ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್‌ಸೆಕ್ನಿಂದ ಪ್ಲಾಂಕ್ ಉದ್ದದವರೆಗೆ...

Last Updated 18 ಜೂನ್ 2011, 19:30 IST
ಅಕ್ಷರ ಗಾತ್ರ

ಉದ್ದ ಅಥವಾ ದೂರದ ಅಳತೆ ನಿತ್ಯ ಜೀವನದ ಅವಿಭಾಜ್ಯ ಅಂಗ-ಹೌದಲ್ಲ? ಅದರ ಅಂತರರಾಷ್ಟ್ರೀಯ ಮೂಲಮಾನ `ಮೀಟರ್~ ಹಾಗೂ ಅದಕ್ಕಿಂತ ಚಿಕ್ಕ ಸೆಂಟಿಮೀಟರ್ ಮತ್ತು ಮಿಲಿಮೀಟರ್ ಅಂತೆಯೇ ಮೀಟರ್‌ಗಿಂತ ದೊಡ್ಡ ಅಳತೆಯಾದ ಕಿಲೋಮೀಟರ್ ಎಲ್ಲರಿಗೂ ಪರಿಚಿತ. ಈ ಅಳತೆ ಮಾನಗಳು ಸರ್ವಗ್ರಾಹ್ಯ; ಸರ್ವದಾ ಬಳಕೆಯಲ್ಲಿವೆ ಕೂಡ.

ಆದರೆ, ವಾಸ್ತವ ಏನೆಂದರೆ, ಉದ್ದದ-ದೂರದ ಅಳತೆಯ ಪ್ರಸ್ತುತ ಅಗತ್ಯಗಳಿಗೆ ಇವಿಷ್ಟೇ ಮಾನಗಳು ಸಾಕಾಗುವುದಿಲ್ಲ. ಉತ್ತಮೋತ್ತಮ ವಿಧವಿಧ ದೂರದರ್ಶಕಗಳು ತೆರೆದಿಟ್ಟಿರುವ `ಮ್ಯಾಕ್ರೋ ವಿಶ್ವ~ ಮತ್ತು ಶ್ರೇಷ್ಠಾತಿಶ್ರೇಷ್ಠ ಸೂಕ್ಷ್ಮದರ್ಶಕಗಳು ಹಾಗೂ `ಕಣವೇಗೋತ್ಕರ್ಷಕ~ಗಳು ಪ್ರದರ್ಶಿಸುತ್ತಿರುವ `ಮೈಕ್ರೋವಿಶ್ವ~ಗಳಲ್ಲಿನ ಅಳತೆಗಳಿಗೆ ಕಿಲೋಮೀಟರ್‌ನಿಂದ ಮಿಲಿಮೀಟರ್‌ವರೆಗಿನ ಮಾನಗಳನ್ನಷ್ಟೆ ಬಳಸುವುದು ಸಾಧ್ಯವೇ ಇಲ್ಲ.

ಹಾಗಾಗಿ ಕಿಲೋಮೀಟರ್‌ಗಿಂತ ದೊಡ್ಡ ಮತ್ತು ಮಿಲಿಮೀಟರ್‌ಗಿಂತ ಚಿಕ್ಕ ಹಲವಾರು ಅಳತೆಯ ಮಾನಗಳನ್ನು ರೂಪಿಸಿದ್ದಾಗಿದೆ, ಬಳಸಲಾಗುತ್ತಿದೆ ಕೂಡ. `ಪಾರ್‌ಸೆಕ್~ನಿಂದ `ಪ್ಲಾಂಕ್ ಉದ್ದ~ದವರೆಗಿನ ಅಂಥ ಅದ್ಭುತ ಕಲ್ಪನಾತೀತ ಉದ್ದಳತೆ ಮಾನಗಳ, ಅವುಗಳ ಅನ್ವಯಗಳ ಸಂಕ್ಷಿಪ್ತ ಪರಿಚಯ:

1. ಪ್ಲಾಂಕ್ ಉದ್ದ: ಕಲ್ಪನೆಗೆಟುಕದ ಪರಮ ಸೂಕ್ಷ್ಮ ಅಳತೆ. ವಿಜ್ಞಾನಿಗಳ ಪ್ರಕಾರ ವಿಶ್ವದಲ್ಲಿ ಇದಕ್ಕಿಂತ ಕಡಿಮೆ ಉದ್ದದ ದೂರದ, ಸಾಧ್ಯತೆ ಇಲ್ಲವೇ ಇಲ್ಲ. `ಒಂದು ಪ್ಲಾಂಕ್ ಉದ್ದ~ದ ಅಳತೆ ಒಂದು ಮೀಟರ್‌ನ ಕೋಟಿ ಕೋಟಿ ಕೋಟಿ ಕೋಟಿ ಕೋಟಿಯ ಒಂದು ಭಾಗಕ್ಕೆ ಸಮ (ಸಂಖ್ಯಾ ರೂಪದಲ್ಲಿ ಇದು 10 ಘಾತ-35 ಮೀಟರ್‌ಗೆ ಸಮ).

2. ಯೋಕ್ಟೋಮೀಟರ್: ಮೀಟರ್ ಸಹಿತ ಹೆಸರಿನ ಅತ್ಯಂತ ಚಿಕ್ಕ ಅಳತೆಯ ಮಾನ. ಒಂದು ಮೀಟರ್‌ನ ಒಂದು ಸಾವಿರ ಕೋಟಿ ಕೋಟಿ ಕೋಟಿಯ ಒಂದು ಭಾಗ. (ಸಂಖ್ಯಾ ರೂಪದಲ್ಲಿ 10 ಘಾತ-24 ಮೀ. ಎಂದರೆ 10-24 ಮೀ.).

3. ಫೆಮಟೋಮೀಟರ್: ಬಳಕೆಗೆ ಬಂದಿರುವ ಅತ್ಯಂತ ಹ್ರಸ್ವ ಉದ್ದಳತೆ. ಒಂದು ಮೀಟರ್‌ನ ಹತ್ತು ಕೋಟಿ ಕೋಟಿಯ ಒಂದಂಶವೇ ಒಂದು ಫೆಮಟೋಮೀಟರ್. (10 ಘಾತ-15 ಮೀ.). ಪರಮಾಣು ಬೀಜಗಳ ವ್ಯಾಸ 1 ರಿಂದ 10 ಫೆಮಟೋ ಮೀಟರ್. ಕ್ವಾರ್ಕ್ ಮತ್ತು ಎಲೆಕ್ಟ್ರಾನ್‌ಗಳ ವ್ಯಾಸ ಒಂದು ಫೆಮಟೋಮೀಟರ್‌ನ ಸಾವಿರದ ಒಂದಂಶ! (ಚಿತ್ರ-12).

4. ಪಿಕೋಮೀಟರ್: ಒಂದು ಮೀಟರ್‌ನ ಒಂದು ಲಕ್ಷ ಕೋಟಿಯ ಒಂದಂಶ (10 ಘಾತ-12 ಮೀ.). ಪರಮಾಣುಗಳ ಇಡೀ ವ್ಯಾಸ ಸುಮಾರು ಒಂದು ನೂರು ಪಿಕೋಮೀಟರ್ (ಚಿತ್ರ-11).

5. ನ್ಯಾನೋಮೀಟರ್: ಒಂದು ಮೀಟರ್‌ನ ಶತಕೋಟಿಯ ಒಂದಂಶ (10 ಘಾತ-9 ಮೀ.). ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳಿಗೆಟುಕುವ ಅಳತೆ. ದೃಗ್ಗೋಚರ ಬೆಳಕಿನ ಅಲೆಗಳ (ಚಿತ್ರ-10) ತರಂಗದೂರ 400ರಿಂದ 750 ನ್ಯಾನೋಮೀಟರ್. ನೂರೇ ನ್ಯಾನೋಮೀಟರ್ ಉದ್ದ `ವೈರಸ್~ಗಳದು.

6. ಮೈಕ್ರೋಮೀಟರ್: ಒಂದು ಮೀಟರ್‌ನ ದಶಲಕ್ಷದ ಒಂದು ಭಾಗ (10 ಘಾತ-6 ಮೀ.). ಇದಕ್ಕೇ `ಮೈಕ್ರಾನ್~ ಎಂಬ ಹೆಸರು ಕೂಡ. ಚಾಕ್ಷುಷ ಸೂಕ್ಷ್ಮದರ್ಶಕಗಳು ಕಾಣಬಲ್ಲ ಅಳತೆ. ಬ್ಯಾಕ್ಟೀರಿಯಾಗಳ, ಪರಾಗ ಕಣಗಳ (ಚಿತ್ರ-9) ಉದ್ದ ಅಗಲ ವ್ಯಾಸಗಳ ಅಳತೆಗೆ ಅತ್ಯಂತ ಸೂಕ್ತ ಮಾನ.

7. ಮಿಲಿಮೀಟರ್: ಮೀಟರ್‌ನ ಸಾವಿರದ ಒಂದು ಭಾಗ. ಬರಿಗಣ್ಣಿಗೇ ಸುಲಭವಾಗಿ ಗೋಚರಿಸುವ ಅಳತೆ. ನೇರವಾಗಿ ಕಾಣುವ ಸ್ಪಷ್ಟವಾಗಿ ಅರ್ಥವಾಗುವ ಅತಿ ಹ್ರಸ್ವ ಅಳತೆ.

8. ಸೆಂಟಿಮೀಟರ್: ಮೀಟರ್‌ನ ನೂರರ ಒಂದಂಶ. ಇರುವೆ ಗೆದ್ದಲುಗಳಿಂದ ಚಿಟ್ಟೆ ಮಿಡತೆಗಳವರೆಗಿನ ಕಿಟಗಳದು (ಚಿತ್ರ-8), ಬಹುಪಾಲು ಎಲ್ಲ ಪುಟ್ಟ ಸೃಷ್ಟಿಗಳದೂ ಸೆಂಟಿಮೀಟರ್ ಮತ್ತು ಮಿಲಿಮೀಟರ್‌ಗಳಷ್ಟೆ ಉದ್ದ, ಅಗಲ, ಎತ್ತರ.

9. ಮೀಟರ್: ಉದ್ದಳತೆಯ ಮೂಲಮಾನ. ಗರಿಷ್ಠ ಬಳಕೆಯ ಮಾನ ಕೂಡ. ಬೆಟ್ಟ-ಪರ್ವತಗಳ (ಚಿತ್ರ-6) ಕಟ್ಟಡಗಳ (ಚಿತ್ರ-7), ವಾಹನಗಳ.... ಹಾಗೆಲ್ಲ ಸಾಮಾನ್ಯ ಅಳತೆಯ ಸಕಲ ನೆಲೆಗಳ ಸೃಷ್ಟಿಗಳ ಉದ್ದ-ಅಗಲ-ಎತ್ತರ-ಆಳ- ಸುತ್ತಳತೆಗಳ ನಿರ್ಣಯದ ಅತ್ಯಂತ ಪರಿಚಿತ ಮಾನ.

10. ಕಿಲೋಮೀಟರ್: ಒಂದು ಸಾವಿರ ಮೀಟರ್‌ಗೆ ಸಮ. ಅಧಿಕ ಉದ್ದದ-ದೂರದ ಅತಿ ಬಳಕೆಯ ಮಾನ. ಭೂಮಿಯ ಮೇಲಿನ ದೂರಗಳಿಗೆ, ಭೂ-ಚಂದ್ರ ಅಂತರಕ್ಕೆ (ಚಿತ್ರ 5,4) ಗ್ರಹಗಳ, ನಕ್ಷತ್ರಗಳ ವ್ಯಾಸಗಳ ಅಳತೆಗೆ.... ಹಾಗೆಲ್ಲ ವಿಪರೀತ ಉಪಯುಕ್ತ. ಸುಲಭವಾಗಿ ಅರ್ಥವಾಗುವ ಅತ್ಯಂತ ದೀರ್ಘ ಮಾನ.

11. ಖಗೋಳ ಮಾನ: ಬಹು ದೂರದ ಅಳತೆಗಳ ಮಾನ. ಅಂತರಿಕ್ಷ ಕಾಯಗಳ-ಅದರಲ್ಲೂ ಸೌರವ್ಯೆಹದಲ್ಲಿ `ಸೂರ್ಯ-ಗ್ರಹ~, `ಗ್ರಹ-ಗ್ರಹ~ ನಡುವಣ (ಚಿತ್ರ-3) ದೂರಗಳ ನಿರೂಪಣೆಗೆ ವೈಜ್ಞಾನಿಕ ಬಳಕೆಗೆ ಸೀಮಿತವಾಗಿರುವ ವಿಶೇಷ ಮಾನ. ಒಂದು ಖಗೋಳಮಾನ ಹದಿನಾಲ್ಕು ಕೋಟಿ ತೊಂಬತ್ತಾರು ಲಕ್ಷ ಕಿಲೋಮೀಟರ್‌ಗೆ ಸಮ. ಸೂರ್ಯ-ಭೂಮಿ ನಡುವಣ ಸರಾಸರಿ ದೂರವೇ ಖಗೋಳ ಮಾನ.

12. ಜ್ಯೋತಿರ್ವರ್ಷ: ವಿಶ್ವದಲ್ಲಿನ ಗ್ಯಾಲಕ್ಸಿಗಳ (ಚಿತ್ರ-2), ನೀಹಾರಿಕೆಗಳ (ಚಿತ್ರ-1) ಉದ್ದಗಲಗಳ ನಕ್ಷತ್ರಗಳ ನಡುವಣ ದೂರಗಳ ಅಳತೆ-ನಿರೂಪಣೆಗಳಿಗೆ ರೂಪಿಸಲಾಗಿರುವ ವಿಶೇಷ ಮಾನ. ಪ್ರತಿ ಸೆಕೆಂಡ್‌ಗೆ 3 ಲಕ್ಷ ಕಿ.ಮೀ. ವೇಗದಲ್ಲಿ ಚಲಿಸುವ ಬೆಳಕು ನಿರಂತರ ಒಂದು ವರ್ಷದಲ್ಲಿ ಕ್ರಮಿಸುವ ಒಟ್ಟು ದೂರವೇ ಒಂದು ಜ್ಯೋತಿರ್ವರ್ಷ. ಇದು 9.5 ಲಕ್ಷ ಕೋಟಿ ಕಿ.ಮೀ.ಗೆ ಸಮ-ನಮಗೆ ಅತಿ ಸನಿಹದ ಸೌರೇತರ ನಕ್ಷತ್ರ 4.2 ಜ್ಯೋತಿರ್ವರ್ಷ ದೂರದಲ್ಲಿದೆ. ಈವರೆಗೆ ಪತ್ತೆಯಾಗಿರುವ ಅತ್ಯಂತ ದೂರದ ಗ್ಯಾಲಕ್ಸಿ 15 ಶತಕೋಟಿ ಜ್ಯೋತಿರ್ವರ್ಷ ದೂರದಲ್ಲಿದೆ.

13. ಪಾರ್‌ಸೆಕ್: ಮತ್ತೂ ಬೃಹತ್ ಅಳತೆಯ ಮಾನ. 3.26 ಜ್ಯೋತಿರ್ವರ್ಷ ದೂರಕ್ಕೆ ಒಂದು ಪಾರ್‌ಸೆಕ್ ಸಮ. ಪಾರ್‌ಸೆಕ್‌ನ ಬಳಕೆಯೂ ಸ್ಪಷ್ಟವಾಗಿಯೇ ಖಗೋಳ ವಿಜ್ಞಾನ ಕ್ಷೇತ್ರಕ್ಕಷ್ಟೇ ಸೀಮಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT