ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ: ಜೂಜು ದಂಧೆ ನಿರಾತಂಕ

Last Updated 10 ಡಿಸೆಂಬರ್ 2013, 9:08 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನಾದ್ಯಂತ  ಮಟ್ಕಾಕ್ಕೆ ಪರ್ಯಾಯವಾಗಿ ಬಿಲ್ಲೆ ಆಟ, ಇಸ್ಪೀಟು, ಕೋಳಿ ಪಂದ್ಯ ಎಗ್ಗಿಲ್ಲದೆ ನಡೆಯುತ್ತಿವೆ. ಅಧಿಕಾರಿಗಳಿಗೆ ಖಚಿತ ಮಾಹಿತಿ ಇದ್ದರೂ; ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.

ತಾಲ್ಲೂಕಿನ ವೆಂಕಟಾಪುರ, ಕನ್ನಮೇಡಿ, ಹನುಮಯ್ಯನಪಾಳ್ಯ, ಜಾಜೂರಾಯನಹಳ್ಳಿ, ವೀರಮ್ಮನಹಳ್ಳಿ, ಗುಮ್ಮಘಟ್ಟ, ಪಳವಳ್ಳಿ ಸೇರಿದಂತೆ ಪಟ್ಟಣದಾದ್ಯಂತ ಅಹೋರಾತ್ರಿ ಇಸ್ಪೀಟ್‌ ಜೂಜು ನಡೆಯುತ್ತಿದೆ. ಇದಕ್ಕೆ ಕೆಲ ಪೊಲೀಸರು ಹಣ ಪಡೆದು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪವೂ ಇದೆ.

ಪಟ್ಟಣದ ಪೊಲೀಸ್ ಠಾಣೆ ಸಮೀಪ ಅಂಗಡಿಯೊಂದರ ಬಳಿ ಜೂಜು­ಕೋರರು ಸೇರುತ್ತಾರೆ. ಅಲ್ಲಿಂದ ತಾವು ಜೂಜಾಟಕ್ಕೆ ತೆರಳುವ ಸ್ಥಳ ನಿಗದಿಪಡಿಸಿಕೊಂಡು, ಅಂಗಡಿ ಮಾಲೀಕನಿಗೆ ತಿಳಿಸಿ ಹೋಗುತ್ತಾರೆ.

ಪೊಲೀಸ್‌ ಅಧಿಕಾರಿಗಳು ದಾಳಿ ನಡೆಸಲು ಮುಂದಾದರೆ ತಕ್ಷಣವೇ ಕೆಲ ಪೊಲೀಸರೇ ಅಂಗಡಿ ಮಾಲೀಕನಿಗೆ ದಾಳಿ ನಡೆಸುವ ಸೂಚನೆ ನೀಡುತ್ತಾರೆ. ಅಂಗಡಿ ಮಾಲೀಕ ಮೊಬೈಲ್ ಮೂಲಕ  ಜೂಜುಕೋರರಿಗೆ  ಮಾಹಿತಿ ರವಾನಿಸಿ ಅವರನ್ನು ಪಾರು ಮಾಡುತ್ತಾನೆ.

ತಾಲ್ಲೂಕಿನ ಕೃಷ್ಣಗಿರಿ, ವೆಂಕಟಾಪುರ ಗ್ರಾಮಗಳ ಹೊರ ವಲಯದಲ್ಲಿ ದಿನಕ್ಕೆ ಸುಮಾರು ₨ 50 ಲಕ್ಷದವರೆಗೂ ಜೂಜು ನಡೆಯುತ್ತದೆ. ಇಲ್ಲಿಗೆ ಆಂಧ್ರದಿಂದ ಹೆಚ್ಚಿನ ಸಂಖ್ಯೆಯ ಜೂಜುಕೋರರು ಬರುತ್ತಾರೆ. ಆಟವಾಡುವವರಿಗೆ ಸಾಲ ನೀಡಲು ಫೈನಾನ್ಸಿಯರ್‌ಗಳೂ ಸ್ಥಳದಲ್ಲೇ ಇರುತ್ತಾರೆ.

ಸಾವಿರಕ್ಕೆ ನೂರರಿಂದ ಇನ್ನೂರು ರೂಪಾಯಿ ಹಣ ಹಿಡಿದುಕೊಂಡು ಜೂಜುಕೋರರಿಗೆ ನೀಡುತ್ತಾರೆ. ತಿಂಡಿ, ಊಟ, ಮದ್ಯಪಾನ... ಸೇರಿದಂತೆ ಇತರೆ ಸಕಲ ಎಲ್ಲ ವ್ಯವಸ್ಥೆಯನ್ನು ಸ್ಥಳದಲ್ಲೇ ಒದಗಿಸಲಾಗುತ್ತಿದೆ.ಆಟ ಆಡಿಸುವ ವ್ಯಕ್ತಿಗಳು ಪ್ರತಿ ಆಟಕ್ಕೂ ಹಣ ಸಂಗ್ರಹಿಸಿ ಅದನ್ನು ಪೊಲೀಸರಿಗೆ ತಲುಪಿಸುತ್ತಾರೆ.

ಪಟ್ಣದಲ್ಲಿ ಪ್ರತಿ ಸೋಮವಾರ ನಡೆಯುವ ಕುರಿ ಮಾರುಕಟ್ಟೆಯಲ್ಲಿ ಬಿಲ್ಲೆ ಆಟ ನಡೆಯುತ್ತದೆ. ಈ ಬಗ್ಗೆ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ಕೆಲ ದಿನ ಎಎನ್ಎಫ್ ಸಿಬ್ಬಂದಿಯನ್ನು ಮಾರುಕಟ್ಟೆಗೆ ನಿಯೋಜಿಸಿ ಬಿಲ್ಲೆ ಆಟವನ್ನು ನಿಯಂತ್ರಿಸಲಾಗಿತ್ತು. ಆದರೆ ಇದೀಗ ಮತ್ತೆ ಮಾರುಕಟ್ಟೆಯಲ್ಲಿ ಬಿಲ್ಲೆ ಆಟ ನಡೆಯುತ್ತಿದೆ.

ಕಳೆದ ಸೋಮವಾರ ಕುರಿ ಮಾರಿ 15 ಸಾವಿರ ಗಳಿಸಿದ ಬಡ ರೈತ ಹತ್ತೇ ನಿಮಿಷದಲ್ಲಿ ಬಿಲ್ಲೆ ಆಟ ಆಡಿ ಸಂಪೂರ್ಣ ಹಣ ಕಳೆದುಕೊಂಡು ಸಾರ್ವಜನಿಕವಾಗಿ ಗೋಳಾಡಿದ ಘಟನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT