ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಳು ಬಿದ್ದಿರುವ ಬೇವೂರಿನ ಗುಂಪು ಮನೆಗಳು

Last Updated 5 ಏಪ್ರಿಲ್ 2013, 4:54 IST
ಅಕ್ಷರ ಗಾತ್ರ

ಕೂಡ್ಲಿಗಿ: ಸಾರ್ವಜನಿಕರ ಸಹಕಾರವಿಲ್ಲದಿದ್ದಲ್ಲಿ ಸರ್ಕಾರದ ಯೋಜನೆಗಳು ಹೇಗೆ ವಿಫಲಗೊಳ್ಳುತ್ತವೆ ಎಂದು ನೋಡಬೇಕಾದರೆ, ತಾಲ್ಲೂಕಿನ ಗಡಿಗ್ರಾಮ ಬೇವೂರಿನ ಗುಂಪು ಮನೆಗಳನ್ನು ನೋಡಬೇಕು. ಇಲ್ಲಿರುವ ಎಲ್ಲ 50 ಮನೆಗಳೂ ವಾಸಿಸುವವರಿಲ್ಲದೆ ಪಾಳು ಬಿದ್ದಿವೆ. ಕೆಲವು ಶಿಥಿಲಗೊಂಡಿದ್ದು, ಈಗಲೋ ಆಗಲೋ ಎಂಬ ಸ್ಥಿತಿಯಲ್ಲಿವೆ.

ಧೂಪದಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೇವೂರು ಗ್ರಾಮ ತಾಲ್ಲೂಕಿನ ಗಡಿಗ್ರಾಮವಾಗಿದೆ. ಬೇವೂರಿನಾಚೆ ಇರುವುದೇ ಹಗರಿಬೊಮ್ಮನಹಳ್ಳಿ ತಾಲ್ಲೂಕು. ಗ್ರಾಮದ ಹೊರವಲಯದಲ್ಲಿ ಅಂದಾಜು 1 ಕಿ.ಮೀ ದೂರದಲ್ಲಿ 2004ರಲ್ಲಿ ಗುಂಪು ಮನೆಗಳನ್ನು ನಿರ್ಮಿಸಲಾಗಿದೆ. 2001-02ನೇ ಸಾಲಿನಲ್ಲಿ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿಗಳ ನವಗ್ರಾಮ ಯೋಜನೆಯಡಿಯಲ್ಲಿ ಗುಂಪು ಮನೆಗಳ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು. 2004ರಲ್ಲಿ 50 ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಿ ವಾಸಕ್ಕೆ ಸಿದ್ಧಗೊಳಿಸಲಾಯಿತು. ಫಲಾನುಭವಿಗಳನ್ನೂ ಆಯ್ಕೆ ಮಾಡಿ ಮನೆಗಳನ್ನು ಹಂಚಲಾಯಿತಾದರೂ ಫಲಾನುಭವಿಗಳು ಯಾರೂ ಆ ದಿಕ್ಕಿನತ್ತ ನೋಡಲೇ ಇಲ್ಲದ ಕಾರಣ ಮನೆಗಳು ಪಾಳು ಬಿದ್ದವು. ಮನೆಗಳನ್ನು ಹಂಚಿಕೆ ಮಾಡಿದ ಅಧಿಕಾರಿಗಳೂ ಇತ್ತ ತಲೆ ಕೆಡಿಸಿಕೊಳ್ಳದ ಕಾರಣ ಗುಂಪು ಮನೆಗಳೀಗ ಮನೆಯೊಡೆಯನಿದ್ದೂ ಇಲ್ಲದಂತಾಗಿ ಅನಾಥವಾಗಿ ಬಿದ್ದಿವೆ.

ತಲಾ 20ಸಾವಿರ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಮನೆಗಳ ಪ್ರದೇಶ ಸುವ್ಯವಸ್ಥಿತವಾಗಿದೆ. ಕುಡಿಯುವ ನೀರಿಗಾಗಿ ನೀರಿನ ಮಿನಿ ವಾಟರ್ ಟ್ಯಾಂಕ್ ನಿರ್ಮಿಸಲಾಗಿದೆ. ರಸ್ತೆಗಳಿವೆ, ವಿದ್ಯುತ್ ಕಂಬಗಳಿವೆ, ಏನೆಲ್ಲವೂ ಇದೆ. ಆದರೆ ವಾಸಿಸುವರೇ ಇಲ್ಲ. ಈ ಕುರಿತು ಗ್ರಾಮಸ್ಥರನ್ನು ವಿಚಾರಿಸಿದರೆ, `ಊರಿನಿಂದ ದೂರ ಐತಿ ಅನ್ನೋದು ಬಿಟ್ರ ಮನಿಗಳ ಬಗ್ಗೆ ಯಾರದೂ ತಕರಾರಿಲ್ರಿ' ಎಂದು ಗ್ರಾಮದ ಜ್ಯೋತೆಪ್ಪ ಹೇಳುತ್ತಾರೆ.

`ರೋಡ್ ಪಕ್ಕಕ್ಕ ಮನಿಗಳು ಅದಾವ, ಆದ್ರ ದೂರ ಅದಾವ ಅನ್ನೋ ಕಾರ್ಣಕ್ಕ ಯಾರೂ ಅಲ್ಲಿಗೆ ಹೋಗ್ತಾ ಇ್ಲ್ಲಲ, ಹಿಂಗಾಗಿ ಹಾಳು ಬಿದ್ದಾವ್ರಿ” ಎಂದು ಗೋಣೆಪ್ಪ ಹೇಳುತ್ತಾರೆ. `ಯಾರಾರ ಫಲಾನುಭವಿಗಳು ಧೈರ್ಯ ಮಾಡಿ ಮೊದಲು ಅಲ್ಲಿ ಹೋಗಿ ಇರಬೇಕ್ರಿ, ಆವಾಗ ಎಲ್ಲಾರೂ ಹೋಗಿ ಇರ್ತಾರ” ಎಂದು ಚನ್ನವೀರಸ್ವಾಮಿ ಹೇಳುತ್ತಾರೆ.

ಒಟ್ಟಾರೆ ಊರಿನಿಂದ ದೂರವಿದೆ ಎನ್ನುವ ಕಾರಣಕ್ಕಾಗಿಯೇ ಹಂಚಿಕೆಯಾಗಿದ್ದರೂ ಕಳೆದ 8 ವರ್ಷಗಳಿಂದ ಮನೆಗಳು ಪಾಳು ಬಿದ್ದಿವೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿದರೆ, ಫಲಾನುಭವಿಗಳೇ ಬಂದು ವಾಸ ಮಾಡದೇ ಇದ್ದಾಗ ನಾವಾದರೂ ಏನು ಮಾಡಬೇಕು? ಎಂದು ಅಸಹಾಯಕರಾಗಿ ನುಡಿಯುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT