ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತ್ರಗಳ ಪ್ರಾಣ

ನಡೆದ ದಾರಿ: 1940 ರಿಂದ 47 ಹೀರೋ, 1947 ರಿಂದ 1991 ರವರೆಗೆ ಖಳನಟ, 2007 ರವರೆಗೆ ಪೋಷಕ ನಟ
Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಹಿಂದಿ ಚಿತ್ರರಂಗದ ಹೆಸರಾಂತ ಖಳನಟ, ಪೋಷಕ ನಟ ಪ್ರಾಣ್‌ಕಿಷನ್ ಸಿಕಂದ್ ಅವರಿಗೆ ರಾಷ್ಟ್ರದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಇತ್ತೀಚೆಗೆ ಪ್ರಕಟವಾದಾಗ, `ಇಷ್ಟು ತಡವಾಗಿ ಕೊಡುವುದೇ?' ಎಂದು ಹಿಂದಿ ಚಿತ್ರರಂಗದ ಕೆಲವರು ರಾಗ ತೆಗೆದರು. ಯಾರಿಗೇ ಪ್ರಶಸ್ತಿ ಬಂದರೂ; `ಅವರಿಗೆ ಎಂದೋ ಬರಬೇಕಿತ್ತು' ಎಂದು ಹೇಳುವುದು ಸಾಮಾನ್ಯ ಮಾತಾಗಿ ಬಿಟ್ಟಿದೆ. ಪಿ.ಬಿ. ಶ್ರೀನಿವಾಸ್ ನಿಧನರಾದಾಗ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅವರು ಅರ್ಹರಿದ್ದರು ಎಂದು ನಾವೇ ಹೇಳುವುದಿಲ್ಲವೇ? ಗಾಯಕಿ ಎಸ್. ಜಾನಕಿ ಅವರು ತಡವಾಗಿ ಬಂತು ಎನ್ನುವ ಕಾರಣಕ್ಕೆ ಪದ್ಮಭೂಷಣ ಪ್ರಶಸ್ತಿಯನ್ನೇ ನಿರಾಕರಿಸಲಿಲ್ಲವೇ? 1964 ರಲ್ಲಿ ಜೀನ್ ಪಾಲ್ ಸಾತ್ರೆ ಸಾಹಿತ್ಯಕ್ಕಾಗಿ ಸಂದ ನೊಬೆಲ್ ಪ್ರಶಸ್ತಿಯನ್ನೇ ನಿರಾಕರಿಸಿದ, ಆ ವೇಳೆಗೆ ಸಾತ್ರೆ ಪ್ರಶಸ್ತಿಯನ್ನು ಮೀರಿ ಬೆಳೆದಿದ್ದ. ಅದೇ ರೀತಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದು ಪ್ರಾಣ್, ಈಗ  ಈ 93ನೇ ಇಳಿವಯಸ್ಸಿನಲ್ಲಿ ಸಾಧಿಸಬೇಕಾದ್ದು ಏನೂ ಇಲ್ಲ. 73 ವರ್ಷಗಳ ಕಾಲ ಚಿತ್ರರಂಗದಲ್ಲಿ ಎಲ್ಲ ಬಗೆಯ ಪಾತ್ರಗಳಿಗೆ ಜೀವ ತುಂಬಿರುವ ಪ್ರಾಣ್, ಎಲ್ಲ ಪ್ರಶಸ್ತಿಗಳನ್ನೂ ಮೀರಿ ಬೆಳೆದು ನಿಂತಿದ್ದಾರೆ. ಭಾರತೀಯ ಚಿತ್ರಗಳಲ್ಲಿ ನಾಯಕ ನಾಯಕಿ ಹೊರತುಪಡಿಸಿದರೆ, ಇಡೀ ಚಿತ್ರದ ಜೀವಾಳ ಹಾಗೂ ನಾಯಕ ನಾಯಕಿಯರಷ್ಟೇ ಮುಖ್ಯವಾದ ಪಾತ್ರ ಖಳನದು. ಅಂತಹ `ಖಳ' ಸಮುದಾಯಕ್ಕೆ ಪ್ರಶಸ್ತಿಯ ಮೂಲಕ ಒಂದು ಘನತೆ ತಂದುಕೊಟ್ಟ ಕೀರ್ತಿ ಈಗ ಪ್ರಾಣ್ ಅವರದಾಗುತ್ತದೆ.

1970-80ರ ದಶಕದಲ್ಲಿ ಖ್ಯಾತ ನಟರಾಗಿದ್ದ ಅಮಿತಾಭ್ ಬಚ್ಚನ್, ಶತ್ರುಘ್ನಸಿನ್ಹ, ರಣಧೀರ್ ಕಪೂರ್, ರಿಷಿಕಪೂರ್, ವಿನೋದ್‌ಖನ್ನ ಹೀಗೆ ಎಲ್ಲ ನಾಯಕ ನಟರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಅತಿಬೇಡಿಕೆಯ ಖಳ ನಟನಾಗಿದ್ದರು ಎನ್ನುವುದೇ ಅವರ ಹಿರಿಮೆಯನ್ನು ಹೇಳುತ್ತದೆ. ರಾಜೇಶ್‌ಖನ್ನ ಪ್ರವೇಶವಾಗುವವರೆಗೆ ಪ್ರಾಣ್, ಸಂಭಾವನೆ ವಿಷಯದಲ್ಲಿ ಇತರರಿಗಿಂತ ಹೆಚ್ಚು ಗೌರವಾನ್ವಿತ ಮೊತ್ತ ಪಡೆಯುವ ಕಲಾವಿದರಾಗಿಯೇ ಇದ್ದರು. ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಅವರ ಹೆಸರೇ ಮೊದಲು ಕಾಣಿಸಿಕೊಳ್ಳುವ ಗೌರವಕ್ಕೆ ಪಾತ್ರರಾಗಿದ್ದರು.

ಛಾಯಾಗ್ರಾಹಕನಾಗಬೇಕೆಂಬುದು ಪ್ರಾಣ್ ಬಾಲ್ಯದ ಕನಸು. ಆದರೆ ತಾನೊಂದು ಬಗೆದರೆ, ದೈವವೊಂದು ಬಗೆಯಿತು ಎನ್ನುವಂತಾಯಿತು ಪ್ರಾಣ್ ಜೀವನ. 1940ರ ಸಮಯ. ಒವ್ಮೆು  ನಿರ್ಮಾಪಕ, ನಿರ್ದೇಶಕ ವಲಿ ಮಹಮ್ಮದ್ ವಲಿ ಅವರ ಕಣ್ಣಿಗೆ ಪ್ರಾಣ್ ಬಿದ್ದರು. ಆಗ ವಲಿ `ಯಾಮ್ಲಾಜಾಟ್' ಪಂಜಾಬಿ ಚಿತ್ರ ತಯಾರಿಕೆಯಲ್ಲಿದ್ದರು. ಪ್ರಾಣ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿಕೊಂಡರು. ಪ್ರಾಣ್ ಕೂಡ ಪಂಜಾಬಿ ಆಗಿದ್ದುದು ಇದಕ್ಕೆ ಕಾರಣವಾಗಿರಬಹುದು, ನೂರ್‌ಜಹಾನ್ ನಾಯಕಿ. ಚಿತ್ರ ಯಶಸ್ವಿಯಾಯಿತು. ಇದೇ ಜೋಡಿ ಹಿಂದಿ ಭಾಷೆಯಲ್ಲಿ `ಖಾನ್‌ದಾನ್' ಚಿತ್ರಕ್ಕೆ ಸಹಿ ಮಾಡಿದರು. ದೇಶ ವಿಭಜನೆಯ ನಂತರ, ಪ್ರಾಣ್ ಕುಟುಂಬ ಮೊದಲು ಇಂದೋರ್‌ಗೆ ನಂತರ ಮುಂಬೈಗೆ ಸ್ಥಳಾಂತರಗೊಂಡಿತು.

ವಿಭಜನೆಯ ಕಾಲದಲ್ಲಿ ಇಡೀ ದೇಶದಲ್ಲಿ ಗೊಂದಲದ ವಾತಾವರಣವಿತ್ತು. ಪ್ರಾಣ್ ಕೂಡ ಕಳೆದುಹೋಗಿದ್ದರು. ನಂತರ `ಜಿದ್ದಿ' ಚಿತ್ರದಲ್ಲಿ ಖಳನಟನಾಗಿ ಅವಕಾಶ ಪಡೆಯುವ ಮೂಲಕ ಹಿಂದಿ ಚಿತ್ರರಂಗದ ಅನಿವಾರ್ಯ ಖಳನಾಗಿ ನೆಲೆ ನಿಂತರು. ಈ ಚಿತ್ರ ದೇವಾನಂದ್ ಅವರಿಗೂ ಜೀವ ನೀಡಿತು. ಲಾಹೋರ್‌ನಲ್ಲಿದ್ದಾಗಲೇ ಪ್ರಾಣ್ 22 ಚಿತ್ರಗಳಲ್ಲಿ ನಾಯಕ ನಟರಾಗಿದ್ದರು ಎನ್ನುವುದು ಅವರ ಅಭಿನಯ ಸಾಮರ್ಥ್ಯಕ್ಕೆ ಸಾಕ್ಷಿ. ಅಂದಿನ ಪ್ರಖ್ಯಾತ ನಾಯಕರುಗಳಾಗಿದ್ದ ದೇವಾನಂದ್, ದಿಲೀಪ್‌ಕುಮಾರ್, ರಾಜ್‌ಕಪೂರ್ ಚಿತ್ರಗಳಲ್ಲೆಲ್ಲಾ ಪ್ರಾಣ್ ಇರಲೇಬೇಕು.

ಪ್ರಾಣ್ ಸಂಭಾಷಣೆ ಒಪ್ಪಿಸುವ ವೈಖರಿಯನ್ನು ಪ್ರೇಕ್ಷಕರು ಮತ್ತೆ ಮತ್ತೆ ನೋಡಬೇಕೆಂದು ಬಯಸುತ್ತಿದ್ದರು. ಅಮಿತಾಭ್ ಬಚ್ಚನ್ ಅವರ ಹದಿನಾಲ್ಕಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರಾಣ್ ಅನಿವಾರ್ಯವಾಗಿದ್ದರು. ಜಂಜೀರ್, ಡಾನ್, ಕಾಲಿಯಾ, ಅಮರ್ ಅಕ್ಬರ್ ಆಂಟೋನಿ, ಶರಾಬಿ ಮುಖ್ಯವಾದ ಚಿತ್ರಗಳು. ಮಧುಮತಿ, ರಾಮ್ ಔರ್ ಶ್ಯಾಮ್, ಉಪಕಾರ್, ದಸ್‌ಲಾಖ್, ಗುಮ್‌ನಾಮ್, ಜಂಜೀರ್, ವಿಕ್ಟೋರಿಯಾ ನಂಬರ್ 203, ಮೊದಲಾದ ಚಿತ್ರಗಳು ಪ್ರಾಣ್ ಅಭಿನಯದ ಹೆಗ್ಗುರುತುಗಳು.

ಭಾರತೀಯ ಚಿತ್ರರಂಗದ ಇತಿಹಾಸವನ್ನು ನೋಡಿದರೆ, ಕಲಾವಿದರು ಎಷ್ಟೊಂದು ಬಗೆಯ ರೂಪಾಂತರ ಹೊಂದುತ್ತಾರೆ ಎನ್ನುವುದರ ಅರಿವಾಗುತ್ತದೆ. ಖಳ ನಟನಾದವನು, ಪೋಷಕ ನಟನಾಗುವುದು, ನಾಯಕನೇ ಆಗಿಬಿಡುವುದು, ಹಾಸ್ಯನಟ ಹೀರೋ ಆಗುವುದು ಇವೆಲ್ಲಾ ಪ್ರೇಕ್ಷಕನ ಅಭಿರುಚಿಯನ್ನು ಅವಲಂಭಿಸುತ್ತದೆ. ಹೀಗೆ `ಕಟ್ಟಾ ಖಳ'ನಾಗಿದ್ದ ಪ್ರಾಣ್ 1967 ರಲ್ಲಿ “ಉಪಕಾರ್‌” ಚಿತ್ರದ ಮೂಲಕ ಪೋಷಕ ನಟನಾಗಿ ಪರಿವರ್ತನೆಯಾದದ್ದು ಅವರ ಚಿತ್ರರಂಗದ ಜೀವನದಲ್ಲಿ ಒಂದು ತಿರುವು. ಅದುವರೆಗೆ, ನಾಯಕ-ನಾಯಕಿಗೆ ಕಿರುಕುಳ ಕೊಡುವುದು, ಒಳ್ಳೆಯ ಕೆಲಸಕ್ಕೆ ಕಲ್ಲು ಹಾಕುವುದು ಮೊದಲಾದ ನಕಾರಾತ್ಮಕ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ಪ್ರಾಣ್ ಒಮ್ಮೆಲೆ ಒಳ್ಳೆಯವನಾಗಿ ಪರಿವರ್ತನೆಯಾದದ್ದು ಪ್ರೇಕ್ಷಕರಿಗೆ ಇಷ್ಟವಾಯಿತು.

ಬೇರೆ ಬೇರೆ ಭಾಷಾ ಚಿತ್ರರಂಗದಲ್ಲೂ ಇದೇ ರೀತಿಯ ಪ್ರಯೋಗಗಳು ಫಲಕೊಟ್ಟ ಉದಾಹರಣೆಗಳಿವೆ. `ಉಪಕಾರ್' ರೀತಿಯದೇ ಕಥೆಯಿದ್ದ `ಮಣ್ಣಿನ ಮಗ' ಚಿತ್ರದಲ್ಲಿ ಕ್ರೂರ ಖಳ ಎಂ.ಪಿ. ಶಂಕರ್ ಮನಪರಿವರ್ತನೆಯಾಗಿ ಒಳ್ಳೆಯವರಾಗುವ ಸನ್ನಿವೇಶವನ್ನು ನೆನಪಿಸಿಕೊಳ್ಳಿ. ರಜನೀಕಾಂತ್ ಖಳನಿಂದ ನಾಯಕನಾಗಿ ರೂಪಾಂತರಗೊಂಡುದನ್ನು ಗಮನಿಸಿ, `ಗಂಡಭೇರುಂಡ' ಚಿತ್ರದ ಮೂಲಕ ವಜ್ರಮುನಿ ಪೋಷಕ ನಟನಾಗಿ ಬದಲಾದದ್ದನ್ನು ಜ್ಞಾಪಿಸಿಕೊಳ್ಳಿ. `ರಾಮಾಪುರದ ರಾವಣ' ಚಿತ್ರದ ಮೂಲಕ ತೂಗುದೀಪ ಶ್ರೀನಿವಾಸ್ ಒಳ್ಳೆಯವರಾದರು ಎಂಬುದನ್ನು ಗಮನಿಸಿ, ಅಂಬರೀಷ್, ಪ್ರಭಾಕರ್, ದಿನೇಶ್, ಪ್ರಕಾಶ್‌ರಾಜ್, ದೇವರಾಜ್ ಹೀಗೆ ಪ್ರಾಣ್ ಹಾಕಿಕೊಟ್ಟ ಪರಂಪರೆಯಲ್ಲಿ ಸೇರಿಕೊಳ್ಳುವ ಕಲಾವಿದರು ಬಹಳಷ್ಟು ಜನ ಇದ್ದಾರೆ.'ಉಪಕಾರ್' ಭರ್ಜರಿ ಯಶಸ್ಸು ಗಳಿಸಿತು. ಪ್ರಾಣ್ ಅವರ ಚಿತ್ರಜೀವನದ ಹಾದಿಯನ್ನೇ ಇದು ಬದಲಾಯಿಸಿತು. ಮುಂದೆ ಬಹುತೇಕ (ಒಟ್ಟು ಅವರು 350 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ). ಚಿತ್ರಗಳಲ್ಲಿ ಪ್ರಾಣ್‌ಗೆ ಸಮಾಜಕ್ಕೆ ಹಿತ ಬಯಸುವ ಪೋಷಕ ನಟನ ಪಾತ್ರ ದೊರೆಯಲಾರಂಭಿಸಿತು. `ಜಂಜೀರ್' ಚಿತ್ರದಲ್ಲಿ ಹೃದಯ ವೈಶಾಲ್ಯತೆ ವೆುರೆಯುವ ಪಠಾಣನ ಪಾತ್ರ ಮರೆಯಲಾದೀತೇ. ಆರಂಭದಲ್ಲಿ ಆ್ಯಂಗ್ರಿ ಯಂಗ್‌ಮ್ಯಾನ್ ಅಮಿತಾಭ್ ಬಚ್ಚನ್ ಅವರನ್ನು ಕಾಡುವ, ನಂತರ ಅವರ ಹಿತೈಷಿಯಾಗುವ ಪಾತ್ರ ಸಾರ್ವಕಾಲಿಕವಾಗಿ ಉತ್ತಮವಾದುದು. ಅಮಿತಾಭ್ ಚಿತ್ರಜೀವನಕ್ಕೂ ತಿರುವು ನೀಡಿದ ಚಿತ್ರ ಇದು.

ನಾಯಕನಾಗಿ ಚಿತ್ರಜೀವನ ಆರಂಭಿಸಿ, ಈ ಶತಮಾನದ ಖಳ ಎಂದೇ ಖ್ಯಾತರಾಗಿ, ಪೋಷಕ ನಟರಾಗಿ ತನ್ನೊಳಗಿದ್ದ ಕಲಾಪ್ರತಿಭೆಯನ್ನು ಚಿತ್ರರಂಗಕ್ಕೆ ಹಂಚಿದ ಪ್ರಾಣ್ 1990 ರಲ್ಲೇ ನಿವೃತ್ತಿ ಆದರು. ಆದರೂ ಚಿತ್ರರಂಗದವರು ಬಿಡಬೇಕಲ್ಲ. ಅಲ್ಲೊಂದು ಇಲ್ಲೊಂದು ಪಾತ್ರಗಳಲ್ಲಿ ಅವರು ನಿರ್ಮಾಪಕರ ಬಲವಂತಕ್ಕೆ ಕಾಣಿಸಿಕೊಂಡರು. ಕನ್ನಡದಲ್ಲೂ `ಹೊಸರಾಗ' (1992) ಚಿತ್ರದಲ್ಲಿ ಅವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿತರಕ ಪಾಲ್ ಚಂದಾನಿ ಹಾಗೂ ಪ್ರಾಣ್ ಸ್ನೇಹಿತರು. ಈ ಸ್ನೇಹವೇ ಪ್ರಾಣ್ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT