ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರು ಪ್ರೇಮ ಪ್ರಸಂಗ

Last Updated 21 ಜೂನ್ 2012, 19:30 IST
ಅಕ್ಷರ ಗಾತ್ರ

`ನೀವೇಕೆ ಹೀರೋ ಆಗಬಾರದು~? ಹೀಗೊಂದು ಪ್ರಶ್ನೆಯನ್ನು ಅವರಿಗೆ ತುಂಬಾ ಜನ ಕೇಳಿದ್ದರಂತೆ. ಈ ಪ್ರಶ್ನೆಗಳು ಅವರಲ್ಲೂ ತಾನೇಕೆ ಹೀರೋ ಆಗಬಾರದು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತಂತೆ. ಅವರ ಮನೆ ಸಮೀಪವೇ ಇದ್ದ ಸುನಿಲ್ ಸಹ ಅದನ್ನು ಕೇಳಿದಾಗ ಸಿನಿಮಾ ಮಾಡುವ ಆಸೆ ಗಟ್ಟಿಯಾಯಿತು.

ಅದರ ಫಲವೇ `ಪಾರು ಐ ಲವ್ ಯೂ~. ಆರಂಭದಲ್ಲಿ ಮಾತನಾಡಲು ತಡಕಾಡಿದ ನಟ-ನಿರ್ಮಾಪಕ ನಿರಂಜನ್ ಬಳಿಕ ಒಂದೇ ಉಸಿರಿನಲ್ಲಿ ಚಿತ್ರ ಹುಟ್ಟಿದ ಕಥೆಯನ್ನು ಹೇಳತೊಡಗಿದರು.

ಅವರ `ಪಾರು...~ ಚಿತ್ರ ಚಿತ್ರೀಕರಣವೆಲ್ಲಾ ಮುಗಿಸಿ, ದನಿಮುದ್ರಿಕೆಗಳನ್ನು ಹೊರತರುವ ಸಂಭ್ರಮವದು.ಜವಳಿ ಉದ್ಯಮದಲ್ಲಿ ಇಂಡಸ್ಟ್ರಿಯಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನಿರಂಜನ್ ಉದ್ಯೋಗ ಬಿಟ್ಟುಬಂದು ಬಣ್ಣಹಚ್ಚಿದ್ದಾರೆ.

ಜೊತೆಗೆ ಜಗಜ್ಯೋತಿ ಮೂವಿ ಮೇಕರ್ಸ್ ಎಂಬ ಸ್ವಂತ ಬ್ಯಾನರ್ ಸ್ಥಾಪಿಸಿ ಬಂಡವಾಳವನ್ನೂ ಹೂಡಿದ್ದಾರೆ. ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಸುನಿಲ್ ಹುಬ್ಬಳ್ಳಿ. ಅವರಿಗಿದು ಮೊದಲ ಚಿತ್ರ.

ರವಿಚಂದ್ರನ್ ಮತ್ತು ಯೋಗರಾಜ್ ಭಟ್ ಜೊತೆ ಕೆಲಸ ಮಾಡಿರುವ ಸುನಿಲ್ ಅವರಿಂದ ಕಿರುಚಿತ್ರವೊಂದನ್ನು ತಯಾರಿಸಿ, ಅದನ್ನು ನೋಡಿದ ನಂತರವೇ ನಿರಂಜನ್ ಅವರೊಟ್ಟಿಗೆ ಸಿನಿಮಾ ಮಾಡಲು ಮುಂದಾಗಿದ್ದು. ಒಳ್ಳೆಯ ಲವ್ ಸಬ್ಜೆಕ್ಟ್ ಮಾಡಬೇಕು ಎಂದು ಇಬ್ಬರೂ ಕೂಡಿ ಚರ್ಚಿಸಿ ಕಥೆ ಸಿದ್ಧಪಡಿಸಿದರಂತೆ. ಪ್ರೀತಿ ಮಾಡಿರುವವರು, ಮಾಡುತ್ತಿರುವವರು, ಮುಂದೆ ಮಾಡಲಿರುವವರು, ಭಗ್ನಪ್ರೇಮಿಗಳು, ಹೀಗೆ ಎಲ್ಲರೂ ನೋಡುವಂತಹ ಚಿತ್ರವಿದು ಎಂದು ನಿರಂಜನ್ ಹೇಳಿಕೊಂಡರು.

ಚಿತ್ರಕ್ಕೆ ಆರಂಭದಲ್ಲಿ ಎದುರಾಗಿದ್ದು ನಾಯಕಿಯ ಸಮಸ್ಯೆ. ಹೊಸಬರ ಚಿತ್ರ ಎಂಬ ಕಾರಣಕ್ಕೆ ತುಂಬಾ ನಟಿಯರು ತಿರಸ್ಕರಿದರು. ಕೊನೆಗೆ ನೀತು ಒಪ್ಪಿಕೊಂಡರಂತೆ. ಕಳೆದ ನವೆಂಬರ್‌ನಲ್ಲಿ ಆರಂಭಿಸಿದ ಚಿತ್ರೀಕರಣ ಚಿಕ್ಕಮಗಳೂರು, ಮೂಡಬಿದ್ರಿ, ಮಡಿಕೇರಿ ಮತ್ತು ಬೆಂಗಳೂರುಗಳಲ್ಲಿ ನಡೆದಿದೆ. ಚಿತ್ರಕ್ಕೆ ಹಾಡುಗಳನ್ನು ಮಟ್ಟು ಹಾಕಿದವರು ಎ.ಟಿ.ರವೀಶ್. ಅವರ ಹಾಡಿನ ಮನೆಯಿಂದ ಎಂಟು ಹಾಡುಗಳು `ಪಾರು...~ಗಾಗಿ ಹುಟ್ಟಿಕೊಂಡಿವೆ.

ಈ ಸಿನಿಮಾ ಮಾಡಲು ಹಾಡುಗಳೇ ಕಾರಣ. ಹಾಡುಗಳನ್ನು ಕೇಳಿದ ಬಳಿಕವೇ ಕಥೆ ಸಿದ್ಧಪಡಿಸಿದ್ದು ಎಂಬ ಸತ್ಯ ಬಿಚ್ಚಿಟ್ಟರು ಸಂಗೀತ ನಿರ್ದೇಶಕ ಎ.ಟಿ.ರವೀಶ್.
ನಿರ್ದೇಶಕ ಸುನಿಲ್ ಮಾತಿನಲ್ಲಿ ವೇಗವಿತ್ತು. ವೇದಿಕೆ ಮೇಲಿದ್ದ ಗಣ್ಯರಿಗೆಲ್ಲಾ `ಸರ್~ ಎಂದು ಸಂಬೋಧಿಸುವ ವೇಗದಲ್ಲಿ ನಟಿ ನೀತು ಅವರಿಗೂ `ನೀತು ಸರ್~ ಎಂದು ಬಾಯಿತಪ್ಪಿ ಹೇಳಿ ನಗೆಯುಕ್ಕಿಸಿದರು.

ಪಾರು ಎಂಬ ಹೆಸರಿದ್ದರೂ ಇದು ದೇವದಾಸ್-ಪಾರು ಕಥೆಯಲ್ಲ. ಚಿತ್ರದಲ್ಲಿ ನಾನು ಅಚ್ಚಕನ್ನಡತಿ ಪಾರ್ವತಿ ಎಂದು ನಕ್ಕರು ನೀತು. ಅವರು ಈ ಚಿತ್ರದಲ್ಲಿ ಚಿಕ್ಕಮಗಳೂರ ಮಲ್ಲಿಗೆ! ಕಥೆ ಹೇಳುವಾಗಲೂ ಸುನಿಲ್ ಮಾತಿನಲ್ಲಿ ಇದೇ ವೇಗವಿತ್ತು ಎಂದರು.

ಹಾಡುಗಳನ್ನು ಮೊದಲು ಕೇಳಿದ ಬಳಿಕ ಅವರು ಚಿತ್ರದ ಬಗ್ಗೆ ಆಸಕ್ತಿ ತಾಳಿದರಂತೆ.
ಗುರುಬಸವ ಸ್ವಾಮೀಜಿ ಹಾಡುಗಳ ಸೀಡಿ ಬಿಡುಗಡೆ ಮಾಡಿದರು. ನಟಿಯರಾದ ರೂಪಿಕಾ, ನಿವೇದಿತಾ, ಐಶ್ವರ್ಯಾ ನಾಗ್, ವಿತರಕ ಪ್ರಸಾದ್, ಉದ್ಯಮಿ ಅಶೋಕ್ ಖೇಣಿ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT