ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಿತ್ರ್ಯ: ಲೈಂಗಿಕತೆಗಷ್ಟೇ ಸೀಮಿತವೇ?

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಇಬ್ಬರು ಸಚಿವರು ವಿಧಾನ ಸಭೆಯ ಕಲಾಪಗಳು ನಡೆಯುತ್ತಿರುವಾಗಲೇ ತಮ್ಮ ಮೊಬೈಲ್ ಫೋನ್‌ನಲ್ಲಿ ನೀಲಿ ಚಿತ್ರ ವೀಕ್ಷಿಸುತ್ತಿದ್ದರು. ಇದನ್ನು ಟೀವಿ ಕ್ಯಾಮರಾಗಳು ಸೆರೆ ಹಿಡಿದು ನೀಲಿ ಚಿತ್ರವನ್ನೂ ಅದನ್ನು ವೀಕ್ಷಿಸುತ್ತಿದ್ದ ಸಚಿವ ದ್ವಯರನ್ನೂ ಇಡೀ ವಿಶ್ವಕ್ಕೆ ಪರಿಚಯಿಸಿದವು. ಇದರ ಹಿಂದೆಯೇ ಉಳಿದೆಲ್ಲಾ ಮಾಧ್ಯಮಗಳಲ್ಲೂ ಸಚಿವರ ನೀಲಿ ಚಿತ್ರ ವೀಕ್ಷಣೆ `ವಿವಾದ~ವಾಗಿ ಬಿತ್ತರಗೊಂಡಿತು. ಆಮೇಲಿನದ್ದೂ ನಿರೀಕ್ಷಿತ ಬೆಳವಣಿಗೆ.

ಸದನದಲ್ಲಿ ನೀಲಿ ಚಿತ್ರ ನೋಡಿಯೂ ಸಿಕ್ಕಿ ಬೀಳದೇ ಇದ್ದವರದ್ದೂ ಸೇರಿದಂತೆ ಎಲ್ಲರ ನೈತಿಕ ಪ್ರಜ್ಞೆಯೂ ಜಾಗೃತಗೊಂಡಿತು. ಎಲ್ಲೆಡೆ ಈಗ ಒಂದೇ ಮಾತು- `ಸದನದ ಪಾವಿತ್ರ್ಯಕ್ಕೆ ಧಕ್ಕೆಯಾಯಿತು~.

ಇಲ್ಲಿ ಸದನದ ಪಾವಿತ್ರ್ಯಕ್ಕೆ ಧಕ್ಕೆಯಾದದ್ದು ಯಾವುದರಿಂದ?
ಸಚಿವರು ಮೊಬೈಲ್‌ನಲ್ಲಿ ನೀಲಿ ಚಿತ್ರದ ಬದಲಿಗೆ ಬೇರಾನಾದರೂ ಅಂದರೆ ಒಂದು ಭಕ್ತಿ ಪ್ರಧಾನ ಚಲನ ಚಿತ್ರದ ತುಣುಕು ನೋಡಿದ್ದರೆ, ಟೀವಿ ಕ್ಯಾಮೆರಾಗಳ ದೃಷ್ಟಿಗೆ ಸಿಗದಷ್ಟು ಸಣ್ಣದಾಗಿರುವ ಅಕ್ಷರಗಳಲ್ಲಿರುವ `ಶೃಂಗಾರ ಸಾಹಿತ್ಯ~ವನ್ನು ಓದಿದ್ದರೆ ಸದನದ ಪಾವಿತ್ರ್ಯ ಸುರಕ್ಷಿತವಾಗಿರುತ್ತಿತ್ತೇ? ಅಥವಾ ಕಾದಂಬರಿಯೊಂದನ್ನು ತಂದು ಓದುತ್ತಿದ್ದರೆ ಸದನದ ಗಾಂಭೀರ್ಯಕ್ಕೆ ಸೂಕ್ತವಾಗಿರುತ್ತಿತ್ತೇ?

ಈ ಪ್ರಶ್ನೆಗಳನ್ನು ಕೇಳಬೇಕಾಗಿರುವುದು ಈಗಿನ ಚರ್ಚೆ ಕೇವಲ `ನೀಲಿ ಚಿತ್ರ~ ವೀಕ್ಷಣೆಗೆ ಸೀಮಿತವಾಗಿರುವುದಕ್ಕಾಗಿಯಷ್ಟೇ ಅಲ್ಲ. ಪ್ರಜಾಪ್ರಭುತ್ವದ ಸಂದರ್ಭಕ್ಕೆ ಅಗತ್ಯವಾಗಿರುವ ನೈತಿಕತೆಯ ಪರಿಕಲ್ಪನೆಯೊಂದು ನಮಗೆ ಇಲ್ಲವಾಗಿರುವ ಕಾರಣಕ್ಕಾಗಿಯೂ ಈ ಪ್ರಶ್ನೆಗಳನ್ನು ಕೇಳಲೇಬೇಕಾಗಿದೆ.

ಸದನದೊಳಗಿನ ವರ್ತನೆ ಕೇವಲ `ಸದಾಚಾರ~ಗಳ ವಿಷಯವಷ್ಟೇ ಅಲ್ಲ. ಅದು ಜವಾಬ್ದಾರಿಯ ಪ್ರಶ್ನೆ. ಈಗಿರುವ ನಿಯಮಗಳಂತೆ ಸಭಾಧ್ಯಕ್ಷರ ಅನುಮತಿ ಪಡೆಯದೆ ಸದನದೊಳಕ್ಕೆ ಒಂದು ವರ್ತಮಾನ ಪತ್ರಿಕೆಯನ್ನು ಕೊಂಡೊಯ್ಯುವುದೂ ಅಪರಾಧ. ಮೊಬೈಲ್ ಫೋನ್‌ನಲ್ಲಿ ವಿಡಿಯೋ ನೋಡುವುದಿರಲಿ ಮೊಬೈಲ್ ಫೋನ್ ಅನ್ನು ಸಭಾಂಗಣದೊಳಕ್ಕೆ ಕೊಂಡೊಯ್ಯುವುದೇ ತಪ್ಪು. ಕೇವಲ ತಾಂತ್ರಿಕವಾಗಿ ಈ ವಿವಾದವನ್ನು ವಿಶ್ಲೇಷಿಸಿದರೂ ಸಚಿವರು ಮಾಡಿರುವ ತಪ್ಪು ಕೇವಲ `ನೀಲಿ ಚಿತ್ರ~ ವೀಕ್ಷಣೆಯಷ್ಟೇ ಅಲ್ಲ.

ಪ್ರಸ್ತುತ ಈ ವಿವಾದಕ್ಕೆ ಸಂಬಂಧಿಸಿದಂತೆ ಸಭಾಧ್ಯಕ್ಷರು ತನಿಖೆಯೊಂದಕ್ಕೆ ಆದೇಶಿಸಿದ್ದಾರೆ. ಅದರ ಹಿಂದೆಯೇ ಈಗಾಗಲೇ ಅಧಿಕಾರ ಕಳೆದುಕೊಂಡಿರುವ ಸಚಿವರ ಬೆಂಬಲಿಗರ ಮಾತುಗಳೂ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳತೊಡಗಿದೆ. ಅವರು ಹೇಳುತ್ತಿರುವಂತೆ ನೀಲಿ ಚಿತ್ರ ವೀಕ್ಷಣೆಯ ಆರೋಪಕ್ಕೆ ಗುರಿಯಾಗಿರುವ ಸಚಿವರು ಆಡಳಿತಾರೂಢ ಪಕ್ಷದ ನಿರ್ದಿಷ್ಟ ಗುಂಪೊಂದರ ಜೊತೆಗೆ ಗುರುತಿಸಿಕೊಂಡವರು.

ಅವರನ್ನು ಮಟ್ಟ ಹಾಕಬೇಕೆಂದು ಇಡೀ ವಿವಾದವನ್ನು ಸೃಷ್ಟಿಸಲಾಗಿದೆ. ಸಚಿವರು ನೀಲಿ ಚಿತ್ರ ವೀಕ್ಷಿಸಿ ಮಾಧ್ಯಮಗಳ ಕೈಗೆ ಸಿಕ್ಕಿಬೀಳುವಂತೆ ಷಡ್ಯಂತ್ರ ರೂಪಿಸಲಾಗಿದೆ. ಈ ವಾದವನ್ನು ಮಂಡಿಸುತ್ತಿರುವವರ ಪ್ರಕಾರ ಸಚಿವರ ಕೈಗೆ ನೀಲಿ ಚಿತ್ರದ ಮೊಬೈಲ್ ತಲುಪುವುದಕ್ಕಿಂತ ಮೊದಲು ಅದನ್ನು ಕನಿಷ್ಠ ಹತ್ತು ಹನ್ನೆರಡು ಮಂದಿ ಸದನದೊಳಗೆಯೇ ವೀಕ್ಷಿಸಿದ್ದಾರೆ. ಅಂದರೆ ಸದನದೊಳಗೆ ನೀಲಿ ಚಿತ್ರ ವೀಕ್ಷಿಸಿದವರು ಕೇವಲ ಇಬ್ಬರು ಸಚಿವರು ಮಾತ್ರ ಅಲ್ಲ!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಸಭೆಯಲ್ಲಿ ಚರ್ಚೆ ನಡೆಯಬೇಕೆಂದು ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ `ವಿಧಾನ ಸಭೆಯೆಂದರೆ ಈ ಸಚಿವರೇನು ಖಾಸಗಿ ಕ್ಲಬ್ ಎಂದು ತಿಳಿದುಕೊಂಡಿದ್ದಾರೆಯೇ?~ ಎಂಬ ಪ್ರಶ್ನೆಯೊಂದನ್ನು ಎತ್ತಿದರು. ಬಹುಶಃ ಸಿದ್ಧರಾಮಯ್ಯನವರು ಬಳಸಿದ `ಖಾಸಗಿ ಕ್ಲಬ್~ ಎಂಬ ಪದ ಪ್ರಯೋಗವೇ ಸದ್ಯದ ವಿವಾದದ ಹಿಂದಿನ ಮೂಲ ಕಾರಣಗಳನ್ನು ಸರಿಯಾಗಿ ವಿವರಿಸುತ್ತದೆ ಎನಿಸುತ್ತದೆ.

ಪ್ರಜಾಪ್ರಭುತ್ವಕ್ಕೂ ಊಳಿಗಮಾನ್ಯ ವ್ಯವಸ್ಥೆಗೂ ವ್ಯತ್ಯಾಸವನ್ನು ಕಲ್ಪಿಸುವ ಮುಖ್ಯ ಅಂಶಗಳಲ್ಲಿ ಒಂದು ಸಾರ್ವಜನಿಕ ಮತ್ತು ಖಾಸಗಿ ಎಂಬ ಪರಿಕಲ್ಪನೆಗಳು. ಊಳಿಗಮಾನ್ಯ ವ್ಯವಸ್ಥೆಯಲ್ಲಿ ಈ ವ್ಯತ್ಯಾಸಗಳಿಲ್ಲ. ಅಧಿಕಾರದಂಡವನ್ನು ಹಿಡಿದುಕೊಂಡಿರುವವನ ಮರ್ಜಿಗೆ ತಕ್ಕಂತೆ ಸಾರ್ವಜನಿಕತೆ ಮತ್ತು ಖಾಸಗೀತನಗಳ ವ್ಯಾಖ್ಯಾನ ನಡೆಯುತ್ತದೆ.

ಪ್ರಜಾಪ್ರಭುತ್ವದಲ್ಲಿ ಈ ಎರಡರ ನಡುವೆ ಒಂದು ಸ್ಪಷ್ಟವಾದ ಗಡಿರೇಖೆಯಿದೆ. ಈ ಗಡಿರೇಖೆಯನ್ನು ತೆಳ್ಳಗಾಗಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಊಳಿಗಮಾನ್ಯ ಪ್ರಭುತ್ವವೊಂದನ್ನು ಸ್ಥಾಪಿಸುವ ಪ್ರಯತ್ನವೊಂದನ್ನು ಎಲ್ಲ ರಾಜಕೀಯ ಪಕ್ಷಗಳೂ ಒಟ್ಟಾಗಿ ಸೇರಿಯೇ ಚಾಲನೆಯಲ್ಲಿಟ್ಟಿವೆ. ಈಗಿನ ವಿವಾದವನ್ನು `ನೀಲಿ ಚಿತ್ರ ವೀಕ್ಷಣೆ~ಯ ವಿವಾದವನ್ನಷ್ಟೇ ಆಗಿಸುತ್ತಿರುವುದರ ಹಿಂದಿರುವುದೂ ಅಂಥದ್ದೊಂದು ಪ್ರಯತ್ನವೇ.

ನಮ್ಮ ಮಧ್ಯಮ ವರ್ಗದ `ನೈತಿಕ ಪ್ರಜ್ಞೆ~ಯನ್ನು ರಾಜಕೀಯ ಪಕ್ಷಗಳಷ್ಟು ಚೆನ್ನಾಗಿ ಅರಿತವರು ಬೇರಾರೂ ಇಲ್ಲವೇನೋ? ಲಿಂಗ ಸಮಾನತೆಯನ್ನು ಕಡೆಗಣಿಸುವಂಥ `ಲೈಂಗಿಕ ಸಂಹಿತೆ~ಗಳ `ನೈತಿಕತೆ~ಯೊಂದನ್ನು ಬಿಜೆಪಿ ಸದಾ ಪ್ರತಿಪಾದಿಸುತ್ತಾ ಬಂದಿದೆ.
 
ಇದಕ್ಕೆ ಭಾರತೀಯ ಸಂಸ್ಕೃತಿಯನ್ನು ಕಾಪಾಡುವುದು, ಹಿಂದೂ ಧರ್ಮ ರಕ್ಷಣೆ ಮುಂತಾದ ಪದ ಪುಂಜಗಳನ್ನು ಅದು ಧಾರಾಳವಾಗಿ ಬಳಸುತ್ತಾ ಬಂದಿದೆ. ಮೊನ್ನೆ ಕರ್ನಾಟಕ ವಿಧಾನಸಭೆಯಲ್ಲಿ ನೀಲಿ ಚಿತ್ರ ವೀಕ್ಷಿಸುತ್ತಿದ್ದವರಲ್ಲಿ ಒಬ್ಬರಾದ ಸಿ.ಸಿ. ಪಾಟೀಲ್ ಕೂಡಾ ಕೆಲ ದಿನಗಳ ಹಿಂದಷ್ಟೇ ಮಹಿಳೆಯರು ತೊಡುವ ಉಡುಪಿನ ಪ್ರಮಾಣಕ್ಕೂ ಅವರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಕ್ಕೂ ಇರುವ ಸಂಬಂಧವನ್ನು ಸಂಶೋಧಿಸಿ ಮಂಡಿಸಿದ್ದರು.
ಮಹಿಳೆಯರು ತಮ್ಮ ಮೈಯನ್ನು ಹೆಚ್ಚು ಮುಚ್ಚಿಕೊಂಡಷ್ಟೂ ಒಳ್ಳೆಯದು ಎಂಬುದು ಅವರ ಸೂಚನೆಯಾಗಿತ್ತು. ಸದನದಲ್ಲಿ ನೀಲಿಚಿತ್ರ ವೀಕ್ಷಣೆಗೂ ಅವರು ಇದೇ ಕಾರಣವನ್ನು ಕೊಡದೇ ಇದ್ದದ್ದು ನಮ್ಮ ಪುಣ್ಯ!

ಬಲಪಂಥೀಯ ಪಕ್ಷಗಳು ಹೀಗೆ ಮಾಡುವುದು ಹೊಸದೇನೂ ಅಲ್ಲ. ಬಿಜೆಪಿ ತಾತ್ವಿಕತೆಯನ್ನೇ ಇಸ್ಲಾಮಿನ ಸಂದರ್ಭದಲ್ಲಿ ಪ್ರತಿಪಾದಿಸುವ ಪಕ್ಷ ಇಂಡೋನೇಷಿಯಾದ ಪ್ರಾಸ್ಪರಸ್ ಜಸ್ಟೀಸ್ ಪಾರ್ಟಿ.
 
ಇದು ಒಂದು ಪಕ್ಷವಾಗಿ `ಲೈಂಗಿಕವಾಗಿ ಪ್ರಚೋದನಕಾರಿ~ಯಾದ ಎಲ್ಲವನ್ನೂ ವಿರೋಧಿಸುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಕಾನೂನೊಂದನ್ನು ರೂಪಿಸುವಂತೆ ಪ್ರತಿಪಾದಿಸುತ್ತಿದ್ದ ಈ ಪಕ್ಷದ ಸಂಸದ ಆರಿಫಿಂಟೋ ಕೂಡಾ ಸಂಸತ್ತಿನೊಳಗೆ `ನೀಲಿ ಚಿತ್ರ~ ವೀಕ್ಷಿಸುವಾಗ ಸಿಕ್ಕಿಬಿದ್ದು ಸಂಸತ್ ಸದಸ್ಯತ್ವವನ್ನೇ ಕಳೆದುಕೊಳ್ಳಬೇಕಾಯಿತು.

ಒಂದು ವೇಳೆ, ಲೈಂಗಿಕ ಮುಕ್ತತೆ ಇರುವ ಪಾಶ್ಚಾತ್ಯ ದೇಶಗಳ ಸಂಸದನೊಬ್ಬ ಹೀಗೆ ವರ್ತಿಸಿದ್ದರೆ ಆತ ಇನ್ನೂ ಗಂಭೀರವಾದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತಿತ್ತೇನೋ? ಅದಕ್ಕೆ ಕಾರಣವಾಗುತ್ತಿದ್ದದ್ದು ನೀಲಿ ಚಿತ್ರವಷ್ಟೇ ಆಗಿರುತ್ತಿರಲಿಲ್ಲ. ಆತ ಸಂಸದೀಯ ವ್ಯವಸ್ಥೆಗೆ ಮಾಡಿದ ಅವಮಾನಕ್ಕಾಗಿ ಶಿಕ್ಷೆ ಅನುಭವಿಸಬೇಕಾಗುತ್ತಿತ್ತು.

ಇಡೀ ಪ್ರಕರಣವನ್ನು ನೀಲಿ ಚಿತ್ರ ವೀಕ್ಷಣೆಗೆ ಸೀಮಿತಗೊಳಿಸುತ್ತಿರುವುದು ಕೇವಲ ಆಡಳಿತಾರೂಢ ರಾಜಕಾರಣಿಗಳಷ್ಟೇ ಅಲ್ಲ ಎಂಬುದನ್ನು ಗಮನಿಸಬೇಕು. ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ಗೆ ಕೂಡಾ ಈ ಪ್ರಕರಣಕ್ಕಿರುವ ಲೈಂಗಿಕ ಆಯಾಮವನ್ನು ಉಳಿಸಿಕೊಳ್ಳುವುದೇ ಮುಖ್ಯವಾಗಿಬಿಟ್ಟಿದೆ. ಏಕೆಂದರೆ ಸಂಸದೀಯ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಕೂಡಾ ಸಾಕಷ್ಟು ಬಾರಿ ಮಾಡಿದೆ.

ವಿರೋಧ ಪಕ್ಷದ ನಾಯಕರಾಗಿರುವ ಸಿದ್ಧರಾಮಯ್ಯ ಸದನದೊಳಗೆ ಮಾರ್ಷಲ್‌ಗೆ ಹೊಡೆದಾಗ ಸದನದ ಗೌರವ ಆಕಾಶದೆತ್ತರಕ್ಕೇನೂ ಏರಿರಲಿಲ್ಲವಲ್ಲ. ನೀಲಿ ಚಿತ್ರ ವಿವಾದಕ್ಕೆ ಸಂಬಂಧಿಸಿದಂತೆ ವಿಧಾನಸಭಾಧ್ಯಕ್ಷರು ತನಿಖೆಯೊಂದಕ್ಕೆ ಆದೇಶಿಸಿದ್ದಾರೆ.

ಆದರೆ ಇದೇ ಸಭಾಧ್ಯಕ್ಷರ `ತೀರ್ಪು~ಗಳ ಕುರಿತಂತೆ ಈಗಾಗಲೇ ಸುಪ್ರೀಂ ಕೋರ್ಟ್ ಹೇಳಬೇಕಾಗಿರುವುದನ್ನೆಲ್ಲಾ ಹೇಳಿಬಿಟ್ಟಿದೆ. ಇಷ್ಟರ ಮೇಲೂ ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಸುತ್ತಿರುವುದಕ್ಕೆ ಆಡಳಿತಾರೂಢರಿಗೆ ಇರುವುದು ತಾಂತ್ರಿಕವಾದ ಕಾರಣಗಳೇ ಹೊರತು ನೈತಿಕವಾದ ಕಾರಣಗಳಿಲ್ಲ. ಭಾರತೀಯ ಸಂಸ್ಕೃತಿಯ ರಕ್ಷಕನಾಗಿರುವ ಪಕ್ಷಕ್ಕೆ ಇದೊಂದು ನೈತಿಕ ಪ್ರಶ್ನೆಯಾಗದೇ ಇರುವುದರಲ್ಲಿ ಆಶ್ಚರ್ಯವಿಲ್ಲ. ಇದೇ ಮನೋಭಾವವನ್ನು ಪ್ರತಿಪಾದಿಸುವ ಮಧ್ಯಮ ವರ್ಗಕ್ಕೂ ಇದೊಂದು ನೈತಿಕ ಪ್ರಶ್ನೆಯಾಗದೇ ಇರುವುದು ದೊಡ್ಡ ಸಮಸ್ಯೆ.

ಟ್ವಿಟ್ಟರ್‌ನಲ್ಲಿ `ಪೋರ್ನ್ ಗೇಟ್~ ಎಂಬ ಹ್ಯಾಷ್ ಟ್ಯಾಗ್‌ಗೆ ಕಾರಣವಾಗಿರುವ ಈ ಹಗರಣಕ್ಕೆ ಸಂಬಂಧಿಸಿದಂತೆ ಅಂತರ್ಜಾಲ ತಾಣಗಳಲ್ಲಿರುವ ಪ್ರತಿಕ್ರಿಯೆಯನ್ನು ನೋಡಿದರೆ `ಭಾರತದಲ್ಲಿ ಹಲವು ಶತಮಾನಗಳು ಒಟ್ಟೊಟ್ಟಿಗೇ ಬದುಕುತ್ತವೆ~ ಎಂಬ ಮಾತು ಅಕ್ಷರಾರ್ಥದಲ್ಲಿ ಸತ್ಯ ಎಂಬುದು ಅರ್ಥವಾಗುತ್ತದೆ.
 
ಪ್ರತಿಕ್ರಿಯೆಗಳಲ್ಲಿ ಬಹುಮುಖ್ಯವಾಗಿರುವುದು ಪ್ರಕರಣಕ್ಕಿರುವ `ಲೈಂಗಿಕ ಆಯಾಮ~ದ ಕುರಿತಂತೆ ಇರುವ ಆಕ್ರೋಶ. ಎರಡನೆಯದ್ದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ನಡೆಸುತ್ತಿರುವ ಷಡ್ಯಂತ್ರದ ಸಾಧ್ಯತೆಗಳ ಶೋಧನೆ.
 
ಮೂರನೆಯದ್ದು ಕಾಂಗ್ರೆಸ್ಸಿಗರು ಮಾಡಿರುವ ತಥಾಕಥಿತ ಲೈಂಗಿಕ ಹಗರಣಗಳ ಉಲ್ಲೇಖ. ಜನಪ್ರತಿನಿಧಿಗಳು ಸದನ ಕಲಾಪದ ವೇಳೆ ಜವಾಬ್ದಾರಿ ಮರೆತದ್ದು ಯಾರಿಗೂ ಮುಖ್ಯವಲ್ಲ. ಇದು ರಾಜಕಾರಣಿಗಳಿಗೆ ಬಹಳ ಚೆನ್ನಾಗಿ ಗೊತ್ತಿದೆ. ದುಡ್ಡು ಕೊಟ್ಟರೆ ಓಟು ಸಿಗುತ್ತದೆ. ಮತ್ತಷ್ಟು ದುಡ್ಡು ಚೆಲ್ಲಿದರೆ ಮಂತ್ರಿ ಕುರ್ಚಿಯೂ ಸಿಗುತ್ತದೆ. ಅಂದರೆ ಇಲ್ಲಿ ಯಾರಾದರೂ ಉತ್ತರದಾಯಿಯಾಗಿರಬೇಕಾದದ್ದು ದುಡ್ಡಿನ ಮೂಲಕ್ಕೇ ಹೊರತು ಪ್ರಜಾಪ್ರಭುತ್ವಕ್ಕಂತೂ ಅಲ್ಲ.

ಪ್ರಜಾ ಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ನಮ್ಮನ್ನು ಆಳುವವರು ನಮ್ಮಂತೆಯೇ ಇದ್ದಾರಷ್ಟೇ. ಯಥಾ ಪ್ರಜಾ ತಥಾ ರಾಜಾ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT