ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಸಭೆ: ಶಾಸಕರಿಂದ ಅಧಿಕಾರಿಗಳ ತರಾಟೆ

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸಂಜೀವಿನಿನಗರ, ಸಿಂಗಾಪುರ ಮತ್ತು ಕುವೆಂಪುನಗರ ವಾರ್ಡ್‌ಗಳಲ್ಲಿ ಸರ್ಕಾರಿ ಜಾಗದಲ್ಲಿ ಕಳೆದ 40 ವರ್ಷಗಳಿಂದ ವಾಸವಾಗಿರುವ ನೂರಾರು ಕುಟುಂಬಗಳಿಗೆ ಇನ್ನೂ ಹಕ್ಕು ಪತ್ರ ವಿತರಿಸದಿರುವ ಕುರಿತು ಆ ಕ್ಷೇತ್ರದ ಶಾಸಕ ಕೃಷ್ಣ ಭೈರೇಗೌಡ ಪಾಲಿಕೆ ಆಡಳಿತವನ್ನು ಶನಿವಾರ ತರಾಟೆಗೆ ತೆಗೆದುಕೊಂಡರು.

ಕೆಂಪೇಗೌಡ ಪೌರ ಸಭಾಂಗಣದಲ್ಲಿ ನಡೆದ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಹಲವಾರು ಬಡ ಹಾಗೂ ಪರಿಶಿಷ್ಟ ವರ್ಗಗಳ ಕುಟುಂಬಗಳು ಇಲ್ಲಿ ವಾಸವಾಗಿದ್ದರೂ ಅವರಿಗೆ ಹಕ್ಕು ಪತ್ರ ವಿತರಣೆಯಾಗಿಲ್ಲ.

ಬೆಂಗಳೂರು ಉತ್ತರ ತಾಲ್ಲೂಕಿನಿಂದ ಬಿಬಿಎಂಪಿ ಈ ಪ್ರದೇಶವನ್ನು ತನ್ನ ವ್ಯಾಪ್ತಿಗೆ ಪಡೆದಿದ್ದರೂ, `ಇನ್ನೂ ಈ ಪ್ರದೇಶ ಪಾಲಿಕೆ ವ್ಯಾಪ್ತಿಗೆ ಬಂದಿಲ್ಲ~ ಎಂದು ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ನೀಡಿದ ಕಡತದಲ್ಲಿಯೇ ಹಸ್ತಾಂತರವಾದ ಬಗ್ಗೆ ಉಲ್ಲೇಖಗಳಿವೆ. ಹೀಗೆ ಬರೆಯುವ ಮುನ್ನ ಕಡತವನ್ನಾದರೂ ಪರಿಶೀಲಿಸಬೇಕಿತ್ತಲ್ಲವೇ?~ ಎಂದು ಪ್ರಶ್ನಿಸಿದರು.

ಈ ಪ್ರದೇಶ ಪಾಲಿಕೆಗೆ ಹಸ್ತಾಂತರವಾದ ಕುರಿತ ದಾಖಲೆಗಳನ್ನೂ ಪ್ರದರ್ಶಿಸಿದ ಅವರು, `ಏಕೆ ಈ ರೀತಿ ವಿಳಂಬ ಮಾಡುತ್ತಿದ್ದೀರಿ? ಯಾವುದಾದರೂ ರಾಜಕೀಯ ಒತ್ತಡಗಳಿದ್ದರೆ ಹೇಳಿ?~ ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರ ನೀಡಿದ ನಗರ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ.ರಾಮಮೂರ್ತಿ, `ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ. ವಿಳಂಬ ತಂತ್ರವೂ ಇಲ್ಲ. ಕೆಲ ಕಾನೂನು ತೊಡಕುಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ಪಾಲಿಕೆಯ ಕಾನೂನು ಕೋಶಕ್ಕೆ ಸಲ್ಲಿಸಲಾಗಿದೆ. ವರದಿ ಬಂದ ನಂತರ ಹಕ್ಕು-ಪತ್ರ ವಿತರಿಸಲಾಗುವುದು~ ಎಂದು ಭರವಸೆ ನೀಡಿದರು.

ಕೆಲ ನಿವೃತ್ತ ಪೌರಕಾರ್ಮಿಕರಿಗೆ ಕೆಲವು ತಿಂಗಳವರೆಗೆ ವೇತನ ಪಾವತಿ ಮಾಡಿದ್ದರ ಬಗ್ಗೆ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು. ಪೌರಕಾರ್ಮಿಕರಾಗಿದ್ದ ಅಣ್ಣೀಯಮ್ಮ, ರಾಮ, ನಾರಾಯಣಮ್ಮ ಮತ್ತು ನರಸಿಂಹ ಎಂಬುವರಿಗೆ ನಿವೃತ್ತಿ ಹೊಂದಿದ ಮೇಲೂ 3-4 ತಿಂಗಳವರೆಗೆ ವೇತನ ನೀಡಲಾಗಿದೆ. ಇದರಿಂದ ಒಟ್ಟಾರೆ 2,18,248 ರೂಪಾಯಿಗಳನ್ನು ಪಾಲಿಕೆ ಬಿಡುಗಡೆ ಮಾಡಿದೆ.

ಈ ಅಕ್ರಮದಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪಾಲಿಕೆಯ ಪರವಾಗಿ ತೆರಿಗೆ ವಸೂಲಿ ಮಾಡುತ್ತಿದ್ದ ದಿನಗೂಲಿ ನೌಕರರಾದ ವಿಜಯೇಂದ್ರ ಮತ್ತು ಸುರೇಶ್ ಎಂಬುವರು ಕೋಟ್ಯಂತರ ಹಣವನ್ನು ಬಳಸಿಕೊಂಡಿದ್ದಾರೆ. ಅವರಿಂದಲೂ ಹಣ ವಾಪಸ್ ಪಡೆಯಬೇಕು ಎಂದು ಜೆಡಿಎಸ್ ನಾಯಕ ಪದ್ಮನಾಭ ರೆಡ್ಡಿ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಆಯುಕ್ತರು, `ಇದು ನಾವು ತಲೆತಗ್ಗಿಸಬೇಕಾದ ಸಂಗತಿ. ಇದು ಅಧಿಕಾರಿಗಳಿಂದಲೇ ಆದ ಲೋಪ. ಈ ಘಟನೆ ತಿಳಿದ ಕೂಡಲೇ ಬಿಡುಗಡೆ ಮಾಡಲಾದ ಹಣವನ್ನು ವಾಪಸ್ ಪಡೆಯಲು ಆದೇಶಿಸಿದ್ದೇನೆ. ವಿಜಯೇಂದ್ರ ಮತ್ತು ಸುರೇಶ್ ದಿನಗೂಲಿ ಆಧಾರದ ಮೇಲೆ ನೇಮಕಗೊಂಡಿದ್ದರಿಂದ ಅವರನ್ನು ಕರ್ತವ್ಯದಿಂದಲೇ ವಜಾಗೊಳಿಸಿ ದುರ್ಬಳಕೆ ಮಾಡಿಕೊಂಡ ಹಣವನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳಲಾಗಿದೆ~ ಎಂದು ಹೇಳಿದರು.

ತುರ್ತು ನಿಧಿ ಏಕೆ ಬಳಕೆ? ಏನಾದರೂ ಪ್ರಾಕೃತಿಕ ವಿಕೋಪಗಳು ಸಂಭವಿಸಿದಲ್ಲಿ ಪರಿಹಾರಕ್ಕೆಂದು ಮೀಸಲಿಟ್ಟಿದ್ದ 85 ಕೋಟಿ ರೂಪಾಯಿಗಳನ್ನು ವಿವಿಧ ಕಾಮಗಾರಿಗಳಿಗೆಂದು ಬಿಡುಗಡೆ ಮಾಡಿದ ಆಯುಕ್ತರ ನಿರ್ಧಾರವನ್ನು ಪಾಲಿಕೆ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ನ ಎಂ.ಉದಯಶಂಕರ್ ಖಂಡಿಸಿದರು. ಜತೆಗೆ ಬಜೆಟ್ ಮಂಡನೆಯಾಗಿ, ಸಭೆಯ ಅನುಮತಿ ಪಡೆದರೂ ಇನ್ನೂ ಸರ್ಕಾರ ಹಣ ಬಿಡುಗಡೆ ಮಾಡದಿರುವ ಬಗ್ಗೆಯೂ ಆಕ್ಷೇಪಿಸಿದರು.  

ಆಯುಕ್ತರು ಪ್ರತಿಕ್ರಿಯೆ ನೀಡಿ, `ನೀವೆಲ್ಲ ಕೇಳಿದಿರೆಂದೇ ಹಣ ಬಿಡುಗಡೆ ಮಾಡಲಾಗಿದೆ. ಆ ಹಣವನ್ನು ಚರಂಡಿ ಹೂಳೆತ್ತುವುದು, ಕೊಳವೆಬಾವಿ  ಕೊರೆತ, ಸಸಿ ನೆಡುವುದಕ್ಕೆ ಬಳಕೆ ಮಾಡಲಾಗಿದೆ. ಬಜೆಟ್ ಬಗ್ಗೆ ಶುಕ್ರವಾರವಷ್ಟೇ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದೇನೆ. ಅವರ ಸ್ಪಷ್ಟೀಕರಣಕ್ಕೆ ಉತ್ತರಿಸಿದ್ದೇನೆ ~ ಎಂದು ತಿಳಿಸಿದರು.

ಎರಡು ನಿರ್ಣಯ ಮಂಡನೆ: ವಾರ್ಡ್ ಸಂಖ್ಯೆ 17ರ ಜೆ.ಪಿ.ಪಾರ್ಕ್‌ನ ಈಜುಕೊಳಕ್ಕೆ ರಾಮಕೃಷ್ಣ ಹೆಗಡೆ ಈಜುಕೊಳ ಎಂದು ಹೆಸರಿಡಲು ಹಾಗೂ ಆಧಾರ್ ಕಾರ್ಡ್‌ಗಳನ್ನು ವಿತರಿಸುವಾಗ, ಸಾರ್ವಜನಿಕರಿಗೆ ದೃಢೀಕರಣ ಮಾಡುವ ಪಾಲಿಕೆ ಸದಸ್ಯರಿಗೂ ಅಧಿಕಾರ ನೀಡಬೇಕು ಎಂದು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರಕ್ಕೆ ಒತ್ತಾಯಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಈಚೆಗೆ ನಿಧನ ಹೊಂದಿದ ಹಿರಿಯ ರಾಜಕಾರಣಿ ಕೆ.ಎಚ್.ರಂಗನಾಥ್, ಕೊಲೆಯಾದ ಬಿಬಿಎಂಪಿ ಸದಸ್ಯ ಎಸ್.ನಟರಾಜ್  ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿತು.

ನಮ್ಮ ಮೆಟ್ರೊದಿಂದ ತೆರಿಗೆ ಸಂಗ್ರಹ
`ನಮ್ಮ ಮೆಟ್ರೊ~ ರೈಲು ಸೇವೆ ಒದಗಿಸುತ್ತಿರುವ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ದಿಂದಲೂ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಬಿಬಿಎಂಪಿಯು ನಿರ್ಧರಿಸಿದೆ.

ಶನಿವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ `ನಮ್ಮ ಮೆಟ್ರೊ~ ವಾಣಿಜ್ಯ ಉದ್ದೇಶಕ್ಕೆ ಆರಂಭವಾದುದರಿಂದ ಮೆಟ್ರೊ ರೈಲು ನಿಲ್ದಾಣಗಳು, ವೆುಟ್ರೊ ಮಾರ್ಗಕ್ಕೆ ಬಳಸಿಕೊಂಡ ಜಾಗಕ್ಕೂ ತೆರಿಗೆ ನೀಡಬೇಕು ಎಂದು ಬಿಬಿಎಂಪಿ ಸದಸ್ಯ ಕಾಂಗ್ರೆಸ್‌ನ ಗುಣಶೇಖರನ್ ಸೇರಿದಂತೆ ಹಲವು ಸದಸ್ಯರು ಈ ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರಿಸಿದ ಆಯುಕ್ತ ಸಿದ್ದಯ್ಯ, ಈಗಾಗಲೇ ಈ ಸಂಬಂಧ ಬಿಎಂಆರ್‌ಸಿಎಲ್‌ಗೆ ತೆರಿಗೆ ಪಾವತಿಸುವಂತೆ ಸೂಚಿಸಲಾಗಿದೆ. ಅವರು ಇದಕ್ಕೆ ಒಪ್ಪಿದ್ದಾರೆ. ಆದರೆ ಸ್ವಲ್ಪ ಸಮಯ ಕೇಳಿದ್ದಾರೆ ಎಂದು ಹೇಳಿದರು.

ತಪ್ಪಿತಸ್ಥ ಅಧಿಕಾರಿಗಳಿಂದಲೇ ಸ್ಪಷ್ಟೀಕರಣ
ಅಧಿಕಾರಿಗಳು ಏನೇ ತಪ್ಪು ಮಾಡಿದರೂ ನಿರಾಳ ಭಾವದಿಂದ ಇರುತ್ತಾರೆ. ಎಲ್ಲ ತಪ್ಪುಗಳ ಬಗ್ಗೆ ಆಯುಕ್ತರೇ ನಮ್ಮ ಪರವಾಗಿ ಸ್ಪಷ್ಟೀಕರಣ ನೀಡುತ್ತಾರೆ ಎಂಬುದೇ ಈ ನಿರಾಳಭಾವಕ್ಕೆ ಕಾರಣ. ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳನ್ನು ಸಭೆಗೆ ಕರೆಸಿ ಅವರಿಂದಲೇ ಸ್ಪಷ್ಟೀಕರಣ ಕೊಡಿಸಬೇಕು. ಅಂದಾಗ ಮಾತ್ರ ಅವರು ಎಚ್ಚರಿಕೆಯಿಂದ ಇರುತ್ತಾರೆ ಎಂದು ಪಾಲಿಕೆ ಸದಸ್ಯ ಕಾಂಗ್ರೆಸ್‌ನ ಕೆ.ಚಂದ್ರಶೇಖರ್ ನುಡಿದರು.

ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಲು ಯಾವ ಅಡೆತಡೆಯೂ ಇಲ್ಲ. ಇನ್ನು ಮುಂದೆ ಅಂಥ ಅಧಿಕಾರಿಗಳನ್ನು ಸಭೆಗೆ ಕರೆದು ಸ್ಪಷ್ಟೀಕರಣ ಕೊಡಿಸಲಾಗುವುದು ಎಂದು ಆಯುಕ್ತರು ನುಡಿದರು.

ಒಂದೇ ವಿಭಾಗ ಅಥವಾ ವಾರ್ಡ್‌ನಲ್ಲಿ 8-10 ವರ್ಷಗಳಿಂದ `ಠಿಕಾಣಿ~ ಹೂಡಿದ ಅಧಿಕಾರಿಗಳನ್ನು ಬೇರೆ ವಿಭಾಗಕ್ಕೆ ವರ್ಗಾಯಿಸುವ ಬಗ್ಗೆ ಮಾತನಾಡಿ, ಮೂರು ವರ್ಷಗಳವರೆಗೆ ಒಂದು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದರೆಂದರೆ ನಾವು ಬೇರೆಡೆ ವರ್ಗಾವಣೆ ಮಾಡುತ್ತೇವೆ. ಆದರೆ ಸರ್ಕಾರದಿಂದ ಆದೇಶ ಪಡೆದು ಆ ಅಧಿಕಾರಿಗಳು ಮತ್ತೆ ಅಲ್ಲಿಗೇ ಬರುತ್ತಾರೆ. ಸರ್ಕಾರದ ಆದೇಶ ಇರುವುದರಿಂದ ನಾವು ಏನೂ ಮಾಡಲಾಗುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT