ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್ ದರ ಹೆಚ್ಚಳ: ಹೈಕೋರ್ಟ್ ಅಸ್ತು

Last Updated 14 ಫೆಬ್ರುವರಿ 2011, 20:05 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳಲ್ಲಿ ದಿನದ ಪಾಸ್ ಪಡೆದುಕೊಳ್ಳಲು 25 ರೂಪಾಯಿಗಳ ಗುರುತಿನ ಚೀಟಿ ಕಡ್ಡಾಯ ಮಾಡಿರುವ ಆದೇಶವನ್ನು ಹೈಕೋರ್ಟ್ ಸೋಮವಾರ ಊರ್ಜಿತಗೊಳಿಸಿದೆ.


ಪಾಸುಗಳ ದುರುಪಯೋಗ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆಎಂಬ ಬಿಎಂಟಿಸಿ ಪರ ವಕೀಲರ ವಾದವನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಮಾನ್ಯ ಮಾಡಿದೆ.

ಗುರುತಿನ ಚೀಟಿ ಕಡ್ಡಾಯ ಮಾಡಿರುವುದನ್ನು ಪ್ರಶ್ನಿಸಿ ವಸುಮತಿ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಿದೆ.

35 ರೂಪಾಯಿಗಳ ಪಾಸ್ ಪಡೆದುಕೊಳ್ಳಬೇಕೆಂದರೆ ವಾರ್ಷಿಕವಾಗಿ 25 ರೂಪಾಯಿ ಪಾವತಿಸಿ ಗುರುತಿನ ಚೀಟಿಯನ್ನು ಸಂಸ್ಥೆಯಿಂದ ಪಡೆದುಕೊಳ್ಳುವುದು ಕಡ್ಡಾಯ. ಇಲ್ಲದಿದ್ದರೆ ದಿನದ ಪಾಸ್‌ಗೆ 40 ರೂಪಾಯಿ ಪಾವತಿಸಬೇಕು ಎನ್ನುವುದು ನಿಯಮ. ಇದು ಸರಿಯಲ್ಲ ಎನ್ನುವುದು ಅರ್ಜಿದಾರರ ಆರೋಪವಾಗಿತ್ತು.

ಸ್ಥಳೀಯ ನಾಗರಿಕರು ಎಂದು ಗುರುತಿಸಿಕೊಳ್ಳಲು ರಾಜ್ಯ ಸರ್ಕಾರ 21 ಬಗೆಯ ಗುರುತಿನ ಚೀಟಿಗಳನ್ನು ಗುರುತಿಸಿದೆ. ರೇಷನ್ ಕಾರ್ಡ್, ಪಾಸ್‌ಪೋರ್ಟ್ ಇತ್ಯಾದಿ ಗುರುತಿನ ಚೀಟಿಗಳನ್ನು ತೋರಿಸಿ ದಿನದ ಪಾಸ್ ಪಡೆದುಕೊಳ್ಳುವಂತೆ ಸಂಸ್ಥೆಗೆ ಆದೇಶಿಸಬೇಕು ಎನ್ನುವುದು ಅವರ ಮನವಿಯಾಗಿತ್ತು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಾತ್ರ 25 ರೂಪಾಯಿಗಳ ಪಾಸ್ ವಿತರಣೆ ಮಾಡಲಾಗುತ್ತದೆ ಎಂದು ಅವರು ದೂರಿದ್ದರು. ಆದರೆ ಈ ಚೀಟಿ ನೀಡಲು 30 ಕೇಂದ್ರಗಳನ್ನು ತೆರೆಯಲಾಗಿದೆ. 57ಸಾವಿರ ಚೀಟಿಗಳನ್ನು ಈಗಾಗಲೇ ವಿತರಿಸಲಾಗಿದೆ ಎಂದು ಬಿಎಂಟಿಸಿ ಪರ ವಕೀಲರು ವಿವರಿಸಿದರು. ಇದನ್ನು ಪೀಠ ಮಾನ್ಯ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT