ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಳು ಬಿದ್ದ ಪಶು ಚಿಕಿತ್ಸಾ ಕೇಂದ್ರ

Last Updated 21 ಫೆಬ್ರುವರಿ 2011, 8:20 IST
ಅಕ್ಷರ ಗಾತ್ರ

ಅರಸೀಕೆರೆ: ಹೋಬಳಿ ಕೇಂದ್ರವಾದ ತಾಲ್ಲೂಕಿನ ಕಣಕಟ್ಟೆ ಗ್ರಾಮದಲ್ಲಿರುವ ಪಶುಚಿಕಿತ್ಸಾ ಕೇಂದ್ರ ಪಾಳುಬಿದ್ದಿದ್ದು, ಇಲ್ಲಿನ ಕಟ್ಟಡ ಶಿಥಿಲಾವಸ್ಥೆಯಿಂದ ಕೂಡಿದೆ. 1970ರಲ್ಲಿ ಸರ್ಕಾರ ಈ ಗ್ರಾಮದಲ್ಲಿ ಪಶುಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿ, ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಿತು. ಆದರೆ ಈ ಪಶು ಚಿಕಿತ್ಸಾ ಘಟಕದಿಂದ ರೈತರಿಗೆ ಹಾಗೂ ಜಾನುವಾರುಗಳಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ.

ಆಗಿನ ಗ್ರಾಮ ಪಂಚಾಯಿತಿ ಆಡಳಿತ ಈ ಕೇಂದ್ರಕ್ಕೆ ಒಂದು ಸ್ವಂತ ಕಟ್ಟಡ ನಿರ್ಮಿಸಿ ಕೊಟ್ಟಿತ್ತು. ಅದು ಇದುವರೆವಿಗೂ ಸುಣ್ಣ-ಬಣ್ಣ ಕಾಣದೆ ದುಃಸ್ಥಿತಿಯಲ್ಲಿದೆ. 1994ರಲ್ಲಿ ಗ್ರಾಮದ ಮುಖಂಡ ಹಾಗೂ ಸಮಾಜ ಸೇವಕ ದಿವಂಗತ ಕೆ.ಆರ್. ಆನಂತಸುಬ್ಬರಾವ್ ಪ್ರಯತ್ನದಿಂದ ಸರ್ಕಾರದ ಗಮನ ಸೆಳೆದು ಪಶು ಚಿಕಿತ್ಸಾ ಕೇಂದ್ರವನ್ನು ಮೇಲ್ದರ್ಜೆಗೆರಿಸಿತು. ಅಲ್ಲಿಂದ ಇಲ್ಲಿಯವರೆಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೂಕ್ತ ಪಾಲನೆಯಾಗಿಲ್ಲ. ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು, ಶಿಥಿಲಾವಸ್ಥೆ ತಲುಪಿದೆ.

ಕಿಟಿಕಿ, ಬಾಗಿಲು ಗೆದ್ದಲು ತಿಂದು ಹಾಳಾಗಿವೆ. ಯಾವ ಗಳಿಗೆಯಲ್ಲಾದರೂ ಮುರಿದು ಬೀಳಬಹುದು. ವಿಪರ್ಯಾಸ ಎಂದರೆ ಚಿಕಿತ್ಸೆಗೆ ಒಳಪಡಿಸುವ ಕಬ್ಬಿಣದ ಕಂಬಿಗಳ ಸುತ್ತ-ಮುತ್ತ ಗಿಡಗಂಟಿ ಬೆಳೆದು ನಿಂತಿವೆ. ಅಲ್ಲದೆ ಆಸ್ಪತ್ರೆಯ ಮುಂಭಾಗದಲ್ಲಿರುವ ಕಾಂಪೌಂಡ್ ಭದ್ರತೆಯಿಲ್ಲದೆ ಇರುವುದರಿಂದ ರಾತ್ರಿ ವೇಳೆ ಪುಂಡು-ಪೋಕರಿಗಳ ಅನೈತಿಕ ಚಟುವಟಿಕೆ ತಾಣವಾಗಿದೆ.

ಪ್ರಸ್ತುತ ರೈತರು ವ್ಯವಸಾಯ ಚಟುವಟಿಕೆ ಜತೆಗೆ ಹೈನುಗಾರಿಕೆಯನ್ನು ಅಳವಡಿಸಿಕೊಂಡಿದ್ದಾರೆ. ಸಾಕಷ್ಟು ಸ್ವದೇಶಿ ಹಾಗೂ ವಿದೇಶಿ ಹಸುಗಳನ್ನು ಸಾಕಿದ್ದಾರೆ. ಇಲ್ಲಿನ ಜಾನುವಾರುಗಳಿಗೆ ಕಾಲು-ಬಾಯಿಜ್ವರ, ಚಪ್ಪೆರೋಗ ಮುಂತಾದ ಕಾಯಿಲೆಗಳು ಕಾಣಿಸಿಕೊಂಡಾಗ ಪಶು ಚಿಕಿತ್ಸಾಲಯಕ್ಕೆ ಜಾನುವಾರುಗಳನ್ನು ಹೊಡೆದುಕೊಂಡು ಬರಬೇಕು.ಆದರೆ ಪಶುಗಳ ಆರೋಗ್ಯ ಕಾಪಾಡಬೇಕಾದ ಆಸ್ಪತ್ರೆಗೆ ಆನೇಕ ಸಮಸ್ಯೆಗಳು ಕಾಡುತ್ತಿದ್ದು, ಇನ್ನು ಪಶುಗಳ ಆರೋಗ್ಯ ಕಾಪಾಡುವವರು ಯಾರು? ಎಂಬ ಪ್ರಶ್ನೆ ರೈತರನ್ನು ಚಿಂತೆಗೀಡು ಮಾಡಿದೆ.

ಈ ಪಶು ಚಿಕಿತ್ಸಾಲಯಕ್ಕೆ ತುರ್ತಾಗಿ  ಉತ್ತಮ ಸುಸಜ್ಜಿತ ಕಟ್ಟಡ, ಜಾನುವಾರುಗಳ ಚಿಕಿತ್ಸೆಗೆ ಶೆಡ್ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಆಸ್ಪತ್ರೆ ಮುಂಭಾಗ ಸುಭದ್ರ ಕಾಂಪೌಂಡ್ ನಿರ್ಮಾಣವಾಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT