ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ ನಕ್ಸಲ್ ಇತಿಹಾಸಕ್ಕೆ ದಶಕಗಳ ನಂಟು

Last Updated 30 ಅಕ್ಟೋಬರ್ 2011, 10:40 IST
ಅಕ್ಷರ ಗಾತ್ರ

ತುಮಕೂರು: ಪಾವಗಡ ನಕ್ಸಲೀಯ ರಕ್ತಪಾತದ ನಂಟಿಗೆ ದಶಕಗಳ ಇತಿಹಾಸವಿದೆ. ಆಂಧ್ರ ಪ್ರದೇಶದಲ್ಲಿ 1959ರಲ್ಲಿ ನಡೆದ ಕಮ್ಯೂನಿಸ್ಟರ ತೆಲಂಗಾಣ ಚಳವಳಿ ಛಿದ್ರವಾಗಿ ನಕ್ಸಲೀಯ ಚಳವಳಿಯ ಸೆರಗಿನಲ್ಲೇ ಪಾವಗಡದಲ್ಲಿ ನಕ್ಸಲೀ ಯ ಹೆಜ್ಜೆ ಗುರುತುಗಳನ್ನು ಕಾಣಬಹುದಾಗಿದೆ.

1959ರಲ್ಲಿ ಆಂಧ್ರದ ಕಮ್ಯೂನಿಸ್ಟ್ ನಾಯಕ ರಾಮಭಾಸ್ಕರರೆಡ್ಡಿ ಕೊಲೆಯೊಂದಿಗೆ ಪಾವಗಡದ ನೆಲಕ್ಕೆ ತಾಕಿದ ನಕ್ಸಲೀಯರ ಹೆಜ್ಜೆ ಗುರುತು 2005ರಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿ 8 ಜನರನ್ನು ಬಲಿ ತೆಗೆದುಕೊಳ್ಳುವವರೆಗೂ ಕಾಣ ಸಿಗುತ್ತದೆ.

ಅನಂತಪುರದ ಕಮ್ಯೂನಿಸ್ಟ್ ನಾಯಕ ಪರಿಟಾಲ ಶ್ರೀರಾಮಲು ಹಾಗೂ ವೆಟ್ಟಿ ಮುತ್ಯಾಲಪ್ಪ ಇಬ್ಬರು ಸ್ನೇಹಿತರು. ಇಬ್ಬರು ಕೂಡ ಪಾವಗಡ ಗಡಿ ಗ್ರಾಮಗಳಾದ ವೆಂಕಟಾಪುರ ಹಾಗೂ ನರಸನಕೋಟೆಯವರು. ಈ ಸ್ನೇಹವೇ ಪಾವಗಡಕ್ಕೆ ನಕ್ಸಲೀಯರ ನಂಟಿಗೆ ಮೂಲ ಕಾರಣವಾಯಿತು.

ಕೊಂಡಪಲ್ಲಿ ಸೀತರಾಮಯ್ಯ, ಕರಿಮಲ ನಾಗೀರೆಡ್ಡಿ, ರವೂಫ್ ಅವರ ನೆರಳು ಪಾವಗಡದ ಮೇಲಿದೆ. ಆಂಧ್ರದ ಕಮ್ಮಾಸ್, ರೆಡ್ಡಿ ಸಮುದಾಯದ ಒಳಜಗಳದ ಬಲಿಪಶು ಕೂಡ ಪಾವಗಡವೇ ಆಗಿದೆ.

ಆಂಧ್ರಪ್ರದೇಶ- ಪಾವಗಡ ನಡುವೆ ನೆಂಟಸ್ತನ ನಕ್ಸಲೀಯ ಚಳವಳಿಗೆ ದೊಡ್ಡ ಕೊಡುಗೆ ನೀಡಿದೆ.

ಆಂಧ್ರಪ್ರದೇಶದಲ್ಲಿ ನಕ್ಸಲೀಯ ಚಟುವಟಿಕೆಯಲ್ಲಿದ್ದವರು ಪಾವಗಡದ ತಮ್ಮ ನೆಂಟರಿಷ್ಟರ ಮನೆಗೆ ಬಂದು ಆಶ್ರಯ ಪಡೆಯತೊಡಗಿದರು. ಪಾವಗಡವು ಆಂಧ್ರಪ್ರದೇಶವನ್ನು ಸುತ್ತುವರಿದಿದೆ.

 ಪಾವಗಡದ ಕೆಲವು ಬೆಟ್ಟಗಳನ್ನು ಹತ್ತಿ ಇಳಿದರೆ ಸೀದಾ ಆಂಧ್ರಕ್ಕೆ ಹೋಗಿ ಬಿಡಬಹುದು. ಅಲ್ಲದೇ ಬೆಟ್ಟದಲ್ಲಿರುವ ಗುಹೆ, ಗವಿಗಳಲ್ಲಿ ಆಶ್ರಯ ಪಡೆಯಲು ಹೇಳಿ ಮಾಡಿಸಿದಂತೆ ಇದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಯೊಬ್ಬರು.

1993ರಲ್ಲಿ ಹುಟ್ಟಿಕೊಂಡ ಸಿಪಿಐಎಂಎಲ್ ನಕ್ಸಲೀಯ ಸಂಘಟನೆಯು ವೆಟ್ಟಿ ಮುತ್ಯಾಲಪ್ಪ ಅವರಿಗೆ ಕರ್ನಾಟಕದ ಉಸ್ತುವಾರಿ ವಹಿಸಿತು. ಪಾವಗಡದ ಗಡಿಗ್ರಾಮದ ಈತ ಪಾವಗಡವನ್ನೇ ಕಾರ್ಯಕ್ಷೇತ್ರವಾಗಿಸಿಕೊಂಡರು. ಅಲ್ಲಿಂದ ನಕ್ಸಲೀಯರ ಗುಂಪು-ಗುಂಪುಗಳಾಗಿ ಒಡೆಯುತ್ತಾ ಹೋದರೂ ಕೂಡ ತಾಲ್ಲೂಕಿನಲ್ಲಿ ಪ್ರಬಲವಾಗುತ್ತಲೇ ಹೋದರು. ಅದರೊಂದಿಗೆ ಸ್ಥಳೀಯ ರಾಜಕಾರಣ ಬೆರತು ತಾಲ್ಲೂಕಿನಲ್ಲಿ ರಕ್ತವು ಚೆಲ್ಲತೊಡಗಿತು.

ವೆಟ್ಟಿ ಮುತ್ಯಾಲಪ್ಪ, ಕೊಂಡಪಲ್ಲಿ ಸೀತರಾಮಯ್ಯ, ಮುತ್ಯಾಲ ಗಣಪತಿರಾವ್, ಕೊಂಡಪಲ್ಲಿ ಶ್ರೀರಾಮಲು, ಕಿರಣ್, ಚಮನ್ ಹೀಗೆ ಅನೇಕ ಅಗ್ರ ನಕ್ಸಲ್ ನಾಯಕರು ಪಾವಗಡದೊಂದಿಗೆ ಸಂಬಂಧ ಹೊಂದಿದ್ದರು. ಒಂದು ಕಾಲದಲ್ಲಿ ಪಾವಗಡಲ್ಲಿ ನಕ್ಸಲೀಯರು ಪರ್ಯಾಯ ಸರ್ಕಾರದಂತೆ ಇದ್ದರು.

ಪ್ರಜಾ ಕೋರ್ಟ್‌ಗಳು ನಡೆಯುತ್ತಿದ್ದವು. ಬಾಂಬ್‌ಗಳನ್ನು ತರಕಾರಿಯಂತೆ ಹಿಡಿದು ಸಾಗುತ್ತಿದ್ದರು. ತಾಲ್ಲೂಕಿನಲ್ಲಿ ನೂರಕ್ಕೂ ಹೆಚ್ಚು ಜನರು ನಕ್ಸಲೀಯ ಸಂಘಟನೆಗಳಿಗೆ ಸೇರಿದ್ದರು. 150 ಸಂಘಟನೆಗಳಿದ್ದವು ಎಂದು ಪೊಲೀಸ್ ಮೂಲಗಳು ಹೇಳುತ್ತವೆ.

ಹೊಸದುರ್ಗದ ರಾಮಕೃಷ್ಣ ನಾಯಕ, ಸೂಲನಾಯಕನಹಳ್ಳಿಯ ವೆಂಕಟೇಶ ನಾಯಕ, ಜೂಲಪ್ಪಯ್ಯನಪಾಳ್ಯದ ಹನುಮಂತಪ್ಪ ನಕ್ಸಲೀಯರಿಗೆ ಬಲಿಯಾದವರು.

ನಕ್ಸಲ್ ಮುಖಂಡ ನರಸಿಂಹರೆಡ್ಡಿ ಎನ್‌ಕೌಂಟರ್‌ಗೆ ಬಲಿಯಾಗಿದ್ದು ಕೂಡ ಪಾವಗಡದ ಯರಂನಹಳ್ಳಿಯಲ್ಲಿ. ನಕ್ಸಲ್ ಸಂಘಟನೆಯ ಕೇಂದ್ರ ಮಟ್ಟದ ನಾಯಕರಾಗಿ ಬೆಳೆದು ಆಂಧ್ರ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ ನಾಗೇನಹಳ್ಳಿ ತಾಂಡದ ವೆಂಕಟೇಶನಾಯಕ, ಕ್ಯಾತನಗೆರೆಯ ಗೋವಿಂದನಾಯಕ, ವಳ್ಳೂರು ಹರಿಭೂಷಣ್, ವೆಂಕಟಮ್ಮನಹಳ್ಳಿಯ ಚಂದ್ರಕಲಾ ಪಾವಗಡವರು.

ಆಂಧ್ರದಲ್ಲಿ ನಕ್ಸಲೀಯ ಚಳವಳಿ ಕುಗ್ಗುತ್ತಾ ಬಂದಂತೆ ಪಾವಗಡದಲ್ಲೂ ನಕ್ಸಲ್ ಚಳವಳಿ ತಗ್ಗಿತು. ಇದೇ ವೇಳೆ ಪಾವಗಡದಲ್ಲಿ ಪೊಲೀಸರು ಕೂಂಬಿಂಗ್ ನಡೆಸುತ್ತ ನಕ್ಸಲರನ್ನು ಮಟ್ಟಹಾಕುವಲ್ಲಿ ಯಶಸ್ವಿಯಾದರು.

2003ರಲ್ಲಿ ನಕ್ಸಲೀಯರ ರಾಪ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮಾರೆಡ್ಡಿ ಕತ್ತುಕತ್ತರಿಸಿ ಕೊಲೆ ಮಾಡಿದ್ದು ಬಿಟ್ಟರೆ ದೊಡ್ಡಮಟ್ಟದ ಕೊಲೆಪಾತ ನಡೆದಿದ್ದು ವೆಂಕಟಮ್ಮನಹಳ್ಳಿಯಲ್ಲಿ. ಈ ಘಟನೆ ನಂತರ ತಾಲ್ಲೂಕಿನಲ್ಲಿ ನಕ್ಸಲ್ ಚಳವಳಿ ಕ್ಷೀಣವಾಗಿದೆ.

ಹೈಕೋರ್ಟ್‌ಗೆ ಮೇಲ್ಮನವಿ
ಕೋರ್ಟು ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಸರ್ಕಾರಿ ವಕೀಲ ಬಿಕ್ಕಣ್ಣನವರ್ ತಿಳಿಸಿದರು.

ತೀರ್ಪು 262 ಪುಟಗಳಿಷ್ಟಿದೆ. ಅದನ್ನು ಓದಿನ ಬಳಿಕ ಕಾನೂನು ಸಲಹೆ ಪಡೆದು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT