ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದೋತ್ಥಾನ!

Last Updated 18 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಳ್ಳಗಾಗುವ ಕ್ರೀಮ್, ತುಟಿಗೊಂದಿಷ್ಟು ಮೇಕಪ್, ಕೇಶ ಶೃಂಗಾರಗಳನ್ನು ಮಾಡಿಕೊಂಡ ನಂತರ ಹೆಂಗಳೆಯರ ಕಣ್ಣು ಬೀಳುವುದೇ ಪಾದದ ಕಡೆಗೆ. ಉಡುಪಿಗೆ ತಕ್ಕ ಪಾದರಕ್ಷೆಗಳನ್ನು ಸಿದ್ಧಮಾಡಿಕೊಳ್ಳುವುದೇ ಈಗಿನ ಶೋಕಿ. ಕೆಂಪನೆಯ ಮುದ್ದಾದ ಪಾದಗಳನ್ನು ತೆಳ್ಳಗಿನ, ಎತ್ತರದ ಚಪ್ಪಲಿ ಅಲಂಕರಿಸಿದಾಗ ಹೆಣ್ಣಿನ ದೇಹಸಿರಿಗೆ ಮತ್ತಷ್ಟು ಇಂಬು ಬರುತ್ತದೆ. ಚಪ್ಪಟೆ ಚಪ್ಪಲಿಗಿಂತ ಯುವತಿಯರು ಹೆಚ್ಚಾಗಿ ಮಾರುಹೋಗುವುದು ನಯನಾಜೂಕಿನ ಹೈ ಹೀಲ್ಸ್‌ಗೆ.

ಜೀನ್ಸ್ ಇರಲಿ, ಸಲ್ವಾರ್ ಕಮೀಜ್ ಇರಲಿ ಅದಕ್ಕೆ ಒಪ್ಪುವ ಹೈಹೀಲ್ಸ್ ತೊಟ್ಟು ಸಾಗುವುದು ಈಗಿನ ಜಮಾನ. ಹೀಗಾಗಿ ಮಾರುಕಟ್ಟೆಯಲ್ಲಿ ಇವುಗಳಿಗೆ ಸಿಕ್ಕಾಪಟ್ಟೆ ಬೇಡಿಕೆ. ಹೈ ಹೀಲ್ಸ್ ಎಷ್ಟೇ ಅಪಾಯಕಾರಿ ಎಂದರೂ, ಅದರ ಬಗ್ಗೆ ತಿಳಿದಿದ್ದರೂ ನಡೆಗೆ ಗ್ಲಾಮರ್ ಲುಕ್ ನೀಡುವ ಇವುಗಳೆಂದರೆ ಹೆಂಗಳೆಯರಿಗೆ ಅಚ್ಚುಮೆಚ್ಚು. ಹೈ ಹೀಲ್ಸ್ ಹಾಕಿಕೊಂಡರೆ ಸುಂದರವಾಗಿ ಕಾಣುವುದರ ಜತೆಗೆ ಆತ್ಮವಿಶ್ವಾಸ ಹೆಚ್ಚುತ್ತದೆ ಎಂಬುದು ಬೆಡಗಿಯರ ವಾದ. ಆದರೆ ಎತ್ತರನೆಯ ಚಪ್ಪಲಿ ಹಾಕಿಕೊಳ್ಳುವುದು ಅಪಾಯಕಾರಿ ಎನ್ನುವುದು ಸಂಶೋಧಕರ ಎಚ್ಚರಿಕೆ.

ಕಾಂಪೀಡ್ ಎಂಬ ಚಪ್ಪಲಿಗಳ ಬ್ರಾಂಡ್ ಒಂದು ಬ್ರಿಟನ್‌ನಲ್ಲಿ ಲಲನೆಯರ ಹೈ ಹೀಲ್ಸ್ ಮೋಹದ ಹಿನ್ನೆಲೆಯಲ್ಲಿಯೇ ಒಂದು ಸಮೀಕ್ಷೆ ನಡೆಸಿತು. ಅದರ ಪ್ರಕಾರ ಕೆಲಸಕ್ಕೆ ಹೋಗುವ ಹೆಣ್ಣುಮಕ್ಕಳೇ ಜಾಸ್ತಿ ಈ ಹೀಲ್ಸ್ ಚಪ್ಪಲಿಗಳತ್ತ ಒಲವು ತೋರಿಸುತ್ತಾರೆ. ಶೇ 29ರಷ್ಟು ಮಂದಿ ಹೈ ಹೀಲ್ಸ್ ಹಾಕಿಕೊಂಡು ನಡೆಯುವಾಗ ಮೆಟ್ಟಿಲುಗಳಿಂದ ಜಾರಿ ಬಿದ್ದು ಸೊಂಟ ಮುರಿದುಕೊಂಡ ಉದಾಹರಣೆಗಳು ಇವೆಯಂತೆ.

ಶೇ 10ರಷ್ಟು ಬ್ರಿಟಿಷ್ ಮಹಿಳೆಯರು ತಿಂಗಳ ಒಟ್ಟು ಪ್ರಯಾಣದಲ್ಲಿ ನಿತ್ಯವೂ ಸರಾಸರಿ ಒಂದು ಗಂಟೆಯಷ್ಟು ಮೊನಚಾಗಿರುವ ಹೈ ಹಿಲ್ಸ್ ಚಪ್ಪಲಿ ಮೇಲೆ ನಿಂತಿರುತ್ತಾರಂತೆ. ಹೈ ಹೀಲ್ಸ್ ಹಾಕಿಕೊಂಡು ಕಾಲು ನೋವಾಗಲೀ ನಡೆಯಲು ಕಷ್ಟವಾಗಲೀ ಶೇ 58ರಷ್ಟು ಲಲನೆಯರಿಗೆ ಇದೇ ಚಪ್ಪಲಿ ಬೇಕು. ಹೀಲ್ಸ್ ಮೋಹ ಹೆಚ್ಚಾಗಿ 25ರಿಂದ 34 ವಯೋಮಾನದವರಲ್ಲಿ ಇರುತ್ತದಂತೆ.

ಹೆಂಗಳೆಯರು ಈ ಹೀಲ್ಸ್ ನೆಚ್ಚಿಕೊಂಡಿರುವುದಕ್ಕೂ ಕಾರಣವಿದೆ. ಸಮೀಕ್ಷೆಗೆ ಒಳಗಾದವರಲ್ಲಿ ಬಹುಪಾಲು ಲಲನೆಯರ ಪ್ರಕಾರ  ಹೈ ಹೀಲ್ಸ್ ತೊಟ್ಟರೆ ಆತ್ಮವಿಶ್ವಾಸ ಹೆಚ್ಚಾಗುತ್ತದಂತೆ. ಶೇ 35ರಷ್ಟು ಹುಡುಗಿಯರಿಗೆ ಹೀಲ್ಸ್ ಚಪ್ಪಲಿ ಸೌಂದರ್ಯ ಪರಿಕರವಾಗಿ ತುಂಬಾ ಮುಖ್ಯ.

ಕಾಂಪೀಡ್ ಬ್ರಾಂಡ್‌ನ ಅಲೆಕ್ಸಾಂಡರ್ ಪಾಪಾ ಹೇಳುವಂತೆ ಈ ಹೈ ಹೀಲ್ಸ್ ಮಹಿಳೆಯರ ಬದುಕಿಗೆ ಅಪಾಯಕಾರಿ ಆಗುವುದಲ್ಲದೆ ಕಚೇರಿಯನ್ನು ತಡವಾಗಿ ತಲುಪಲೂ ಕಾರಣವಾಗಿವೆ. ಶೇ 20ರಷ್ಟು ಲಂಡನ್ ಮಹಿಳೆಯರು ಹೈ ಹೀಲ್ಸ್ ಹಾಕಿಕೊಳ್ಳುವುದರಿಂದಲೇ ಓಡಿ ಟ್ರೈನ್ ಹಿಡಿಯಲು ಸಾಧ್ಯವಾಗದೆ ಕಚೇರಿಗೆ ತಡವಾಗಿ ತಲುಪುತ್ತಾರಂತೆ.

ಇನ್ನು ಶೇ 60ರಷ್ಟು ಮಹಿಳೆಯರು ಹೈ ಹೀಲ್ಸ್‌ನಿಂದ ಅನನುಕೂಲವಾದರೂ ಫ್ಯಾಷನ್ ದೃಷ್ಟಿಯಿಂದ ಇದಕ್ಕೆ ಮೊರೆಹೋಗುತ್ತಾರಂತೆ. ಮನೆಯಿಂದ ಆಫೀಸ್‌ಗೆ ಹೋಗುವಾಗ ಚಪ್ಪಟೆಯ ಚಪ್ಪಲಿ ಹಾಕಿಕೊಂಡರೂ ಆಫೀಸ್‌ನಲ್ಲಿ ಹೈಹೀಲ್ಸ್ ಹಾಕಿಕೊಂಡು ಕೂರುತ್ತಾರಂತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT