ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್‌ಪೋರ್ಟ್ ಅರ್ಜಿ ವಿಲೇವಾರಿ ಪ್ರಕ್ರಿಯೆ: ಪೊಲೀಸ್ ವೆಬ್‌ಸೈಟ್‌ನಲ್ಲಿ ಮಾಹಿತಿ

Last Updated 3 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿರುವವರು ಅರ್ಜಿಯ ಪ್ರಸ್ತುತ ಹಂತದ ಮಾಹಿತಿಯನ್ನು ಈಗ  ಬೆಂಗಳೂರು ಪೊಲೀಸ್ ವೆಬ್‌ಸೈಟ್ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದು.

ಪಾಸ್‌ಪೋರ್ಟ್ ಅರ್ಜಿಗಳನ್ನು ಪರಿಶೀಲನೆಗಾಗಿ ಯಾವ ದಿನಾಂಕದಂದು ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ ಮತ್ತು ಪರಿಶೀಲಿಸಿದ ಅರ್ಜಿಗಳನ್ನು ಯಾವಾಗ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ರವಾನಿಸಲಾಗಿದೆ ಎಂಬುದನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿದಿನ ಪರಿಷ್ಕೃತ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತಿದ್ದು, ಅರ್ಜಿದಾರರು www.bcp.gov.in ಈ ವೆಬ್‌ಸೈಟ್ ವಿಳಾಸದ ಮೂಲಕ ಅರ್ಜಿಯ ಹಂತ ತಿಳಿಯಬಹುದಾಗಿದೆ.

ಮೂರೂಕಾಲು ಲಕ್ಷ ಅರ್ಜಿಗಳು: ಪಾಸ್‌ಪೋರ್ಟ್ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸುವ ವ್ಯವಸ್ಥೆ 2010ರ ಮೇ ತಿಂಗಳಿಂದ ಜಾರಿಗೆ ಬಂದಿದೆ. ಅಂದಿನಿಂದ 2012ರ ಏ. 26ರವರೆಗೆ ನಗರ ಪೊಲೀಸ್ ಕಮಿಷನರ್ ಕಚೇರಿಯ ಪಾಸ್‌ಪೋರ್ಟ್ ವಿಭಾಗದ ವಿಶೇಷ ಶಾಖೆಗೆ ಮೂರೂಕಾಲು ಲಕ್ಷ ಅರ್ಜಿಗಳು ಬಂದಿವೆ.

ಪ್ರತಿದಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ಸುಮಾರು 900 ಪಾಸ್‌ಪೋರ್ಟ್ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಸ್ವೀಕರಿಸಲಾಗುತ್ತಿದೆ. ಅವುಗಳನ್ನು ವಿಭಾಗವಾರು, ಉಪ ವಿಭಾಗವಾರು ಮತ್ತು ಠಾಣಾವಾರು ವಿಂಗಡಿಸಿ, ಪರಿಶೀಲನೆಗಾಗಿ ನಗರದ 102 ಪೊಲೀಸ್ ಠಾಣೆಗಳಿಗೆ ಕಳುಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಅರ್ಜಿದಾರರು ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸುವಾಗ ನೀಡಿರುವ ಸ್ವ ವಿವರಗಳಿಗೂ, ಪೊಲೀಸ್ ಪರಿಶೀಲನಾ ಸಮಯದಲ್ಲಿ ಸಲ್ಲಿಸುವ ದಾಖಲಾತಿಗಳಿಗೂ ಮತ್ತು ಪಾಸ್‌ಪೋರ್ಟ್ ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿಗಳಿಗೂ ಹೊಂದಾಣಿಕೆಯಾದರೆ ಅಂತಹ  ಅರ್ಜಿಗಳನ್ನು `ಸ್ಪಷ್ಟ ದಾಖಲೆ~ ಎಂದು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಕಳುಹಿಸಲಾಗುವುದು. ಮಾಹಿತಿ ಹೊಂದಾಣಿಕೆಯಾಗದಿದ್ದಲ್ಲಿ `ಅಸ್ಪಷ್ಟ ದಾಖಲೆ~ (ಅಡ್‌ವರ್ಸ್ ರಿಪೋರ್ಟ್) ಎಂದು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಕಳುಹಿ ಸಲಾಗುವುದು.

ವೆಬ್‌ಸೈಟ್‌ನಲ್ಲಿ ಅರ್ಜಿಯ ಪ್ರಸ್ತುತ ಹಂತ ತಿಳಿಯುವ ವಿಧಾನ : ಅರ್ಜಿದಾರರು ಮೊದಲು ‘ www.bcp.gov.in ’ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಬೇಕು. ನಂತರ ಹೋಮ್‌ಪೇಜ್‌ನಲ್ಲಿರುವ‘Click here to know your Passport Status’ ನ ಸಂಪರ್ಕ ಪಡೆದಾಗ ಪಾಸ್‌ಪೋರ್ಟ್ ಪರಿಶೀಲನಾ ಪೊಲೀಸ್ ಸೇವಾ ಕೇಂದ್ರದ ವೆಬ್ ಪುಟ ತೆರೆದುಕೊಳ್ಳುತ್ತದೆ. ನಂತರ ಕೀಬೋರ್ಡ್‌ನ ಕಂಟ್ರೋಲ್ ಬಟನ್ ಜತೆಗೆ ಎಫ್ ಬಟನ್ ಒತ್ತಬೇಕು.

‘Find Box’ ತೆರೆದ ನಂತರ ಪಾಸ್‌ಪೋರ್ಟ್ ಅರ್ಜಿಯ 15 ಅಂಕಿಗಳ ಬಾರ್‌ಕೋಡ್ ಕಡತ ಸಂಖ್ಯೆಯನ್ನು ಟೈಪ್ ಮಾಡಿ `ಎಂಟರ್~ ಕೀಯನ್ನು ಒತ್ತಬೇಕು. ಆಗ ಪಾಸ್‌ಪೋರ್ಟ್ ಅರ್ಜಿ ಪರಿಶೀಲಿಸಿದ ಪೊಲೀಸ್ ಠಾಣೆಯ ಹೆಸರು ಗೋಚರವಾಗುತ್ತದೆ.

ಜತಗೆ ಅರ್ಜಿಯನ್ನು ಸ್ವೀಕರಿಸಿದ ದಿನಾಂಕ ಹಾಗೂ ಪರಿಶೀಲಿಸಿ ಕಳುಹಿಸಿದ ದಿನಾಂಕದ ಮಾಹಿತಿ ನಿಮಗೆ ದೊರೆಯುತ್ತದೆ. ಒಂದು ವೇಳೆ ಪರಿಶೀಲಿಸಿ ಕಳುಹಿಸಿದ ದಿನಾಂಕದ ಸ್ಥಳ ಖಾಲಿ ಇದ್ದಲ್ಲಿ ಅರ್ಜಿಯು ಇನ್ನೂ ಪರಿಶೀಲನೆಯಾಗಿಲ್ಲ ಎಂದು ತಿಳಿಯಬೇಕು.

ಅರ್ಜಿದಾರರು ಪರಿಶೀಲನೆಗೆ ಒಂದಕ್ಕಿಂತ ಹೆಚ್ಚು ವಿಳಾಸಗಳನ್ನು ಕೊಟ್ಟಿದ್ದಲ್ಲಿ ಅಂತಹ ಅರ್ಜಿಗಳನ್ನು ಆ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಕಳುಹಿಸಲಾಗುತ್ತದೆ. ಅದರ ಮಾಹಿತಿ ಸಹ ‘Find Box’ ನಲ್ಲಿರುವ  ‘Open full reader Search’  ನಲ್ಲಿ ನಿಮಗೆ ಸಿಗುತ್ತದೆ.

ಈ ಪೊಲೀಸ್ ವೆಬ್‌ಸೈಟ್‌ನಲ್ಲಿ ಮೂರು ಗುರುತುಪಟ್ಟಿ (ಟ್ಯಾಬ್)ಗಳಿದ್ದು, ಅರ್ಜಿಗಳ ಪ್ರಸ್ತುತ ಹಂತ ತಿಳಿದುಕೊಳ್ಳುವುದರ ಜತೆಗೆ `ಹೋಮ್‌ಪೇಜ್~ ಮತ್ತು `ಕಾಂಟ್ಯಾಕ್ಟ್ಸ್~ ಎಂಬ ಗುರುತುಪಟ್ಟಿಗಳಿರುತ್ತವೆ. ಹೋಮ್ ಪೇಜ್ ಪಟ್ಟಿಯ ಅಡಿಯಲ್ಲಿ ಅರ್ಜಿಗಳ ವಿಚಾರಣೆಗೆ ಬೇಕಾದ ದಾಖಲೆಗಳ ವಿವರ ದೊರೆಯುತ್ತದೆ ಮತ್ತು ನಿಮ್ಮ ದೂರುಗಳನ್ನು ನೀಡಲು ಸಂಪರ್ಕಿಸಬೇಕಾದ ಅಧಿಕಾರಿಗಳ ಮಾಹಿತಿ ಸಿಗುತ್ತದೆ. `ಕಾಂಟ್ಯಾಕ್ಟ್ಸ್~ ಗುರುತು ಪಟ್ಟಿ ಅಡಿಯಲ್ಲಿ ನಗರದ 102 ಪೊಲೀಸ್ ಠಾಣೆಗಳ ಮತ್ತು ಉಸ್ತುವಾರಿ ಅಧಿಕಾರಿಗಳ ದೂರವಾಣಿ ಸಂಖ್ಯೆಗಳು ಸಿಗುತ್ತವೆ.

ಅರ್ಜಿಗಳ ಪ್ರಸ್ತುತ ಹಂತದ ವಿವರಗಳನ್ನು ಕರ್ನಾಟಕ ರಾಜ್ಯ ಪೊಲೀಸ್ ವೆಬ್‌ಸೈಟ್ ‘www.ksp.gov.in’ ನಲ್ಲಿಯೂ ಸಹ ಪ್ರಕಟಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT