ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಲಿಮೆಂಟ್‌ಗೆ ಲಗ್ಗೆ ಯತ್ನ

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಕೈರೊ (ಪಿಟಿಐ):  ‘ಮಾತುಕತೆ ಇಲ್ಲವೇ ಕ್ಷಿಪ್ರ ಕ್ರಾಂತಿ’ ಎಂದು ಉಪಾಧ್ಯಕ್ಷ ಒಮರ್ ಸುಲೇಮಾನ್ ಎಚ್ಚರಿಕೆ ನೀಡಿದರೂ ಸಹ, ಅಧ್ಯಕ್ಷರ ವಿರೋಧಿ ಪ್ರತಿಭಟನಾಕಾರರು ತಮ್ಮ ಚಳವಳಿಯನ್ನು ತೀವ್ರಗೊಳಿಸಿದ್ದಾರೆ.‘ಗೋ ಬ್ಯಾಕ್ ಮುಬಾರಕ್’ ಘೋಷಣೆಯೊಂದಿಗೆ ಚಳವಳಿ ನಿರತರು ದೇಶದ ಪಾರ್ಲಿಮೆಂಟ್‌ಗೆ ಲಗ್ಗೆ ಹಾಕಲು ಯತ್ನಿಸಿದರು.
ಅಧ್ಯಕ್ಷ ಹೋಸ್ನಿ ಮುಬಾರಕ್ ಪದಚ್ಯುತಿಗೆ ಆಗ್ರಹಿಸಿ ಜನವರಿ 25ರಿಂದ ಪ್ರತಿಭಟನೆ ನಡೆಸುತ್ತಿರುವ ಜನರು ಮಂಗಳವಾರ ಅತಿ ದೊಡ್ಡ ರ್ಯಾಲಿ ನಡೆಸಿದರು. ಹಂತ ಹಂತವಾಗಿ ಅಧಿಕಾರ ಹಸ್ತಾಂತರ ಮಾಡುವ ಭರವಸೆಯನ್ನು ಪ್ರತಿಭಟನಾನಿರತರು ಒಪ್ಪಿಕೊಂಡಿಲ್ಲ. ಬದಲಾಗಿ ತಹ್ರೀರ್ ಸ್ಕ್ವೇರ್‌ನಲ್ಲಿ ಧರಣಿ ಮುಂದುವರೆಸಿದ್ದಾರೆ.

ಬುಧವಾರ ನೂರಾರು ಜನರು ಪಾರ್ಲಿಮೆಂಟ್‌ನ ಪ್ರವೇಶದ್ವಾರವನ್ನು ಬಂದ್ ಮಾಡಿದರು. ಆದರೆ ಭಾರಿ ಸಂಖ್ಯೆಯಲ್ಲಿದ್ದ ಸೈನಿಕರು ಅವರನ್ನು ತಡೆದರು. ಜನಪ್ರತಿನಿಧಿಗಳಿಗೆ ಪಾರ್ಲಿಮೆಂಟ್ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಹೋರಾಟಗಾರರು ಎಚ್ಚರಿಸಿದರು. ‘ನಾವು ಇಲ್ಲೇ ಸಾಯಲು ಸಿದ್ಧ. ನಮ್ಮ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರೆಸುತ್ತೇವೆ’ ಎಂದು ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆ ಮುಂದುವರೆಸಲು ಅವಕಾಶವಿಲ್ಲ’: ಜನರ ಪ್ರತಿಭಟನೆ 16ನೇ ದಿನಕ್ಕೆ ಕಾಲಿಡುತ್ತಿದ್ದಂತೆಯೇ, ‘ತಹ್ರೀರ್ ಸ್ಕ್ವೇರ್‌ನಲ್ಲಿ ಇನ್ನೂ ಹೆಚ್ಚು ದಿನ ಇಂತಹ ಪ್ರತಿಭಟನೆ ಮುಂದುವರೆಸಲು ಅವಕಾಶ ನೀಡುವುದಿಲ್ಲ’ ಎಂದು ಉಪಾಧ್ಯಕ್ಷ ಒಮರ್ ಸುಲೇಮಾನ್ ಎಚ್ಚರಿಸಿದ್ದಾರೆ. ಅಧ್ಯಕ್ಷರ ಆಳ್ವಿಕೆ ಪೂರ್ಣಗೊಳ್ಳುವುದಿಲ್ಲ. ಅಲ್ಲದೆ ತಕ್ಷಣ ಅಧ್ಯಕ್ಷರು ಪದವಿ ತ್ಯಾಗ ಮಾಡುವುದೂ ಇಲ್ಲ ಎಂದು ಸುಲೇಮಾನ್ ಅವರು ವಿವಿಧ ರಾಜ್ಯಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ ಬಳಿಕ ಹೇಳಿರುವುದಾಗಿ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ‘ಮೀನಾ’ ತಿಳಿಸಿದೆ.ಅಧ್ಯಕ್ಷರ ಆಳ್ವಿಕೆಗೆ ಪರ್ಯಾಯ ಕಂಡು ಹಿಡಿಯಲು ಹೋದರೆ ‘ಕ್ಷಿಪ್ರ ಕ್ರಾಂತಿ’ ನಡೆಯುವ ಸಾಧ್ಯತೆ ಇದೆ. ನಂತರ ದೇಶದಲ್ಲಿ ಅರಾಜಕತೆ ಉಂಟಾಗಲಿದೆ. ಅಂತಹ ಸನ್ನಿವೇಶಕ್ಕೆ ಅವಕಾಶ ನೀಡಲಾಗದು ಎಂದೂ ಸುಲೇಮಾನ್ ಎಚ್ಚರಿಸಿದರು.

ವಿಶ್ವಸಂಸ್ಥೆ ನಿಯೋಗಕ್ಕೆ ಸಲಹೆ
: ರಾಜಕೀಯ ಕ್ಷೋಬೆಗೆ ಒಳಗಾಗಿರುವ ಈಜಿಪ್ಟ್‌ನಲ್ಲಿನ ಪರಿಸ್ಥಿತಿಯನ್ನು ಅರಿಯುವ ಸಲುವಾಗಿ ಮಧ್ಯಪ್ರಾಚ್ಯಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಯೋಗವನ್ನು ಕಳುಹಿಸುವಂತೆ ರಷ್ಯಾ ಸಲಹೆ ಮಾಡಿದೆ.

ವಿದೇಶಿ ಮಾಧ್ಯಮದವರಿಗೆ ನಿರ್ಬಂಧ
: ಈ ನಡುವೆ ಈಜಿಪ್ಟ್‌ನ ಸೇನೆ ತಹ್ರೀರ್ ಸ್ಕ್ವೇರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ವರದಿ ಮಾಡಲು ವಿದೇಶಿ ಮಾಧ್ಯಮದವರಿಗೆ ನಿರ್ಬಂಧ ಹೇರಿದೆ.ಸ್ಥಳೀಯ ಪೊಲೀಸರೂ ಸಹ ಅಲ್ಲಿ (ತಹ್ರೀರ್ ಸ್ಕ್ವೇರ್) ನಡೆಯುತ್ತಿರುವ ಪ್ರತಿಭಟನೆ ಬಿತ್ತರ ಮಾಡಲು ವಿದೇಶಿ ಮತ್ತು ಸ್ಥಳೀಯ ಮಾಧ್ಯಮದವರಿಗೆ ತಡೆಯುಂಟು ಮಾಡಿದ್ದಾರೆ.ಬದಲಾವಣೆಗೆ ಅಮೆರಿಕ ಒತ್ತಾಯ: ಅಧ್ಯಕ್ಷ ಹೋಸ್ನಿ ಮುಬಾರಕ್ ಅವರು ತಕ್ಷಣ ಬದಲಾವಣೆ ತರಲು ಮುಂದಾಗುವಂತೆ ಅಮೆರಿಕ ಒತ್ತಾಯ ಮಾಡಿದೆ. ಈ ನಿಟ್ಟಿನಲ್ಲಿ ವಿರೋಧಿ ಗುಂಪುಗಳ ಜತೆಗೆ ಮಾತುಕತೆ ನಡೆಸುವಂತೆಯೂ ಸಲಹೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT