ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ: ರೂ.15 ಕೋಟಿ ಆಸ್ತಿ ತೆರಿಗೆ ಬಾಕಿ

Last Updated 17 ಫೆಬ್ರುವರಿ 2012, 8:20 IST
ಅಕ್ಷರ ಗಾತ್ರ

ಮೈಸೂರು: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವವರು ಕಡ್ಡಾಯವಾಗಿ ಪ್ರತಿವರ್ಷ ತೆರಿಗೆ ಪಾವತಿ ಮಾಡಬೇಕು. ಆದರೆ ಅನೇಕ ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡವರು ಇದ್ದಾರೆ. ರೂ.15 ಕೋಟಿ ಆಸ್ತಿ ತೆರಿಗೆ ಬಾಕಿ ಇದ್ದು, ಬರುವ ಮಾರ್ಚ್ ಅಂತ್ಯದೊಳಗೆ ಪಾಲಿಕೆಯು ಇದನ್ನು ಸಂಗ್ರಹಿಸಬೇಕಿದೆ.

ಪಾಲಿಕೆಗೆ ಸಂಗ್ರಹವಾಗುವ ಒಟ್ಟು ಆದಾಯ ಕ್ರೋಡೀಕರಣದಲ್ಲಿ ಶೇ 40 ರಷ್ಟು ಭಾಗ ಆಸ್ತಿ ತೆರಿಗೆಯದ್ದಾಗಿದೆ. ಉಳಿದಂತೆ ಇತರೆ ಮೂಲಗಳಿಂದ ಪಾಲಿಕೆಗೆ ಆದಾಯ ಬರುತ್ತದೆ. ನಗರದ 65 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಒಟ್ಟು 1.80 ಲಕ್ಷ ಆಸ್ತಿ ಇವೆ. 2011-12ನೇ ಸಾಲಿನಲ್ಲಿ ಪಾಲಿಕೆಯು ಹಳೆಯ ತೆರಿಗೆ ಬಾಕಿ ಸೇರಿದಂತೆ ಒಟ್ಟು ರೂ.70 ಕೋಟಿ ಯಷ್ಟು ಆಸ್ತಿ ತೆರಿಗೆಯನ್ನು ಸಂಗ್ರಹಿಸ ಬೇಕಿತ್ತು. ಈಗಾಗಲೇ ರೂ.55 ಕೋಟಿ ತೆರಿಗೆಯನ್ನು ಸಂಗ್ರಹಿ ಸಿದ್ದು, ಉಳಿದ ರೂ.15 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಬೇಕಿದೆ.

ರೆವಿನ್ಯು ಬಡಾವಣೆಗಳಿಂದ ಪಾಲಿಕೆಗೆ ಹೆಚ್ಚು ತೆರಿಗೆ ಬಾಕಿ ಬರಬೇಕಿದೆ. ಸುಮಾರು 6-7 ವರ್ಷಗಳಿಂದ ತೆರಿಯನ್ನು ಪಾವತಿಸದೆ ಇರುವವರು ಇದ್ದಾರೆ. ಅಂತಹ ಮನೆಗಳನ್ನು ಪಟ್ಟಿ ಮಾಡಿರುವ ಪಾಲಿಕೆ ಇದೀಗ ನೋಟಿಸ್ ಜಾರಿ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.

ಜುಲೈ ನಂತರ ಪಾವತಿಸುವ ಎಲ್ಲ ಆಸ್ತಿ ತೆರಿಗೆ ಮೇಲೆ ಪ್ರತಿ ತಿಂಗಳು ಶೇ 2 ರಷ್ಟು ದಂಡ ವಿಧಿಸ ಲಾಗುತ್ತದೆ. ಮೂಲ ತೆರಿಗೆ ಹಣ ಜೊತೆಗೆ ದಂಡದ ಹಣವನ್ನು ಬಾಕಿ ತೆರಿಗೆ ಪಾವತಿದಾರರಿಂದ ವಸೂಲಿ ಮಾಡಲಾಗುತ್ತದೆ. ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಮೊದಲು ನೋಟಿಸ್ ಜಾರಿ ಮಾಡಲಾಗುತ್ತದೆ. ತದನಂತರವೂ ತೆರಿಗೆ ಪಾವತಿಸದಿದ್ದಲ್ಲಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

ಅರಿವು ಜಾಥಾ: ತೆರಿಗೆ ಬಾಕಿ ಉಳಿಸಿಕೊಂಡಿರುವ ಮನೆಗಳನ್ನು ಗುರುತಿಸಿ ಬಡಾವಣೆಯಲ್ಲಿ ಜಾಥಾ ನಡೆಸಿ ಪಾಲಿಕೆ ಅಧಿಕಾರಿಗಳು ಅರಿವು ಮೂಡಿಸಲಿದ್ದಾರೆ. ಕಡ್ಡಾಯವಾಗಿ ತೆರಿಗೆ ಪಾವತಿ ಮಾಡಬೇಕು. ಇಲ್ಲವಾದಲ್ಲಿ ನೋಟಿಸ್ ಜಾರಿ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕೆ ಅವಕಾಶ ನೀಡದೆ ಸಕಾಲದಲ್ಲಿ ತೆರಿಗೆ ಪಾವತಿ ಮಾಡುವ ಮೂಲಕ ಸಹಕರಿಸಬೇಕು ಎಂದು ಜಾಥಾದಲ್ಲಿ ಅಧಿಕಾರಿಗಳು ತಿಳಿ ಹೇಳುತ್ತಾರೆ. ರೆವಿನ್ಯು ಬಡಾವಣೆಗಳಲ್ಲಿ ತೆರಿಗೆ ಬಾಕಿ ಹೆಚ್ಚು ಬರಬೇಕಾದ್ದರಿಂದ ವಾರಕ್ಕೊಮ್ಮೆ ರೆವಿನ್ಯು ಬಡಾವಣೆಗಳಲ್ಲಿ ಪಾಲಿಕೆ ವತಿಯಿಂದ ಅರಿವು ಜಾಥಾ ನಡೆಸಿ ಕರಪತ್ರಗಳನ್ನು ಹಂಚಲಾಗುತ್ತಿದೆ.

ಮೂಲ ಸೌಕರ್ಯ ಕೊರತೆ: ಪಾಲಿಕೆ ಪ್ರತಿ ವರ್ಷ ಆಸ್ತಿ ತೆರಿಗೆಯನ್ನು ವಸೂಲಿ ಮಾಡುತ್ತದೆ. ಒಂದು ವೇಳೆ ತೆರಿಗೆ ಪಾವತಿ ಮಾಡದಿದ್ದಲ್ಲಿ ನೋಟಿಸ್ ಜಾರಿ ಮಾಡುತ್ತದೆ. ಆದರೆ ಸಂಗ್ರಹವಾದ ಒಟ್ಟು ತೆರಿಗೆ ಹಣವನ್ನು ಪಾಲಿಕೆ ಮೂಲ ಸೌಕರ್ಯ ಒದಗಿಸಲು ಸಂಪೂರ್ಣ ಬಳಕೆ ಮಾಡುತ್ತಿಲ್ಲ. ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಚರಂಡಿ ಸಮಸ್ಯೆಗಳು ಇವೆ. ಆಸ್ತಿ ತೆರಿಗೆಯಿಂದ ಸಂಗ್ರಹವಾದ ಹಣದಿಂದ ಮೂಲ ಸೌಕರ್ಯ ಒದಗಿಸಬೇಕು. ಶೇ 80 ರಷ್ಟು ನಾಗರಿಕರು ಪ್ರಾಮಾಣಿಕವಾಗಿ ತೆರಿಗೆಯನ್ನು ಪಾವತಿ ಮಾಡುತ್ತಾರೆ. ಜನರಿಂದ ಸಂಗ್ರಹಿಸಲಾದ ತೆರಿಗೆ ಹಣವನ್ನು ಬಳಸಿ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಪಾಲಿಕೆ ವಿಫಲವಾಗಿದೆ ಎಂಬುದು ನಾಗರಿಕರ ಆರೋಪ.

`ಹಣಕಾಸು ವರ್ಷ ಆರಂಭವಾಗುತ್ತಿದ್ದಂತೆ ತೆರಿಗೆ ಸಂಗ್ರಹ ಮಾಡಲಾಗುತ್ತದೆ. ರೆವಿನ್ಯು ಬಡಾವಣೆಗ ಳಲ್ಲೇ ಹೆಚ್ಚು ತೆರಿಗೆ ಬಾಕಿ ಬರಬೇಕಿದೆ. ತೆರಿಗೆ ಸಂಗ್ರಹ ಗುರಿಯಲ್ಲಿ ಶೇ 90 ರಷ್ಟನ್ನು ಪ್ರತಿ ವರ್ಷ ಸಂಗ್ರಹಿಸ ಲಾಗುತ್ತದೆ. ಕಳೆದ ಸಾಲಿನಲ್ಲಿ ರೂ.10 ಕೋಟಿ ತೆರಿಗೆ ಬಾಕಿ ಇತ್ತು. ಈ ವರ್ಷದಲ್ಲಿ ಅದನ್ನು ಸಂಗ್ರಹಿಸಲಾ ಗುತ್ತದೆ.

ಕಡ್ಡಾಯವಾಗಿ ತೆರಿಗೆ ಪಾವತಿ ಮಾಡುವ ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವ ಸಲು ವಾಗಿ ಜಾಥಾ, ಕರಪತ್ರಗಳನ್ನು ಹಂಚಲಾಗುತ್ತಿದೆ. ಈ ವರ್ಷ ತೆರಿಗೆ ಬಾಕಿ ಉಳಿಯದಂತೆ ನೋಡಿಕೊಳ್ಳಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ~ ಎಂದು ಪಾಲಿಕೆ ಕಂದಾಯ ಅಧಿಕಾರಿ ಎಸ್.ಎನ್.ಬಾಲಚಂದ್ರ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT