ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪಾರ್ಟಿಫಂಡ್ ಬೇಡ, ಬಿ-ಫಾರ್ಮ್ ಕೊಡ್ರಿ'

ಸಂಸದ ಅನಿಲ್ ಲಾಡ್ ತೋಟದ ಮನೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡು
Last Updated 4 ಡಿಸೆಂಬರ್ 2012, 5:43 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ : `ಪಾರ್ಟಿ ಫಂಡ್ ಬೇಡ, ನನಗೆ ಬಿ-ಫಾರ್ಮ ಒಂದೇ ನೀಡಿ ಸಾಕು. ಗೆಲವು ಸಾಧಿಸಿ ಪಕ್ಷದ ಬಾವುಟವನ್ನು ಕ್ಷೇತ್ರದಲ್ಲಿ ಹಾರಿಸುತ್ತೇನೆ'

-ತಾಲ್ಲೂಕಿನ ಚಿಂತ್ರಪಳ್ಳಿ ಗ್ರಾಮ ಸಮೀಪದ ಸಂಸದ ಅನಿಲ್‌ಲಾಡ್ ಅವರ ತೋಟದ ಮನೆಯಲ್ಲಿ ಸೋಮವಾರ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಲು ಆಗಮಿಸಿದ ಜಿಲ್ಲಾ ಚುನಾವಣಾ ಉಸ್ತುವಾರಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರಿಗೆ ಕಾಂಗ್ರೆಸ್ ಮುಖಂಡ ರಾರಾಳುತಾಂಡಾ ಕಷ್ಣಾನಾಯ್ಕ ಆಗ್ರಹಿಸಿದ್ದು ಹೀಗೆ.

`ನಾನು ಒಂದು ಬಾರಿ ತಾಲ್ಲೂಕು ಪಂಚಾಯ್ತಿ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಎರಡು ಬಾರಿ ಜಿಲ್ಲಾ ಪಂಚಾಯ್ತಿ ಸದಸ್ಯೆಯನ್ನಾಗಿ ನನ್ನ ಮಡದಿಯ ಆಯ್ಕೆಗೆ ಶ್ರಮಿಸಿದ್ದೇನೆ. 30 ವರ್ಷಗಳ ರಾಜಕೀಯ ಅನುಭವ ನನಗಿದೆ. 15ವರ್ಷ ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದೇನೆ. ನಂತರದ 15ವರ್ಷಗಳಲ್ಲಿ ಕ್ಷೇತ್ರದ ಮತದಾರರು ನನಗೆ ಮತ ಚಲಾಯಿಸಿದ್ದಾರೆ. ನನ್ನ ಹಿಂದೆ ಮುಖಂಡರೂ ಇದ್ದಾರೆ. ಮತದಾರರು ಇದ್ದಾರೆ' ಎಂದು ಸುದೀರ್ಘವಾಗಿ ಅವರು ವಿವರಿಸಿದರು.

ಇತ್ತೀಚೆಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ, ಬೆಂಬಲಿಸಿದರೆ ಮೂರು ಕೋಟಿ ನೀಡುವುದಾಗಿ ಬಿಎಸ್‌ಆರ್ ಮುಖಂಡರು ಒಡ್ಡಿದ ಆಮಿಷಕ್ಕೆ ಬಲಿಯಾಗಿಲ್ಲ. ನನ್ನ ಕುಟುಂಬದ ಎಲ್ಲಾ ಸದಸ್ಯರು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳು' ಎಂದು ಹೇಳಿ ವೀಕ್ಷಕರಿಗೆ ತಮ್ಮ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಇದಕ್ಕೂ ಮುನ್ನ ತಮ್ಮ ಭಾರಿ ಬೆಂಬಲಿಗರೊಂದಿಗೆ ಆಗಮಿಸಿ ಕೆಪಿಸಿಸಿ ಸದಸ್ಯರಾದ ಪಿ.ಎಚ್.ದೊಡ್ಡರಾಮಣ್ಣ, ಎಂ.ಎಂ.ಹಳ್ಳಿ ಕೃಷ್ಣಾನಾಯ್ಕ ವೀಕ್ಷಕರಿಗೆ ಅರ್ಜಿ ಸಲ್ಲಿಸಿ ಟಿಕೆಟ್ ನೀಡುವಂತೆ ಒತ್ತಾಯಿಸಿದರು.

`ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಹೆಗ್ಡಾಳು ರಾಮಣ್ಣ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಕಳೆದ ಚುನಾವಣೆಯಲ್ಲಿ ಮೂರನೇ ಸ್ಥಾನ ಗಳಿಸಿದ್ದೀರಿ. ಅಲ್ಲದೇ ಅತಿ ಹೆಚ್ಚು ಮತಗಳ ಅಂತರದಲ್ಲಿ ಸೋತಿರುವಿರಿ. ನಿಮ್ಮ ಹಿಂದೆ ಗ್ರಾಮ ಪಂಚಾಯ್ತಿ  ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿಗಳ ಎಷ್ಟು ಸದಸ್ಯರು ಇದ್ದಾರೆ?' ಎಂದು ವೀಕ್ಷಕರು ಆಕ್ಷೇಪಾರ್ಹ ಧಾಟಿಯಲ್ಲಿ ಪ್ರಶ್ನಿಸಿದ್ದೂ ನಡೆಯಿತು.

ಈ ಸಂದರ್ಭದಲ್ಲಿ ವೀಕ್ಷಕರಾದ ಕೆಪಿಸಿಸಿ ವೀಕ್ಷಕರಾದ ಮಾಜಿ ಶಾಸಕರಾದ ಎಚ್.ಆಂಜನೇಯ ಮತ್ತು ಕೆ.ರಾಜಣ್ಣ ಹಾಗೂ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ.ರವೀಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT