ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಪು ಗಾಂಧಿ, ಗಾಂಧಿ ಬಾಪು ಆದ ಕಥೆ

Last Updated 23 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ


‘ನಾಥುರಾಮ ಗೋಡ್ಸೆ ಕೊಂದ ಗಾಂಧಿಯ ದೇಹಕ್ಕೆ, ನಾಡ ನಾಯಕರೆಲ್ಲಾ ಒಟ್ಟು ಸೇರಿ ಕೊಳ್ಳಿ ಇಡುತ್ತಿದ್ದ ಹೊತ್ತಲ್ಲಿ, ದೆಹಲಿಯ ಕನಾಟ್ ಪ್ಲೇಸ್‌ನ ನಿರ್ಜನ ಪ್ರದೇಶದಲ್ಲಿದ್ದ ಮನೆಯೊಂದರ ಎದುರು ಆರವತ್ತರ ಮುದುಕನೊಬ್ಬ ಬಂದು ನಿಂತಿದ್ದ. ಮನೆಯ ಗೇಟಿನ ಕಂಬಿಗಳಿಗೆ ಅಂಟಿಸಿದ್ದ ತುಕ್ಕು ಹಿಡಿದ ತಗಡಿನ ಫಲಕದಲ್ಲಿ ‘ದೇವದಾಸ ಮೋಹನ ಗಾಂಧಿ’ ಎಂದು ಬರೆದಿತ್ತು. ಇಬ್ಬರು ಪುಟ್ಟ ಮಕ್ಕಳೊಂದಿಗೆ ಕಿಟಕಿಯ ಬದಿಯಲ್ಲಿ ಕುಳಿತಿದ್ದ ತಾರೆಗೆ, ಅಪರೂಪಕ್ಕೆ ಬಂದಿದ್ದ ದೊಡ್ಡಪ್ಪನನ್ನು ಕಂಡು ಅಚ್ಚರಿಯಾಯಿತು.

ಹೊರಗೋಡಿ ಬಂದು ದೊಡ್ಡಪ್ಪನ ಕೈ ಹಿಡಿದು ಒಳಗೆ ಕರೆದುಕೊಂಡು ಹೋದಳು. ನೀವು ಸ್ಮಶಾನಕ್ಕೆ ಹೋಗಲಿಲ್ಲವೇ ಹರಿಕಾಕ? ಎಂದು ಪ್ರಶ್ನಿಸಿದಳು’. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ‘ಪಾಪು ಗಾಂಧಿ, ಗಾಂಧಿ ಬಾಪು ಆದ ಕಥೆ’ಯಲ್ಲಿ ಲೇಖಕ ಬೊಳುವಾರು ಮಹಮದ್ ಕುಞ ಅವರು ಬರೆದಿರುವ ಒಂದು ಮನೋಜ್ಞ ಪ್ರಸಂಗ ಇದು.

ಈ ಪುಸ್ತಕವನ್ನು ಕಡಲು ಪ್ರಕಾಶನ ಪುನರ್ ಮುದ್ರಣಗೊಳಿಸಿದೆ. ಇದನ್ನು ರಾಜ್‌ಗೋಪಾಲ್ ಆಚಾರ್ಯ (ಆರ್ಯ) ಅವರು ‘ಗಾಂಧಿ ಫ್ರಮ್ ಮೋನು ಟು ಮಹಾತ್ಮ’ ಎಂಬ ಶೀರ್ಷಿಕೆಯಡಿ ಇಂಗ್ಲಿಷ್‌ಗೆ ಅನುವಾದ ಮಾಡಿದ್ದಾರೆ. ಬೊಳುವಾರು ಅವರು ಗಾಂಧೀಜಿ ಮಹಾತ್ಮರಾದ ಬಗೆಯನ್ನು ಘಟನೆಗಳ ಮುಖಾಂತರ ಇಲ್ಲಿ ವಿವರಿಸುತ್ತಾ ಹೋಗುತ್ತಾರೆ. ಇದರಲ್ಲಿ ಒಟ್ಟು ನಲವತ್ತೊಂದು ಕಥೆಗಳಿವೆ. ಬಾಪು ಬಾಲ್ಯದಿಂದ ಚಿರಂಜೀವಿಯಾಗಿ ರೂಪುಗೊಂಡ ಕಾಲಘಟ್ಟದ ವಿವಿಧ ಹಂತಗಳನ್ನು ಅಕ್ಷರ ರೂಪದಲ್ಲಿ ಬಿಚ್ಚಿಟ್ಟಿದ್ದಾರೆ.

ಕಥೆಗಳು ನವಿರು ನಿರೂಪಣೆ ಹೊಂದಿರುವುದರಿಂದ ಮಕ್ಕಳ ಮನಸ್ಸನ್ನು ಸೆಳೆಯುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ಸ್ವಾತಂತ್ರ್ಯ ಹೋರಾಟಗಾರರಲ್ಲಿ ಇದ್ದಂತಹ ದೇಶಪ್ರೇಮದ ವಿಸ್ತಾರದ ಹರವುಗಳನ್ನು ಕಥೆಗಳು ಸಹೃದಯರ ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ. ಮಹಾತ್ಮನ ಆತ್ಮಕಥೆ ಸರಳ ನಿರೂಪಣೆಯಲ್ಲಿ ಅದ್ಭುತವಾಗಿ ಬಿಂಬಿತಗೊಂಡಿದೆ.

ಇದು ಮಕ್ಕಳ ಪುಸ್ತಕವಾದರೂ ಸಹ, ಪ್ರೌಢರಿಗೂ ಈ ಪುಸ್ತಕ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಈ ಪುಸ್ತಕ ಕನ್ನಡ ಸಾರಸ್ವತ ಲೋಕದಲ್ಲಿ ಜನಪ್ರಿಯಗೊಳ್ಳುವುದರ ಜೊತೆಗೆ ಒಂದು ಮೈಲುಗಲ್ಲಾಗಿ ಉಳಿಯುವ ಎಲ್ಲ ಸಾಧ್ಯತೆಗಳು ಇವೆ. ಕನ್ನಡ ಪುಸ್ತಕದ ಬೆಲೆ ರೂ. 135. ಒಟ್ಟು 256 ಪುಟಗಳಿವೆ. ಇಂಗ್ಲಿಷ್ ಪುಸ್ತಕದ ಬೆಲೆ ರೂ 195.   

ಲಂಡನ್‌ನಲ್ಲಿರುವ ಪೀಕ್ ಪ್ಲಾಟ್‌ಫಾರ್ಮ್ ಪ್ರಕಾಶನ ಸಂಸ್ಥೆ ಕಳೆದ 17 ವರ್ಷದಿಂದ ತನ್ನ ಸಾಹಿತ್ಯ ಕೈಂಕರ್ಯವನ್ನು ಮುಂದುವರಿಸಿಕೊಂಡು ಬರುತ್ತಿದೆ. ಇದು ಜನಪ್ರಿಯ ಲೇಖಕರ ಕಥೆ, ಕಾದಂಬರಿ, ಫಿಕ್ಷನ್ ಹೀಗೆ ಸಾಹಿತ್ಯದ ನಾನಾ ಪ್ರಕಾರಗಳನ್ನು ಅನುವಾದ ಮಾಡುತ್ತಾ ಸಾಹಿತ್ಯಾಸಕ್ತಿಯನ್ನು ಪೋಷಿಸುತ್ತಾ ಬರುತ್ತಿದೆ. ಈ ಸಂಸ್ಥೆ ಪ್ರತಿ ವರ್ಷ ‘ಪೀಕ್ ಲಿಟರರಿ ಫೆಸ್ಟ್’ ನಡೆಸಿಕೊಂಡು ಬರುತ್ತಿದ್ದು, ಈ ಸಮಾವೇಶದಲ್ಲಿ ನೂರಕ್ಕೂ ಮಿಗಿಲಾಗಿ ಹೆಸರಾಂತ ಸಾಹಿತಿಗಳು ಭಾಗವಹಿಸುತ್ತಾರೆ ಎನ್ನುತ್ತಾರೆ ಶ್ರೀಧರ್ ಗೌಡ.

ಅಂದಹಾಗೆ, ಪೀಕ್ ಪ್ಲಾಟ್‌ಫಾರ್ಮ್ ಕನ್ನಡಿಗ ಶ್ರೀಧರ್ ಗೌಡ ಹಾಗೂ ಗೆರಾಲ್ಡಿನ್ ರೋಸ್ ಅವರ ಕನಸಿನ ಕೂಸು. ಇವರಿಬ್ಬರೂ ಸೇರಿ ಈ ಸಂಸ್ಥೆಯನ್ನು ಸ್ವತಂತ್ರ್ಯವಾಗಿ ಕಟ್ಟಿ ಬೆಳೆಸಿದ್ದಾರೆ. ಲಂಡನ್‌ನಲ್ಲಿ ಶುರುವಾದ ಪ್ರಪ್ರಥಮ ಆನ್‌ಲೈನ್ ಪುಸ್ತಕ ಮಳಿಗೆ ಎಂಬುದು ಸಹ ಇದರ ಹೆಗ್ಗಳಿಕೆ. ಇದು ಈಗ ಮೊದಲ ಸಲ ಭಾರತದಲ್ಲಿ ಪುಸ್ತಕ ಪ್ರಕಾಶನಕ್ಕೆ ಇಳಿದಿದೆ.

ಪೀಕ್ ಪ್ಲಾಟ್‌ಫಾರ್ಮ್: ಗುರುವಾರ ಡಾ.ಯು.ಆರ್. ಅನಂತಮೂರ್ತಿ ಮತ್ತು ಜಿ.ಸಿದ್ದರಾಮಯ್ಯ ಅವರಿಂದ ಬೊಳುವಾರು ಮಹಮದ್ ಕುಞ ಅವರ ‘ಪಾಪು ಗಾಂಧಿ- ಗಾಂಧಿ ಬಾಪು ಆದ ಕಥೆ’ ಕೃತಿ ಮರುಮುದ್ರಣ ಮತ್ತು ಅದರ ಇಂಗ್ಲಿಷ್ ಅವತರಣಿಕೆ ‘ಗಾಂಧಿ- ಪ್ರಮ್ ಮೋನು ಟು ಮಹಾತ್ಮಾ’ (ಅನುವಾದ: ರಾಜಗೋಪಾಲ್ ಆಚಾರ್ಯ ಆರ್ಯ) ಲೋಕಾರ್ಪಣೆ. ಸ್ಥಳ: ರೆಸಿಡೆನ್ಸಿ ರಸ್ತೆ ಕ್ರಾಸ್‌ವರ್ಲ್ಡ್ ಬುಕ್‌ಶಾಪ್. ಸಂಜೆ 6.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT