ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಸದಸ್ಯರ ವಿರುದ್ಧ ಮೊಕದ್ದಮೆ ದಾಖಲು

ಅನಿಲ ಸಂಪರ್ಕ ವಿತರಣೆಯಲ್ಲಿ ಅಕ್ರಮ ಆರೋಪ
Last Updated 15 ಡಿಸೆಂಬರ್ 2012, 6:20 IST
ಅಕ್ಷರ ಗಾತ್ರ

ದಾವಣಗೆರೆ: ಪಾಲಿಕೆ ವತಿಯಿಂದ ಪರಿಶಿಷ್ಟರಿಗೆ ಅಡುಗೆ ಅನಿಲ ಸಂಪರ್ಕ ವಿತರಣೆಯಲ್ಲಿ ಪಾಲಿಕೆ ಸದಸ್ಯರು ಲಾಭ ಪಡೆಯುವ ಉದ್ದೇಶದಿಂದ ಅಕ್ರಮ ಎಸಗಿದ್ದು, ಅವರ ಸದಸ್ಯತ್ವ ರದ್ದು ಮಾಡಲು ಕೋರಿ ನಗರದ ಸಿವಿಲ್ ನ್ಯಾಯಾಲಯದ ಕಿರಿಯ ವಿಭಾಗದಲ್ಲಿ ಮೊಕದ್ದಮೆ ಹೂಡಲಾಗಿದೆ.

ಸಾಮಾಜಿಕ ಕಾರ್ಯಕರ್ತ ವಾಲ್ಮೀಕಿ ಕೃಷ್ಣ ಅವರು ಪಾಲಿಕೆ ಸದಸ್ಯರಾದ ಎಚ್.ಎಂ. ರುದ್ರಮುನಿಸ್ವಾಮಿ ಮತ್ತು ಬಿ. ಲೋಕೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.

ಪ್ರಕರಣದ ವಿವರ: ಪಾಲಿಕೆಗೆ ಬಂದ ಶೇ 22.75ರ ಅನುದಾನದಲ್ಲಿ ಪರಿಶಿಷ್ಟರಿಗೆ ಅಡುಗೆ ಅನಿಲ ಸಂಪರ್ಕ ನೀಡಲು ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ  ಸಂಪರ್ಕ ನೀಡಲು ರುದ್ರಮುನಿಸ್ವಾಮಿ ಅವರು ತಮಗೆ ಸೇರಿದ ದೇವನಗರಿ ಗ್ಯಾಸ್ ಏಜೆನ್ಸಿ ಹಾಗೂ ಬಿ. ಲೋಕೇಶ್ ಅವರು ಶಕ್ತಿ ಗ್ಯಾಸ್ ಏಜೆನ್ಸಿಯಿಂದ ಸಂಪರ್ಕ ನೀಡಿದ್ದಾರೆ. ಈ ಮೂಲಕ ಅವರು ಜೀವನ ಪರ್ಯಂತ ಲಾಭಗಳಿಸುವ ಉದ್ದೇಶ ಹೊಂದಿದ್ದಾರೆ.

ಈ ಮೂಲಕ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ವಾಲ್ಮೀಕಿ ಕೃಷ್ಣ ಅಸಲು ದಾವೆ ಹೂಡಿದ್ದಾರೆ. (ದಾವೆ ಸಂಖ್ಯೆ 741: 2012 ಮತ್ತು 763:2012).ನ್ಯಾಯಾಲಯ  ಜ. 8 ಹಾಗೂ 22ಕ್ಕೆ ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ.

ಕಾನೂನು ಹೋರಾಟಕ್ಕೆ ಸಿದ್ಧ
ಶೇ 22.75ರ ಅನುದಾನದಲ್ಲಿ ನೀಡಲಾದ ಗ್ಯಾಸ್ ಸಂಪರ್ಕ ನೀಡಿಕೆ ಪ್ರಕ್ರಿಯೆ ಎಲ್ಲವೂ ಪಾರದರ್ಶಕವಾಗಿ ನಡೆದಿದೆ. ಗ್ಯಾಸ್ ವಿತರಣೆಗೆ ಪ್ರಕಟಣೆ ನೀಡಿದಾಗ ನಾವ್ಯಾರೂ ಟೆಂಡರು ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಸರ್ಕಾರ ನಿಗದಿಪಡಿಸಿದ ಮೊತ್ತಕ್ಕೆ ನಗರದ ಗ್ಯಾಸ್ ವಿತರಕರು ಸಂಪರ್ಕ ನೀಡಲು ಮುಂದೆ ಬಾರದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ತಾವು ಸಂಪರ್ಕ ನೀಡಬೇಕಾಯಿತು.

ಅಲ್ಲದೇ ನಾವು ನೇರ ವಿತರಕರೂ ಅಲ್ಲ. ಏಜೆನ್ಸಿ ನಮ್ಮ ತಂದೆಯ ಹೆಸರಿನಲ್ಲಿದೆ. ಪಾಲಿಕೆಯ ಸಭೆಯಲ್ಲಿ ಒಪ್ಪಿಗೆ ದೊರೆತ ಬಳಿಕವೇ ಸಂಪರ್ಕ ನೀಡಲಾಗಿದೆ. ನೀಡದಿದ್ದರೆ ಪಾಲಿಕೆ ವ್ಯಾಪ್ತಿಯ 1,800 ಫಲಾನುಭವಿಗಳು ಗ್ಯಾಸ್ ಸಂಪರ್ಕದಿಂದ ವಂಚಿತರಾಗುತ್ತಿದ್ದರು. ಈ ಬಗ್ಗೆ ಪಾಲಿಕೆಯಲ್ಲಿ ಎಲ್ಲ ದಾಖಲೆಗಳೂ ಇವೆ. ದುರುದ್ದೇಶಪೂರ್ವಕವಾಗಿ ದಾವೆ ಹೂಡಲಾಗಿದೆ. ಈ ಪ್ರಕರಣವನ್ನು ನಾವು ಕಾನೂನು ಮೂಲಕ ಎದುರಿಸಲು ಸಿದ್ಧ ಎಂದು ರುದ್ರಮುನಿಸ್ವಾಮಿ ಮತ್ತು ಲೋಕೇಶ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT