಕ್ಷಣ ಕ್ಷೇತ್ರದ ಬಗ್ಗೆ ನಿರಂತರ ನಿರ್ಲಕ್ಷ್ಯ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ತಾಂತ್ರಿಕ- ವೈದ್ಯಕೀಯ ಶಿಕ್ಷಣದವರೆಗೆ ಪ್ರತೀ ಹಂತವೂ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದೆ. ಅಗತ್ಯ ಸಂಖ್ಯೆಯ ಶಿಕ್ಷಕರ ನೇಮಕಾತಿ ಮಾಡದ ನಿಷ್ಕ್ರಿಯತೆಯನ್ನು ಹೈಕೋರ್ಟ್ ಹಲವು ಬಾರಿ ಟೀಕಿಸಿದೆ. ಬಳ್ಳಾರಿಯ ಬಾಲಕಿಯರ ಉರ್ದು ಶಾಲೆಯಲ್ಲಿ ಎಂಟು ಶಿಕ್ಷಕರ ಹುದ್ದೆ ಖಾಲಿ ಇದ್ದರೂ ಅದನ್ನು ಭರ್ತಿ ಮಾಡಲು ಸರ್ಕಾರ ಕ್ರಮ ತೆಗೆದುಕೊಂಡಿಲ್ಲ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸರ್ಕಾರವನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಳ್ಳಲಾಗಿದೆ  `ಪ್ರತಿ ತಿಂಗಳು ಗಣನೀಯ ಸಂಖ್ಯೆಯಲ್ಲಿ ಶಿಕ್ಷಕರು ನಿವೃತ್ತರಾಗುತ್ತಾರೆ. ಆ ಜಾಗಕ್ಕೆ ಶಿಕ್ಷಕರನ್ನಲ್ಲದೆ ದೆವ್ವಗಳನ್ನು ತುಂಬಲು ಆಗುತ್ತದೆಯೇ? ನಿಮಗೆ ಅಷ್ಟೂ ಪರಿಜ್ಞಾನ ಇಲ್ಲವೇ?~ ಎಂದು ಹೈಕೋರ್ಟ್ ವಿಭಾಗೀಯ ಪೀಠ ವ್ಯಕ್ತಪಡಿಸಿರುವ ಆಕ್ರೋಶ ಸರ್ವಥಾ ಸಮರ್ಥನೀಯ. ಆರ್ಥಿಕ ಸಂಕಷ್ಟದ ಕಾರಣ ಹೊಸ ನೇಮಕಾತಿಗಳ ಮೇಲೆ ನಿರ್ಬಂಧ ಇದ್ದರೂ ಶಿಕ್ಷಕರ ನೇಮಕ ಆಗಲಿದೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದೆಲ್ಲ ಸರ್ಕಾರ ಇತ್ತೀಚೆಗೆ ಹೇಳಿಕೆಗಳನ್ನು ನೀಡಿದ್ದರೂ ಸಾವಿರಾರು ಶಾಲೆಗಳು ಶಿಕ್ಷಕರ ಕೊರತೆ ಎದುರಿಸುತ್ತಿರುವುದಕ್ಕೆ ಮತ್ತಿನ್ಯಾವ ರೀತಿಯಲ್ಲಿ ಹೇಳಬೇಕು? ವೈಜ್ಞಾನಿಕ ರೀತಿಯಲ್ಲಿ ನಿಗದಿಯಾದ ವಿದ್ಯಾರ್ಥಿ- ಶಿಕ್ಷಕ ಅನುಪಾತವನ್ನು ಅನುಸರಿಸಿ ಅವಶ್ಯ ಶಿಕ್ಷಕ ಸಿಬ್ಬಂದಿಯನ್ನು ಸಕಾಲದಲ್ಲಿ ನೇಮಿಸುವುದು ಸರ್ಕಾರದ ಪ್ರಾಥಮಿಕ ಕರ್ತವ್ಯ ಎಂಬುದನ್ನು ಎಷ್ಟು ಬಾರಿ ನೆನಪಿಸಬೇಕು?

ಖಾಲಿಯಾಗುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲು ಏಕೆ ಆಗುತ್ತಿಲ್ಲ ಎಂಬ ನ್ಯಾಯಾಲಯದ ಪ್ರಶ್ನೆಗೆ, `ಅಭ್ಯರ್ಥಿಗಳು ಕೌನ್ಸೆಲಿಂಗ್ ಪ್ರಕ್ರಿಯೆ ಮತ್ತು ದೂರದ ಊರುಗಳಿಗೆ ವರ್ಗಾವಣೆಯನ್ನು ಇಷ್ಟಪಡುವುದಿಲ್ಲ~ ಎಂದು ಸರ್ಕಾರದ ಪರ ವಕೀಲರು ನೀಡಿರುವ ಉತ್ತರ ಕೇವಲ ಒಂದು `ಪಿಳ್ಳೆನೆವ~ ಎಂದೇ ಹೇಳಬೇಕಾಗುತ್ತದೆ. ಶಾಲೆಗಳ ಅಗತ್ಯ ಮತ್ತು ಅಭ್ಯರ್ಥಿಗಳ ಅನುಕೂಲ ಇವೆರಡರ ನಡುವೆ ಹೊಂದಾಣಿಕೆ ಮಾಡುವುದನ್ನು ಹಣ ಮತ್ತು ರಾಜಕೀಯ ಪ್ರಭಾವಗಳಿಂದ ಮುಕ್ತವಾಗಿ ಇಟ್ಟರೆ ಒಳ್ಳೆಯದು. ಶಿಕ್ಷಣ ಕ್ಷೇತ್ರವನ್ನು ಆರಿಸಿಕೊಂಡು ಸರ್ಕಾರಿ ಉದ್ಯೋಗ ಬಯಸುವ ಯುವಜನರಿಗೂ ಬದ್ಧತೆಯೇ ಆದ್ಯತೆಯಾಗಬೇಕು. ಹಾಗೆ ನೋಡಿದರೆ ನಮ್ಮ ಇಡೀ ಶಿಕ್ಷಣ ವ್ಯವಸ್ಥೆ ಶಿಕ್ಷಕರ ಕೊರತೆಯಷ್ಟೇ ಅಲ್ಲ, ಶಿಕ್ಷಕರ ಬದ್ಧತೆಯ ಕೊರತೆಯಿಂದಲೂ ಬಳಲುತ್ತಿದೆ. ದೇಶದಾದ್ಯಂತ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 12 ಲಕ್ಷಕ್ಕೂ ಹೆಚ್ಚು ಶಿಕ್ಷಕರ ಕೊರತೆಯಿದೆ ಎಂಬ ಆತಂಕಕಾರಿ ಅಂಶವನ್ನು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವರೇ ಇತ್ತೀಚೆಗೆ ಪ್ರಕಟಿಸಿದ್ದರು. ಸರ್ವ ಶಿಕ್ಷಣ ಅಭಿಯಾನ, ಶಿಕ್ಷಣ ಹಕ್ಕು ಕಾಯಿದೆ ಸೇರಿ ಇನ್ನೆಷ್ಟು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದರೂ ಶಿಕ್ಷಕರ ನೇಮಕದಂಥ ಮೂಲಭೂತ ಸೌಕರ್ಯಗಳನ್ನು ಒದಗಿಸದಿದ್ದರೆ ಪ್ರತಿ ಮಗುವಿಗೂ ಉಚಿತ ಶಿಕ್ಷಣ ಎಂಬ ಉದ್ದೇಶಿತ ಗುರಿಯನ್ನು ತಲುಪಲು ಸಾಧ್ಯವಾಗುವುದೇ ಇಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT