ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಸಭೆಯಲ್ಲಿ ತೀವ್ರ ಚರ್ಚೆ

Last Updated 24 ಫೆಬ್ರುವರಿ 2011, 19:55 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳ ವಿಸ್ತರಣೆ ಹಾಗೂ ವಿಸ್ತರಣೆಗೆ ಭೂಮಿ ಬಿಟ್ಟು ಕೊಡುವವರಿಗೆ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್) ಪತ್ರ ನೀಡುವ ಪ್ರಕ್ರಿಯೆ ಕುರಿತು ಗುರುವಾರ ನಡೆದ ಪಾಲಿಕೆ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಯಿತು.

ರಸ್ತೆ ವಿಸ್ತರಣೆಗೆ ಟಿಡಿಆರ್ ವಿತರಣೆ  ಕುರಿತು ಮಾತನಾಡಿದ ಬಿಜೆಪಿ ಸದಸ್ಯ ಎನ್. ಹರೀಶ್, ‘ಬಿಬಿಎಂಪಿ ವ್ಯಾಪ್ತಿಗೆ ಒಳಪಡದ ಪ್ರದೇಶಗಳಲ್ಲೂ ರಸ್ತೆ ವಿಸ್ತರಣೆ ಕಾರ್ಯ ಕೈಗೊಂಡು ಟಿಡಿಆರ್ ವಿತರಿಸಲಾಗುತ್ತಿದೆ. ಈ ಟಿಡಿಆರ್ ಪತ್ರದಲ್ಲಿ ಯಾವ ವಲಯವನ್ನು (ಎ,ಬಿ,ಸಿ,ಡಿ,ಇ ವಲಯ) ನಮೂದಿಸಲಾಗುತ್ತಿದೆ. ಇದರ ಮೌಲ್ಯವೇನು ಎಂಬುದನ್ನು ಸ್ಪಷ್ಟಪಡಿಸಬೇಕು.ಪಾಲಿಕೆ ವ್ಯಾಪ್ತಿಗೆ ಒಳಪಡದ ಪ್ರದೇಶದಲ್ಲಿ ನೀಡಲಾದ ಟಿಡಿಆರ್ ಅನ್ನು ನಗರ ವ್ಯಾಪ್ತಿಯಲ್ಲಿ ಮಾರಾಟ ಮಾಡಲು ಅವಕಾಶವಿದೆಯೇ ಎಂಬ ಬಗ್ಗೆ ಮಾಹಿತಿ ನೀಡಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿ ಕಾಂಗ್ರೆಸ್ ಸದಸ್ಯ ಗುಣಶೇಖರ್, ‘ನಗರದಲ್ಲಿ ನೂರಾರು ರಸ್ತೆಗಳನ್ನು ವಿಸ್ತರಣೆಗೆಂದು ಗುರುತಿಸಲಾಗಿದ್ದು, ಕಟ್ಟಡಗಳ ಮೇಲೆ ಗುರುತು ಹಾಕಲಾಗಿದೆ. ಆದರೆ ಇಷ್ಟೆಲ್ಲಾ ರಸ್ತೆಗಳ ವಿಸ್ತರಣೆ ಅಗತ್ಯವಿದೆಯೇ ಎಂಬ ಬಗ್ಗೆ ಚಿಂತಿಸಬೇಕು. ಹಾಗೆಯೇ ವಿಸ್ತರಣೆಗೆಂದು ಭೂಮಿ ಬಿಟ್ಟು ಕೊಡುವ ಖಾಸಗಿ ಆಸ್ತಿದಾರರಿಗೆ ಹಣ ರೂಪದ ಪರಿಹಾರ ನೀಡಲಾಗುತ್ತದೆಯೇ ಅಥವಾ ಟಿಡಿಆರ್ ವಿತರಿಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಬೇಕು’ ಎಂದರು.

ಬಿಜೆಪಿಯ ಬಿ.ವಿ.ಗಣೇಶ್ ಮಾತನಾಡಿ, ‘ರಸ್ತೆ ವಿಸ್ತರಣೆ ಅಗತ್ಯವಿಲ್ಲ ಎಂಬ ವಾದ ಸರಿಯಲ್ಲ. ಸುಗಮ ವಾಹನ ಸಂಚಾರಕ್ಕೆ ವಿಸ್ತರಣೆ ಅನಿವಾರ್ಯ. ಈ ಬಗ್ಗೆ ಗಂಭೀರವಾಗಿ ಚರ್ಚಿಸಿ ಪರಿಹಾರ ನೀಡುವ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

ಆಗ ಪ್ರತಿಕ್ರಿಯೆ ನೀಡಿದ ಆಯುಕ್ತ ಸಿದ್ದಯ್ಯ, ‘ಪಾಲಿಕೆ ವ್ಯಾಪ್ತಿಗೆ ಸೇರದ ಪ್ರದೇಶಗಳಲ್ಲೂ ತುರ್ತು ಸಂದರ್ಭ ಇಲ್ಲವೇ ಸರ್ಕಾರದ ಸೂಚನೆ ಮೇರೆಗೆ ರಸ್ತೆ ವಿಸ್ತರಣೆ ಕಾರ್ಯ ಕೈಗೊಳ್ಳಬೇಕಾಗುತ್ತದೆ. ಹಾಗಾಗಿ ಈ ರೀತಿಯ ಸಂದರ್ಭಗಳಲ್ಲಿ ಖಾಸಗಿ ಆಸ್ತಿಗಳ ಮಾಲೀಕರಿಗೆ ಟಿಡಿಆರ್ ವಿತರಿಸಲು ಅವಕಾಶ ನೀಡುವಂತೆ ಕೋರಿ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ’ ಎಂದು ಹೇಳಿದರು.

‘ಬಿಡಿಎ ಸಿದ್ಧಪಡಿಸಿರುವ ಪರಿಷ್ಕೃತ ಮಹಾನಕ್ಷೆಯ (ಆರ್‌ಎಂಪಿ-2015) ಸಮಗ್ರ ಅಭಿವೃದ್ಧಿ ಯೋಜನೆಯಡಿ ಕೆಲವು ರಸ್ತೆಗಳ ವಿಸ್ತರಣೆಯ ಬಗ್ಗೆ ಉಲ್ಲೇಖಿಸಲಾಗಿದೆ. ನಗರದಲ್ಲಿ ಕೆಲವು ರಸ್ತೆಗಳ ವಿಸ್ತರಣೆ ಅನಿವಾರ್ಯವಾಗಿದೆ. ಈವರೆಗೆ ಸುಮಾರು 32.50 ಲಕ್ಷ ಚದರ ಮೀಟರ್‌ನಷ್ಟು ಖಾಸಗಿ ಭೂಮಿಯನ್ನು ಟಿಆರ್‌ಡಿ ಅಡಿಯಲ್ಲಿ ಪಡೆಯಲಾಗಿದೆ. ಒಂದೊಮ್ಮೆ ಈ ಭೂಮಿಗೆ ಹಣದ ಪರಿಹಾರ ನೀಡಿದ್ದರೆ 320 ಕೋಟಿ ರೂಪಾಯಿ ವೆಚ್ಚ ಮಾಡಬೇಕಾಗಿತ್ತು’ ಎಂದರು.

‘ಪಾಲಿಕೆ ಸದ್ಯ ಟಿಡಿಆರ್ ಬ್ಯಾಂಕ್ ಸ್ಥಾಪಿಸುವ ಸ್ಥಿತಿಯಲ್ಲಿಲ್ಲ. ಹಾಗೆಯೇ ಟಿಡಿಆರ್ ಖರೀದಿ ಕೂಡ ಸುಲಭವಲ್ಲ.ಮುಖ್ಯಮಂತ್ರಿಗಳ ಸಲಹೆಗಾರರಾದ (ಮೂಲ ಸೌಕರ್ಯ) ಡಾ. ಎ.ರವೀಂದ್ರ ನೇತೃತ್ವದ ಸಮಿತಿ ಈಗಾಗಲೇ ಟಿಡಿಆರ್‌ನ ಸಾಧಕ- ಬಾಧಕ ಕುರಿತು ಚಿಂತಿಸಿದೆ. ಈ ಸಮಿತಿಯ ವರದಿ ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT