ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಸದಸ್ಯೆ ಲೋಕಾಯುಕ್ತ ಬಲೆಗೆ!

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಬೆಂಗಳೂರು: ಹೋಟೆಲ್ ಮಾಲೀಕರೊಬ್ಬರಿಂದ `ಮಾಮೂಲಿ' ವಸೂಲಿ ಮಾಡುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸುಧಾಮ ನಗರ ವಾರ್ಡ್ ಸದಸ್ಯೆ, ಕಾಂಗ್ರೆಸ್ಸಿನ ಅವ್ವಾಯಿ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ! ನಗರದ ಕಲಾಸಿಪಾಳ್ಯ ಪ್ರದೇಶದಲ್ಲಿ ಹೋಟೆಲ್ ನಡೆಸುತ್ತಿರುವ ಚನ್ನೇಗೌಡ ಅವರಿಂದ ಮಂಗಳವಾರ ಹಣ ಪಡೆಯುತ್ತಿದ್ದಾಗಲೇ ಅವ್ವಾಯಿ ಅವರು ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಅವ್ವಾಯಿ ಅವರು ಚನ್ನೇಗೌಡ ಅವರಿಂದ ತಿಂಗಳಿಗೆ 500 ರೂಪಾಯಿ `ಮಾಮೂಲಿ' ಹಣ ಪಡೆಯುತ್ತಿದ್ದರು. ಆದರೆ, ಚನ್ನೇಗೌಡರಿಗೆ ಕಳೆದ ತಿಂಗಳು `ಮಾಮೂಲಿ' ಹಣ ನೀಡಲು ಆಗಲಿಲ್ಲ. ಹಾಗಾಗಿ ಅವ್ವಾಯಿ ಅವರು 35 ಸಾವಿರ ರೂಪಾಯಿ ನೀಡುವಂತೆ ಚನ್ನೇಗೌಡರ ಮೇಲೆ ಒತ್ತಡ ಹೇರಲಾರಂಭಿಸಿದರು. ಆದರೆ, ಮಾತುಕತೆಯ ನಂತರ 20 ಸಾವಿರ ರೂಪಾಯಿ ನೀಡಿದರೆ ಸಾಕು ಎಂದು ಒಪ್ಪಿಕೊಂಡರು.

ಹಣ ನೀಡಲು ಒಪ್ಪದ ಚನ್ನೇಗೌಡ, ಅವ್ವಾಯಿ ಅವರ ವಿರುದ್ಧ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು. ಅವ್ವಾಯಿ ಅವರನ್ನು ವಶಕ್ಕೆ ಪಡೆಯಲು ಬಲೆ ಬೀಸಿದ ಲೋಕಾಯುಕ್ತ ಪೊಲೀಸರು, ಚನ್ನೇಗೌಡರಿಂದ 15 ಸಾವಿರ ರೂಪಾಯಿ ಹಣ ಪಡೆಯುತ್ತಿದ್ದಾಗ ಅವರನ್ನು ಬಂಧಿಸಿದರು.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಲೋಕಾಯುಕ್ತ ಪೋಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದು ಎರಡನೆಯ ಪ್ರಕರಣ: ಬಿಬಿಎಂಪಿ ಸದಸ್ಯರೊಬ್ಬರು ಲಂಚ ಪಡೆದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಎರಡನೆಯ ಪ್ರಕರಣ ಇದು. ಎರಡೂ ಪ್ರಕರಣಗಳಲ್ಲಿ, ಪೊಲೀಸರ `ಅತಿಥಿ'ಯಾದವರು ಕಾಂಗ್ರೆಸ್ ಸದಸ್ಯರು!

ಬಿಬಿಎಂಪಿಯ ಗಣೇಶ ಮಂದಿರ ವಾರ್ಡ್ ಸದಸ್ಯ, ಕಾಂಗ್ರೆಸ್‌ನ ಎಲ್. ಗೋವಿಂದರಾಜು ಅವರು ಉದಯ ಕುಮಾರ್ ಎಂಬುವವರಿಂದ 2010ರಲ್ಲಿ 2 ಲಕ್ಷ ರೂ. ಲಂಚ ಪಡೆಯುತ್ತ್ದ್ದಿದಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದರು.

ಉದಯ್ ಕುಮಾರ್ ಅವರು ನಿರ್ಮಿಸುತ್ತಿದ್ದ ಅಪಾರ್ಟ್‌ಮೆಂಟ್‌ನ ನಕ್ಷೆ ಉಲ್ಲಂಘನೆ ಆಗಿದೆ ಎಂದು ಗೋವಿಂದರಾಜು ಆರೋಪಿಸಿದ್ದರು. ಎಂಟು ಲಕ್ಷ ರೂಪಾಯಿ ಲಂಚ ನೀಡದಿದ್ದರೆ, ಕಟ್ಟಡ ನೆಲಸಮ ಮಾಡುವಂತೆ ಬಿಬಿಎಂಪಿಗೆ ಶಿಫಾರಸು ಮಾಡುವುದಾಗಿ ಉದಯ ಕುಮಾರ್ ಅವರನ್ನು ಬೆದರಿಸಿದರು.

ಒಮ್ಮೆ ಎರಡು ಲಕ್ಷ ರೂಪಾಯಿ ಲಂಚವನ್ನು ಉದಯ ಕುಮಾರ್ ಅವರಿಂದ ಪಡೆದರು. ಮತ್ತೆ ಮೂರು ಲಕ್ಷ ರೂಪಾಯಿ ನೀಡುವಂತೆ ಒತ್ತಡ ಹೇರಲಾರಂಭಿಸಿದರು. ನಂತರ ಮಾತುಕತೆ ವೇಳೆ ಈ ಮೊತ್ತವನ್ನು ಎರಡು ಲಕ್ಷಕ್ಕೆ ಇಳಿಸಲು ಒಪ್ಪಿದರು.ಲಂಚದ ಬೇಡಿಕೆಗಳಿಂದ ರೋಸಿಹೋದ ಉದಯ ಕುಮಾರ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದರು.

ತಮ್ಮ ಮನೆಯಲ್ಲೇ ಲಂಚ ಸ್ವೀಕರಿಸುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಅವರು ಗೋವಿಂದರಾಜು ಅವರಿಗೆ ನಾಲ್ಕು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ, ಇತ್ತೀಚೆಗೆ ಆದೇಶ ನೀಡಿದ್ದರು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ ಗೋವಿಂದರಾಜು ಅವರಿಗೆ, ಅಲ್ಲಿ ಷರತ್ತುಬದ್ಧ ಜಾಮೀನು ಮಂಜೂರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT