ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಕಿಂಗ್‌ ನೀತಿ, ತ್ಯಾಜ್ಯ ವಿಲೇವಾರಿಗೆ ನಿರ್ದೇಶನ

ಬಿಬಿಎಂಪಿ, ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಲೋಕಾಯುಕ್ತ ಸೂಚನೆ
Last Updated 27 ಸೆಪ್ಟೆಂಬರ್ 2013, 19:50 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚೆಗಷ್ಟೇ ಅಂಗೀಕರಿಸಿ­ರುವ ನೂತನ ಪಾರ್ಕಿಂಗ್‌ ನೀತಿಯನ್ನು ನಿಗದಿತ ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ತರಬೇಕು. ಅದಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಕುರಿತು ಕಾಲಕಾಲಕ್ಕೆ ತಮಗೆ ಮಾಹಿತಿ ನೀಡಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ವೈ.­ಭಾಸ್ಕರ್‌ ರಾವ್‌ ಅವರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಶುಕ್ರವಾರ ನಿರ್ದೇಶನ ನೀಡಿದ್ದಾರೆ.

ನಗರದಲ್ಲಿ ಪಾರ್ಕಿಂಗ್‌ ತಾಣಗಳಲ್ಲಿ ಅನಧಿಕೃತವಾಗಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಹಾಗೂ ಕೆಲವೆಡೆ ಅಕ್ರಮವಾಗಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳ ಕುರಿತು ಲೋಕಾಯುಕ್ತರು, ಪಾಲಿಕೆ ಮತ್ತು ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಹಲವು ನಿರ್ದೇಶನ­ಗಳನ್ನು ನೀಡಿರುವ ಅವರು, ಪಾರ್ಕಿಂಗ್‌ ತಾಣಗಳ ಹೆಸರಿನಲ್ಲಿ ಅನಧಿಕೃತ ಹಣ ವಸೂಲಿ ತಡೆಯಲು ಹೊಸ ಪಾರ್ಕಿಂಗ್‌ ನೀತಿಯನ್ನು ಜಾರಿಗೆ ತರುವಂತೆ ಸೂಚಿಸಿದ್ದಾರೆ.

ಹೊಸ ನೀತಿಯನ್ನು ಅನುಷ್ಠಾನಕ್ಕೆ ತರುವವರೆಗೂ ಅಕ್ರಮ ತಡೆಗೆ ಕೆಲ ಕ್ರಮಗಳನ್ನು ಕೈಗೊಳ್ಳುವಂತೆ ಲೋಕಾ­ಯುಕ್ತರು, ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ಮತ್ತು ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದ್ಕರ್‌ ಅವರಿಗೆ ಸೂಚಿಸಿದ್ದಾರೆ. ಈ ಸಂಬಂಧ ಪಾಲಿಕೆ ಮತ್ತು ಪೊಲೀಸ್‌ ಅಧಿಕಾರಿಗಳಿಗೆ ಪ್ರತ್ಯೇಕ ಹೊಣೆಗಾರಿಕೆ­ಗಳನ್ನು ನಿಗದಿ ಮಾಡಿದ್ದಾರೆ.

ಪಾಲಿಕೆಗೆ ನೀಡಿರುವ ಜವಾಬ್ದಾರಿ:
ನಗರದ ಎಲ್ಲಾ ಪ್ರದೇಶಗಳಲ್ಲಿ ವಾಹನ ಪಾರ್ಕಿಂಗ್‌ಗೆ ಸೂಕ್ತ ಸ್ಥಳಗಳನ್ನು ಗುರುತಿಸಬೇಕು. ಈ ಸಂಬಂಧ ಪ್ರಮುಖ ಪತ್ರಿಕೆ ಮತ್ತು ಟೆಲಿವಿಷನ್‌ ವಾಹಿನಿಗಳಲ್ಲಿ ಸಾರ್ವಜನಿಕರಿಗೆ ಪ್ರಕಟಣೆ ಹೊರಡಿಸ­ಬೇಕು. ಪಾರ್ಕಿಂಗ್‌ ತಾಣಗಳಿಗೆ ಸ್ಥಳಗಳನ್ನು ಆಯ್ಕೆ ಮಾಡುವಾಗ ರಸ್ತೆ ಬದಿಯ ಬದಲಿಗೆ ಬೇರೆ ಸ್ಥಳಗಳನ್ನು ಗುರುತಿಸಲು ಆದ್ಯತೆ ನೀಡಬೇಕು. ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಡರಿಂದ ಮೂರು ವರ್ಷಗಳ ಕಾಲಮಿತಿಯಲ್ಲಿ ಕೆಲವೆಡೆ ಬಹುಮಹಡಿ ಪಾರ್ಕಿಂಗ್‌ ಕಟ್ಟಡಗಳನ್ನು ನಿರ್ಮಿಸಬೇಕು.

ಎಲ್ಲಾ ಪಾರ್ಕಿಂಗ್‌ ಸ್ಥಳಗಳಲ್ಲಿ ದರ ಪಟ್ಟಿ ಪ್ರಕಟಿಸಬೇಕು. ಶುಲ್ಕ ವಸೂಲಿ ಮಾಡಿರುವವರು ಯಾವಾಗಲೂ ಪಾಲಿಕೆಯಿಂದ ವಿತರಿಸಿದ ಗುರುತಿನ ಪತ್ರ ಧರಿಸಿರಬೇಕು.  ಶುಲ್ಕ ವಸೂಲಿ ವೇಳೆ ಖಚಿತ ವಿವರಗಳುಳ್ಳ ಟಿಕೆಟ್‌ ವಿತರಿಸುವ ವ್ಯವಸ್ಥೆ ಮಾಡಬೇಕು.

ನಗರದ ಎಲ್ಲಾ ಪಾರ್ಕಿಂಗ್‌ ತಾಣಗಳು, ಅಲ್ಲಿನ ಶುಲ್ಕದ ಪಟ್ಟಿಯನ್ನು ನಗರ ಪೊಲೀಸ್‌ ಕಮಿಷನರ್‌ ಮತ್ತು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ಗೆ ನೀಡಬೇಕು. ಹೊಸದಾಗಿ ಪ್ರಕಟಿಸುವ ಮತ್ತು ಕೈಬಿಡುವ ಪಾರ್ಕಿಂಗ್‌ ತಾಣಗಳ ವಿವರವನ್ನು ಆಗಾಗ ನೀಡಬೇಕು. ಅನಧಿಕೃತ ಪಾರ್ಕಿಂಗ್‌ ತಾಣಗಳನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕೆಲಸವನ್ನು ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಮಾಡಬೇಕು.

ಬಿಬಿಎಂಪಿ ಆಯುಕ್ತರು ಅಥವಾ ಇತರೆ ಅಧಿಕಾರಿಗಳು ಆಗಾಗ ದಿಢೀರ್‌ ಭೇಟಿನೀಡಿ ಪಾರ್ಕಿಂಗ್‌ ತಾಣಗಳ ನಿರ್ವಹಣೆ ಕುರಿತು ತಪಾಸಣೆ ನಡೆಸಬೇಕು. ಅಕ್ರಮವಾಗಿ ಹಣ ವಸೂಲಿ, ಅನಧಿಕೃತವಾಗಿ ಪಾರ್ಕಿಂಗ್‌ ತಾಣಗಳನ್ನು ನಡೆಸುತ್ತಿರುವವರನ್ನು ಪತ್ತೆಹಚ್ಚಿ ಪೊಲೀಸರಿಗೆ ದೂರು ನೀಡಬೇಕು.

ಪೊಲೀಸರ ಕೆಲಸವೇನು?
ಪಾಲಿಕೆಯು ನೀಡಿದ ಪಟ್ಟಿಯಲ್ಲಿ ಹೆಸರಿಸುವ ಪಾರ್ಕಿಂಗ್‌ ಸ್ಥಳಗಳಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು. ಆಗಾಗ ಈ ಸ್ಥಳಗಳಿಗೆ ದಿಢೀರ್‌ ಭೇಟಿನೀಡಿ ತಪಾಸಣೆ ಮಾಡುವಂತೆ ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಬೇಕು. ಗುರುತಿನ ಚೀಟಿ ಇಲ್ಲದೇ ಶುಲ್ಕ ವಸೂಲಿ ಮಾಡುವವರ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿ, ಕ್ರಮ ಜರುಗಿಸಬೇಕು.

ಸಂಚಾರ ವಿಭಾಗದ ಪೊಲೀಸರು, ಪಾರ್ಕಿಂಗ್‌ ತಾಣಗಳಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಎಚ್ಚರ ವಹಿಸಬೇಕು. ಕಿರಿದಾದ ರಸ್ತೆಗಳ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸದಂತೆ ಕ್ರಮ ಜರುಗಿಸಬೇಕು.

ರಸ್ತೆಯುಬ್ಬು ತೆರವು: ನಗರದಲ್ಲಿ ಅನಧಿಕೃತವಾಗಿ ಮತ್ತು ಅವೈಜ್ಞಾನಿಕ­ವಾಗಿ ನಿರ್ಮಿಸಿರುವ ರಸ್ತೆಯುಬ್ಬು­ಗಳನ್ನು ತಕ್ಷಣವೇ ತೆರವು ಮಾಡುವಂತೆ ಲೋಕಾಯುಕ್ತರು ಬಿಬಿಎಂಪಿ ಆಯುಕ್ತರು ಮತ್ತು ಪೊಲೀಸ್‌ ಕಮಿಷನರ್‌ ಅವರಿಗೆ ನಿರ್ದೇಶ ನೀಡಿದ್ದಾರೆ. ಅಗತ್ಯ ಇರುವೆಡೆ ವೈಜ್ಞಾನಿಕ ಮಾನದಂಡದ ಪ್ರಕಾರ ರಸ್ತೆಯುಬ್ಬು ನಿರ್ಮಿಸುವಂತೆ ಸೂಚಿಸಿದ್ದಾರೆ.

ಲೋಕಾಯುಕ್ತ ರಿಜಿಸ್ಟ್ರಾರ್‌ ಎಚ್‌.­ಆರ್‌.­­ದೇಶಪಾಂಡೆ, ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ, ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತರಾದ ವಿ.ಮಂಜುಳಾ, ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದ್ಕರ್‌, ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಅಪರಾಧ) ಪ್ರಣವ್ ಮೊಹಾಂತಿ, ಹೆಚ್ಚುವರಿ ಪೊಲೀಸ್‌ ಕಮಿಷನರ್ (ಸಂಚಾರ) ಬಿ.­ದಯಾನಂದ ಈ ಸಭೆಯಲ್ಲಿ ಭಾಗವಹಿಸಿದ್ದರು.

ಕೆ.ಆರ್‌.ಮಾರ್ಕೆಟ್‌ನಲ್ಲಿ ದಿನಕ್ಕೆ ಮೂರು ಸಲ ತಾ್ಯಜ್ಯ ವಿಲೇವಾರಿ ಮಾಡಿ...
ನಗರದ ಕೃಷ್ಣರಾಜ ಮಾರುಕಟ್ಟೆಯಲ್ಲಿ ಸಂಗ್ರಹವಾಗುವ ಘನ ತ್ಯಾಜ್ಯವನ್ನು ಪ್ರತಿ ದಿನ ಮೂರು ಬಾರಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್‌ ರಾವ್‌ ಅವರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಶುಕ್ರವಾರ ನಿರ್ದೇಶನ ನೀಡಿದ್ದಾರೆ.

ಮಾರುಕಟ್ಟೆಯಲ್ಲಿನ ಸಮಸ್ಯೆಗಳ ಕುರಿತು ಲೋಕಾಯುಕ್ತರು ಇತ್ತೀಚೆಗೆ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದರು. ಈ ಸಂಬಂಧ ಶುಕ್ರವಾರ ಪಾಲಿಕೆ ಆಯುಕ್ತ ಎಂ.ಲಕ್ಷ್ಮೀನಾರಾಯಣ, ನಗರ ಪೊಲೀಸ್ ಕಮಿಷನರ್‌ ರಾಘವೇಂದ್ರ ಔರಾದ್ಕರ್‌ ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, ಮಾರುಕಟ್ಟೆಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಮಾರುಕಟ್ಟೆಯ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ಚೀಲ ಅಥವಾ ಪೆಟ್ಟಿಗೆಗಳಲ್ಲಿ ಸಂಗ್ರಹಿಸುವ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ಬೆಂಗಳೂರು ಹೂ ಮಾರಾಟಗಾರರ ಸಂಘ ಒಪ್ಪಿಕೊಂಡಿದೆ. ಅಲ್ಲಿಂದ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಪಾಲಿಕೆ ತ್ಯಾಜ್ಯ ವಿಲೇವಾರಿ ಮಾಡಬೇಕು. ಈ ಸಂಬಂಧ ಹೂ ಮಾರಾಟಗಾರರ ಸಂಘ ಮತ್ತು ಪಾಲಿಕೆ ನಡುವೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಲೋಕಾಯುಕ್ತರು ಸೂಚಿಸಿದ್ದಾರೆ.

ಮಾರುಕಟ್ಟೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ರಸ್ತೆಬದಿ ತರಕಾರಿ, ಹೂ, ಹಣ್ಣು ಮತ್ತಿತರ ವಸ್ತುಗಳನ್ನು ಮಾರಾಟ ಮಾಡುವ ಸ್ಥಳಗಳಿಂದಲೂ ಇದೇ ರೀತಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಮಾರುಕಟ್ಟೆಯಲ್ಲಿ ಅಗತ್ಯ ಶೌಚಾಲಯಗಳನ್ನು ನಿರ್ಮಿಸಬೇಕು. ಈಗ ಇರುವ ಶೌಚಾಲಯಗಳನ್ನು ದುರಸ್ತಿ ಮಾಡಬೇಕು ಮತ್ತು ಅವುಗಳಿಗೆ ನಿರಂತರ ನೀರು ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಮಾರುಕಟ್ಟೆಯಲ್ಲಿ ನಿರಂತರವಾಗಿ ಕುಡಿಯುವ ನೀರು ಪೂರೈಸಬೇಕು. ಎಲ್ಲಾ ಮಹಡಿಗಳಲ್ಲೂ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಬೇಕು  ಎಂದು ಪಾಲಿಕೆಗೆ ತಾಕೀತು ಮಾಡಿದ್ದಾರೆ.

ಮಾರುಕಟ್ಟೆಯ ತಳಮಹಡಿಯಲ್ಲಿ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ ವಾಹನಗಳನ್ನು ನಿಲ್ಲಿಸಿದ್ದು, ತಕ್ಷಣವೇ ಅವುಗಳನ್ನು ತೆರವು ಮಾಡಬೇಕು ಎಂದು ಲೋಕಾಯುಕ್ತರು ಪೊಲೀಸ್‌ ಕಮಿಷನರ್‌ಗೆ ಸೂಚಿಸಿದ್ದಾರೆ. ಆ ಸ್ಥಳವನ್ನು ಮಾರುಕಟ್ಟೆಗೆ ಬಂದು, ಹೋಗುವ ವಾಹನಗಳ ನಿಲುಗಡೆಗೆ ಮುಕ್ತವಾಗಿ ಇಡಬೇಕು. ಮಾರುಕಟ್ಟೆಯ ತೆರೆದ ಪ್ರದೇಶದಲ್ಲಿ ಹೊಸದಾಗಿ ಯಾವುದೇ ಮಳಿಗೆಗಳಿಗೆ ಅನುಮತಿ ನೀಡಬಾರದು. ಈ ವಿಷಯದಲ್ಲಿ ಹೈಕೋರ್ಟ್‌ನ ಆದೇಶವನ್ನು ಚಾಚೂತಪ್ಪದೆ ಪಾಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ನವೆಂಬರ್‌ 10ರ ಒಳಗಾಗಿ ಎಲ್ಲಾ ನಿರ್ದೇಶನಗಳನ್ನೂ ಅನುಷ್ಠಾನಕ್ಕೆ ತಂದು ಲೋಕಾಯುಕ್ತ ರಿಜಿಸ್ಟ್ರಾರ್‌ ಅವರಿಗೆ ವರದಿ ಸಲ್ಲಿಸಬೇಕು ಎಂದು ಪಾಲಿಕೆ ಆಯುಕ್ತರು ಮತ್ತು ಪೊಲೀಸ್‌ ಕಮಿಷನರ್‌ಗೆ ಗಡುವು ವಿಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT