ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಚಾರಿ ಮಾರ್ಗ ದುರಸ್ತಿಗೂ ಪಿಐಎಲ್

Last Updated 10 ಏಪ್ರಿಲ್ 2013, 20:22 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಬೀದಿಗಳಲ್ಲಿ ಸೂಕ್ತ ಪಾದಚಾರಿ ಮಾರ್ಗ ನಿರ್ಮಿಸದೇ ಇರುವುದು ತಾರತಮ್ಯ ಎಸಗಿದಂತೆ ಎಂದು ದೂರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಪರಿಸರವಾದಿಗಳಾದ ಜೆನಿಫರ್ ಪಿಂಟೊ ಮತ್ತು ಪ್ರಿಯಾ ರಾವ್ ಎಂಬುವರು ಸಲ್ಲಿಸಿರುವ ಅರ್ಜಿಗೆ ಪ್ರತಿ ಹೇಳಿಕೆ ಸಲ್ಲಿಸುವಂತೆ ಕೋರ್ಟ್ ಬುಧವಾರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, `ಇದು ಗಂಭೀರ ವಿಚಾರ' ಎಂದು ಮೌಖಿಕವಾಗಿ ಹೇಳಿತು.

ನಗರದ ಪಾದಚಾರಿ ರಸ್ತೆ ಸ್ಥಿತಿ ಕೆಟ್ಟದಾಗಿದೆ. ನಗರದ ಹಲವು ಪ್ರದೇಶಗಳಲ್ಲಿ ಪ್ರತ್ಯೇಕ ಪಾದಚಾರಿ ಮಾರ್ಗಗಳೇ ಇಲ್ಲ. ಕೆಲವು ಪ್ರದೇಶಗಳಲ್ಲಿ ಅಲ್ಲಲ್ಲಿ ಇದೆ. ವಾಹನಗಳನ್ನು ಈ ಮಾರ್ಗಗಳ ಮೇಲೆ ನಿಲುಗಡೆ ಮಾಡುವುದು ಸಾಮಾನ್ಯವಾಗಿದೆ. ಪಾದಚಾರಿ ಮಾರ್ಗಗಳನ್ನು ಇಂಥ ಸ್ಥಿತಿಯಲ್ಲಿ ಇಟ್ಟಿರುವುದು, ವಾಹನ ಇಲ್ಲದವರ ಕುರಿತು ತಾರತಮ್ಯ ತೋರಿದಂತೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಇವನ್ನು ಕಾಲಮಿತಿಯಲ್ಲಿ ಸರಿಪಡಿಸುವಂತೆ ಆದೇಶ ನೀಡಬೇಕು. ಮುಂಬರುವ ದಿನಗಳಲ್ಲಿ ಹೊಸ ರಸ್ತೆ ನಿರ್ಮಾಣ ಮಾಡುವಾಗ, ಪಾದಚಾರಿ ಮಾರ್ಗಕ್ಕೆ ಅಗತ್ಯ ಸ್ಥಳ ಮೀಸಲಿಡುವಂತೆ ತಾಕೀತು ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಿವಿಧ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರ ಕುರಿತು ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಂಥ ಅವ್ಯವಹಾರಗಳನ್ನು ತಡೆಯಲು, ಬಿಬಿಎಂಪಿಯ ಎಲ್ಲ ಖರ್ಚು-ವೆಚ್ಚಗಳು ಸೂಕ್ತ ಪರಿಶೀಲನೆಗೆ ಒಳಗಾಗಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಪ್ರಾದೇಶಿಕ ಸಾರಿಗೆ ಆಯುಕ್ತರು ಮತ್ತು ಲೋಕೋಪಯೋಗಿ ಇಲಾಖೆಗೂ ನೋಟಿಸ್ ಜಾರಿಗೆ ಆದೇಶಿಸಲಾಗಿದೆ.  ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಲಾಗಿದೆ.

ಅರ್ಜಿ ವಜಾ: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಜಮೀನು ಸ್ವಾಧೀನ ಮತ್ತು ಪರಿಹಾರ ವಿತರಣೆ ಪ್ರಕ್ರಿಯೆಯಲ್ಲಿ ನಡೆಸಿದೆ ಎನ್ನಲಾದ ಅವ್ಯವಹಾರಗಳ ಕುರಿತು ಸಿಬಿಐ ತನಿಖೆಗೆ ಆದೇಶ ನೀಡಬೇಕು ಎಂದು ಕೋರಿ ಮಾಹಿತಿ ಹಕ್ಕು ಕಾರ್ಯಕರ್ತ (ಆರ್‌ಟಿಐ) ಜಯಕುಮಾರ ಹಿರೇಮಠ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾ ಮಾಡಿದೆ.

2010-11ನೇ ಸಾಲಿನ ಮಹಾಲೇಖಪಾಲರ ವರದಿಯನ್ನು 2012ರ ಮಾರ್ಚ್‌ನಲ್ಲಿ ವಿಧಾನ ಮಂಡಲದಲ್ಲಿ ಮಂಡಿಸಲಾಗಿದೆ. ಕೆಐಎಡಿಬಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಅದರಲ್ಲಿ ಉಲ್ಲೇಖಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. `ಅವ್ಯವಹಾರ ಕುರಿತು ತನಿಖೆ ನಡೆಸುವಂತೆ ಕೋರಿ ಲೋಕಾಯುಕ್ತ ಸಂಸ್ಥೆಯ ಮೊರೆ ಹೋಗಲು ಅರ್ಜಿದಾರರು ಸ್ವತಂತ್ರರಿದ್ದಾರೆ' ಎಂದು ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT