ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಸದಸ್ಯ ದಿವಾಕರ್ ಬಂಧನ

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಬಂಧನವನ್ನು ಖಂಡಿಸಿ ಸೆ. 6ರಂದು ಆಚರಿಸಲಾದ ಬಳ್ಳಾರಿ ಬಂದ್ ಸಂದರ್ಭದಲ್ಲಿ ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿದ್ದ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯ ದಿವಾಕರ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ.

ಘಟನೆ ನಡೆದ ನಂತರ ಪರಾರಿಯಾಗಿದ್ದ 18ನೇ ವಾರ್ಡ್‌ನ ಸದಸ್ಯ ದಿವಾಕರ್‌ಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಶುಕ್ರವಾರ ಸಾವಿಗೀಡಾಗಿದ್ದ ಸಂಬಂಧಿಯೊಬ್ಬರ ಗಾಂಧಿನಗರದ ಮನೆಗೆ ಆಗಮಿಸಿದ್ದ ಸಂದರ್ಭ ದಾಳಿ ನಡೆಸಿದ ಪೊಲೀಸರು ಬಂಧಿಸಲು ಮುಂದಾಗುತ್ತಿದ್ದಂತೆಯೇ ಓಡಿ ಹೋಗಲು ಯತ್ನಿಸುತ್ತಿದ್ದ ದಿವಾಕರ್ ಕೆಳಗೆ ಬಿದ್ದು ಕಾಲಿನ ಮೂಳೆ ಮುರಿಯಿತು.

ತಕ್ಷಣ ಅವರನ್ನು ಬಂಧಿಸಿ, ವಿಮ್ಸಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಿದ ಪೊಲೀಸರು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಇದೇ 22ರವರೆಗೆ ದಿವಾಕರ್‌ರನ್ನು ನ್ಯಾಯಾಂಗ ವಶಕ್ಕೆ ಸಲ್ಲಿಸಿದರು.

ಬಳ್ಳಾರಿ ಬಂದ್ ವೇಳೆ ದಿವಾಕರ್ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣವನ್ನು ಪ್ರವೇಶಿಸಿದ್ದ ಕೆಲವು ಪ್ರತಿಭಟನಾಕಾರರು ನಗರಾಭಿವೃದ್ಧಿ ಕೋಶದ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿಯ ಕಂಪ್ಯೂಟರ್, ಕಿಟಕಿ ಗಾಜು ಮತ್ತು ಪೀಠೋಪಕರಣ ಧ್ವಂಸಗೊಳಿಸಿದ್ದರು. ಇನ್ನೂ ಕೆಲವರು ನಗರದಲ್ಲಿರುವ ಅರಣ್ಯ ಇಲಾಖೆ ಕಚೇರಿ, ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿ ಮೇಲೂ ಕಲ್ಲು ತೂರಿದ್ದರು. ಪ್ರತಿಭಟನಾಕಾರರನ್ನು ಚದುರಿಸಲು ಸ್ವತಃ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಪೊಲೀಸರ ಬಳಿಯಿದ್ದ ಲಾಠಿಯನ್ನು ತೆಗೆದುಕೊಂಡು ಅನೇಕರನ್ನು ಓಡಿಸಿದ್ದರು.

ಅದೇ ದಿನ ಸಂಜೆ ಪ್ರಕರಣದ 11 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಪಾಲಿಕೆ ಸದಸ್ಯ ದಿವಾಕರ್, ಶಾಸಕ ಸೋಮಶೇಖರರೆಡ್ಡಿ ಅವರ ಆಪ್ತ ಸಹಾಯಕ ಸನೀಲ್ ರೆಡ್ಡಿ ಹಾಗೂ ಮಧುಸೂಧನ ಎಂಬುವವರು ಪರಾರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT