ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್‌ಪೋರ್ಟ್ ವಿಳಾಸ ಪರಿಶೀಲನೆಗೆ ಚುರುಕು

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅರ್ಜಿದಾರರ ಅಸಹಕಾರದಿಂದಾಗಿ ಪಾಸ್‌ಪೋರ್ಟ್‌ನ ವಿಳಾಸ ಪರಿಶೀಲನೆ ಪ್ರಕ್ರಿಯೆ (ಪೊಲೀಸ್ ವೆರಿಫಿಕೇಶನ್) ತಡವಾಗುತ್ತಿದೆ. ವಿಳಾಸ ಪರಿಶೀಲನೆ ಮಾಡುವಲ್ಲಿ ಸಿಬ್ಬಂದಿ ವಿಳಂಬ ಮಾಡುತ್ತಾರೆ ಎಂಬ ಆರೋಪ ಬಹಳ ವರ್ಷಗಳಿಂದ ಇದೆ.
 
ಈ ಅನಗತ್ಯ ವಿಳಂಬಕ್ಕೆ ಕಡಿವಾಣ ಹಾಕಲು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರು ಪ್ರತಿ ಭಾನುವಾರ ಬೆಳಿಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಠಾಣಾಧಿಕಾರಿ ಠಾಣೆಯಲ್ಲೇ ಇರಬೇಕು ಎಂದು ಸೂಚನೆ ನೀಡಿದ್ದರು.

ಪಾಸ್‌ಪೋರ್ಟ್ ವಿಳಾಸ ಪರಿಶೀಲನೆ ಮಾಡಿಸಿಕೊಳ್ಳುವವರು ಆ ನಿಗದಿತ ಸಮಯದಲ್ಲಿ ಠಾಣಾಧಿಕಾರಿಯನ್ನು ಸಂಪರ್ಕಿಸಲು ಅವರು ಹೇಳಿದ್ದರು. ಇದು ಈಗ ಫಲ ನೀಡುತ್ತಿದೆ. ಬಾಕಿ ಪ್ರಕರಣಗಳ ಸಂಖ್ಯೆ ತಗ್ಗುತ್ತಿದೆ. ಆಯಾ ವಾರದಲ್ಲಿ ಬಂದಂತಹ ಶೇ 80ರಷ್ಟು ಅರ್ಜಿಗಳನ್ನು ಪೊಲೀಸರು ವಿಲೇವಾರಿ ಮಾಡುತ್ತಿದ್ದಾರೆ.

ಆದರೆ ಅರ್ಜಿದಾರರು ಕೆಲ ವಿಷಯಗಳಲ್ಲಿ ತೋರುತ್ತಿರುವ ಅಸಹಕಾರದಿಂದಾಗಿ ನೂರಕ್ಕೆ ನೂರರಷ್ಟು ವಿಲೇವಾರಿ ಸಾಧ್ಯವಾಗುತ್ತಿಲ್ಲ ಎಂಬುದು ಪೊಲೀಸರ ಅಳಲು. ಯಾವುದೇ ಪಾಸ್‌ಪೋರ್ಟ್ ಅರ್ಜಿ ವಿಳಾಸ ಪರಿಶೀಲನೆಗೆ ಬಂದಾಗ ಸಿಬ್ಬಂದಿ ಮೂಲಕ ಸಂಬಂಧಿಸಿದ ವ್ಯಕ್ತಿಗೆ ಕರೆ ಮಾಡಲಾಗುತ್ತದೆ.

ಅವರ ಮನೆಯ ವಿಳಾಸ ಕೇಳಿಕೊಂಡು ಪರಿಶೀಲನೆಗೆ ಬರಲು ಸಮಯ ನೀಡುವಂತೆ ಕೇಳಲಾಗುತ್ತದೆ. ಆದರೆ ಎಲ್ಲರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವುದಿಲ್ಲ. ಪೊಲೀಸರು ಮನೆಯ ಬಳಿ ಬಂದರೆ ಅವಮಾನ ಎಂಬ ಭಾವನೆ ಇದಕ್ಕೆ ಕಾರಣ. ಸಿಬ್ಬಂದಿ ಕರೆ ಮಾಡಿದಾಗ ಸಹಕಾರ ನೀಡಿದರೆ ಇನ್ನೂ ಬೇಗ ವಿಳಾಸ ಪರಿಶೀಲನೆ ನಡೆಸಬಹುದು ಎನ್ನುತ್ತಾರೆ ಅಧಿಕಾರಿಗಳು.

ಕೆಲವರು ಕೇವಲ ಬ್ಯಾಂಕ್ ಸ್ಟೇಟ್‌ಮೆಂಟ್ ತಂದು ಪರಿಶೀಲನೆ ಮಾಡುವಂತೆ ಹೇಳುತ್ತಾರೆ. ಆದರೆ ಒಂದೇ ದಾಖಲೆಯನ್ನು ನೋಡಿ ಪರಿಶೀಲನೆ ಪ್ರಕ್ರಿಯೆ ಮುಗಿಸಲಾಗದು.

ಏಕೆಂದರೆ ಸಮಾಜ ಘಾತುಕ ವ್ಯಕ್ತಿಗಳು ನಕಲಿ ವಿಳಾಸ ನೀಡಿ ಪಾಸ್‌ಪೋರ್ಟ್ ಪಡೆಯುವ ಸಾಧ್ಯತೆ ಇರುತ್ತದೆ. ಅಂತಹವರು ಅಕ್ರಮಗಳಲ್ಲಿ ಭಾಗಿಯಾಗಬಹುದು ಅಥವಾ ಇನ್ಯಾವುದೇ ಕೃತ್ಯ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
 
ವಿಳಾಸ ಪರಿಶೀಲನೆಯಲ್ಲಿ ತಪ್ಪಾಗಿ ಸಮಾಜ ಘಾತುಕ ವ್ಯಕ್ತಿಗೆ ಪಾಸ್‌ಪೋರ್ಟ್ ಸಿಕ್ಕರೆ. ರಾಜ್ಯದ, ದೇಶಕ್ಕೆ ಕೆಟ್ಟ ಹೆಸರು ಬರುತ್ತದೆ. ಇಲಾಖೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಾಗುತ್ತದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

ಆದ್ದರಿಂದ ಕನಿಷ್ಠ ಮೂರರಿಂದ ನಾಲ್ಕು ದಾಖಲೆಗಳನ್ನು ಕೇಳುತ್ತೇವೆ. ಆ ಎಲ್ಲ ದಾಖಲೆ ನೀಡಿದ ನಂತರವೂ ಸಿಬ್ಬಂದಿಯನ್ನು ಅರ್ಜಿದಾರರ ಮನೆಗೆ ಕಳುಹಿಸಿ ಅಕ್ಕಪಕ್ಕದ ಮನೆಯವರಿಂದ ಅವರ ಇರುವಿಕೆಯ ಬಗ್ಗೆ ಮಾಹಿತಿ ಪಡೆದು ಅಂತಿಮವಾಗಿ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ ಎಂದು ಪೊಲೀಸರು ಹೇಳುತ್ತಾರೆ.

ಬ್ಯಾಂಕ್ ಸ್ಟೇಟ್‌ಮೆಂಟ್ ಮತ್ತು ಕಂಪೆನಿಗಳು ನೀಡುವ ಪತ್ರವನ್ನು ಪರಿಗಣಿಸುವುದು ಕಷ್ಟವಾದ್ದರಿಂದ ಆ ದಾಖಲೆಗಳಿಗೆ ನಾವು ಕಿಮ್ಮತ್ತು ನೀಡುವುದಿಲ್ಲ. ಇದನ್ನು ಜನರು ಅರ್ಥಮಾಡಿಕೊಳ್ಳಬೇಕು. ಕನಿಷ್ಠ ನಾಲ್ಕು ದಾಖಲೆ ಹಾಜರಿ ಮತ್ತು ಸಿಬ್ಬಂದಿ ಜತೆ ಸೂಕ್ತ ಸ್ಪಂದನೆ ಇದ್ದರೆ ನೂರಕ್ಕೆ ನೂರರಷ್ಟು ಕೆಲಸ ಮಾಡಬಹುದು ಎಂದು ಪೊಲೀಸರು ಹೇಳುತ್ತಾರೆ.

ಪಾಸ್‌ಪೋರ್ಟ್ ಅರ್ಜಿದಾರರ ವಿಳಾಸ ಪರಿಶೀಲನೆಗೆ ಠಾಣೆಯಲ್ಲಿ ಈ ಹಿಂದೆ ಒಬ್ಬ ಸಿಬ್ಬಂದಿ ಮಾತ್ರ ಇರುತ್ತಿದ್ದರು. ಇದನ್ನು ಹೆಚ್ಚಿಸಲು ಮಿರ್ಜಿ ಸೂಚನೆ ನೀಡಿದ್ದಾರೆ. ಪಾಸ್‌ಪೋರ್ಟ್ ತ್ವರಿತವಾಗಿ ಪಡೆಯಬೇಕೆಂದು ಬಯಸುವ ಅರ್ಜಿದಾರರು ತಮ್ಮ ಸಹಕಾರ ಕೂಡ ಅಷ್ಟೇ  ಮುಖ್ಯ ಎಂಬುದನ್ನು ಮನಗಾಣಬೇಕು.
 

ದಾಖಲೆಗಳು
ಪಡಿತರ ಚೀಟಿ, ಉದ್ಯೋಗ ಮಾಡುವ ಕಂಪೆನಿಯಿಂದ ವಿಳಾಸ ದೃಢೀರಕರಣ ಪತ್ರ, ದೂರವಾಣಿ, ನೀರು, ವಿದ್ಯುತ್ ಬಿಲ್, ಬ್ಯಾಂಕ್ ಸ್ಟೇಟ್‌ಮೆಂಟ್, ಆದಾಯ ತೆರಿಗೆ ಪ್ರಮಾಣ ಪತ್ರ, ಚುನಾವಣಾ ಆಯೋಗದ ಗುರುತಿನ ಪತ್ರ, ಅಡುಗೆ ಅನಿಲ ಸಂಪರ್ಕ ಪತ್ರ, ಹಳೆಯ ಪಾಸ್‌ಪೋರ್ಟ್.

ತಿಂಗಳಿಗೆ 20 ಸಾವಿರ
2011ರ  ಜನವರಿ ತಿಂಗಳಿಂದ ಆಗಸ್ಟ್1ರ ವರೆಗೆ 1,12,355 ಅರ್ಜಿಗಳು ವಿಳಾಸ ಪರಿಶೀಲನೆಗಾಗಿ ಅರ್ಜಿ ಬಂದಿವೆ. ಇದರಲ್ಲಿ 93,864 ಅರ್ಜಿಗಳನ್ನು ವಿಲೇವಾರಿ ಮಾಡಿದ್ದಾರೆ. ಪ್ರತಿ ತಿಂಗಳು ಹೊಸದಾಗಿ 20 ಸಾವಿರ ಅರ್ಜಿಗಳು ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT