ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾನಮತ್ತ ಸಬ್‌ಇನ್‌ಸ್ಪೆಕ್ಟರ್ ರಂಪಾಟ: ಗೂಸಾ

Last Updated 19 ಜನವರಿ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: ಪಾನಮತ್ತರಾಗಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ರಂಪಾಟ ಮಾಡಿದ ಸೋಲದೇವನಹಳ್ಳಿ ಠಾಣೆ ಸಬ್‌ಇನ್‌ಸ್ಪೆಕ್ಟರ್ ಎಚ್.ವಿ.ವೆಂಕಟಾಚಲಯ್ಯ ಅವರಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಪೀಣ್ಯದ ಎಂಟನೇ ಮೈಲಿ ಸಮೀಪ ಭಾನುವಾರ ರಾತ್ರಿ ನಡೆದಿದೆ. ಪೀಣ್ಯದ ಮಂಜುನಾಥನಗರ ನಿವಾಸಿ ಕೃಷ್ಣಮೂರ್ತಿ ಎಂಬುವರು ಎಂಟನೇ ಮೈಲಿ ಸಮೀಪ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿಕೊಂಡು ನಿಂತಿದ್ದರು.

ಪಾನಮತ್ತರಾಗಿ ಅದೇ ಮಾರ್ಗವಾಗಿ ಕಾರಿನಲ್ಲಿ (ನೋಂದಣಿ ಸಂಖ್ಯೆ ಕೆಎ-02, ಎಂ.ಬಿ-7677) ಬಂದ ವೆಂಕಟಾಚಲಯ್ಯ, ಕೃಷ್ಣಮೂರ್ತಿ ಅವರ ಕಾರಿಗೆ ವಾಹನ ಗುದ್ದಿಸಿದರು. ನಂತರ ಕೃಷ್ಣಮೂರ್ತಿ ಅವರು ‘ಏಕೆ ನನ್ನ ವಾಹನಕ್ಕೆ ಕಾರು ಗುದ್ದಿಸಿದಿರಿ’ ಎಂದು ಅವರಿಗೆ ಪ್ರಶ್ನಿಸಿದರು.

ಇದರಿಂದ ಕೋಪಗೊಂಡ ಸಬ್‌ಇನ್‌ಸ್ಪೆಕ್ಟರ್, ‘ನಾನು ಯಾರು ಎಂದು ಗೊತ್ತೇ, ನನ್ನನ್ನು ಪ್ರಶ್ನಿಸುವ ಅಧಿಕಾರ ನಿನಗಿಲ್ಲ’ ಎಂದು ಹೇಳಿ ವಾಕಿಟಾಕಿಯಿಂದ ಕೃಷ್ಣಮೂರ್ತಿ ಅವರ ಹಣೆ ಮತ್ತು ಬಾಯಿಗೆ ಹೊಡೆದರು. ಹಣೆ ಮತ್ತು ಬಾಯಿಯಿಂದ ರಕ್ತ ಸುರಿಯುತ್ತಿದ್ದರೂ ಅವರು ಹೊಡೆಯುವುದನ್ನು ಮಾತ್ರ ನಿಲ್ಲಿಸಲಿಲ್ಲ.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಾರ್ವಜನಿಕರು ವೆಂಕಟಾಚಲಯ್ಯ ಅವರನ್ನು ಹಿಡಿದುಕೊಂಡು ಚೆನ್ನಾಗಿ ಥಳಿಸಿದರು. ಅಲ್ಲದೇ ಅವರ ಬಟ್ಟೆಯನ್ನೆಲ್ಲ ಹರಿದು ಪೀಣ್ಯ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದರು. ಆದರೆ ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ ಪೀಣ್ಯ ಪೊಲೀಸರು, ವೆಂಕಟಾಚಲಯ್ಯ ಅವರನ್ನು ಬಿಟ್ಟು ಕಳುಹಿಸಿದರು.

‘ಪಾನಮತ್ತರಾಗಿ ಕಾರು ಚಾಲನೆ ಮಾಡುತ್ತಿದ್ದ ವೆಂಕಟಾಚಲಯ್ಯ ಅವರು ನನ್ನ ಕಾರಿಗೆ ವಾಹನ ಗುದ್ದಿಸಿದರು. ಇದನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಅವರು ನನ್ನ ಮೇಲೆ ಹಲ್ಲೆ ನಡೆಸಿದರು. ಅವರು ದೌರ್ಜನ್ಯ ನಡೆಸಿದ್ದನ್ನೆಲ್ಲ ಸಾರ್ವಜನಿಕರೇ ನೋಡಿ ಆ ಬಗ್ಗೆ ಪೀಣ್ಯ ಪೊಲೀಸರಿಗೂ ಮಾಹಿತಿ ನೀಡಿದರು. ಆದರೆ ಪೊಲೀಸರು ಯಾವುದೇ ದೂರು ದಾಖಲಿಸಿಕೊಳ್ಳದೆ ಅವರನ್ನು ಬಿಟ್ಟು ಕಳುಹಿಸಿದರು’ ಎಂದು ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಘಟನೆ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ‘ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಪೀಣ್ಯ ಠಾಣೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಸಿಬ್ಬಂದಿ ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT