ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಪನಾಶಿನಿಯ ಪಾಪ ತೊಳೆಯುವುದೆಂತು?

Last Updated 18 ಜೂನ್ 2011, 19:30 IST
ಅಕ್ಷರ ಗಾತ್ರ

ಸ್ವಾತಂತ್ರ್ಯೋತ್ತರ ಭಾರತದ ಕಥನವನ್ನು ತಮ್ಮ ಆತ್ಮಕತೆಯೊಂದಿಗೆ ಹೇಳುತ್ತಾ ಹೋಗುವ ಶಶಿ ತರೂರ್ ಅವರ `ಇಂಡಿಯಾ ಮಿಡ್ ನೈಟ್ ಟು ಮಿಲನಿಯಂ~ ಕೃತಿಯಲ್ಲಿ ಲೇಖಕರು ಗಾಂಧೀಜಿ ಸತ್ಯಾಗ್ರಹ ಮಾರ್ಗದ ಕುರಿತಂತೆ `ಗಾಂಧಿ ಬ್ರಿಟಿಷರ ವಿರುದ್ಧ ಸತ್ಯಾಗ್ರಹ ನಡೆಸಿ ಗೆದ್ದರು. ಒಂದು ವೇಳೆ ಇದೇ ಸತ್ಯಾಗ್ರಹವನ್ನು ಅವರು ಹಿಟ್ಲರ್ ವಿರುದ್ಧ ನಡೆಸಿದ್ದರೆ ಏನಾಗುತ್ತಿತ್ತು?~ ಎಂಬ ಕುತೂಹಲಕಾರಿ ಪ್ರಶ್ನೆಯನ್ನು ಎತ್ತುತ್ತಾರೆ. ಈಗ ಇದೇ ಪ್ರಶ್ನೆಯನ್ನು ಸ್ವಲ್ಪ ಬದಲಾಯಿಸಿ ಹಿಟ್ಲರ್ ಎಂದು ಇರುವಲ್ಲಿ ಸ್ವತಂತ್ರ ಭಾರತದ ಪ್ರಭುತ್ವಗಳು ಎಂದು ಸೇರಿಸಿಕೊಂಡರೆ ತಪ್ಪಾಗದೇನೋ.

ಗಂಗೆಯ ಪಾತ್ರದಲ್ಲಿ ನಡೆಯುತ್ತಿರುವ ಕಲ್ಲು, ಮರಳು ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿ 114 ದಿನಗಳ ನಿರಶನ ನಡೆಸಿದ ಸ್ವಾಮಿ ನಿಗಮಾನಂದ ಸರಸ್ವತಿ ಅವರು ಕೊನೆಯುಸಿರೆಳೆಯುವ ತನಕವೂ ಅವರ ಸತ್ಯಾಗ್ರಹದ ಕುರಿತು ಯಾರಿಗೂ ತಿಳಿದಿರಲಿಲ್ಲ. ಈಗಲೂ ಅಷ್ಟೇ ಸ್ವಾಮಿ ನಿಗಮಾನಂದರ ಹಿನ್ನೆಲೆ ಅರಿಯಲು `ಗೂಗಲ್~ ಮಾಹಿತಿ ಜಾಲದಲ್ಲಿ ತಡಕಾಡಿದರೆ ಅಲ್ಲಿ  ಸಿಗುವುದು ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಬಂದಿರುವ ಅವರ ಸಾವಿನ ಸುದ್ದಿ ಮತ್ತು ಅದಕ್ಕೆ ಬಂದ ವಿವಿಧ ರಾಜಕೀಯ ಪಕ್ಷಗಳ ಪ್ರತಿಕ್ರಿಯೆಗಳಷ್ಟೇ. ಇನ್ನೂ ಸ್ವಲ್ಪ ಕಷ್ಟಪಟ್ಟು ಹುಡುಕಿದರೆ ಮಾತೃ ಸದನದ ಬ್ಲಾಗ್ ಸಿಗುತ್ತದೆ.

ಪ್ರಸ್ತುತ ಕಾಲಘಟ್ಟದಲ್ಲಿ ಸತ್ಯಾಗ್ರಹವೊಂದು ದೇಶದ ಜನರ ಗಮನ ಸೆಳೆಯಲು `ಮಾಧ್ಯಮ~ಗಳ ಸಹಕಾರ  ಬಹಳ ಮುಖ್ಯ ಅನಿಸುತ್ತದೆ. ರಾಮ್‌ದೇವ್ ಮತ್ತು ಅಣ್ಣಾ ಹಜಾರೆ ಅವರ ಸತ್ಯಾಗ್ರಹಗಳಿಗೆ ದೊರೆತ ದೊಡ್ಡ ಪ್ರಚಾರ ನಿಗಮಾನಂದರ ಸತ್ಯಾಗ್ರಹಕ್ಕೆ ದೊರೆತಿದ್ದರೆ ಪರಿಸ್ಥಿತಿ ಬೇರೆಯೇ ಇರುತ್ತಿತ್ತು. ಬಾಬಾ ರಾಮ್‌ದೇವ್ ಅವರ ಆರೋಗ್ಯ ಹದಗೆಡುತ್ತಿದೆಯೆಂದು ತಿಳಿದಾಗ ಅವರ ಮನವೊಲಿಸಿ ಸತ್ಯಾಗ್ರಹ ಹಿಂತೆಗೆದುಕೊಳ್ಳುವಂತೆ ಮಾಡಲು ಬೆಂಗಳೂರು, ಉಡುಪಿ, ಮತ್ತಿತರ ಕಡೆಗಳಿಂದ ಹೈ ಪ್ರೊಫೈಲ್ ಸನ್ಯಾಸಿಗಳು ಹರಿದ್ವಾರಕ್ಕೆ ಹಾರಿದ್ದರು. ರಾಮ್‌ದೇವ್ ಅವರನ್ನು ದಾಖಲಿಸಲಾಗಿದ್ದ ಅದೇ ಆಸ್ಪತ್ರೆಯಲ್ಲಿ ಸ್ವಾಮಿ ನಿಗಮಾನಂದರನ್ನೂ ದಾಖಲಿಸಲಾಗಿತ್ತು. ಆಸ್ಪತ್ರೆಯನ್ನು ಸಂದರ್ಶಿಸಿದ ಪ್ರಭಾವಿ ಸನ್ಯಾಸಿಗಳ್ಯಾರೂ ಈ ಬ್ರಹ್ಮಚಾರಿಯನ್ನು ಸಂದರ್ಶಿಸದ ಬಗ್ಗೆ ಅಥವಾ ಅವರ ಕುರಿತು ಏನಾದರೂ ಹೇಳಿದ್ದರ ಬಗ್ಗೆ ಯಾವ ಮಾಧ್ಯಮವೂ ಈತನಕ ವರದಿ ಮಾಡಿಲ್ಲ!

ಸ್ವಾಮಿ ನಿಗಮಾನಂದರು ಮಾತೃ ಸದನ ಆಶ್ರಮದ ಸನ್ಯಾಸಿ. ಹರಿದ್ವಾರದ `ಕುಂಭ~ ಪ್ರದೇಶದಲ್ಲಿ ಹಿಮಾಲಯ ಸ್ಟೋನ್  ಕ್ರಷರ್ ನಡೆಸುತ್ತಿರುವ ಮರಳು ಮತ್ತು ಕಲ್ಲು ಗಣಿಗಾರಿಕೆಯನ್ನು ವಿರೋಧಿಸುತ್ತ ಬಂದಿರುವ ಮಾತೃ ಸದನದ ಹೋರಾಟಕ್ಕೆ ಒಂದು ದಶಕಕ್ಕೂ ಹೆಚ್ಚಿನ ಇತಿಹಾಸವಿದೆ.

ಇಲ್ಲಿನ ಸನ್ಯಾಸಿಗಳು ಹಲವು ಬಗೆಯಲ್ಲಿ ಸರ್ಕಾರ ಮತ್ತು ನ್ಯಾಯಾಲಯಕ್ಕೆ ಈ ಗಣಿಗಾರಿಕೆಯ ಅಪಾಯಗಳನ್ನು ಮನದಟ್ಟು ಮಾಡಲು ಪ್ರಯತ್ನಿಸಿದ್ದಾರೆ. ಸ್ಥಳೀಯರಲ್ಲಿ ಜಾಗೃತಿ ಮೂಡಿಸುವ, ವಿಷಯವನ್ನು ಹರಿದ್ವಾರದಿಂದ ಹೊರಗಿರುವ ಭಕ್ತರಿಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಗಂಗೆಯ ಪಾವಿತ್ರ್ಯದ ಕುರಿತಂತೆ ಗಂಟೆಗಟ್ಟಲೆ ಪ್ರವಚನ ನೀಡುವ ಪ್ರಭಾವಿ ಸನ್ಯಾಸಿಗಳಿಂದ ಹಿಡಿದು ವಾರಣಾಸಿಯಲ್ಲಿ `ವಾಟರ್~ ಚಿತ್ರೀಕರಣವನ್ನು ವಿರೋಧಿಸಲು ದಾಂದಲೆಗಿಳಿದ `ಧರ್ಮ ರಕ್ಷಕ~ರ ತನಕದ ಯಾರೂ ಈ ವಿಷಯದಲ್ಲಿ ಮಾತೃ ಸದನ ಆಶ್ರಮದ ಬೆಂಬಲಕ್ಕೆ ನಿಲ್ಲದಿದ್ದುದು ಮಾತ್ರ ಆಶ್ಚರ್ಯದ ಸಂಗತಿ.

ಮಾತೃ ಸದನ ಆಶ್ರಮದ ಬ್ಲಾಗ್‌ನಲ್ಲಿರುವ ವಿವರಗಳು ಹೇಳುವಂತೆ ಇಲ್ಲಿನ ಗಣಿಗಾರಿಕೆಗೆ ಉತ್ತರಖಂಡದ ರಾಜಕಾರಣಿಗಳು ಮತ್ತು ಅಧಿಕಾರಿಗಳಿಬ್ಬರ ಬೆಂಬಲ ಇದೆ. ಒಂದು ಹಂತದಲ್ಲಿ ಮಾತೃ ಸದನದ ಸನ್ಯಾಸಿಗಳು ಅಲ್ಲಿನ ಹೈಕೋರ್ಟ್‌ನ ನ್ಯಾಯಮೂರ್ತಿಗಳ ಪ್ರಾಮಾಣಿಕತೆ ಕುರಿತಂತೆಯೂ ಸಂಶಯ ವ್ಯಕ್ತಪಡಿಸಿದ್ದಿದೆ.

ಆಶ್ಚರ್ಯದ ಸಂಗತಿಯೆಂದರೆ ಈ ವಿವಾದಗಳ್ಲ್ಲೆಲ ಹೊರಜಗತ್ತಿಗೆ ತಿಳಿಯುತ್ತಿರುವುದು ನಿಗಮಾನಂದರ ಸಾವಿನ ನಂತರ. `ವಾಟರ್~ ಚಿತ್ರೀಕರಣವನ್ನು ತಡೆಯಲು `ದಾಂದಲೆ~ ನಡೆಸಿದ ಭಜರಂಗದಳದ ಕಾರ್ಯಕರ್ತರ ಬೆನ್ನಿಗೆ ಭಾರತೀಯ ಜನತಾ ಪಕ್ಷವೂ ನಿಂತಿತ್ತು. ಹಿಂದೂ ಸಂಸ್ಕೃತಿಯ ರಕ್ಷಣೆಯ ಹೊಣೆಯನ್ನು ಹೊತ್ತಿರುವ ಇದೇ ಬಿಜೆಪಿಯೇ ಈಗ ಉತ್ತರಖಂಡದಲ್ಲಿ ಆಡಳಿತ ನಡೆಸುತ್ತಿದೆ. ಮಾತೃ ಸದನದ ಸನ್ಯಾಸಿಗಳು ಹೇಳುವಂತೆ ಈ ಸರ್ಕಾರವೂ ಗಣಿಗಾರಿಕೆಯ ಪರವಾಗಿಯೇ ಇದೆಯಂತೆ.

ಎಷ್ಟೇ ಪ್ರಯತ್ನಿಸಿದರೂ ಗಣಿಗಾರಿಕೆ ಮುಂದುವರಿದಿದ್ದರಿಂದ ಸ್ವಾಮಿ ನಿಗಮಾನಂದರು 2008ರ ಜನವರಿ 20ರಂದು ಸತ್ಯಾಗ್ರಹ ಆರಂಭಿಸಿದರು. ಅದೇ ವರ್ಷದ ಏಪ್ರಿಲ್ ಒಂದರ ತನಕ ಮುಂದುವರಿಯಿತು. ಜಿಲ್ಲಾಡಳಿತ ಅನಿವಾರ್ಯವಾಗಿ ಇಲ್ಲಿನ ಕಲ್ಲು ಗಣಿಗಾರಿಕೆಯನ್ನು ನಿಷೇಧಿಸಿತು. ಕೆಲವೇ ತಿಂಗಳುಗಳಲ್ಲಿ ಯಾವುದೋ ನೆಪವೊಡ್ಡಿ ಮತ್ತೆ ಗಣಿಗಾರಿಕೆಯನ್ನು ಮುಂದುವರಿಸಲು ಅನುಮತಿ ನೀಡಲಾಯಿತು. 2009ರಲ್ಲಿ ಸ್ವಾಮಿ ದಯಾನಂದ ಎನ್ನುವ ಮತ್ತೊಬ್ಬ ಸನ್ಯಾಸಿ ಸತ್ಯಾಗ್ರಹ ಆರಂಭಿಸಿದರು. ಅವರ 30 ದಿನಗಳ ಸತ್ಯಾಗ್ರಹದ ಪರಿಣಾಮವಾಗಿ ಮತ್ತೆ ಗಣಿಗಾರಿಕೆ ನಿಂತಿತು. ಸಮಸ್ಯೆ ಪರಿಹಾರವಾಯಿತು ಎಂದು ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ ಅಕ್ಟೋಬರ್ 2009ರಿಂದ ಗಣಿಗಾರಿಕೆ ಮತ್ತೆ ಆರಂಭವಾಯಿತು.

ಆದರೆ ಮಾತೃ ಸದನದ ಸನ್ಯಾಸಿಗಳು ಹೋರಾಟದಿಂದ ಹಿಂದೆಗೆಯಲಿಲ್ಲ. 2009ರ ಅಕ್ಟೋಬರ್ 15ರಿಂದ ದಯಾನಂದ ಮತ್ತೆ ಸತ್ಯಾಗ್ರಹ ಆರಂಭಿಸಿದರು. ಇದು 163 ದಿನಗಳ ಕಾಲ ಮುಂದುವರಿಯಿತು. ಇದರ ಪರಿಣಾಮವಾಗಿ ಮತ್ತೊಮ್ಮೆ ಗಣಿಗಾರಿಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ಆದರೆ ಸಮಸ್ಯೆ ಪೂರ್ಣವಾಗಿ ಪರಿಹಾರವಾಗಲಿಲ್ಲ. ಉತ್ತರಖಂಡ ಹೈಕೋರ್ಟ್ ತೀರ್ಪೊಂದನ್ನು ನೆಪವಾಗಿಟ್ಟುಕೊಂಡು ಹಿಮಾಲಯ ಸ್ಟೋನ್ ಕ್ರಷರ್ ಗಣಿಗಾರಿಕೆಯನ್ನು ಮುಂದುವ ರಿಸಿತು. ಮಾತೃ ಸದನದ ಸನ್ಯಾಸಿಗಳ ಬಳಿ ಇದ್ದದ್ದು ಒಂದೇ ಅಸ್ತ್ರ. ಈ ಬಾರಿ ಸ್ವಾಮಿ ನಿಗಮಾನಂದ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಈ ವರ್ಷದ ಫೆಬ್ರವರಿ 19ರಂದು ಅವರ ಸತ್ಯಾಗ್ರಹ ಆರಂಭವಾಯಿತು.

ಎಲ್ಲಾ ಉಪವಾಸ ಸತ್ಯಾಗ್ರಹಿಗಳಿಗೆ ಆಗುವಂತೆ ಅವರ ಆರೋಗ್ಯವೂ ಕುಸಿಯಲಾರಂಭಿಸಿತು. ಆದರೆ ಸರ್ಕಾರ ಎಚ್ಚೆತ್ತುಕೊಂಡದ್ದು ಮಾತ್ರ ಎರಡು ತಿಂಗಳ ನಂತರ. ಏಪ್ರಿಲ್ 27ರಂದು ನಿಗಮಾನಂದರನ್ನು ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ ಅವರ ಸ್ಥಿತಿ ಗಂಭೀರವಾಗಿತ್ತು. ನರ್ಸ್ ಒಬ್ಬಳು ನೀಡಿದ ಚುಚ್ಚುಮದ್ದೊಂದು ಅವರನ್ನು ಕೋಮಾಕ್ಕೆ ಕಳುಹಿಸಿತೆಂದು ಆಶ್ರಮ ಈಗ ಆರೋಪಿಸುತ್ತಿದೆ. ಜೂನ್ 13ರಂದು ಅವರು ಕೋಮಾ ಸ್ಥಿತಿಯಲ್ಲೇ ಇಹಲೋಕ ತ್ಯಜಿಸಿದರು.

ನಿಗಮಾನಂದರು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಗಲೇ ಬಾಬಾ ರಾಮ್‌ದೇವ್ ಭ್ರಷ್ಟಾಚಾರದ ವಿರುದ್ಧ ಸತ್ಯಾಗ್ರಹ ಆರಂಭಿಸಿದರು. ಗಣಿಗಾರಿಕೆಯನ್ನು ವಿರೋಧಿಸಿದ ಸನ್ಯಾಸಿಯೊಬ್ಬ ಸಾವಿನಂಚಿಗೆ ತಲುಪಿದ್ದರೂ ಅದರ ಬಗ್ಗೆ ಒಂದೇ ಒಂದು ಮಾತನ್ನೂ ಆಡದ ಬಿಜೆಪಿ ರಾಮ್‌ದೇವ್ ಬೆಂಬಲಕ್ಕೆ ನಿಂತಿತು.

ಗಂಗೆಯ ಪಾತ್ರದಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಹಿಂದೆಯೂ ಕೆಲಸ ಮಾಡುತ್ತಿದ್ದುದು ಭ್ರಷ್ಟಾಚಾರವೇ ಎಂಬುದನ್ನು ಬಿಜೆಪಿ ಮರೆಯಲು ಇದ್ದ ಕಾರಣಗಳು ಎರಡು. ಮೊದಲನೆಯದ್ದು ಉತ್ತರಖಂಡದಲ್ಲಿ ಬಿಜೆಪಿಯೇ ಆಡಳಿತ ನಡೆಸುತ್ತಿದ್ದುದು. ಮತ್ತೊಂದು ಮಾತೃ ಸದನದ ಸಾಧುಗಳಿಂದ ಬಿಜೆಪಿಯ ರಾಜಕೀಯ ಅಜೆಂಡಾಗಳಿಗೆ ಯಾವುದೇ ಸಹಾಯ ಇಲ್ಲದೇ ಇದ್ದದ್ದು.

ನಿಗಮಾನಂದರ ಸಾವಿನ ಹಿಂದೆಯೇ ಕಾಂಗ್ರೆಸ್ ಪಕ್ಷ ಈ ಪ್ರಕರಣವನ್ನು ಬಿಜೆಪಿಯ ವಿರುದ್ಧ ದಾಳಿ ನಡೆಸಲು ಗುರಾಣಿಯಂತೆ ಬಳಸಿಕೊಳ್ಳುತ್ತಿದೆ. ಆದರೆ ಇಲ್ಲೂ ಒಂದು ಸಮಸ್ಯೆ ಇದೆ. ಮಾತೃ ಸದನದ ಸನ್ಯಾಸಿಗಳ ಗಂಗೆಯನ್ನು ಉಳಿಸುವ ಹೋರಾಟ ರಾಮ್‌ದೇವ್ ಭ್ರಷ್ಟಾಚಾರ ವಿರೋಧಿ ಆಂದೋಲನ ದಂತೆ ದಿಢೀರ್ ಆಗಿ ಹುಟ್ಟಿಕೊಂಡದ್ದೇನೂ ಅಲ್ಲ. ಕಳೆದ ಹನ್ನೆರಡು ವರ್ಷಗಳಿಂದಲೂ ಅವರ ಹೋರಾಟ ನಡೆಯುತ್ತಿದೆ. ಸದ್ಯ ಅಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ನಿಗಮಾನಂದರ ಸಾವಿನ ತನಕ ಸುಮ್ಮನೆ ಕುಳಿತ್ದ್ದದೇಕೆ? ಒಂದು ವೇಳೆ ಬಾಬಾ ರಾಮ್‌ದೇವ್ ಪ್ರಕರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳು ಪರಸ್ಪರ ವಿರುದ್ಧ ಗುಂಪಿನಲ್ಲಿ ಇಲ್ಲದೇ ಇದ್ದರೆ ನಿಗಮಾನಂದರ ಸಾವಿನ ನಂತರವೂ ಕಾಂಗ್ರೆಸ್ ಈಗ ಆಡುವ ಮಾತುಗಳನ್ನು ಆಡುತ್ತಿತ್ತೇ? ಕಾಂಗ್ರೆಸ್ ಟೀಕಾಸ್ತ್ರಗಳನ್ನು ಹೂಡುತ್ತಿದ್ದಂತೆಯೇ ಬಿಜೆಪಿ ಎಚ್ಚೆತ್ತುಕೊಂಡಿತು. ನಿಗಮಾನಂದರ ಸಾವಿನ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎನ್ನ ತೊಡಗಿತು. ಇದೇ ಬಿಜೆಪಿ ರಾಮ್‌ದೇವ್ ಅವರ ಹೋರಾಟವನ್ನು ಬಳಸಿಕೊಂಡದ್ದು ರಾಜಕಾರಣಕ್ಕಲ್ಲವೇ?

ನಿಗಮಾನಂದರದ್ದು ಸಾವೇ, ಕೊಲೆಯೇ ಎಂಬ ಸಂಶಯ ಮಾತೃ ಸದನದ ಸದಸ್ಯರನ್ನು ಕಾಡುತ್ತಿದೆ. ಮಾತೃ ಸದನ ನಡೆಸುತ್ತಿದ್ದ ಹೋರಾಟ ಗಂಗೆಯನ್ನು ಲಾಭಗಳಿಕೆಯ ಮಾರ್ಗವನ್ನಾಗಿಸಿಕೊಂಡ ಎಲ್ಲರಿಗೂ ನುಂಗಲಾರದ ತುತ್ತಾಗಿತ್ತು.

ಆಸ್ಪತ್ರೆಗೆ ಸೇರಿಸಿದ ನಂತರ ಅವರಿಗೆ ಕೊಟ್ಟ ಔಷಧಿಗಳೇ ಅವರ ಸಾವಿಗೆ ಕಾರಣವಾಗಿರಬಹುದು ಎಂಬ ಸಂಶಯವನ್ನು ನಿವಾರಿಸಲು ಉತ್ತರಖಂಡ ಸರ್ಕಾರ ಹೇಳಿಕೆಗಳ ಹೊರತಾದ ಯಾವ ಪ್ರಯತ್ನವನ್ನೂ ಮಾಡಿಲ್ಲ. ಈಗಾಗಲೇ ರಾಜಕೀಯ ಸ್ವರೂಪ ಪಡೆದು ಕೊಂಡಿರುವ ಈ ಪ್ರಕರಣದ ಸ್ವತಂತ್ರ ತನಿಖೆಯ ಸಾಧ್ಯತೆಗಳೂ ಕಡಿಮೆಯಾಗುತ್ತಿವೆ.

ನಿಗಮಾನಂದರ ಸಾವು ಪಾಪನಾಶಿನಿ ಗಂಗೆಯ ಮಾಲಿನ್ಯವನ್ನು ತೊಡೆಯಲು ಸಾಧ್ಯವೇ ಆಗದಂಥ ಸ್ಥಿತಿ ಸೃಷ್ಟಿಯಾಗಿರುವುದನ್ನೂ ಎತ್ತಿ ತೋರಿಸುತ್ತಿದೆ. ಈ ವರ್ಷ ಗಂಗೆಯ ಮಾಲಿನ್ಯವನ್ನು ತೊಡೆಯಲು ವಿಶ್ವಬ್ಯಾಂಕ್‌ನಿಂದ ಒಂದು ಬಿಲಿಯನ್ ಡಾಲರ್ ಸಾಲ ಪಡೆಯುವ ಒಪ್ಪಂದವೊಂದಕ್ಕೆ ಭಾರತ ಸರ್ಕಾರ ನಿಗಮಾನಂದರ ಸಾವಿನ ಮರುದಿನ ಸಹಿ ಹಾಕಿತು. ರಾಜೀವ್‌ಗಾಂಧಿ ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲೇ ಆರಂಭಗೊಂಡ `ಗಂಗಾ ಆ್ಯಕ್ಷನ್ ಪ್ರಾಜೆಕ್ಟ್~ ಈ ತನಕ ಖರ್ಚು ಮಾಡಿರುವ ಕೋಟ್ಯಂತರ ರೂಪಾಯಿಗಳು ವ್ಯರ್ಥವಾಗಿವೆ. ಆದರೂ ಗಂಗೆಯ ಸ್ಥಿತಿ ಸುಧಾರಿಸಿಲ್ಲ. ಈ ಬಾರಿಯ ಒಂದು ಬಿಲಿಯನ್ ಡಾಲರ್‌ಗಳ ಸಾಲ ಮತ್ತು ಗಂಗೆಯ ಶುದ್ಧಿಯ ಹೊಣೆ ಹೊತ್ತಿರುವ ಉತ್ತರಖಂಡ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳು ಹೂಡುವ ಹಣ  ಮತ್ತೊಮ್ಮೆ ಗಂಗೆಯ ಪಾಲಾಗುವ ಸಾಧ್ಯತೆಗಳೇ ಹೆಚ್ಚಾಗಿ ಕಾಣಿಸುತ್ತಿವೆ.

ಗಂಗೆಯನ್ನು ಮಲಿನಗೊಳಿಸುವುದನ್ನೇ ಲಾಭದ ಮಾರ್ಗ ವನ್ನಾಗಿಸಿಕೊಂಡಿರುವ ಉದ್ಯಮಗಳು, ಗಂಗೆಯ ಶುದ್ಧೀಕರಣವನ್ನು ಭ್ರಷ್ಟಾಚಾರದ ಮಾರ್ಗ ವನ್ನಾಗಿಸಿಕೊಂಡಿರುವ ಸರ್ಕಾರಗಳು ಇರುವ ತನಕವೂ ಪಾಪನಾಶಿನಿಯ ಮಾಲಿನ್ಯವನ್ನು ತೊಡೆಯುವುದು ಅಸಾಧ್ಯ ಎನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT