ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆಯಲ್ಲಿ ಹೋದ ಮಾನ ಜಿ.ಪಂ.ನಲ್ಲಿ ಬಂತು!

Last Updated 19 ಸೆಪ್ಟೆಂಬರ್ 2013, 8:43 IST
ಅಕ್ಷರ ಗಾತ್ರ

ಮೈಸೂರು: ಪಾಲಿಕೆಯಲ್ಲಿ ಜೆಡಿಎಸ್‌–ಬಿಜೆಪಿ ಮೈತ್ರಿ ಮಾಡಿಕೊಂಡ ಫಲವಾಗಿ ಮೇಯರ್‌ ಮತ್ತು ಉಪ ಮೇಯರ್‌ ಎರಡೂ ಸ್ಥಾನಗಳು ಜೆಡಿಎಸ್‌ ಪಾಲಾಗುವ ಮೂಲಕ ಕಾಂಗ್ರೆಸ್‌ಗೆ ಅಧಿಕಾರ ತಪ್ಪಿತ್ತು. ಇದರಿಂದ ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ಗೆ ಮುಖಭಂಗ­ವಾಗಿತ್ತು.

ಆದರೆ ಜಿಲ್ಲಾ ಪಂಚಾಯಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳನ್ನು ಕಾಂಗ್ರೆಸ್‌ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಜೆಡಿಎಸ್‌–ಬಿಜೆಪಿ ದೋಸ್ತಿ ಆಟ ಜಿ.ಪಂ.ನಲ್ಲಿ ನಡೆದಿಲ್ಲ.

ಜೆಡಿಎಸ್‌–ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್‌ಗೆ ಅಧಿಕಾರ ತಪ್ಪಿಸಲು ಎರಡೂ ಪಕ್ಷಗಳು ತಂತ್ರ ಹೆಣೆದಿದ್ದವು. ಎರಡೂ ಪಕ್ಷಗಳ ದೋಸ್ತಿ ಜಿ.ಪಂ.ನಲ್ಲಿ ಮುಂದು­ವರಿದು ಕಾಂಗ್ರೆಸ್‌ಗೆ ಅಧಿಕಾರ ತಪ್ಪಲಿದೆ ಎಂಬ ಮಾತುಗಳು ಕೇಳಿ ಬಂದಿ­ದ್ದವು.

ಆದರೆ ಕೆಜೆಪಿಯಲ್ಲಿ ಗುರುತಿಸಿ­ಕೊಂಡಿ­ದ್ದ ಬಿಜೆಪಿಯ ಇಬ್ಬರು ಸದಸ್ಯರು  ಬೆಂಬಲಿಸಿ­ದ್ದರಿಂದ ಕಾಂಗ್ರೆಸ್‌ ಜಿ.ಪಂ. ಅಧಿಕಾರ ಗದ್ದುಗೆ ಹಿಡಿಯಲು ಸಾಧ್ಯವಾಯಿತು.

ಬದನವಾಳು ಕ್ಷೇತ್ರದ ಬಿಜೆಪಿಯ ಸಿಂಧುವಳ್ಳಿಯ ಎಸ್‌.ಎಂ. ಕೆಂಪಣ್ಣ ಮತ್ತು ದೇವಲಾಪುರ ಕ್ಷೇತ್ರದ ಲಲಿತಾದ್ರಿಪುರದ ಮಂಜುಳಾ ಎಂ. ಪುಟ್ಟಸ್ವಾಮಿ ಅವರ ಎರಡು ಅಮೂಲ್ಯವಾದ ಮತಗಳು ಕಾಂಗ್ರೆಸ್‌ಗೆ ಗೆಲುವಿನ ದಡ ಮುಟ್ಟಿಸಿದವು.

ಅಲ್ಲದೇ ಪಕ್ಷೇತರ ಸದಸ್ಯ ಎಲ್‌. ಮಾದಪ್ಪ ಅವರ ಮತ್ತೊಂದು ಮತ ಕಾಂಗ್ರೆಸ್‌ಗೆ ನೆರವಾಯಿತು. ಸಿದ್ದಲಿಂಗಪುರದ ಶಕುಂತಲಾ ಅವರು ಚುನಾವಣೆಗೆ ಗೈರು ಹಾಜರಾದರೂ ಕಾಂಗ್ರೆಸ್‌ಗೆ ತೊಡಕಾಗಲಿಲ್ಲ.

ಜೆಡಿಎಸ್‌ 16, ಬಿಜೆಪಿ 8 ಸದಸ್ಯ ಸ್ಥಾನಗಳನ್ನು ಹೊಂದುವ ಮೂಲಕ ಮೈತ್ರಿಕೂಟ 24 ಸದಸ್ಯ ಬಲ ಹೊಂದಿತ್ತು. ಕೆಂಪಣ್ಣ ಮತ್ತು ಮಂಜುಳಾ ಪುಟ್ಟಸ್ವಾಮಿ ಅವರಿಗೆ ಬಿಜೆಪಿ ವಿಪ್‌ ಜಾರಿ ಮಾಡಿತ್ತು. ಆದರೂ ವಿಪ್‌ ಉಲ್ಲಂಘಿಸಿ, ಇಬ್ಬರು ಸದಸ್ಯರು ಕಾಂಗ್ರೆಸ್‌ ಬೆಂಬಲಿಸಿದರು.

ಅಲ್ಲದೇ ಅನಾರೋಗ್ಯದ ನಿಮಿತ್ತ ಚಿಲ್ಕುಂದ ಕ್ಷೇತ್ರದ ಸಿ.ಟಿ. ರಾಜಣ್ಣ ಅವರು ಗೈರು ಹಾಜರಾಗಿದ್ದರಿಂದ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟಕ್ಕೆ ಮೂರು ಸ್ಥಾನಗಳನ್ನು ಕಳೆದು­ಕೊಂಡು 21 ಸದಸ್ಯ ಬಲಕ್ಕೆ ತೃಪ್ತಿಪಟ್ಟು­ಕೊಂಡಿ­ತು. ಎರಡು ದಿನಗಳಿಂದ ಮೈತ್ರಿ ಪಕ್ಷಗಳು ರೆಸಾರ್ಟ್‌ನಲ್ಲಿ ನಡೆಸಿದ ರಾಜಕೀಯ ಫಲ ನೀಡಿಲ್ಲ. ಬಿಜೆಪಿಯ ಇಬ್ಬರು ಸದಸ್ಯರ ಮತಗಳು ಚುನಾವಣೆಯ ದಿಕ್ಕನ್ನೇ ಬದಲಿಸಿತು.

46 ಸದಸ್ಯ ಬಲ ಹೊಂದಿರುವ ಜಿ.ಪಂ.ನಲ್ಲಿ 21 ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್‌ ದೋಸ್ತಿ ಪಕ್ಷಗಳಿಂದ ಅಧಿಕಾರ ಕಸಿದುಕೊಳ್ಳುವಲ್ಲಿ ಯಶಸ್ವಿ­ಯಾಗಿ­ದೆ. ಆ ಮೂಲಕ ತವರು ಜಿಲ್ಲೆಯಲ್ಲಿ ಸಿದ್ದರಾಮಯ್ಯ ಮತ್ತು ಪಕ್ಷಕ್ಕೆ ಮುಖಭಂಗ ಆಗುವುದರಿಂದ ತಪ್ಪಿಸಿಕೊಂಡಿದೆ.

2011ರ ಫೆಬ್ರುವರಿ ತಿಂಗಳಲ್ಲಿ ನಡೆದ ಜಿ.ಪಂ. ಚುನಾವಣೆಯಲ್ಲಿ ಮೊದಲ 20 ತಿಂಗಳ ಅವಧಿಯಲ್ಲಿ ಜೆಡಿಎಸ್‌–ಬಿಜೆಪಿ ಮೈತ್ರಿ ಮಾಡಿಕೊಂಡು ಜೆಡಿಎಸ್‌ನ ಸುನೀತಾ ವೀರಪ್ಪಗೌಡ ಮತ್ತು ಬಿಜೆಪಿಯ ಡಾ. ಶಿವರಾಮ್‌ ಅವರು ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅಧಿಕಾರ ನಡೆಸಿದರು.

ಆದರೆ, ಇವರು ತಮ್ಮ ಅವಧಿಯನ್ನು ಪೂರೈಸಲಿಲ್ಲ. ಮೂರು ತಿಂಗಳಿಗೆ ಮುಂಚೆಯೇ ಅಧಿಕಾರದಿಂದ ಕೆಳಗಿಳಿದರು. ನಂತರ ಜೆಡಿಎಸ್‌ನ ಭಾಗ್ಯ ಶಿವಮೂರ್ತಿ ಮತ್ತು ಬಿಜೆಪಿಯ ಕೆ. ಭಾಗ್ಯಲಕ್ಷ್ಮಿ ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದರು.

ನಂತರ ಹನ್ನೊಂದುವರೆ ತಿಂಗಳ ಕಾಲ ಬಿಜೆಪಿಯ ಕಾ.ಪು. ಸಿದ್ದವೀರಪ್ಪ ಮತ್ತು ಜೆಡಿಎಸ್‌ನ ಎಂ.ಕೆ. ಸುಚಿತ್ರಾ ಅಧ್ಯಕ್ಷ ಉಪಾಧ್ಯಕ್ಷ­ರಾಗಿದ್ದರು. ಈ ಇಬ್ಬರನ್ನು ಅವಿಶ್ವಾಸ ನಿರ್ಣಯ ಮಂಡಿಸಿ ಕೆಳಗೆ ಇಳಿಸಲಾಯಿತು. ಉಳಿದ ಎಂಟೂವರೆ ತಿಂಗಳ ಜಿ.ಪಂ. ಅಧಿಕಾರ ಅವಧಿ ಈಗ ಕಾಂಗ್ರೆಸ್‌ಗೆ ದಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT