ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರಿಜಾತದ ಕಂಪಿನ ಹಾದಿಯಲಿ...

ಬ್ಲಾಗಿಲನು ತೆರೆದು...
Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

‘ನನ್ನ ಪಾಡಿಗೆ ನಾನು’ ಮೈಸೂರಿನ ಚರಿತಾ ಅವರ ಬ್ಲಾಗ್. ಈ ಹೆಸರೇ ಬ್ಲಾಗಿನ ಸ್ವರೂಪವನ್ನೂ ಅದರೊಡತಿಯ ವ್ಯಕ್ತಿತ್ವವನ್ನೂ ಸೂಚಿಸುವಂತಿದೆ. ಚರಿತಾ ಅವರ ಬ್ಲಾಗಿನ ಹೊಸ್ತಿಲಲ್ಲೇ ಪಾರಿಜಾತದ ಹೂಗಳು ಚೆಲ್ಲಾಪಿಲ್ಲಿಯಾಗಿ ಚೆಲ್ಲಿಕೊಂಡಿವೆ. ಆ ಹೂಗಳ ಪರಿಮಳವನ್ನು ಆಘ್ರಾಣಿಸುತ್ತ, ಬ್ಲಾಗಿನ ದಾರಿಯಲ್ಲಿ ಎಷ್ಟು ದೂರ ಸಾಗಿದರೂ ಪಾರಿಜಾತದ ನರುಗಂಪು ಹಿಂಬಾಲಿಸುತ್ತಲೇ ಇರುತ್ತದೆ. ಅಂದರೆ, ಹೂಘಮದಷ್ಟೇ ಬರಹಗಳ ಕಂಪೂ ಓದುಗರ ಮನಸನ್ನು ಸೂರೆಗೊಳ್ಳುವಂತಹದ್ದು.

‘ಜಗದಗಲದ ಅಷ್ಟೂ ವಿಸ್ಮಯವನ್ನು ಹಿಡಿಯಲ್ಲಿ ಹಿಡಿದಿಡುವ ಹಂಬಲದವಳು. ನಿಸರ್ಗದ ಒಡನಾಡಿ-, ಆರಾಧಕಿ. ಜನರಲ್ಲಿ ಪ್ರೀತಿ, ಬೆರಗು, ಮುಜುಗರ ಇಟ್ಟವಳು. ಮೈಸೂರಿನವಳು. ದೃಶ್ಯಕಲೆಯಲ್ಲಿ ಮೈಸೂರಿನ ‘ಕಾವಾ’ ಮತ್ತು ಪಶ್ಚಿಮ ಬಂಗಾಳದ ‘ಶಾಂತಿನಿಕೇತನ’ದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ. ದೃಶ್ಯಕಲೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ. ಪ್ರಸ್ತುತ, ಮೈಸೂರು ವಿ.ವಿ.ಯ ಇತಿಹಾಸ ವಿಭಾಗದಲ್ಲಿ ‘ಪೋಸ್ಟ್ ಡಾಕ್ಟರಲ್ ಫೆಲೊ’ ಮತ್ತು ಅರೆಕಾಲಿಕ ಉಪನ್ಯಾಸಕಿ’ ಇದು ಚರಿತಾ ಅವರ ಸ್ವಪರಿಚಯ.

ಬರಹಗಳಷ್ಟೇ ರುಚಿಕಟ್ಟಾದ ಚಿತ್ರಗಳೂ ‘ನನ್ನ ಪಾಡಿಗೆ ನಾನು’ (nannapaadigenaanu.blogspot.in) ಬ್ಲಾಗಿನಲ್ಲಿವೆ. ಸ್ವತಃ ಬ್ಲಾಗಿತಿ ರಚಿಸಿದ ಚಿತ್ರಗಳೊಂದಿಗೆ ಅವರು ಅಲ್ಲಿಂದ ಇಲ್ಲಿಂದ ಹೆಕ್ಕಿತಂದ ರಮಣೀಯ ಚಿತ್ರಗಳೂ ಬ್ಲಾಗಿನ ಚೆಲುವನ್ನು ಹೆಚ್ಚಿಸಿವೆ. ಇದು ಓದಬೇಕಾದ, ನೋಡಬೇಕಾದ ಬ್ಲಾಗು!

ಚರಿತಾ ಅವರ ಬರಹಗಳ ಪರಿಧಿ ಅವರ ಚಿತ್ರಗಳ ಕ್ಯಾನ್ವಾಸಿನಷ್ಟೇ ದೊಡ್ಡದು. ಕಲಾವಿದ, ಕಲಾಕೃತಿಗಳ ಕುರಿತ ಬರಹಗಳು ಇಲ್ಲಿವೆ. ಹಕ್ಕಿಗಳ ಬಗ್ಗೆ, ಹೂವಿನ ಬಗ್ಗೆ ಟಿಪ್ಪಣಿಗಳಿವೆ. ಹೆಣ್ಣಿನ ಅಂತರಂಗದ ಕದಲಿಕೆಗಳ ಛಾಯೆಗಳೂ ಇವೆ.

ಹಕ್ಕಿಯ ಬಗೆಗಿನ ಬರಹವೊಂದರ ತುಣುಕನ್ನು ನೋಡಿ: ‘‘ಹಕ್ಕಿ ಅನ್ನುವ ಹಗುರ ಹೆಸರಿಗಿಂತ ಹಗೂರವಾದ, ವಿಸ್ಮಯದ ಈ ಪುಟ್ಟ ಜೀವಗಳು ಈಗ ನನ್ನ ನಿತ್ಯದ ಜೊತೆಗಾರರು. ನಮ್ಮ ಅಡುಗೆಮನೆಯ ಹಿಂದಿರುವ ಇಷ್ಟಗಲ ಜಾಗವನ್ನು ಈಗ ‘ಹಿತ್ತಲು’ ಅನ್ನುವುದಕ್ಕಿಂತ ನಮ್ಮ ‘ಮೀಟಿಂಗ್ ಸ್ಪಾಟ್’ ಅಂದರೆ ಹಿತ್ತಲಿಗೂ ಇಷ್ಟ ಆಗಬಹುದು! ನಮ್ಮ ದಾಳಿಂಬೆ ಗಿಡದ ಬುಡದ ನೆರಳಲ್ಲಿ ಈ ಕೀಟಲೆ ಹಕ್ಕಿಗಳಿಗೆ ಅಂತಾನೇ ಒಂದು ಮಣ್ಣಿನ ‘ಬಾತ್ ಟಬ್’ ಇಟ್ಟಿದೀನಿ.

ಪುಟ್ಟ ಮಣ್ಣಿನ ಪಾಟ್ ಅದು. ಹೂವಿನಕುಂಡಕ್ಕಿಂತ ಹೆಚ್ಚಾಗಿ ಬಾತ್ ಟಬ್ನಂತೆಯೇ ಇದ್ದ ಇದರ ಕಿಂಡಿಗೆ ಎಮ್ಸೀಲ್ ಬಳಿದು ಮುಚ್ಚಿ, ನೀರು ತುಂಬಿಸಿಟ್ಟು ಜೀವನ ಸಾರ್ಥಕ ಮಾಡಿಬಿಟ್ಟಿದೀನಿ! ಖಂಡಿತವಾಗಿಯೂ ಈ ಸುಂದರ ಪಾಟ್ ನನಗೆ ದಿನಾಲೂ ಎಷ್ಟು ಥ್ಯಾಂಕ್ಸ್ ಹೇಳುತ್ತಿರುತ್ತೆ ಅಂತ ನಂಗೊತ್ತು! ಮೊದಲ ದಿನ ನೀರು ತುಂಬಿಸಿಟ್ಟು ಬಾಗಿಲ ಮರೆಯಲ್ಲಿ ನಿಂತು ಸುಮಾರು ಹೊತ್ತು ಕಾದರೂ ಯಾವ ಹಕ್ಕಿಯೂ ನಂಗೆ ಕಾಣುವಂತೆ ನೀರು ಕುಡೀಲಿಲ್ಲ.

ಎರಡಲ್ಲ ಮೂರನೇ ದಿನ ನಂಗೆ ಜಾಸ್ತಿ ಬೇಜಾರು ಮಾಡೋದು ಬೇಡ ಅಂತ್ಲೋ ಏನೋ ಪುಟ್ಟದೊಂದು ರಾಬಿನ್ ಹಕ್ಕಿ ನನಗೆ ಕಾಣೋ ಹಾಗೆ ಸುಮಾರು ಹೊತ್ತು ನೀರು ಕುಡಿದು, ‘ಸಾಕಾ? ಖುಶಿ ಆಯ್ತಾ ಈಗ?’ ಅಂತ ಕೇಳಿ, ರೆಕ್ಕೆ ಬಡಿದು, ಹಾರಿಹೋಯ್ತು. ಓಹ್! ಅದೆಂಥ ಸಾರ್ಥಕ ದಿನ! ಆ ಪಾಟ್  ಜೀವನಾನೂ ಪಾವನ ಆದ ದಿನ!

ಆ ಪುಟ್ಟ ಪಾಟ್ ಎಷ್ಟು ಚೆನಾಗಿದೆ ಗೊತ್ತಾ? ಅಡ್ಡಡ್ಡಲಾದ ಉದ್ದ ಮೂತಿ, ಮಧ್ಯದಲ್ಲಿ ಸ್ವಲ್ಪ ಪ್ರೆಸ್ ಆದಂತಿರುವ ತಿರುವಿನ ಅಂಚು, ಅಂಚಿನಲ್ಲಿ ಪುಟ್ಟ ಗೆರೆಗಳ ಡಿಸೈನ್, ನೆರಿಗೆ ಇರದ ಸೀರೆ ಉಡಿಸಿದಂತೆ ಕಾಣುವ ನಡೂಮಧ್ಯದ ಎರಡು ತೆಳುಗೆರೆಗಳು... ಒಟ್ಟಿನಲ್ಲಿ ನನ್ನ ಕೀಟಲೆ ಪಿಟ್ಟೆಗಳಿಗೆ ಅಂತಾನೇ ಹೇಳಿ ಮಾಡಿಸಿದ ಸುಂದರ ‘ನೀರ್ಕುಂಡ’. ಗಂಭೀರವಾಗಿ ಖುಶಿ ತುಳುಕಿಸುತ್ತ ಕೂತಿದೆ. ದಿನಾ ಹೊಸ ಕನ್ನಡಿಯಂಥ ನೀರು ತುಂಬಿಸಿಕೊಂಡು, ನಾನಿಟ್ಟ ಕಡೆ ಮುಖಮಾಡಿ ಕೂರೋದಂದ್ರೆ ಅದಕ್ಕೆ ಎಷ್ಟು ಇಷ್ಟ!’’.

ಬರಹ ಸೊಗಸಾಗಿದೆ ಅಲ್ಲವೇ? ನೀರ್ಕುಂಡ ಎನ್ನುವ ಪದವೂ ಅಷ್ಟೇ ಸೊಗಸಾಗಿದೆ. ಹಲವು ಪರಿಯಲ್ಲಿ ಮಹಿಳೆ ಶೋಷಣೆಗೆ ಒಳಗಾಗುತ್ತಿರುವ ಕಾಲ ಇದಲ್ಲವೇ? ಈ ವಿಪರ್ಯಾಸದ ಬಗ್ಗೆಯೂ ಬ್ಲಾಗಿತಿ ಅನೇಕ ಟಿಪ್ಪಣಿಗಳನ್ನು ದಾಖಲಿಸಿದ್ದಾರೆ. ‘ತನ್ನ ವಿಶಿಷ್ಟ- ವಿಸ್ಮಯಕರ ಶಾರೀರಿಕ ಗುಣಲಕ್ಷಣ ಮತ್ತು ಸೂಕ್ಷ್ಮ ಮನಸ್ಸು ಹೆಣ್ಣಿನ ಅಗಾಧ ಚೈತನ್ಯಕ್ಕೆ ಕಾರಣವಾದಂತೆಯೇ ದಮನಕ್ಕೆ ಒಳಗಾಗಲೂ ಕಾರಣವಾದುದು ವಿಪರ್ಯಾಸ.

ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ವಂಚಿತವಾಗಿರುವ ಶೋಷಿತವರ್ಗದಲ್ಲಿ ಮಹಿಳೆಗೆ ಅಗ್ರಸ್ಥಾನ. ಇಲ್ಲಿ ಜಾತಿ, ವರ್ಗ, ದೇಶ-ಕಾಲ ಎಲ್ಲವನ್ನೂ ಮೀರಿದ ಏಕತೆಯಿದೆ!’ ಎನ್ನುವುದು ಅವರ ಅನಿಸಿಕೆ. ಇಪ್ಪತ್ತನೇ ಶತಮಾನದ ಅರವತ್ತರ ದಶಕಗಳಲ್ಲಿ ಪಾಶ್ಚಾತ್ಯ ಕಲಾಕ್ಷೇತ್ರದಲ್ಲಿ ರೂಪುಗೊಂಡ ಸ್ತ್ರೀವಾದಿ ನೆಲೆಯ ಕಲಾಚಳವಳಿ, ಪ್ರಮುಖ ಮಹಿಳಾ ಕಲಾವಿದರು ಮತ್ತವರ ಕಲಾಕೃತಿಗಳ ಕುರಿತಂತೆ ಮಾಹಿತಿಪೂರ್ಣ ಬರಹವೂ ಬ್ಲಾಗಿನಲ್ಲಿದೆ.

ಆ ಬರಹದ ಒಂದು ಭಾಗ ಕೆಳಗಿನಂತಿದೆ: ‘‘ಎರಡನೇ ಮಹಾಯುದ್ಧದ (1939-–1945) ನಂತರ ಸಾಮಾಜಿಕ ವಲಯದಲ್ಲಿ ಕೆಲಸಗಳ ಒತ್ತಡ ಹೆಚ್ಚಾದುದರಿಂದ ಮನೆಯ ಕೆಲಸಗಳಿಗೆ ಸೀಮಿತವಾಗಿದ್ದ ಮಹಿಳೆಯನ್ನು ಪುರುಷವರ್ಗವೇ ಸಾಮಾಜಿಕ ಹೊರವಲಯದಲ್ಲಿ ಕಾರ್ಯನಿರ್ವಹಣೆಗೆ ಪ್ರೇರೇಪಿಸಿತು. ಇದರಿಂದ ಹೊಸ ಸ್ವಾತಂತ್ರ್ಯವನ್ನು ಅನುಭವಿಸಿದ ಮಹಿಳೆ ಎಚ್ಚೆತ್ತುಕೊಂಡು, ಸಂಘಟನೆಗಳ ಮೂಲಕ ಲಿಂಗತಾರತಮ್ಯದ ವಿರುದ್ಧ ದನಿ ಎತ್ತಲು ಸಾಧ್ಯವಾಯಿತು.

ಕ್ರಿ.ಶ. 1960ರ ದಶಕಗಳಲ್ಲಿ ರೂಪಿತಗೊಂಡ ಸ್ತ್ರೀವಾದಿ ಕಲಾಚಳವಳಿಯು 70ರ ದಶಕಗಳಲ್ಲಿ ಹೆಚ್ಚು ಜನಜನಿತವಾಯಿತು. ಮುಖ್ಯವಾಗಿ ಅಮೆರಿಕ, ಫ್ರಾನ್ಸ್, ಬ್ರಿಟನ್, ಜರ್ಮನಿ ದೇಶಗಳಲ್ಲಿ ಸ್ತ್ರೀಪರ ಹೆಚ್ಚು ಗಟ್ಟಿದನಿ ಹುಟ್ಟಿತು. 1971ರಲ್ಲಿ ಲಿಂಡಾ ನೊಚ್ಲಿನ್ ಎಂಬ ಅಮೆರಿಕದ ಕಲಾವಿಮರ್ಶಕಿ ತನ್ನ 'Why have there been no great women artists?' ಎಂಬ ಲೇಖನದ ಮೂಲಕ ಕಲಾವಲಯದಲ್ಲಿ ಮಹಿಳೆಯನ್ನು ಮೂಲೆಗುಂಪು ಮಾಡಿರುವುದರ ಕಡೆಗೆ ಗಮನಸೆಳೆದಳು. ನಂತರದ ದಿನಗಳಲ್ಲಿ ಮಹಿಳಾ ಕಲಾವಿದರನ್ನು ಗುರುತಿಸುವ ಕೆಲಸ ಹೆಚ್ಚು ನಿಯೋಜಿತವಾಗಿ ನಡೆದುಬಂದಿದೆ.

‘ಸೌಂದರ್ಯ’ಕ್ಕೆ ಪರ್ಯಾಯವೆಂಬಂತೆ ‘ಸ್ತ್ರೀ ನಗ್ನತೆ’ ಕಲಾಮಾಧ್ಯಮದಲ್ಲಿ ಬಿಂಬಿಸಲ್ಪಟ್ಟಿದೆ. ಐಷಾರಾಮಿ ಭೋಗಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸಲ್ಪಟ್ಟು, ಮಾನಸಿಕ/ಲೈಂಗಿಕ ಶೋಷಣೆಗೆ ಒಳಗಾಗುತ್ತ ಬಂದ ಮಹಿಳಾವರ್ಗವನ್ನು ಮೊದಲಿನಿಂದಲೂ ಕಲಾ ಅಧ್ಯಯನ, ಕಲಾಪ್ರದರ್ಶನ/ ಮಾರುಕಟ್ಟೆ ವ್ಯವಸ್ಥೆಯಿಂದ ಹೊರಗಿಡುತ್ತ ಬರಲಾಗಿತ್ತು.

ಕಲಾಕ್ಷೇತ್ರದಲ್ಲಿ ಸ್ತ್ರೀವಾದಿ ಅಲೆ ಏಳುವುದಕ್ಕೆ ಮುಂಚೆ ಇದ್ದೂ ಇಲ್ಲದಂತೆ ಹಲವು ಮಹಿಳಾ ಕಲಾವಿದರು ಆಗಿಹೋಗಿದ್ದಾರೆ.ಹತ್ತೊಂಬತ್ತನೆ ಶತಮಾನದ ಬರ್ತ್ ಮಾರಿಸಾತ್, ಮೇರಿ ಕಸಾತ್, ಗ್ವೆನ್ ಜಾನ್ ಥರದ ಕೆಲವು ಮುಂಚೂಣಿಯಲ್ಲಿದ್ದ ಬೆರಳೆಣಿಕೆಯ ಕಲಾವಿದೆಯರನ್ನು ಹೆಸರಿಸಬಹುದು. ಹೊರಗಿನ ಪ್ರಭಾವಗಳನ್ನು ಹೊರತುಪಡಿಸಿ ಇವರೆಲ್ಲರ ಚಿತ್ರಗಳಲ್ಲಿರುವ ಸಾಮಾನ್ಯ ಅಂಶವೆಂದರೆ -–ಮೌನ’’.

ಹೀಗೆ ಒಳನೋಟಗಳುಳ್ಳ ಬರವಣಿಗೆಯ ಚರಿತಾ ಅವರ ಬ್ಲಾಗು ಓದುಗರನ್ನು ಕಾಡುವ ಗುಣ ಹೊಂದಿದೆ. ‘ನನ್ನ ಪಾಡಿಗೆ ನಾನು’ ಎಂದು ಬ್ಲಾಗಿತಿ ಹೇಳಿದರೂ, ಈ ಬ್ಲಾಗಿನ ಸಖ್ಯ ಬೆಳೆಸಿದ ಓದುಗರು ತಮ್ಮ ಪಾಡಿಗೆ ತಾವು ಇರಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT