ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವತಿಯಾಗದ ಕಬ್ಬಿನ ಬಿಲ್

ರೂ 89.96 ಕೋಟಿ ರೂಪಾಯಿ ಬಾಕಿ; ಸಂಕಷ್ಟದಲ್ಲಿ ರೈತರು
Last Updated 2 ಜೂನ್ 2013, 20:09 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಏಳೂ ತಾಲ್ಲೂಕುಗಳು ಬರಪೀಡಿತವಾಗಿವೆ. ಕೆಆರ್‌ಎಸ್ ಅಣೆಕಟ್ಟೆ ಬರಿದಾಗಿರುವುದರಿಂದ ಬೆಳೆ ಇಲ್ಲದಂತಾಗಿದೆ. ಈ ನಡುವೆ ಪೂರೈಕೆ ಮಾಡಿರುವ ಕಬ್ಬಿನ ಬಿಲ್ ಸಹ ಪಾವತಿಯಾಗದೆ ಇರುವುದರಿಂದ ಸಾವಿರಾರು ರೈತ ಕುಟುಂಬಗಳು ಕಂಗಾಲಾಗಿವೆ.

ಜಿಲ್ಲೆಯಲ್ಲಿ ಐದು ಸಕ್ಕರೆ ಕಾರ್ಖಾನೆಗಳಿವೆ. ಆ ಪೈಕಿ ನಾಲ್ಕು ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾಗಿದ್ದ 89.96 ಕೋಟಿ ರೂಪಾಯಿಯಷ್ಟು ಕಬ್ಬಿನ ಬಿಲ್ ಅನ್ನು ನಾಲ್ಕಾರು ತಿಂಗಳಿನಿಂದ ಬಾಕಿ ಉಳಿಸಿಕೊಂಡಿವೆ. ಪರಿಣಾಮ ರೈತರ ಕುಟುಂಬಗಳು ಸಂಕಷ್ಟದ ಸುಳಿಗೆ ಸಿಲುಕಿವೆ.

ರಾಜ್ಯ ಸರ್ಕಾರ ಒಡೆತನದಲ್ಲಿರುವ ಮೈಷುಗರ್ ಕಾರ್ಖಾನೆಯು ರೂ10 ಕೋಟಿ, ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯು ರೂ3.7 ಕೋಟಿ, ಎನ್‌ಎಸ್‌ಲ್ ಕೊಪ್ಪ ಕಾರ್ಖಾನೆಯು 30 ಕೋಟಿ ಹಾಗೂ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯು ರೂ 46.26 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿವೆ. ಕೋರಮಂಡಲ ಸಕ್ಕರೆ ಕಾರ್ಖಾನೆ ಮಾತ್ರ ಬಿಲ್ ಅನ್ನು ಸಂಪೂರ್ಣವಾಗಿ ಪಾವತಿಸಿದೆ.

ನೀರಿನ ಕೊರತೆ
ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಕೊರತೆ ಉಂಟಾಗಿದ್ದರಿಂದ ಜನವರಿ ಅಂತ್ಯದ ವೇಳೆಗೆ ಕಬ್ಬಿನ ಬೆಳೆ ಒಣಗಲಾರಂಭಿಸಿತ್ತು. ಹಾಗಾಗಿ ರೈತರು ಫೆಬ್ರುವರಿ ಮಧ್ಯದ ವೇಳೆಗೆ ಕಬ್ಬನ್ನು ಕಾರ್ಖಾನೆಗಳಿಗೆ ಪೂರೈಸಿದ್ದಾರೆ. ಮೇ ಅಂತ್ಯಗೊಂಡರೂ ಸಾವಿರಾರು ರೈತರಿಗೆ ಇಂದಿಗೂ ಬಿಲ್ ಪಾವತಿಯಾಗಿಲ್ಲ.

ಕಬ್ಬು ಪೂರೈಸಿದ ಹದಿನೈದು ದಿನಗಳ ಒಳಗೆ ರೈತರಿಗೆ ಕಬ್ಬಿನ ಬಿಲ್ ಅನ್ನು ಕಾರ್ಖಾನೆಗಳು ಪಾವತಿಸಬೇಕು ಎಂದು ಕಾಯ್ದೆ ಹೇಳುತ್ತದೆ. ತಪ್ಪಿದರೆ ಶೇ 14ರ ಬಡ್ಡಿ ದರ ಹಾಕಿ ಹಣವನ್ನು ಪಾವತಿಸಬೇಕು ಎಂದಿದೆ. ಆದರೆ ಇಲ್ಲಿ ಬಡ್ಡಿಯಲ್ಲ, ಅಸಲೇ ಲಭಿಸುತ್ತಿಲ್ಲ ಎಂದು ದೂರುತ್ತಾರೆ ರೈತರು.

ಅಣೆಕಟ್ಟೆಯಲ್ಲಿ ನೀರಿನ ಕೊರತೆಯುಂಟಾಗಿದ್ದರಿಂದ ಕೆಲವು ಕಡೆಗಳಲ್ಲಿ ಕಬ್ಬಿನ ಬೆಳೆ ಒಣಗಿ ಹೋಯಿತು. ಉಳಿದವರು ಕಾರ್ಖಾನೆಗೆ ಪೂರೈಸಿದರು. ಈಗಲೂ ಅಣೆಕಟ್ಟೆ ಬರಿದಾಗಿಯೇ ಇದೆ. ಮಳೆ ಬಂದು ತುಂಬಿ, ಕಬ್ಬಿನ ನಾಟಿ ಮಾಡಿದರೆ ಬೆಳೆ ಬರಲು 12ರಿಂದ 14 ತಿಂಗಳುಗಳವರೆಗೆ ಕಾಯಬೇಕು. ಅಲ್ಲಿಯವರೆಗೆ ಕಬ್ಬಿನ ಬಿಲ್ ಮೇಲೆಯೇ ಜೀವನ ಸಾಗಬೇಕು. ಆದರೆ ಹತ್ತಾರು ಬಾರಿ ಅಲೆದಾಡಿದರೂ ಬಿಲ್ ಹಣ ನೀಡುತ್ತಿಲ್ಲ ಎನ್ನುತ್ತಾರೆ ರೈತ ಯೋಗೇಶ್.

ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯವರು ಬಿಲ್ ಪಾವತಿಸುತ್ತಿಲ್ಲ ಎಂದು ಇತ್ತೀಚೆಗೆ ಭಾರತೀನಗರ ಭಾಗದ ರೈತರು ಬೆಂಗಳೂರಿನಲ್ಲಿರುವ ಕಾರ್ಖಾನೆಯ ಮುಖ್ಯ ಕಚೇರಿ ಮುಂದೆಯೇ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಜಿಲ್ಲಾಡಳಿತ ಮೌನ
ಕಬ್ಬಿನ ಬಿಲ್ ಅನ್ನು ಕಾರ್ಖಾನೆಗಳು ಪಾವತಿಸುತ್ತಿಲ್ಲ ಎಂದು ರೈತರು ಪ್ರತಿಭಟಿಸಿ ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ. ಈ ಬಗೆಗೆ ರೈತರ ಹಾಗೂ ಕಾರ್ಖಾನೆಯವರ ಸಭೆ ಕರೆದು, ಪರಿಹಾರ ಒದಗಿಸಬೇಕಿದ್ದ ಜಿಲ್ಲಾಡಳಿತ ಮೌನವಾಗಿದೆ.

ಸರಿಯಾಗಿ ಮಳೆಯಾಗದ್ದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗೆ ಹಣ ಬೇಕಾಗುತ್ತದೆ. ಸಾಲರಹಿತ ಜೀವನ ಸಾಗಿಸಲು ಕೂಡಲೇ ಬಿಲ್ ಕೊಡಬೇಕು. ರಾಜ್ಯ ಸರ್ಕಾರವು ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಮೈಷುಗರ್ ಕಾರ್ಖಾನೆಯ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್. ಕೃಷ್ಣ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT