ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಡ್ಯ ಸಂಭ್ರಮಕ್ಕೆ ಖರೀದಿ ಭರಾಟೆ

Last Updated 28 ಅಕ್ಟೋಬರ್ 2011, 9:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪಾಡ್ಯದ ದಿನವಾದ ಗುರುವಾರ ಖರೀದಿಸಿದರೆ ಒಳ್ಳೆಯದು, ಶುಭ ಎಂದು ನಗರದ ಸಾರ್ವಜನಿಕರು ತಮಗೆ ಅಗತ್ಯವಿರುವ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದರು. ಇದರಿಂದ ಎಲ್ಲ ಅಂಗಡಿ-ಮುಂಗಟ್ಟುಗಳಲ್ಲಿ ಖರೀದಿ ಭರಾಟೆ ಜೋರಾಗಿ ನಡೆಯಿತು.

ಬುಧವಾರ ಮನೆಗಳಲ್ಲಿ ಲಕ್ಷ್ಮಿ ಪೂಜೆ ಮುಗಿದರೆ, ಗುರುವಾರ ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆ ನಡೆಯಿತು. ಇದರಿಂದ ಕಬ್ಬು, ಬಾಳೆ, ಹೂವು ಹಾಗೂ ಹಣ್ಣುಗಳ ಖರೀದಿ ಗುರುವಾರವೂ ಮುಂದುವರಿಯಿತು. ಹೊಸ ಬಟ್ಟೆಗಳನ್ನು ಧರಿಸಿದ ಪುರುಷರೊಂದಿಗೆ ಮಹಿಳೆಯರು ಹೊಸ ಸೀರೆ ಉಟ್ಟು, ಆಭರಣ ಧರಿಸಿ ಲಕ್ಷ್ಮಿ ಪೂಜೆ ನೆರವೇರಿಸಿದರು.
 
ಪೂಜೆಯ ನಂತರ ಭಿಕ್ಷೆ ಕೇಳಲು ಬಂದವರಿಗೆ ದಾನ ನೀಡಲಾಯಿತು. ಇವರೊಂದಿಗೆ ಕೊಪ್ಪಳ ಜಿಲ್ಲೆಯ ಚಿಲಕಮಿಕ್ಕಿ ಗ್ರಾಮದಿಂದ ಬಂದ ಸಂಬಾಳ ವಾದ್ಯಗಾರ ಚಂದ್ರಶೇಖರ ಪರ್ವತಮಲ್ಲಯ್ಯ, ಲಕ್ಷ್ಮಣ ಬಬ್ಬಲ್ ಹಾಗೂ ಅವರ ಪುತ್ರ ಮಂಜುನಾಥ ಪ್ರತಿ ವರ್ಷ ಬರುವ ಹಾಗೆ ಈ ವರ್ಷವೂ ನಗರದಲ್ಲಿ ತಿರುಗಾಡಿ ದಾನವನ್ನು ಸಂಗ್ರಹಿಸಿದರು.
 
`ಪಾಡ್ಯದ ಪೂಜೆಯ ನಂತರ ಚುರುಮುರಿ, ಪೇಢೆ, ಹಣ್ಣು ಕೊಡುತ್ತಾರೆ. ಕೆಲವರು ದುಡ್ಡೂ ಕೊಡುತ್ತಾರೆ. ಹೀಗಾಗಿ ಸಾಧ್ಯವಾದಷ್ಟು ಅಂಗಡಿಗಳ ಮುಂದೆ ಸಂಬಾಳ ಬಾರಿಸುತ್ತೇವೆ. ಅವರು ನೀಡಿದ್ದನ್ನು ಪಡೆದು ಹೊರಡುತ್ತೇವೆ~ ಎನ್ನುತ್ತಾರೆ ಚಂದ್ರಶೇಖರ ಪರ್ವತಮಲ್ಲಯ್ಯ.

ಹಳೆಯ ಅಂಗಡಿಗಳಲ್ಲಿ ಪೂಜೆ ನಡೆದರೆ, ಹೊಸ ಅಂಗಡಿಗಳು ಪೂಜೆಯೊಂದಿಗೆ ಉದ್ಘಾಟನೆಗೊಂಡವು. ನಗರದ ಜನತೆಯ ಜೊತೆಗೆ ಗ್ರಾಮೀಣ ಪ್ರದೇಶದ ಜನರು ಹೊಸ ಮೊಬೈಲ್ ಸೆಟ್, ಟಿವಿ, ಫ್ರಿಡ್ಜ್, ಮಕ್ಕಳ ಆಟಿಗೆ ವಸ್ತು, ಲ್ಯಾಪ್‌ಟಾಪ್, ಕಂಪ್ಯೂಟರ್, ಮಿಕ್ಸಿ, ಗ್ರೈಂಡರ್ ಮೊದಲಾದ ವಸ್ತುಗಳನ್ನು ಕೊಂಡರು. ಇವುಗಳ ಜೊತೆಗೆ ಚಿನ್ನಾಭರಣ ಅಂಗಡಿಗಳಲ್ಲೂ ನೂಕುನುಗ್ಗಲು ಇತ್ತು. ದೇಶಪಾಂಡೆನಗರದ ಸ್ವರ್ಣ ಚಿನ್ನಾಭರಣ ಮಳಿಗೆಯಲ್ಲಿ ನಾಲ್ಕು ಗ್ರಾಂ ಚಿನ್ನದ ನಾಣ್ಯ ಖರೀದಿಸಿದ ವಿದ್ಯಾ ಕಲ್ಬಂಡಿ, `ವರ್ಷದ ಕನಸಿದು. ಪ್ರತಿ ವರ್ಷ ದೀಪಾವಳಿ ಪಾಡ್ಯದ ದಿನ ಚಿನ್ನ ಖರೀದಿಸುತ್ತೇವೆ~ ಎನ್ನುತ್ತಾರೆ.
 
`ಚಿನ್ನಾಭರಣಕ್ಕಿಂತ ನಾಣ್ಯ ಹಾಗೂ ಗಟ್ಟಿ ಬಂಗಾರ ಖರೀದಿಸುವವರು ಹೆಚ್ಚಿದ್ದಾರೆ. ಏಕೆಂದರೆ ಚಿನ್ನಾಭರಣ ಧರಿಸಿ ಓಡಾಡುವುದಕ್ಕಿಂತ ಹೂಡಿಕೆಯತ್ತ ಗಮನ ಕೊಡುತ್ತಿದ್ದಾರೆ. ಹೀಗಾಗಿ ಎರಡು ದಿನಗಳ ಹಿಂದೆ ಪ್ರತಿ ಗ್ರಾಂಗೆ 100-120 ರೂಪಾಯಿ ಹೆಚ್ಚಿದ್ದರೂ ಖರೀದಿಸುವವರು ಕಡಿಮೆಯಾಗಿಲ್ಲ~ ಎನ್ನುತ್ತಾರೆ ಸ್ವರ್ಣ ಮಳಿಗೆಯ ಮಾಲೀಕ ಗೋಪಾಲ ನಾಯಕ.

ತನಿಷ್ಕ್ ಚಿನ್ನಾಭರಣ ಮಳಿಗೆಯಲ್ಲಿ ಸುಜಾತಾ ಅಕ್ಕೂರು ಅವರು ತಮ್ಮ ಪುತ್ರಿ ಮಧು ಅವರಿಗೆ ಚಿನ್ನದ ಸರ ಖರೀದಿಸಿದರು. ವಿಕಾಸ್ ಅಂಕೋಲಾ ಅವರು ತಮ್ಮ ಪತ್ನಿ ಸ್ವಪ್ನಾ ಅವರಿಗೆ ಮಾಂಗಲ್ಯಸರವನ್ನು ಖರೀದಿಸಿ ದೀಪಾವಳಿ ಕಾಣಿಕೆಯಾಗಿ ನೀಡಿದರು. ಕೊಯಿನ್ ರಸ್ತೆಯ ಮಲಬಾರ್ ಗೋಲ್ಡ್ ಮಳಿಗೆಯಲ್ಲೂ ಗ್ರಾಹಕರ ಭೇಟಿ ಹೆಚ್ಚಿತ್ತು. `ಕಳೆದ ಮೂರು ದಿನಗಳಿಂದ ಚಿನ್ನಾಭಣರ ಖರೀದಿಸುವವರು ಹೆಚ್ಚಿದ್ದಾರೆ.
 
ಒಂದು ಗ್ರಾಂ ಚಿನ್ನ ಖರೀದಿಸಿದವರಿಗೂ ಸಿಹಿ ತಿಂಡಿಯ ಪ್ಯಾಕೆಟನ್ನು ಕಾಣಿಕೆಯಾಗಿ ನೀಡುತ್ತಿದ್ದೇವೆ. ಇದು ನಮ್ಮ ದೀಪಾವಳಿಯ ಕೊಡುಗೆ. ಜೊತೆಗೆ ಇತರ ಕಾಣಿಕೆಗಳೂ ಇವೆ~ ಎಂದು ಮಲಬಾರ್ ಗೋಲ್ಡ್ ಮಳಿಗೆಯ ನಿರ್ದೇಶಕ ಫಿಲ್ಸರ್ ತಿಳಿಸಿದರು. ಇದೇ ರೀತಿ ಶುಭಂ, ಕಲ್ಯಾಣ್ ಹಾಗೂ ಲಕ್ಷ್ಮೀಗೋಲ್ಡ್ ಪ್ಯಾಲೇಸ್ ಮಳಿಗೆಗಳಲ್ಲೂ ಗ್ರಾಹಕರು ಹೆಚ್ಚಿದ್ದರು.

ಸಿಹಿ ತಿಂಡಿಗಳ ಅಧಿಕ ಮಾರಾಟ: ದೀಪಾವಳಿ ಸಂದರ್ಭದಲ್ಲಿ ತಮ್ಮ ಗ್ರಾಹಕರಿಗೆ ಸಿಹಿ ತಿಂಡಿಗಳನ್ನು ಕಾಣಿಕೆಯಾಗಿ ನೀಡುವ ಬ್ಯಾಂಕುಗಳು, ಕಂಪೆನಿಗಳು ಹಾಗೂ ವರ್ತಕರಿಂದಾಗಿ ಸಿಹಿತಿಂಡಿಗಳ ಮಾರಾಟ ಕೂಡಾ ಹೆಚ್ಚಾಗಿದೆ. `ಪ್ರತಿ ಸಿಹಿತಿಂಡಿ ಮಾರುವ ಅಂಗಡಿಗಳಿಗೆ ವಾರ್ಷಿಕ ವಹಿವಾಟಿನಂತೆ ದೀಪಾವಳಿ ಹಬ್ಬ. ಇದೇ ಸಂದರ್ಭದಲ್ಲಿ ಅಧಿಕ ಲಾಭವನ್ನು ಕಾಣುತ್ತೇವೆ~ ಎನ್ನುತ್ತಾರೆ ಭಗವಾನ್ ಸ್ವೀಟ್ ಅಂಗಡಿಯ ರಾಜೇಂದ್ರ ಸಿಂಗ್.

ಖಾಲಿ ರಸ್ತೆಗಳು: ರಾಜ್ಯ ಸರ್ಕಾರಿ ಕಚೇರಿಗಳಿಗೆ ಹಾಗೂ ಬ್ಯಾಂಕುಗಳಿಗೆ ಗುರುವಾರ ರಜೆಯಿದ್ದ ಪರಿಣಾಮ ಅನೇಕ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೆ ದೇಶಪಾಂಡೆನಗರ, ಕೊಪ್ಪಿಕರ ರಸ್ತೆ, ಕೊಯಿನ್ ರಸ್ತೆಯಲ್ಲಿ ಜನದಟ್ಟಣೆ ಹೆಚ್ಚಿತ್ತು. ಕೋರ್ಟ್ ಪಕ್ಕದ ಸಾಯಿ ಮಂದಿರ ಎದುರು ಹೊಸ ವಾಹನಗಳಿಗೆ ಪೂಜೆ ನಡೆಯುತ್ತಿದ್ದ ಪರಿಣಾಮ ಸುಗಮ ಸಂಚಾರಕ್ಕೆ ಕೊಂಚ ಹೊತ್ತು ಅಡಚಣೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT