ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರದರ್ಶಕ ವಹಿವಾಟು: ಬೆಳೆಗಾರರ ಆಗ್ರಹ

Last Updated 30 ಮೇ 2012, 8:10 IST
ಅಕ್ಷರ ಗಾತ್ರ

ಕೋಲಾರ: ವರ್ತಕರು ಮತ್ತು ಎಪಿಎಂಸಿಯಿಂದ ಮಾವು ಬೆಳೆಗಾರರಿಗೆ ಸೂಕ್ತ ರಕ್ಷಣೆ ದೊರಕಲಿಲ್ಲ. ಮಾವಿಗೆ ಸೂಕ್ತ ಬೆಲೆ ದೊರಕದೆ ವಂಚನೆಯಾಗುತ್ತಿದೆ. ಬೆಳೆಗಾರರ ಸ್ಥಿತಿ ಗಂಭೀರವಾಗಿದೆ. ಪರಿಣಾಮವಾಗಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಬೇಕಾಯಿತು.
 
ಹೈಕೋರ್ಟ್ ಸೂಚನೆ ನೀಡಿರುವುದರಿಂದ ಇನ್ನಾದರೂ ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವಿನ ಪಾರದರ್ಶಕ ವಹಿವಾಟು ನಡೆಯಬೇಕು ಎಂದು ಬೆಳೆಗಾರರಾದ ಅಶೋಕ್ ಕೃಷ್ಣಪ್ಪ ಮತ್ತು ಚಂದ್ರಾರೆಡ್ಡಿ ಆಗ್ರಹಿಸಿದರು.

ಮಾವು ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ತೋಟಗಾರಿಕೆ ಇಲಾಖೆ ಮತ್ತು ಎಪಿಎಂಸಿ ವತಿಯಿಂದ ಏರ್ಪಡಿಸಿದ್ದ ಬೆಳೆಗಾರರು ಮತ್ತು ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು.

ಮಾರುಕಟ್ಟೆಯಲ್ಲಿ ಬೆಳೆಗಾರರನ್ನು ಪಕ್ಕಕ್ಕೆ ಸರಿಸಿ ಬೆಲೆ ನಿಗದಿ ಮಾಡಲಾಗುತ್ತಿದೆ. ದಲ್ಲಾಳಿಗಳು ಎಷ್ಟು ಬೆಲೆ ವಿಧಿಸಿದರು ಎಂದು ರೈತರಿಗೆ ಗೊತ್ತಾಗುವುದಿಲ್ಲ. ಅದೇ ರೀತಿ ಬೆಳೆಗಾರರಿಂದ ಎಷ್ಟು ಬೆಲೆಗೆ ವರ್ತಕರು ಮಾವನ್ನು ಕೊಂಡರು ಎಂದು ಕೊಳ್ಳುವವರಿಗೂ ಗೊತ್ತಾಗದ ಸ್ಥಿತಿ ಇದೆ. ಕನಿಷ್ಠ ಬೆಲೆಗೆ ಮಾವನ್ನು ಕೊಳ್ಳುವ ವರ್ತಕರು ಅತ್ಯಧಿಕ ಬೆಲೆಗೆ ಮಾರುತ್ತಿದ್ದಾರೆ. ಈ ಸನ್ನಿವೇಶ ಬದಲಾಗಬೇಕು ಎಂದು ಒತ್ತಾಯಿಸಿದರು.

ಎಪಿಎಂಸಿ ನಿಯಮಗಳ ಪಾಲನೆ ಸಮರ್ಪಕವಾಗಿ ನಡೆಯುತ್ತಿಲ್ಲ. ಅದಕ್ಕೆ ಅಧಿಕಾರಿಗಳೇ ಹೊಣೆ. ಮಾವಿಗೆ ಬಿಲ್ ಕೊಟ್ಟರೆ ಒಂದು ಬೆಲೆ, ಕೊಡದಿದ್ದರೆ ಮತ್ತೊಂದು ಬೆಲೆ ಎಂದು ವರ್ತಕರು ರಾಜಾರೋಷವಾಗಿ ಹೇಳುತ್ತಿದ್ದಾರೆ. ಅಂಥ ವಹಿವಾಟಿನಿಂದ ಸರ್ಕಾರಕ್ಕೂ ನಷ್ಟ. ರೈತರಿಗೂ ನಷ್ಟ. ಮಾವಿನ ಉತ್ಪಾದನಾ ವೆಚ್ಚಕ್ಕೂ, ಬೆಳೆಗಾರರಿಗೆ ದೊರಕುತ್ತಿರುವ ದರಕ್ಕೂ ಅಗಾಧ ವ್ಯತ್ಯಾಸವಿದೆ. ಅದನ್ನು ವಿರೋಧಿಸುವ ವಿಚಾರದಲ್ಲಿ ಬೆಳೆಗಾರರಲ್ಲಿ ಒಗ್ಗಟ್ಟಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಮಾವು ಬೆಳೆಯುವ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರೂ ಅದಕ್ಕೆ ತಕ್ಕಂತೆ ಮಾರುಕಟ್ಟೆ ವಿಸ್ತರಣೆಯಾಗುತ್ತಿಲ್ಲ. ಸಾಂಪ್ರದಾಯಿಕ ವಿಧಾನದಲ್ಲಿಯೇ ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿರುವುದು ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆಗಳನ್ನು ತಂದೊಡ್ಡಲಿದೆ. ನಾವು ಪೂರೈಸಿದ ಮಾವಿಗೆ ಎಷ್ಟು ಬೆಲೆ ಎಂಬುದು ತಕ್ಷಣವೇ ಗೊತ್ತಾಗುವುದೇ ಇಲ್ಲ.
 
ಅದಕ್ಕಾಗಿ 3ರಿಂದ ಆರು ದಿನ ಕಾಯಬೇಕು. ಅಷ್ಟೇ ಅಲ್ಲದೆ, ಸೂಕ್ತ ದರ ದೊರಕುತ್ತಿಲ್ಲ ಎಂದು ಬೆಳೆಗಾರ ರಾಮೇಗೌಡ ಆಕ್ಷೇಪಿಸಿದರು. ಸನ್ನಿವೇಶ ಹೀಗೇ ಮುಂದುವರಿದರೆ 2-3 ವರ್ಷದಲ್ಲಿ ಮಾವು ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬೆಳೆಗಾರರ ಹಿತರಕ್ಷಣೆ ಮಾಡುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಾಂತ ರೈತ ಸಂಘದ ಕೆ.ಪಿ.ಸೂರ್ಯನಾರಾಯಣ, ಮಾವಿನ ಬಹಿರಂಗ ಹರಾಜು ನಡೆಸಲು ವರ್ತಕರು ಹಿಂಜರಿಯುತ್ತಿದ್ದಾರೆ. ರೈತರಿಂದ ಕಮಿಷನ್ ಪಡೆಯಬಾರದು ಎಂಬ ನಿಯಮವಿದ್ದರೂ ರಾಜಾರೋಷವಾಗಿ ವರ್ತಕರು ಕಮಿಷನ್ ವಸೂಲಿ ಮಾಡುತ್ತಿದ್ದಾರೆ. ಕೊಳ್ಳುವವರಿಂದ ಮಾತ್ರ ಕಮಿಷನ್ ಪಡೆಯದೆ ಬೆಳೆಗಾರರ ಮೇಲೆ ಹೆಚ್ಚಿನ ಹೊರೆ ಹೊರಿಸುತ್ತಿದ್ದಾರೆ.
 
ಮಾವಿನ ಕೊಯ್ಲು ಕುರಿತು ರೈತರಿಗೆ ಸೂಕ್ತ ತರಬೇತಿ ನೀಡುವ ಕೆಲಸವೂ ಸಮರ್ಪಕವಾಗಿ ನಡೆಯುತ್ತಿಲ್ಲ. ಜಿಲ್ಲೆಯಲ್ಲಿ ಮಾವು ಬೆಳೆಯುವ ಪ್ರದೇಶದ ದಾಖಲೀಕರಣವೂ ಸಮರ್ಪಕವಾಗಿ ನಡೆದಿಲ್ಲ ಎಂದು ಆರೋಪಿಸಿದರು. ಪ್ರಕೃತಿ ವಿಕೋಪಕ್ಕೆ ಸಿಲುಕಿ ನಷ್ಟವಾಗುವ ಮಾವಿಗೆ ಪರಿಹಾರ ನೀಡುವಲ್ಲಿ ವಿಮಾ ಸೌಲಭ್ಯಕಲ್ಪಿಸಬೇಕು. ಬರಪೀಡಿತ ಜಿಲ್ಲೆ ಎಂಬ ಕಾರಣಕ್ಕೆ ವಿಶೇಷ ಪರಿಹಾರ ಪ್ಯಾಕೇಜ್ ರೂಪಿಸಬೇಕು ಎಂದು ಆಗ್ರಹಿಸಿದರು.

ಶಾಲೆಗಳಲ್ಲಿ ಮಕ್ಕಳಿಗೆ ಮಾವಿನ ಹಣ್ಣಿನ ರಸ ವಿತರಿಸುವ ಯೋಜನೆ ಜಾರಿಗೆ ತಂದರೆ ಬೆಳೆಗಾರರಿಗೆ ಅನುಕೂಲವಾಗುತ್ತದೆ. ನೇರವಾಗಿ ಮಾವು ಮಾರಲು ಬೆಳೆಗಾರರಿಗೆ ಅವಕಾಶ ಕಲ್ಪಿಸಬೇಕು. ತಾವು 10 ದಿನದಿಂದ ಕೇರಳ ರಾಜ್ಯದ ಕೆಲವು ಊರಗಳಿಗೆ ತೆರಳಿ ಮಾವನ್ನು ಮಾರಿ ಬಂದಿರುವುದಾಗಿ ಬೆಳೆಗಾರ ಚಂದ್ರಾರೆಡ್ಡಿ ತಿಳಿಸಿದರು.

ಇವತ್ತಿಗೂ ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ದೂಳು ನಿಯಂತ್ರಣಗೊಂಡಿಲ್ಲ. ಎರಡು ಜೊತೆ ಚಪ್ಪಲಿ ಹಾಕಿಕೊಂಡರೂ ನಡೆಯಲಾಗದ ಸ್ಥಿತಿ ಇದೆ. ಗೋವಿಂದರಾಜಪುರ ಕೆರೆಯ ಆವರಣದಲ್ಲಿರುವ ಮಾರುಕಟ್ಟೆಯಲ್ಲಿ ಮಳೆ ನೀರು ಹೊರಗೆ ಹರಿಯುವ ವ್ಯವಸ್ಥೆಯನ್ನೇ ರೂಪಿಸಿಲ್ಲ ಎಂದು ವಿಷಾದಿಸಿದರು.

ಕಳಪೆ ಮಾವು: ಬೆಳೆಗಾರರ ಆರೋಪಗಳಿಗೆ ಪ್ರತಿಕ್ರಿಯಿಸಿದ ಮಾವು ವರ್ತಕರ ಸಂಘದ ಅಧ್ಯಕ್ಷ ಮೊಹ್ಮದ್ ಅಮಾನುಲ್ಲಾ, ಮಾರುಕಟ್ಟೆಯಲ್ಲಿ ಸೌಲಭ್ಯ ಸೊನ್ನೆ. 19 ಎಕರೆಯಲ್ಲಿ 114 ಮಂಡಿಗಳಿಗೆ ಅವಕಾಶ ನೀಡಲಾಗಿದೆ. ಇರುವ ಸ್ವಲ್ಪ ಜಾಗದಲ್ಲೆ ವಹಿವಾಟು ನಡೆಸುವುದು ಕಷ್ಟ. ಮಾರುಕಟ್ಟೆಗೆ ಹೊರ ರಾಜ್ಯಗಳಿಂದ ಬರುವವರಿಗೆ ಸೌಕರ್ಯಗಳೇ ಇಲ್ಲ. ಬಂದವರು ಚಿಂತಾಮಣಿ ಅಥವಾ ಕೋಲಾರಕ್ಕೆ ಬಂದು ತಂಗಬೇಕಾಗಿದೆ ಎಂದು ದೂರಿದರು.

ಶ್ರೀನಿವಾಸಪುರದಲ್ಲಿ ಬೆಳೆಗಾರರು ತರುವ ಮಾವು ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ. ಎಚ್ಚರಿಕೆಯಿಂದ ಮಾವನ್ನು ಕೀಳುವ ಬದಲು ಉದುರಿಸುವ ಕೆಟ್ಟ ಸಂಪ್ರದಾಯ ಜಾರಿಯಲ್ಲೇ ಇದೆ. ಹೀಗಾಗಿ ವ್ಯರ್ಥವಾಗುವ ಮಾವಿನ ಪ್ರಮಾಣ ಹೆಚ್ಚಿದೆ. ಇಂಥ ಸಂದರ್ಭದಲ್ಲಿ ಉತ್ತಮ ಬೆಲೆ ಕೊಡಲು ಸಾಧ್ಯವೇ ಇಲ್ಲ. ಅಂಥ ಮಾವನ್ನು ಕೊಳ್ಳಲು ಹೆಚ್ಚು ಮಂದಿ ಬರುವುದು ಇಲ್ಲವಾದ್ದರಿಂದ ಬಹಿರಂಗ ಹರಾಜು ನಡೆಸುವ ಪ್ರಸ್ತಾಪವೇ ಏಳುವುದಿಲ್ಲ.

ಬೆಳೆಗಾರರು ಪೂರೈಸಿದ ದಿನವೇ ಮಾವಿನ ಬೆಲೆಯನ್ನು ತಿಳಿಸಲಾಗುತ್ತಿದೆ. ಬಹಿರಂಗ ಹರಾಜು ನಡೆಯುತ್ತಿದೆ. ಕ್ರೇಟ್‌ಗಳಲ್ಲಿ ಮಾವು ತರುವ ಬದಲು ಟ್ರ್ಯಾಕ್ಟರ್‌ಗಳಲ್ಲಿ ತಂದು ಸುರಿಯುವ ಪದ್ಧತಿ ಇದೆ. ಹೀಗಾಗಿ ಮಾವು ವ್ಯರ್ಥವಾಗುತ್ತದೆ ಎಂದು ವಿವರಿಸಿದರು. ಅವರ ಮಾತಿಗೆ ಮತ್ತೊಬ್ಬ ವರ್ತಕ ಮುಕ್ತ್ಯಾರ್ ಅಹ್ಮದ್ ಕೂಡ ದನಿಗೂಡಿಸಿದರು.

ವರ್ತಕರ ಮಾತುಗಳಿಗೆ ಬೆಳೆಗಾರರಾದ ವಿಶ್ವನಾಥ್ ಆಕ್ಷೇಪಿಸಿದರು. ಕಳೆದ ಬಾರಿ ಮಾವನ್ನು ಕೈಯಿಂದ ಕಿತ್ತು ನಾಜೂಕಾಗಿ ತಂದಿದ್ದೆ. ಅದಕ್ಕೆ ನನಗೆ ಹೆಚ್ಚು ಬೆಲೆ ಸಿಗಲಿಲ್ಲ. ಬದಲಿಗೆ ಮಾವನ್ನು ಉದುರಿಸಿ ತಂದವರಿಗೂ ನನಗೂ ಒಂದೇ ಬೆಲೆ ನಿಗದಿ ಮಾಡಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆಯಿತು. ಅವರನ್ನು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಸಮಾಧಾನಗೊಳಿಸಿದರು.

ಎಪಿಎಂಸಿ ನಿರ್ದೇಶಕ ಡಾ.ಸಿ.ಸೋಮಶೇಖರ್, ತೋಟಗಾರಿಕೆ ಇಲಾಖೆ ನಿರ್ದೇಶಕಿ ಪಿ.ಹೇಮಲತಾ, ಶ್ರೀನಿವಾಸಪುರ ಎಪಿಎಂಸಿ ಅಧ್ಯಕ್ಷ ಎಂ.ಶ್ರೀನಿವಾಸನ್, ಹಾಪ್‌ಕಾಮ್ಸ ಅಧ್ಯಕ್ಷ ಚಿಕ್ಕಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT