ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತ್ರ ಸಿಕ್ಕಿದ್ದು ಅನಾಯಾಸವಾಗಿ: ರಮೇಶ್ ಭಟ್

ಬೆಳ್ಳಿ ಹೆಜ್ಜೆ
Last Updated 19 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಕನ್ನಡ ಚಿತ್ರರಂಗದಲ್ಲಿ ನನಗಾಗಿಯೇ ಒಂದು ಪಾತ್ರ ಸೃಷ್ಟಿಯಾಗಲಿಲ್ಲ. ಆದರೆ, ಬೇರೆಯವರಿಗಾಗಿ ಸೃಷ್ಟಿಯಾದ ಪಾತ್ರಗಳು ಅನಾಯಾಸವಾಗಿ ನನಗೆ ದಕ್ಕಿತು. ಈ ಬಗ್ಗೆ ಸ್ವಲ್ಪ ನೋವಿದ್ದರೂ, ವೃತ್ತಿ ಬದುಕಿನಲ್ಲಿ ಆತ್ಮತೃಪ್ತಿಯನ್ನು ಕಂಡುಕೊಂಡಿದ್ದೇನೆ' ಎಂದು ಹಿರಿಯ ನಟ ರಮೇಶ್ ಭಟ್ ತಿಳಿಸಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ನಮ್ಮಲ್ಲಿ ಇಲ್ಲದೇ ಇರುವ ಗುಣ ಹಾಗೂ ಪೋಷಾಕುಗಳನ್ನು ಧರಿಸಿ ಬಗೆಬಗೆಯ ಪಾತ್ರಗಳನ್ನು ಮಾಡುವ ಮೂಲಕ ಜನರಿಗೆ ಹತ್ತಿರವಾಗುವ ಸೌಭಾಗ್ಯ ನಟನಿಗೆ ಮಾತ್ರ ದೊರೆಯುತ್ತದೆ. ಕುಂದಾಪುರದ ಕುಗ್ರಾಮದಲ್ಲಿ ಜನಿಸಿದ ಅಡುಗೆ ಭಟ್ಟನ ಮಗ ಚಿತ್ರರಂಗದ ದಿಗ್ಗಜರೊಂದಿಗೆ ನಟಿಸಿ, ನೆಲೆಯೂರುವ ಅವಕಾಶ ಪಡೆದುಕೊಳ್ಳುವ ಮೂಲಕ ಈ ಅದೃಷ್ಟವನ್ನು ತನ್ನದಾಗಿಸಿಕೊಂಡ ಹೆಮ್ಮೆಯಿದೆ' ಎಂದು ಹೇಳಿದರು.

`ಶಾಲಾ ದಿನಗಳಿಂದಲೂ ಬಣ್ಣದ ಗೀಳಿತ್ತು. ಶಿಕ್ಷಕರ, ಪ್ರಾಂಶುಪಾಲರ ಸತತ ಪ್ರೇರಣೆಯಿಂದ ಈ ಗೀಳು ವೃತ್ತಿಯಾಯಿತು. ಆದರೆ, ವಿದ್ಯೆ ನೈವೇದ್ಯವಾಯಿತು. ಕಾಲೇಜು ದಿನಗಳಲ್ಲಿ ಮಾಡಿದ `ಸಿಡಿಲು ಮರಿ' ನಾಟಕ ರಂಗಭೂಮಿಯೆಡೆಗೆ ನಂಟು ಬೆಳಸಿಕೊಳ್ಳಲು ಸಹಾಯಮಾಡಿತು' ಎಂದು ನೆನಪುಗಳನ್ನು ಬಿಚ್ಚಿಟ್ಟರು.

`ಬಿ.ವಿ.ಕಾರಂತರ ಒಡನಾಟದಿಂದ ಒಂದೊಂದೇ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದ್ದೆ. ಆ ನಂತರ `ಅಬಚೂರಿನ ಪೋಸ್ಟ್ ಆಫೀಸ್'ನಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟೆ. ಅಲ್ಲಿಂದ `ಮಿಂಚಿನ ಓಟ'. ನೋಡಿ ಸ್ವಾಮಿ ನಾವಿರೋದೆ ಹೀಗೆ' ಸಿನಿಮಾ ಸೇರಿದಂತೆ ಸುಮಾರು 250ಕ್ಕೂ  ಹೆಚ್ಚು ಸಿನಿಮಾಗಳಲ್ಲಿ ವಿಭಿನ್ನ ಪಾತ್ರದ ಮೂಲಕ ಸಿನಿರಸಿಕರನ್ನು ರಂಜಿಸಿದ್ದೇನೆ' ಎಂದು ಹೇಳಿದರು.

`ಈಗೀಗ ಕಳಪೆ ಗುಣಮಟ್ಟದ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಇಂತಹ ಸಿನಿಮಾಗಳಲ್ಲಿ ಪೋಷಕ ಪಾತ್ರ ನಿರ್ವಹಿಸುವ ಹೊಟ್ಟೆಪಾಡು ಹಿರಿಯಕಲಾವಿದರದ್ದು. `ಒಂದು ಮುತ್ತಿನ ಕತೆ' ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಅವರೊಂದಿಗಿನ ಒಡನಾಟದಿಂದ ಮತ್ತಷ್ಟು ಸಜ್ಜನನಾದೆ' ಎಂದು ಹೇಳಿದರು.

`ಏಕಾಂಗಿಯಾಗಿದ್ದೇನೆ'
`ನಾನು ತುಂಬಾ ಪ್ರೀತಿಸುವ ಎರಡು ಹಿರಿಯ ಜೀವಗಳನ್ನು ಕಳೆದುಕೊಂಡು ಸಿನಿ ಜಗತ್ತಿನಲ್ಲಿ ಏಕಾಂಗಿಯಾಗಿದ್ದೇನೆ' ಎಂದು ಹಿರಿಯ ನಟ ರಮೇಶ್ ಭಟ್ ಕಣ್ಣೀರಾದರು.

`ನನ್ನ ವೃತ್ತಿಬದುಕಿಗೆ ಹಲವು ತಿರುವು ನೀಡಿದ, ಸಹೋದರನಂತಿದ್ದ ಶಂಕರನಾಗ್ ಹಾಗೂ ಗೆಳೆಯ ವಿಷ್ಣುವರ್ಧನ್ ಇಬ್ಬರನ್ನು ಕಳೆದುಕೊಂಡು ಬಹಳ ನೋವುಣ್ಣುತ್ತಿದ್ದೇನೆ. ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣ, ಆಸ್ಪತ್ರೆ ನಿರ್ಮಾಣ, ಮೇಲ್ಸೇತುವೆ, ಸ್ಟುಡಿಯೋ, ಮೆಟ್ರೊ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕನಸುಕಂಡಿದ್ದ ಶಂಕರನಾಗ್, ಅವುಗಳನ್ನು ನನಸು ಮಾಡುವ ಮೊದಲೇ ಬಿಟ್ಟು ಹೊರಟು ಹೋದ' ಎಂದು ನೆನಪಿಸಿಕೊಂಡರು.

`ಕನ್ನಡ ಚಿತ್ರರಂಗದ ಎಲ್ಲ ಚಟುವಟಿಕೆಗಳು ಬೆಂಗಳೂರಿನಲ್ಲಿಯೇ ಆಗಬೇಕೆಂಬ ಉದ್ದೇಶದಿಂದ ಸಂಕೇತ್ ಸ್ಟುಡಿಯೋ ಸ್ಥಾಪನೆಗೆ ಕಾರಣವಾಗಿದ್ದ. ಆತನ ಮರಣಾನಂತರ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT