ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಳುಬಿದ್ದಿರುವ ಸ್ಕೌಟ್ಸ್ ಗೈಡ್ಸ್ ಕಟ್ಟಡ

Last Updated 2 ಸೆಪ್ಟೆಂಬರ್ 2013, 8:29 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣದ ರಾಯಬಾಗಿ ಬಡಾವಣೆಯ ಉದ್ಯಾನ ಜಾಗದಲ್ಲಿ ನಿರ್ಮಾಣಗೊಂಡ ಸ್ಕೌಟ್ಸ್ ಮತ್ತು ಗೈಡ್ಸ್‌ನ ಹೊಸ ಕಟ್ಟಡ ಉದ್ಘಾಟನೆಗೊಳ್ಳದೇ ವ್ಯರ್ಥವಾಗಿದೆ. ಶಾಲಾ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಪ್ರಜ್ಞೆ ಶಿಸ್ತು ಬೆಳೆಸುವ ಸಲುವಾಗಿ ಸಂಸ್ಥೆಗೆ ಸರ್ಕಾರ ಅನುದಾನ ನೀಡಿದೆ. ಆದರೆ ಕಟ್ಟಡ ನಿರ್ಮಾಣಗೊಂಡು ಎರಡು ವರ್ಷಗಳಾದರೂ ಬಳಕೆ ಆಗುತ್ತಿಲ್ಲ.

ಕೆ.ವಿರೂಪಾಕ್ಷಪ್ಪ ಅವರು ಸಂಸದರಾಗಿದ್ದಾಗ ರೂ.1.25 ಲಕ್ಷ, ವಿಧಾನಪರಿಷತ್ ಸದಸ್ಯರಾಗಿದ್ದ ಎಚ್.ಆರ್.ಶ್ರೀನಾಥ್ ರೂ 1.06 ಲಕ್ಷ, ಜಿಲ್ಲಾ ಪಂಚಾಯಿತಿಯಿಂದ ರೂ 1.50 ಲಕ್ಷ ಹಾಗೂ ಅಮರೇಗೌಡ ಬಯ್ಯಾಪುರ ಅವರ ಶಾಸಕರ ಅನುದಾನದಲ್ಲಿ ರೂ. 2.50 ಲಕ್ಷ ಹಾಗೂ ಇತರೆ ನೆರವು ಸೇರಿ ಒಟ್ಟು ರೂ 6.70 ಲಕ್ಷ ವೆಚ್ಚದಲ್ಲಿ ಹಂತ ಹಂತವಾಗಿ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪ ವಿಭಾಗ ಕಟ್ಟಡ ನಿರ್ಮಿಸಿದೆ.

ಈ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ದೊರೆತಿಲ್ಲ. ಸಂಸ್ಥೆಯ ಯಾವ ಕಾರ್ಯಕ್ರಮವೂ ಅಲ್ಲಿ ನಡೆದಿಲ್ಲ. ಇದು ಸಂಜೆಯಾಗುತ್ತಿದ್ದಂತೆ  ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಆವರಣದಲ್ಲೆಲ್ಲ ಕುಡಿದು ಬಿಸಾಡಿದ ಮದ್ಯದ ಬಾಟಲಿ, ಪೌಚ್‌ಗಳೇ ಸಿಗುತ್ತವೆ ಎಂದು ಆಸುಪಾಸಿನ ನಿವಾಸಿಗಳು ದೂರುತ್ತಾರೆ.

ಕಳಪೆ ಕಾಮಗಾರಿ: ಕಟ್ಟಡ ಉದ್ಘಾಟನೆಗೆ ಮೊದಲೇ ಗೋಡೆ ಬಿರುಕುಬಿಟ್ಟಿದೆ. ಆವರಣಗೋಡೆ ಬಿದ್ದಿದೆ, ಕಿಟಕಿ ಬಾಗಿಲುಗಳು ಅವ್ಯವಸ್ಥಿತವಾಗಿವೆ. ಕಟ್ಟಡದ ಸುತ್ತಲೂ ಮುಳ್ಳು ಕಂಟಿಗಳು ಬೆಳೆದಿವೆ. ಅಲ್ಲದೇ ಪರಿಸರ ದುರ್ನಾತ ಬೀರುತ್ತಿದೆ.

`ದುರಸ್ತಿ ಮಾಡಿಸಬೇಕಿದೆ'
ಇಲ್ಲಿಯ ಘಟಕಕ್ಕೆ ಹಿಂದೆ ಉತ್ತಮ ಹೆಸರಿದ್ದಾಗ ಕಟ್ಟಡ ನಿರ್ಮಾಣಕ್ಕೆ ಅವಕಾಶ ದೊರೆಯಿತು. ಅಲ್ಲಲ್ಲಿ ಬಿರುಕು ಬಿಟ್ಟಿದ್ದು ಸಣ್ಣಪುಟ್ಟ ದುರಸ್ತಿ ಮಾಡಿಸಬೇಕಿದೆ. ಸ್ವಂತ ಕಟ್ಟಡವನ್ನು ಇನ್ನು ಮುಂದಾದರೂ ಒಳ್ಳೆಯ ಉದ್ದೇಶಕ್ಕೆ ಬಳಸಿಕೊಳ್ಳುವ ಆಶಯ ಹೊಂದಿದ್ದೇವೆ.
-ಈರಣ್ಣ ಪರಸಾಪುರ, ಸಂಸ್ಥೆ ಕಾರ್ಯದರ್ಶಿ

`ರಚನಾತ್ಮಕ ಚಟುವಟಿಕೆಗೆ ಅವಕಾಶ'
ಮಹಾನವಮಿ ದಿನ ಕಟ್ಟಡ ಉದ್ಘಾಟಿಸುತ್ತೇವೆ. ಕಚೇರಿಗೆ ಬೇಕಾದ ಮೂಲ ಸೌಕರ್ಯ ಇಲ್ಲ. ಹಾಗಾಗಿ ಕಟ್ಟಡವನ್ನು ಬಾಡಿಗೆ ಕೊಡುವ ಉದ್ದೇಶವಿದೆ. ರಚನಾತ್ಮಕ ಚಟುಟಿಕೆಗೆ ಅವಕಾಶ ಕಲ್ಪಿಸುತ್ತೇವೆ.
-ಶೇಖರಗೌಡ ಮಾಲಿಪಾಟೀಲ, ಸ್ಕೌಟ್ಸ್ ಮತ್ತು ಗೈಡ್ಸ್ ತಾಲ್ಲೂಕು ಅಧ್ಯಕ್ಷ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT