ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಸದಸ್ಯ ನಟರಾಜ್ ಹತ್ಯೆ ಪ್ರಕರಣ: ಒಂಬತ್ತು ಮಂದಿ ಬಂಧನ

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ಗಾಂಧಿನಗರ ವಾರ್ಡ್ ಸದಸ್ಯ ಎಸ್. ನಟರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮುರುಗನ್‌ಆರ್ಟ್ಸ್‌ನ ಮಾಲೀಕ ಆರ್. ಮುರುಗನ್ ಸೇರಿದಂತೆ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

2010ರಲ್ಲಿ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ನಟರಾಜ್ ಅವರ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುರುಗನ್ ಸೋತಿದ್ದರು. ನಟರಾಜ್ ಮುರುಗನ್ ಮತ್ತು ಅವರ ಬೆಂಬಲಿಗರಿಗೆ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು ಸುಪಾರಿ ನೀಡಿ ಕೊಲೆ ಮಾಡಿಸಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೆ.ಸಿ.ನಗರ ಕುರುಬರಹಳ್ಳಿಯ ಮೋಹನ್ (24), ವಿಜಯ್‌ಕುಮಾರ್ (23), ಬಗಲಗುಂಟೆಯ ಮಂಜುನಾಥನಗರದ ವಿ.ಶ್ರೀನಿವಾಸ (29), ಕೆಎಸ್‌ಆರ್‌ಟಿಸಿ ಲೇಔಟ್‌ನ ಮಹದೇಶ್ವರನಗರದ ಡಿ.ಆರ್. ಗಿರೀಶ್ (28), ಶೇಷಾದ್ರಿಪುರದ ವಿ.ಮಣಿ (30), ಶೇಷಾದ್ರಿಪುರದ ಆರ್.ಮುರುಗನ್ (45), ಗಾಂಧಿನಗರದ ಪಾಲ್ ಉರುಫ್ ರಾಜೇಂದ್ರ (27), ಶ್ರೀರಾಮಪುರದ ಡಿ.ಆರ್.ಮಹೇಶ್ (24) ಮತ್ತು ಬಂಗಾರಪ್ಪ ನಗರದ ಅಶೋಕ (29) ಬಂಧಿತರು. ಪ್ರಕರಣದ ಹತ್ತು ಮತ್ತು ಹನ್ನೊಂದನೇ ಆರೋಪಿಗಳಾದ ನವೀನ್ ಮತ್ತು ನಾಗೇಶ್ ತಲೆಮರೆಸಿಕೊಂಡಿದ್ದಾರೆ.

ಚುನಾವಣೆಯಲ್ಲಿ ಗೆದ್ದ  ನಂತರ ನಟರಾಜ್ ಮುರುಗನ್ ವಿರುದ್ಧ ದ್ವೇಷ ಸಾಧಿಸಿ ತೊಂದರೆ ನೀಡುತ್ತಿದ್ದರು. ಮುರುಗನ್ ಬೆಂಬಲಿಗರಿಗೂ ಅವರು ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಮುರುಗನ್ 25 ಲಕ್ಷ ರೂಪಾಯಿಗೆ ಸುಪಾರಿ ನೀಡಿ ಕೊಲೆ ಮಾಡಿಸಿದ್ದರು ಎಂಬ ಅಂಶ ತನಿಖೆ ವೇಳೆ ಗೊತ್ತಾಗಿದೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಮಣಿ, ಪಾಲಿಕೆ ಚುನಾವಣೆ ವೇಳೆ ಮುರುಗನ್ ಪರ ಕೆಲಸ ಮಾಡಿದ್ದರು. ಆದ್ದರಿಂದ ಅವರಿಗೆ ನಟರಾಜ್ ಕಿರುಕುಳ ನೀಡಲಾರಂಭಿಸಿದ್ದರು. ಇದೇ ರೀತಿ ಹಲವು ಹುಡುಗರಿಗೆ ಅವರು ಕಿರುಕುಳ ನೀಡುತ್ತಿದ್ದರು. ತೊಂದರೆ ನೀಡದಂತೆ ಮುರುಗನ್ ಮನವಿ ಮಾಡಿದ್ದರೂ ಪ್ರಯೋಜನ ಆಗಿರಲಿಲ್ಲ. ಅಲ್ಲದೇ ಮುರುಗನ್ ಅವರನ್ನು ಕೊಲೆ ಮಾಡಿಸಲು ನಟರಾಜ್ ಸಂಚು ರೂಪಿಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದರಿಂದ ಆತಂಕಗೊಂಡ ಅವರನ್ನು ಕೊಲೆ ಮಾಡಿಸಿದ್ದಾಗಿ ಮುರುಗನ್ ವಿಚಾರಣೆಯಲ್ಲಿ ತಿಳಿಸಿದ್ದಾರೆ~ ಎಂದರು.

`ನಟರಾಜ್ ಅವರ ಜತೆ ಹತ್ತು ವರ್ಷಗಳ ಕಾಲ ಇದ್ದು ಚುನಾವಣೆಯಲ್ಲಿ ಅವರ ಪರ ಕೆಲಸ ಮಾಡಿದ್ದ ಪಾಲ್ ಉರುಫ್ ರಾಜೇಂದ್ರ ಈ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ. ನಟರಾಜ್ ಕಡೆಗಣಿಸಿದರು ಮತ್ತು ಯಾವುದೇ ಸಹಾಯ ಮಾಡಲಿಲ್ಲ ಎಂದು ಸಿಟ್ಟಾಗಿದ್ದ ರಾಜೇಂದ್ರ ಆರೋಪಿಗಳ ಜತೆ ಸೇರಿಕೊಂಡಿದ್ದರು. ಎಲ್ಲರೂ ಸೇರಿ ಎಂಟತ್ತು ತಿಂಗಳಿನಿಂದ ಸಂಚು ನಡೆಸಿ ಕೊಲೆಗೆ ಸುಪಾರಿ ನೀಡಿದ್ದರು~ ಎಂದು ಮಿರ್ಜಿ ಹೇಳಿದರು.

`ನಟರಾಜ್ ಅವರನ್ನು ಕೊಲೆ ಮಾಡಲು ನವೀನ್, ನಾಗೇಶ್, ಮೋಹನ್, ಶ್ರೀನಿವಾಸ್ ಅವರಿಗೆ 25 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು. ಮುಂಗಡ ಹಣವಾಗಿ ಐದು ಲಕ್ಷ ಕೊಡಲಾಗಿತ್ತು. ಹಲವು ದಿನಗಳಿಂದ ನಟರಾಜ್ ಅವರ ಚಲನವಲನಗಳನ್ನು ಗಮನಿಸಿದ ಆರೋಪಿಗಳು ಗಾಂಧಿನಗರದಲ್ಲಿ ಮತ್ತು ಶೇಷಾದ್ರಿಪುರದಲ್ಲಿ ಕೊಲೆಗೆ ಯತ್ನಿಸಿದ್ದರು. ಶೇಷಾದ್ರಿಪುರದಲ್ಲಿ ಇನ್ನೇನು ಹಲ್ಲೆ ನಡೆಸಬೇಕು ಎನ್ನುವಷ್ಟರಲ್ಲಿ ಹೊಯ್ಸಳ ವಾಹನ ಬಂದಿದ್ದರಿಂದ ಅಲ್ಲಿಂದ ಪರಾರಿಯಾಗಿದ್ದರು~ ಎಂದು ಅವರು ಮಾಹಿತಿ ನೀಡಿದರು.

`ನವೀನ್, ನಾಗೇಶ್, ಮೋಹನ್, ಶ್ರೀನಿವಾಸ್ ಅವರು ಕೊಲೆ ನಡೆದ ದಿನ ಕಾರಿನಲ್ಲಿ ಹಿಂಬಾಲಿಸಿದ್ದರು. ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ ಮಹೇಶ್ ಇತರೆ ಆರೋಪಿಗಳಿಗೆ ಸಲಹೆ ಸೂಚನೆ ನೀಡುತ್ತಿದ್ದ. ಮಲ್ಲೇಶ್ವರ ವೃತ್ತದ ಬಳಿ ನಟರಾಜ್ ಬಂದೊಡನೆ ಅವರ ಮೇಲೆ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಆ ನಂತರ ವಿಜಯಕುಮಾರ್ ಮತ್ತು ಮಹೇಶ್ ದ್ವಿಚಕ್ರ ವಾಹನದಲ್ಲಿ ಪರಾರಿಯಾದರೆ ಉಳಿದವರು ಕಾರಿನಲ್ಲಿ ಪರಾರಿಯಾಗಿದ್ದರು~ ಎಂದರು.

ಆರೋಪಿಗಳು ಅಪರಾಧ ಜಗತ್ತಿಗೆ ಹೊಸಬರು. ಹೊಸಬರಿಂದ ಕೊಲೆ ಮಾಡಿಸಿದರೆ ಸಿಕ್ಕಿ ಬೀಳುವುದಿಲ್ಲ ಎಂಬ ಕಾರಣಕ್ಕೆ ಹೊಸಬರಿಂದ ಕೊಲೆ ಮಾಡಿಸಿದ್ದಾರೆ. ಎರಡು ಮೂರು ಬಾರಿ ಅವರು ಕೊಲೆಗೆ ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
 
ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಪ್ರಣವ್ ಮೊಹಾಂತಿ, ಉತ್ತರ ವಿಭಾಗದ ಡಿಸಿಪಿ ಎಚ್.ಎಸ್.ರೇವಣ್ಣ, ಶೇಷಾದ್ರಿಪುರ ಉಪ ವಿಭಾಗದ ಎಸಿಪಿ ಎಚ್.ಎಂ.ಓಂಕಾರಯ್ಯ, ಮಲ್ಲೇಶ್ವರ ಉಪ ವಿಭಾಗದ ಎಸಿಪಿ ಎಸ್.ಎನ್.ಗಂಗಾಧರ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ನಾಗರಾಜ್, ಮಾಲತೇಶ್, ರವಿಕುಮಾರ್, ನಾಗಲಿಂಗಯ್ಯ, ಪ್ರಕಾಶ್, ಅಬ್ದುಲ್ ಖಾದರ್, ವೇಣುಗೋಪಾಲ್ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT