ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಳು ಬಿದ್ದ ಈಜುಕೊಳ.. ಜನರ ತಳಮಳ..!

Last Updated 1 ಏಪ್ರಿಲ್ 2013, 6:52 IST
ಅಕ್ಷರ ಗಾತ್ರ

ಬಳ್ಳಾರಿ: ಶಾಲೆ- ಕಾಲೇಜುಗಳ ವಿದ್ಯಾರ್ಥಿಗಳಿಗೆ ಇದು ರಜೆಯ ಮಜಾ ಅನುಭವಿಸುವ ಕಾಲ. ಬೇಸಿಗೆ ಟಿಸಿಲೊಡೆದಿದ್ದು, ಬಿಸಿಲು ಪ್ರಖರಗೊಳ್ಳುತ್ತಾ ಸಾಗಿದೆ. ನಗರದಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಬಿಸಿಲಿನ ಬೇಗೆಯಿಂದ ಜನ ತತ್ತರಿಸಿದ್ದಾರೆ.

ಬಿಸಿಲ ತಾಪದಿಂದ ಮುಕ್ತಿ ಪಡೆಯಲು, ರಜಾ ದಿನಗಳ ಸದ್ವಿನಿಯೋಗ ಮಾಡಿಕೊಳ್ಳಲು ಬಡ, ಮಧ್ಯಮ ವರ್ಗದ ಮಕ್ಕಳು ಮತ್ತು ಯುವಕರು ಈಜು ಕಲಿಯಲೆಂದೇ ನಗರದಲ್ಲಿ ನಿರ್ಮಿಸಲಾಗಿದ್ದ ಈಜುಕೊಳ ಇದೀಗ ಇದ್ದೂ ಇಲ್ಲದಂತಾಗಿದೆ. ನಗರದ ಎರಡನೇ ರೈಲ್ವೆ ಗೇಟ್ ಎದುರು, ಪೋಲಾ ಪ್ಯಾರಡೈಸ್ ಹೋಟೆಲ್ ಪಕ್ಕದಲ್ಲಿ ಕೆಲವೇ ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಟಿಪ್ಪು ಈಜುಕೊಳ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಉದ್ದೇಶ ಈಡೇರಿಕೆಯೇ ಸಾಧ್ಯವಾಗಿಲ್ಲ.

ನಗರದ ಮಕ್ಕಳು, ಯುವಜನರು, ಜನಸಾಮಾನ್ಯರಿಗೆ ಈಜುಕೊಳದ ಸೌಲಭ್ಯ ದೊರೆಯಲೆಂದೇ ಮಹಾನಗರ ಪಾಲಿಕೆ ಒಡೆತನದ ಈ ಜಾಗೆಯಲ್ಲಿ 2007ರಲ್ಲಿ ಈಜುಕೊಳವನ್ನು ಅಭಿವೃದ್ಧಿಪಡಿಸಿ ಲೋಕಾರ್ಪಣೆ ಮಾಡಲಾಗಿತ್ತು. ಕೆಲವೇ ದಿನಗಳ ಕಾಲ ಜನರ ಉಪಯೋಗಕ್ಕೆ ಬಂದ ಈ ಕೊಳವು ನಂತರ ನಿರ್ಲಕ್ಷ್ಯದಿಂದಾಗಿ ಬಯಲು ಶೌಚಾಲಯವಾಗಿ ಪರಿಣಮಿಸಿದೆ.

ಈಜುಕೊಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಬೃಹದಾಕಾರದ, `ಗೇಟ್ ವೇ ಆಫ್ ಇಂಡಿಯಾ' ಮಾದರಿಯ ದ್ವಾರ ನಿರ್ಮಿಸಿ ಜನರನ್ನು ಆಕರ್ಷಿಸಲಾಗಿತ್ತು. ಕಂಪೌಂಡ್ ನಿರ್ಮಿಸಿ ಸುತ್ತಮುತ್ತಲಿನ ನಿವಾಸಿಗಳು ಅಕ್ರಮವಾಗಿ ಪ್ರವೇಶಿಸದಂತೆ ತಡೆಯಲಾಗಿತ್ತು. ಆದರೆ, ಇದೀಗ, ಕಂಪೌಂಡ್ ಒಡೆದಿದ್ದರಿಂದ ಅಕ್ಕಪಕ್ಕದ ಕೊಳೆಗೇರಿಯ ನಿವಾಸಿಗಳು ಈ ಜಾಗೆಯನ್ನು ಶೌಚಕ್ಕೆ ಬಳಸವಂತಾಗಿದೆ.
ಒಟ್ಟಾರೆ, ಈ ಈಜುಕೊಳದ ಜಾಗ ಸಂಪೂರ್ಣ ಪಾಳು ಬಿದ್ದಿದ್ದು, ನಿಷ್ಪ್ರಯೋಜಕವಾಗಿ ಪರಿಣಮಿಸಿದೆ.

ಆವರಣದಲ್ಲಿರುವ ಬೃಹದಾಕಾರದ ಭಾವಿಯಿಂದಲೇ ನೀರನ್ನು ಪಂಪ್ ಮಾಡಿ, ಈಜುಗೊಳಕ್ಕೆ ಬಳಸಲಾಗುತ್ತಿತ್ತಲ್ಲದೆ, ಸುತ್ತಮುತ್ತಲ ಪರಿಸರ ಹಚ್ಚಹಸಿರಿನಿಂದ ಕಂಗೊಳಿಸುವಂತೆ ನೋಡಿಕೊಳ್ಳಲಾಗಿತ್ತು. ನಿರ್ವಹಣೆಯನ್ನು ಗುತ್ತಿಗೆ ಆಧಾರದಲ್ಲಿ ಖಾಸಗಿಯವರಿಗೆ ನೀಡಿ, ಈಜಾಡಲು ಬರುವವರಿಗೆ ಇಂತಿಷ್ಟು ಎಂಬಂತೆ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಆದರೆ, ಕೆಲವೇ ತಿಂಗಳುಗಳ ನಂತರ ನಷ್ಟದ ಹಿನ್ನೆಲೆಯಲ್ಲಿ ಈಜುಕೊಳದ ನಿರ್ವಹಣೆಯ ಹೊಣೆಯಿಂದ ಗುತ್ತಿಗೆದಾರರು ಮುಕ್ತವಾಗಿದ್ದು, ಪಾಲಿಕೆ ಆಡಳಿತವೂ ನಿರ್ಲಕ್ಷ್ಯ ತಾಳಿದ್ದರಿಂದ ನಗರದ ಜನತೆಗೆ ಈಜುಕೊಳದ ಸೌಲಭ್ಯವೇ ಇಲ್ಲದಂತಾಗಿದೆ.

ಬಾಲಕನೊಬ್ಬ ಇಲ್ಲಿ ಈಜಾಡುವಾಗ ನೀರಲ್ಲಿ ಮುಳುಗಿ ಮೃತಪಟ್ಟ ಎಂಬ ಕಾರಣದಿಂದ ಸಾರ್ವಜನಿಕರ ಪ್ರವೇಶವನ್ನು ತಡೆಯಲಾಯಿತಲ್ಲದೆ, ಅಲ್ಲಿಂದ ಮುಂದೆ ಮತ್ತೆ ಇಲ್ಲಿ ಈಜಾಟಕ್ಕೆ ಅವಕಾಶ ನೀಡಲಾಗಿಲ್ಲ ಎಂದು ಸ್ಥಳೀಯ ಯುಕವರು ಹೇಳುತ್ತಾರೆ. ನಗರದ ಪೋಲಾ ಪ್ಯಾರಾಡೈಸ್ ಹೋಟೆಲ್ ಆವರಣ ಹಾಗೂ ಪೊಲೀಸ್ ಜಿಮಖಾನ ಆವರಣದಲ್ಲಿ ಖಾಸಗಿ ಈಜುಕೊಳಗಳಿದ್ದು, ದುಬಾರಿ ದರ ಮತ್ತು ಸದಸ್ಯತ್ವದ ಕಾರಣದಿಂದ ಎಲ್ಲ ವರ್ಗದ ಜನ ಅಲ್ಲಿಗೆ ತೆರಳುವುದು ಅಸಾಧ್ಯ. ಪಾಲಿಕೆ ಒಡೆತನದ ಈಜುಕೊಳವಾದರೆ, ಕಡಿಮೆ ದರದಲ್ಲಿ ಈಜು ಕಲಿಯಬಹುದಾಗಿದೆ. ಅಲ್ಲದೆ, ಬಿಸಿಲು ಕಾಲದಲ್ಲಿ ಎದುರಾಗುವ ತಾಪದಿಂದ ತತ್ತರಿಸಿದಾಗ ವಿಶ್ರಾಂತಿ ಪಡೆಯಬಹುದು ಎಂಬುದು ನಗರದ ಯುವಕರ ಅಭಿಪ್ರಾಯವಾಗಿದೆ.

ಆರು ವರ್ಷಗಳ ಹಿಂದೆ ಟಿಪ್ಪು ಈಜುಕೊಳ ನಿರ್ಮಿಸಿದಾಗ ಬಡ ಯುವಕರ ಕನಸು ನನಸಾಯಿತು ಎಂದೇ ಭಾವಿಸಲಾಗಿತ್ತು. ಆದರೆ, ಕೆಲವು ತಿಂಗಳುಗಳಲ್ಲೇ ಸ್ಥಗಿತಗೊಂಡಿದ್ದರಿಂದ ತೀವ್ರ ನಿರಾಸೆ ಎದುರಾಗಿದೆ. ಬಳ್ಳಾರಿಯ ಯುವಕರು ಮಳೆಗಾಲ ಮತ್ತು ಚಳಿಗಾಲದಲ್ಲಿ ತುಂಬಿ ಹರಿಯುವ ತುಂಗಭದ್ರಾ ಕಾಲುವೆಗಳಲ್ಲಿ ಈಜಾಡುತ್ತಾರಾದರೂ, ಬೇಸಿಗೆ ವೇಳೆಯಲ್ಲಿ ನೀರು ಸ್ಥಗಿತಗೊಳ್ಳುವುದರಿಂದ ಈಜುಕೊಳದ ಅವಶ್ಯಕತೆ ಇದೆ. ಮಹಾನಗರ ಪಾಲಿಕೆಯು ತಕ್ಷಣ ಈಜುಕೊಳ ನವೀಕರಿಸಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಬೇಕು. ಇದರಿಂದ ಕ್ರೀಡಾ ಪ್ರತಿಭೆಗಳಿಗೂ ನೆರವಾಗುವುದು ಎಂದು ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿ ಅಧ್ಯಕ್ಷ ಎಸ್.ಮಂಜುನಾಥ ಕೋರುತ್ತಾರೆ.

ಇದೀಗ ಈ ಜಾಗೆಯಲ್ಲಿ ಜಾಲಿ ಗಿಡಗಳು ಬೆಳೆದಿದ್ದು, ಹಂದಿಗಳ ವಾಸಸ್ಥಾನವಾಗಿದೆ. ಅಕ್ರಮ ಚಟುವಟಿಕೆಯ ತಾಣವಾಗಿ ಬದಲಾಗಿರುವ ಈಜುಕೊಳವನ್ನು ಉದ್ದೇಶಿತ ಬಳಕೆಗೇ ಮೀಸಲಿಡಲು ಪಾಲಿಕೆ, ಜಿಲ್ಲಾಡಳಿತ ಮುಂದಾಗಬೇಕು ಎಂದು ಅವರು ಆಗ್ರಹಿಸುತ್ತಾರೆ. ಈ ಹಿಂದೆ, ಈಜುಕೊಳವನ್ನು ವೈಜ್ಞಾನಿಕವಾಗಿ ನಿರ್ಮಿಸದ ಕಾರಣ ನೀರು ನಿಲ್ಲದೆ ಸಮಸ್ಯೆಯಾಗಿತ್ತು. ಅಲ್ಲದೆ, ನಿರ್ವಹಣೆಯ ಸಮಸ್ಯೆಯೂ ಎದುರಾಗಿತ್ತು. ಆದಷ್ಟು ಬೇಗ ಇದನ್ನು ನವೀಕರಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡುವ ಆಲೋಚನೆ ಇದೆ ಎಂದು ಪೌರಾಯುಕ್ತ ಡಿ.ಎಲ್. ನಾರಾಯಣ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಈಜುಕೊಳದ ನವೀಕರಣಕ್ಕಾಗಿ ರೂ 30 ಲಕ್ಷ ಅನುದಾನ ಒದಗಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಜೆಎಸ್‌ಡಬ್ಲ್ಯೂ ಸ್ಟೀಲ್ಸ್ ಕಂಪೆನಿಯಿಂದಲೂ 20 ಲಕ್ಷ ನೆರವು ಕೋರಲಾಗಿದೆ. ಒಟ್ಟು 50 ಲಕ್ಷ ಅನುದಾನದಲ್ಲಿ ನವೀಕರಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ತಿಳಿಸಿದ್ದಾರೆ.

ಪಕ್ಕದಲ್ಲಿರುವ ಗುಡ್ಡದ ತಪ್ಪಲಲ್ಲಿನ ಕೆರೆಯ ಬಸಿ ನೀರು ಈಜುಕೊಳ ಪ್ರವೇಶಿಸುತ್ತಿದ್ದುದರಿಂದ, ನೀರು ಕಲುಷಿತಗೊಂಡು ಸಮಸ್ಯೆಯಾಗಿತ್ತು. ನೀರನ್ನು ಕಾಲಕಾಲಕ್ಕೆ ಶುದ್ಧೀಕರಿಸುವ ವ್ಯವಸ್ಥೆಯೂ ಇಲ್ಲದ್ದರಿಂದ ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಅಕ್ಕಪಕ್ಕದಲ್ಲಿರುವ ಗಿಡ- ಮರಗಳಿಂದ ಎಲೆಗಳು ಉದುರಿ ಬೀಳುವುದರಿಂದ ನೀರು ಬೇಗನೇ ಕಲುಷಿತಗೊಳ್ಳುತ್ತಿತ್ತು. ಈ ಎಲ್ಲ ಸಮಸ್ಯೆಗಳನ್ನೂ ನಿವಾರಿಸಿ, ವೈಜ್ಞಾನಿಕವಾಗಿ ಈಜುಕೊಳವನ್ನು ಅಭಿವೃದ್ಧಿಪಡಿಸುವ ಆಲೋಚನೆ ಇದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT