ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪಾರಂಪರಿಕ ಜ್ಞಾನದಿಂದ ಅರಣ್ಯ ಸಂರಕ್ಷಣೆ'

Last Updated 3 ಸೆಪ್ಟೆಂಬರ್ 2013, 19:58 IST
ಅಕ್ಷರ ಗಾತ್ರ

ಬೆಂಗಳೂರು: `ಅರಣ್ಯ ಸಂರಕ್ಷಣೆಗಾಗಿ ಮೂಲ ನಿವಾಸಿಗಳ ಪಾರಂಪರಿಕ ಜ್ಞಾನವನ್ನು ಬಳಸಿಕೊಳ್ಳಬೇಕಾದ್ದು ಅಗತ್ಯ. ಹೀಗಾಗಿ ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಹೆಸರಿನಲ್ಲಿ ಮೂಲ ನಿವಾಸಿಗಳನ್ನು ಅರಣ್ಯದಿಂದ ಒಕ್ಕಲೆಬ್ಬಿಸುವುದು ಸರಿಯಲ್ಲ' ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಪ್ರೊ.ಆರ್.ಸುಕುಮಾರ್ ಅಭಿಪ್ರಾಯಪಟ್ಟರು.

ಮಲ್ಲೇಶ್ವರದ ಎಂಇಎಸ್ ಕಾಲೇಜಿನಲ್ಲಿ ಮಂಗಳವಾರ ನಡೆದ `ಯುನೆಸ್ಕೊ ವಿಶ್ವ ಪರಂಪರೆ ಪಟ್ಟಿಗೆ ಪಶ್ಚಿಮ ಘಟ್ಟಗಳು : ವಿವಿಧ ಆಯಾಮಗಳ ಚಿಂತನೆ' ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

`ಮೂಲ ನಿವಾಸಿಗಳು ಅರಣ್ಯದ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರುತ್ತಾರೆ. ಪ್ರಾಣಿ ಹಾಗೂ ಸಸ್ಯ ಸಂಕುಲದ ಬಗ್ಗೆ ವಿಜ್ಞಾನಿಗಳಿಗಿಂತ ಹೆಚ್ಚಿನ ಜ್ಞಾನ ಮೂಲ ನಿವಾಸಿಗಳಿಗೆ ಇರುತ್ತದೆ. ಹೀಗಾಗಿ ಸರ್ಕಾರ ಅರಣ್ಯ ಸಂರಕ್ಷಣಾ ಕ್ರಮಗಳ ಜತೆಗೆ ಅರಣ್ಯ ಪ್ರದೇಶದ ಮೂಲ ನಿವಾಸಿಗಳು ಹಾಗೂ ಸ್ಥಳೀಯರ ಪಾರಂಪರಿಕ ಜ್ಞಾನವನ್ನು ಬಳಸಿಕೊಳ್ಳಬೇಕು' ಎಂದು ಅವರು ಹೇಳಿದರು.

`ಸೂಕ್ಷ್ಮ ಅರಣ್ಯ ವಲಯದ ಪಶ್ಚಿಮ ಘಟ್ಟ ಪ್ರದೇಶಗಳಿಗೆ ಯುನೆಸ್ಕೊ ವಿಶ್ವ ಪರಂಪರೆ ತಾಣದ ಮಾನ್ಯತೆ ನೀಡುವುದಾಗಿ ತಿಳಿಸಿದೆ. ಈ ಮಾನ್ಯತೆ ದೊರಕಿದ ಮಾತ್ರಕ್ಕೆ ಅರಣ್ಯ ಪ್ರದೇಶ ತಂತಾನೆ ಸಂರಕ್ಷಣೆಯಾಗುವುದಿಲ್ಲ. ಇದೊಂದು ಗೌರವಯುತ ಮಾನ್ಯತೆ. ಆದರೆ, ಈ ಮಾನ್ಯತೆ ಇದ್ದ ಮಾತ್ರಕ್ಕೆ ಅರಣ್ಯ ಒತ್ತುವರಿ, ವನ್ಯಜೀವಿ ಕಾಯ್ದೆಯ ಉಲ್ಲಂಘನೆ ನಡೆಯದು ಎಂದು ಹೇಳಲಾಗುವುದಿಲ್ಲ' ಎಂದರು.

`ಅರಣ್ಯ ಸಂರಕ್ಷಣೆಯ ಕಾರ್ಯ ಆರು ತಿಂಗಳು, ವರ್ಷದಲ್ಲಿ ಮುಗಿಯುವಂಥದ್ದಲ್ಲ. ಇದು ನಿರಂತರ ಪ್ರಕ್ರಿಯೆ. ಅರಣ್ಯದ ಜೀವವೈವಿಧ್ಯಕ್ಕೆ ಧಕ್ಕೆ ತರುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಅತಿ ಸೂಕ್ಷ್ಮ ಅರಣ್ಯ ವಲಯಗಳ ಜನರನ್ನು ಬೇರೆಡೆಗೆ ಸ್ಥಳಾಂತರಿಸುವಂತೆ, ಜನ ವಸತಿ ಪ್ರದೇಶಕ್ಕೆ ಪದೇ ಪದೇ ಬರುವ ವನ್ಯಜೀವಿಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರ್ಯ ಆಗಬೇಕು. ಇದರಿಂದ ಮಾನವ - ವನ್ಯಜೀವಿ ಸಂಘರ್ಷವನ್ನು ತಗ್ಗಿಸಬಹುದು' ಎಂದು ಹೇಳಿದರು.

`ಆನೆ- ಮಾನವ ಸಂಘರ್ಷ ತಡೆಯಲು ಕ್ಷಿಪ್ರ ಕಾರ್ಯಪಡೆ ರಚಿಸುವುದಾಗಿ ರಾಜ್ಯ ಸರ್ಕಾರದ ಪರ ವಕೀಲರು ಹೈಕೋರ್ಟ್‌ಗೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಹೈಕೋರ್ಟ್‌ನಿಂದ ಇನ್ನು ಕೆಲವೇ ದಿನಗಳಲ್ಲಿ ಅಂತಿಮ ತೀರ್ಪು ಕೂಡ ಹೊರಬರಲಿದೆ. ಆದರೆ, ಸರ್ಕಾರ ಆನೆಗಳನ್ನು ಜನ ವಸತಿ ಪ್ರದೇಶಗಳಿಗೆ ಬರದಂತೆ ತಡೆಯುವ ಜತೆಗೆ ಅರಣ್ಯ ಸಂಪತ್ತನ್ನು ಉಳಿಸಿಕೊಳ್ಳುವ ಕಡೆಗೂ ಗಮನ ನೀಡಬೇಕು' ಎಂದರು.

`ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಸ್ಥಳೀಯ ಸಂಸ್ಥೆಗಳು ತಮಗೆ ಅಗತ್ಯವಿರುವ ಯೋಜನೆಗಳನ್ನು ಮಾತ್ರ ಜಾರಿಗೆ ತರಲು ನಿರ್ಧರಿಸಬೇಕು. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬೃಹತ್ ನೀರಾವರಿ ಯೋಜನೆಗಳು, ರೈಲ್ವೆ ಮಾರ್ಗ ಹಾಗೂ ಗಣಿಗಾರಿಕೆ ಬಗ್ಗೆ ಸ್ಥಳೀಯರ ವಿರೋಧ ಇದ್ದೇ ಇರುತ್ತದೆ. ಅರಣ್ಯಕ್ಕೆ ಕುತ್ತು ತರುವಂಥ ದೊಡ್ಡ ಯೋಜನೆಗಳ ಜಾರಿಗೆ ಕೆಲವು ಗ್ರಾಮ ಪಂಚಾಯ್ತಿಗಳು ವಿರೋಧ ವ್ಯಕ್ತಪಡಿಸಿರುವ ಉದಾಹರಣೆಯೂ ಇದೆ' ಎಂದು ತಿಳಿಸಿದರು.

`ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ಅಪರೂಪದ ಪ್ರಾಣಿ ಹಾಗೂ ಸಸ್ಯ ಪ್ರಬೇಧಗಳಿವೆ. ಹೆಚ್ಚಾದ ಮಾಲಿನ್ಯ ಹಾಗೂ ಅರಣ್ಯ ನಾಶದಿಂದ ಈ ಅಪರೂಪದ ಪ್ರಾಣಿ ಹಾಗೂ ಸಸ್ಯ ಪ್ರಬೇಧಗಳು ನಶಿಸುತ್ತಿವೆ. ಪಶ್ಚಿಮ ಘಟ್ಟ ಪ್ರದೇಶದ ಅರಣ್ಯ ಸಂರಕ್ಷಣೆಗಾಗಿ ತಮಿಳುನಾಡು, ಕೇರಳ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ಸಮನ್ವಯದಲ್ಲಿ ಕೆಲಸ ಮಾಡಬೇಕು' ಎಂದು ಹೇಳಿದರು.

ಗೋವಾದ ಪರಿಸರ ಹೋರಾಟಗಾರ ಡಾ.ಕ್ಲಾಡ್ ಅಲ್ವಾರಿಸ್ ಮಾತನಾಡಿ, `ಪಶ್ಚಿಮ ಘಟ್ಟಗಳ ಸಂರಕ್ಷಣೆಯ ವಿಚಾರದಲ್ಲಿ ಮಾಧವ್ ಗಾಡ್ಗೀಳ್ ಸಮಿತಿ ನೀಡಿರುವ ವರದಿಯನ್ನು ಜಾರಿಗೆ ತರದ ಸರ್ಕಾರ, ಕಸ್ತೂರಿ ರಂಗನ್ ಅವರ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ರಚನೆ ಮಾಡಿತು. ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ಅವರು ಉಪಗ್ರಹ ಚಿತ್ರಗಳ ಆಧಾರದ ಮೇಲೆ ವರದಿ ನೀಡಿದ್ದಾರೆ. ಇದು ಅವೈಜ್ಞಾನಿಕ ಹಾಗೂ ಅವಾಸ್ತವಿಕ ವರದಿ' ಎಂದರು.

`ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಯಾವುದೇ ಬೃಹತ್ ಕಾಮಗಾರಿಗಳು ನಡೆಯಬಾರದು. ಅರಣ್ಯ ಪ್ರದೇಶದಲ್ಲಿ ರೆಸಾರ್ಟ್ ಹಾಗೂ ಇನ್ನಿತರೆ ಮಾನವ ಚಟುವಟಿಕೆಗಳು ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಸ್ಥಳೀಯರ ಒಪ್ಪಿಗೆ ಇಲ್ಲದ ಯಾವುದೇ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬಾರದು' ಎಂದು ಒತ್ತಾಯ ಮಾಡಿದರು.

ನಿವೃತ್ತ ಐಎಎಸ್ ಅಧಿಕಾರಿ ಜಿ.ವಿಶ್ವನಾಥ್, ನಿವೃತ್ತ ಐಪಿಎಸ್ ಅಧಿಕಾರಿ ಡಾ.ಯಲ್ಲಪ್ಪ ರೆಡ್ಡಿ, ಎಂಇಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಶಕುಂತಲಾ ಕಾಟ್ರೆ ಮತ್ತಿತರರು ಉಪಸ್ಥಿತರಿದ್ದರು.

ಮಾನವ- ವನ್ಯಜೀವಿ ಸಂಘರ್ಷ ಹೆಚ್ಚಳ
ಮೂರು ದಶಕಗಳ ಹಿಂದೆ ದೇಶದಲ್ಲಿ ಮಾನವ - ವನ್ಯಜೀವಿ ಸಂಘರ್ಷದಿಂದ ಪ್ರತಿವರ್ಷ ಸುಮಾರು 150 ಮಂದಿ ಸಾವಿಗೀಡಾಗುತ್ತಿದ್ದರು. ಆದರೆ, ಈಗ ವರ್ಷಕ್ಕೆ ಸುಮಾರು 450 ಮಂದಿ ಈ ಸಂಘರ್ಷದಿಂದ ಸಾವನ್ನಪ್ಪುತ್ತಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ಅರಣ್ಯ ಪ್ರದೇಶದಲ್ಲಿ ಯೋಜನೆಗಳನ್ನು ಜಾರಿಗೆ ತರುತ್ತಿರುವುದರಿಂದ ವನ್ಯಜೀವಿಗಳು ಜನ ವಸತಿ ಪ್ರದೇಶಕ್ಕೆ ಬರುವುದು ಹೆಚ್ಚಾಗಿದೆ.
-ಪ್ರೊ.ಆರ್.ಸುಕುಮಾರ್, ಪರಿಸರ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT