ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತಾಳ ಕಂಡ ಬೆಲೆ, ರೈತ ಕಂಗಾಲು

Last Updated 1 ಜನವರಿ 2011, 11:15 IST
ಅಕ್ಷರ ಗಾತ್ರ

ರಾಯಚೂರು: ಹಿಂದೆಂದೂ ಕಂಡರಿಯದಷ್ಟು ‘ತೊಗರಿ ಬೆಳೆ’ ರಾಯಚೂರು ಎಪಿಎಂಸಿ ಮಾರುಕಟ್ಟೆಗೆ ಆವಕವಾಗುತ್ತಿದ್ದು, ತೊಗರಿ ಬೆಳೆ ಹಾಕಲು ಎಪಿಎಂಸಿ ಆವರಣದಲ್ಲಿ ಜಾಗೆಯೇ ಇಲ್ಲದಂಥ ಸ್ಥಿತಿ ನಿರ್ಮಾಣಗೊಂಡಿದೆ!

2009ರಲ್ಲಿ (ಕಳೆದ ವರ್ಷ) ಈ ಮಾರುಕಟ್ಟೆಗೆ ಒಟ್ಟು 93,950 ಕ್ವಿಂಟಲ್ ತೊಗರಿ ಆವಕವಾಗಿದ್ದರೆ, ಈ ವರ್ಷ 2010-ಡಿಸೆಂಬರ್ ತಿಂಗಳಲ್ಲಿಯೇ 3,07.036 ಕ್ವಿಂಟಲ್ ತೊಗರಿ ಮಾರುಕಟ್ಟೆಗೆ ಮಾರಾಟಕ್ಕೆ ಬಂದಿದೆ. ಅಂದರೆ ಹಿಂದಿನ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚು ಈ ತಿಂಗಳಲ್ಲಿಯೇ ತೊಗರಿ ಮಾರುಕಟ್ಟೆಗೆ ಆವಕವಾಗಿದ್ದು, ರಾಯಚೂರು ಎಪಿಎಂಸಿ ಇತಿಹಾಸದಲ್ಲಿಯೇ ಇಷ್ಟೊಂದು ತೊಗರಿ ಬೆಳೆ ಆವಕವಾಗಿರಲಿಲ್ಲ. ಇದು ದಾಖಲೆ ಎಂದು ಎಪಿಎಂಸಿ ಹೇಳುತ್ತದೆ.

ಡಿಸೆಂಬರ್ 24ರಂದು 24,566 ಕ್ವಿಂಟಲ್, 23ರಂದು 26,056 ಕ್ವಿಂಟಲ್, 29ರಂದು 22,640 ಕ್ವಿಂಟಲ್ ತೊಗರಿ ಬೆಳೆ ಮಾರುಕಟ್ಟೆಗೆ ಆವಕವಾಗಿದೆ. ಹೆಚ್ಚಿನ ಪ್ರದೇಶದಲ್ಲಿ ಬೆಳೆ: ಜಿಲ್ಲೆಯಲ್ಲಿ ಈ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಬೆಳೆ ಬೆಳೆಯಲಾಗಿದೆ. ಈ ಹಿಂದಿನ ವರ್ಷಗಳಲ್ಲಿ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಬೆಳೆಯಲಾಗುತ್ತಿತ್ತು. ಮಿಕ್ಕಂತೆ ಸೂರ್ಯಕಾಂತಿ ಹೆಚ್ಚು ಬೆಳೆಯಲಾಗುತ್ತಿತ್ತು. ಆದರೆ ಈ ವರ್ಷ ಸೂರ್ಯಕಾಂತಿ ಬೆಳೆಯುವ ಪ್ರದೇಶದಲ್ಲಿ ರೈತರು ತೊಗರಿ ಬೆಳೆದಿದ್ದಾರೆ. ಇದರಿಂದ ಜಿಲ್ಲೆಯಲ್ಲಿ 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆದಂತಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಹನುಮಂತರೆಡ್ಡಿ ಪ್ರಜಾವಾಣಿಗೆ ತಿಳಿಸಿದರು.

ಬೆಲೆ ಪಾತಾಳಕ್ಕೆ: ಈ ರೀತಿ ಹೆಚ್ಚು ಬೆಳೆ ಬೆಳೆದಿರುವುದು, ಏಕಕಾಲಕ್ಕೆ ಮಾರುಕಟ್ಟೆಗೆ ಬೆಳೆ ಬರುತ್ತಿದ್ದು, ಮಾರುಕಟ್ಟೆಯಲ್ಲಿ ದರ ಪಾತಾಳ ಕಂಡಿದೆ. ಹೋದ ವರ್ಷ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ್ಙ 5,766  ಮಾರಾಟವಾಗಿತ್ತು. ಕನಿಷ್ಠ 5 ಸಾವಿರ ರೂ ಪ್ರತಿ ಕ್ವಿಂಟಲ್‌ಗೆ ದೊರಕಿತ್ತು.

ಈ ವರ್ಷ ಬೆಳೆ ಹೆಚ್ಚಾಗಿದ್ದು, ಬೆಲೆ ಕಡಿಮೆಯಾಗಿದೆ. ಪ್ರತಿ ಕ್ವಿಂಟಲ್‌ಗೆ ಅತ್ಯಂತ ಗರಿಷ್ಠ ದರ ್ಙ 3900 ಮಾತ್ರ. ಈಗ ್ಙ 3000ದಿಂದ ್ಙ 3300 ವರೆಗೆ ತಗ್ಗಿದೆ.
ಈ ವರ್ಷ ಉತ್ತಮ ಇಳುವರಿ ಬಂದಿದ್ದರೂ ಸರಿಯಾದ ಬೆಲೆ ದೊರಕುತ್ತಿಲ್ಲ ಎಂದು ಗಬ್ಬೂರು ಗ್ರಾಮದ ರೈತ ಬೂದೆಪ್ಪ ಹಾಗೂ ರಾಯಚೂರು ತಾಲ್ಲೂಕು ಏಗನೂರು ಗ್ರಾಮದ ನರಸರೆಡ್ಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆಂಧ್ರದಿಂದ ಆವಕ: ಈ ಎಪಿಎಂಸಿಗೆ ರಾಯಚೂರು ಜಿಲ್ಲೆ, ಯಾದಗಿರಿ ಜಿಲ್ಲೆಯಶಹಾಪುರ, ಸುರಪುರ ತಾಲ್ಲೂಕಿನ ಹಾಗೂ ಆಂಧ್ರಪ್ರದೇಶದ ಮಹೆಬೂಬ್‌ನಗರ ಜಿಲ್ಲೆಯ ಮಕ್ತಲ್, ಗದ್ವಾಲ್ ತಾಲ್ಲೂಕುಗಳ ಗ್ರಾಮದ ರೈತರು ತೊಗರಿ ಬೆಳೆಯನ್ನು ಮಾರಾಟಕ್ಕೆ ತರುತ್ತಿದ್ದಾರೆ. ಈ ಮಾರುಕಟ್ಟೆಯಲ್ಲಿ 40 ಜನ ತೊಗರಿ ಬೆಳೆ ಖರೀದಿದಾರರಿದ್ದರೂ ಭಾರಿ ಪ್ರಮಾಣದಲ್ಲಿ ಖರೀದಿಸುವವರು 10 ಜನ ಇದ್ದಾರೆ.

ಕಾಮಗಾರಿ ಕಿರಿಕಿರಿ: ಎಪಿಎಂಸಿ ಆವರಣದಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು ಇದು ಬೆಳೆ ಹಾಕಲು ಮತ್ತು ಖರೀದಿದಾರರಿಗೆ ಕಿರಿ ಕಿರಿಯನ್ನುಂಟು ಮಾಡುತ್ತಿದೆ. ಭತ್ತದ ಜೊತೆ ತೊಗರಿ ಬೆಳೆಯೂ ಅಧಿಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗುತ್ತಿರುವುದರಿಂದ ಬೆಳೆ ಹಾಕಲು ಜಾಗವೇ ಇಲ್ಲದಂತಾಗಿದೆ. ಪರಿಣಾಮ ಎಪಿಎಂಸಿ ಕಚೇರಿ ಮುಖ್ಯದ್ವಾರದಲ್ಲಿಯೂ ರೈತರು ತೊಗರಿ ಬೆಳೆ ಹಾಕಿ ಮಾರಾಟಕ್ಕೆ ಕಾಯ್ದು ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಶೀಘ್ರ ಕಾಮಗಾರಿ ಪೂರ್ಣಗೊಂಡರೆ ರೈತರು ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗುತ್ತದೆ. ಹಗಲು ರಾತ್ರಿ ಈ ಕಾಮಗಾರಿ ಕೈಗೊಂಡು ಪೂರೈಸುವ ಕಾರ್ಯ ಆಗಬೇಕು ಎಂದು ವ್ಯಾಪಾರಸ್ಥರು ಮತ್ತು ರೈತರು ಆಗ್ರಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT