ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿ ಯೋಜನೆ ವಿವಾದದ ಸುತ್ತ...

Last Updated 5 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಅಂಗನವಾಡಿ ಕಾರ್ಯಕರ್ತೆಯರು/ ಸಹಾಯಕಿಯರಿಗೆ ರಾಜ್ಯ ಸರ್ಕಾರ ಈಚೆಗೆ ಜಾರಿಗೊಳಿಸಿರುವ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್  ಲೈಟ್) ಯೋಜನೆ ಆರಂಭದಲ್ಲೇ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಹಲವು ವರ್ಷಗಳ ಹೋರಾಟದ ಫಲವಾಗಿ ಅಂಗನವಾಡಿ ನೌಕರರಿಗೆ ಪಿಂಚಣಿ ಯೋಜನೆ ಏನೊ ಜಾರಿಗೆ ಬಂದಿದೆ. ಆದರೆ ಅನುಷ್ಠಾನ ಹಂತದಲ್ಲಿ ಲೋಪಗಳಿದ್ದು, ಇದರಿಂದಾಗಿ ಅನ್ಯಾಯವಾಗಿದೆ ಎಂದು ಆರೋಪಿಸಿ ಸಾವಿರಾರು ಮಂದಿ ಬೀದಿಗೆ ಇಳಿದಿದ್ದಾರೆ.

ಈ ಯೋಜನೆಯಡಿ ಪಿಂಚಣಿ ಪಡೆಯಲು ಹಲವರು ಈಗಾಗಲೇ ತಮ್ಮ ಹೆಸರು ನೋಂದಾಯಿಸಿದ್ದರೆ, ಇನ್ನೂ ಕೆಲವರು ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆಗೆ ಇಳಿದಿದ್ದು, ಯಾವುದೇ ಕಾರಣಕ್ಕೂ ‘ಎನ್‌ಪಿಎಸ್ ಲೈಟ್’ ಯೋಜನೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ ಕೆಲವರು ಒತ್ತಡಕ್ಕೆ ಮಣಿದು ಸಹಿ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಾಜ್ಯದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್)1975ರಲ್ಲಿ ಜಾರಿಗೆ ಬಂದಿದೆ. ಅಲ್ಲಿಂದ ಇಲ್ಲಿಯವರೆಗೆ ಒಟ್ಟು 63,342 ಅಂಗನವಾಡಿ ಕೇಂದ್ರಗಳು ಆರಂಭವಾಗಿದ್ದು, ಸುಮಾರು 1.20 ಲಕ್ಷ ಕಾರ್ಯಕರ್ತೆಯರು /ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ಸುಮಾರು ಐದು ಸಾವಿರ ಸಿಬ್ಬಂದಿಯ ನೇಮಕವಾಗಬೇಕಿದೆ.

ಅನೇಕ ವರ್ಷಗಳಿಂದ ಕೇವಲ ಗೌರವಧನ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ನೌಕರರಿಗೆ ಇಲ್ಲಿಯವರೆಗೆ ನಿವೃತ್ತಿ ವಯಸ್ಸೂ ಇರಲಿಲ್ಲ. ಜೀವನ ನಿರ್ವಹಣೆಗೆ ಅಗತ್ಯವಿರುವಷ್ಟು ಗೌರವ ಧನವನ್ನೂ ನೀಡುತ್ತಿರಲಿಲ್ಲ. ಇತ್ತೀಚಿನವರೆಗೂ ಕಾರ್ಯಕರ್ತೆಯರಿಗೆ ರೂ 2500 ನೀಡಲಾಗುತ್ತಿತ್ತು. ಈಚೆಗೆ ಕೇಂದ್ರ ಸರ್ಕಾರ ರೂ  1500 ಮತ್ತು  ರಾಜ್ಯ ಸರ್ಕಾರ ರೂ  500  ಜಾಸ್ತಿ ಮಾಡಿದ್ದು, ಈ ತಿಂಗಳಿನಿಂದ ಮಾಸಿಕ ರೂ  4500 ಸಿಗಲಿದೆ.

ಸರ್ಕಾರಿ ನೌಕರರಿಗೆ ಇರುವ ಹಾಗೆ ಅಂಗನವಾಡಿ ಸಿಬ್ಬಂದಿಗೂ ನಿವೃತ್ತಿ ವಯಸ್ಸನ್ನು ನಿಗದಿಪಡಿಸಬೇಕು ಎಂಬ ಹಲವು ವರ್ಷಗಳ ಬೇಡಿಕೆಯನ್ನು ಒಪ್ಪಿರುವ ಸರ್ಕಾರ ಇದೇ ಮೊದಲ ಬಾರಿಗೆ ಅಂಗನವಾಡಿ ಸಿಬ್ಬಂದಿಗೆ 60 ವರ್ಷಕ್ಕೆ ನಿವೃತ್ತಿ ವಯಸ್ಸನ್ನು ನಿಗದಿಪಡಿಸುವುದರ ಜೊತೆಗೆ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್ ಲೈಟ್) ಜಾರಿಗೊಳಿಸಿದೆ.

ಇದಕ್ಕೆ ನೌಕರರು ಮತ್ತು ಸರ್ಕಾರ ಸಮ ಪ್ರಮಾಣದ ವಂತಿಗೆ ನೀಡಬೇಕು. ಅಂದರೆ ಪ್ರತಿ ತಿಂಗಳು ಕಾರ್ಯಕರ್ತೆಯರು ತಮ್ಮ ಪಾಲಿನ ರೂ 150, ಸಹಾಯಕಿಯರು  ರೂ  75 ನೀಡಬೇಕು. ಸರ್ಕಾರ ಇದೇ ಪ್ರಮಾಣದಲ್ಲಿ ತನ್ನ ಪಾಲನ್ನು ನೀಡುತ್ತದೆ. ಅಲ್ಲದೆ ಕೇಂದ್ರ ಸರ್ಕಾರ ಸ್ವಾವಲಂಬನ ಯೋಜನೆಯಡಿ ವಾರ್ಷಿಕ ನೀಡುವ ರೂ  1000 ಹಣವನ್ನು ನೌಕರರ ಖಾತೆಗೆ ಜಮಾ ಮಾಡಲಾಗುತ್ತದೆ. ಐದು ವರ್ಷಗಳ ಕಾಲ ಮಾತ್ರ ಕೇಂದ್ರವು ನೀಡಲಿದೆ.

18ರಿಂದ 55 ವರ್ಷದವರು ಮಾತ್ರ ಪಿಂಚಣಿ ಯೋಜನೆಯಡಿ ಬರಲಿದ್ದಾರೆ. 47ರಿಂದ 55 ವರ್ಷದ ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರಿಗೆ ರಾಜ್ಯ ಸರ್ಕಾರ ಒಂದು ಬಾರಿ ಮಾತ್ರ ಹೆಚ್ಚುವರಿಯಾಗಿ ಇಡಿಗಂಟು ರೂಪದಲ್ಲಿ ತನ್ನ ವಂತಿಗೆ ನೀಡಲಿದ್ದು, ಇದರಿಂದ ಅವರಿಗೆ ಸ್ವಲ್ಪ ಪ್ರಮಾಣದ ಅನುಕೂಲವಾಗಲಿದೆ. ಆದರೆ, ಈ ವಯೋಮಾನದ ಸಿಬ್ಬಂದಿ 2010-11ನೇ ಸಾಲಿನಲ್ಲಿ ತನ್ನ ಪಾಲಿನ ಎರಡು ತಿಂಗಳ ವಂತಿಗೆ  ಪಾವತಿಸಿರಬೇಕು.

ಕಳೆದ ಮಾರ್ಚ್ 31ಕ್ಕೆ 60 ವರ್ಷ ಪೂರ್ಣಗೊಳಿಸಿ ಸುಮಾರು ಮೂರು ಸಾವಿರ ಮಂದಿ ನಿವೃತ್ತಿಯಾಗಿದ್ದು, ಕಾರ್ಯಕರ್ತೆಯರಿಗೆ  ರೂ 50 ಸಾವಿರ ಮತ್ತು ಸಹಾಯಕಿಯರಿಗೆ ರೂ 30 ಸಾವಿರ   ನಿವೃತ್ತಿ ಗೌರವ ಸಂಭಾವನೆ ನೀಡಲಾಗುತ್ತದೆ. ‘ಎನ್‌ಪಿಎಸ್’ ಯೋಜನೆಯಡಿ ಸೇರ್ಪಡೆಗೊಂಡವರಿಗೆ 60 ವರ್ಷದ ನಂತರ ಎಷ್ಟು ಪಿಂಚಣಿ ದೊರೆಯುತ್ತದೆ ಎಂಬುದು ಇನ್ನೂ ಖಚಿತವಾಗಿಲ್ಲ.

‘ಎನ್‌ಪಿಎಸ್’ ಯೋಜನೆಯ ನಿರ್ವಹಣೆಗಾಗಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ರಚನೆಯಾಗಿದ್ದು, ಪ್ರಾಧಿಕಾರವು ವಂತಿಗೆ ರೂಪದಲ್ಲಿ ಸಂಗ್ರಹವಾಗುವ ಒಟ್ಟು ಹಣದಲ್ಲಿ ಶೇ 15ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಿದೆ. ಉಳಿದ ಶೇ 85ರಷ್ಟು ಹಣವನ್ನು ಪ್ರಾಧಿಕಾರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲಿದೆ. ಶೇ 15ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡುವುದಕ್ಕೆ ವಿರೋಧ ವ್ಯಕ್ತವಾಗಿದ್ದು, ಈ ಹಣವನ್ನು ಷೇರು ಮಾರುಕಟ್ಟೆ ಬದಲು ಜೀವವಿಮಾ ನಿಗಮದಲ್ಲಿ ಇಡಬೇಕು ಎಂಬುದು ನೌಕರರ ಬೇಡಿಕೆ.

ಫೆಬ್ರುವರಿ ತಿಂಗಳಿಂದಲೇ ಈ ಯೋಜನೆ ಜಾರಿಗೆ ಬಂದಿದ್ದು, ಈಗಾಗಲೇ ಸುಮಾರು 75 ಸಾವಿರ ಸಿಬ್ಬಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ, ಉಳಿದ ನೌಕರರು ವಿರೋಧ ಮಾಡುತ್ತಿರುವುದರಿಂದ ನೋಂದಣಿ ಮಾಡಿಸಿಲ್ಲ.

 ಅವರು ಮಾರ್ಚ್ 31ರ ಒಳಗೆ ನೋಂದಣಿ ಮಾಡಿಸಿದ್ದರೆ ಸ್ವಾವಲಂಬನಾ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ರೂ  1000 ದೊರೆಯುತ್ತಿತ್ತು. ಅಲ್ಲದೆ ರಾಜ್ಯ ಸರ್ಕಾರ ಸಹ ಖಾತೆ ತೆರೆಯುವುದಕ್ಕಾಗಿ ್ಙ 800  ನೀಡುತ್ತಿತ್ತು. ಆದರೆ ಈಗ ಹೆಸರು ನೋಂದಾಯಿಸಿದರೆ ರೂ  1800  ಸೌಲಭ್ಯದಿಂದ ವಂಚಿತರಾಗುತ್ತಾರೆ.

ಶೇ 100ರಷ್ಟು ಖಾತರಿ
‘ಎನ್‌ಪಿಎಸ್ ಯೋಜನೆ’ಯಡಿ ಕೇಂದ್ರ ಸರ್ಕಾರದ ನೌಕರರು ್ಙ 7000 ಕೋಟಿ  ತೊಡಗಿಸಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯ ಸರ್ಕಾರಿ ನೌಕರರೂ ಈ ಯೋಜನೆಯಡಿ ಸೇರಿದ್ದಾರೆ. ವಂತಿಗೆ ರೂಪದಲ್ಲಿ ಸಂಗ್ರಹಿಸುವ ಹಣದಲ್ಲಿ ಶೇ 15ರಷ್ಟನ್ನು ಮಾತ್ರ ಷೇರು ಮಾರುಕಟ್ಟೆಯಲ್ಲಿ ತೊಡಗಿಸಲಾಗುತ್ತದೆ.

ಉಳಿದ ಹಣ ಸರ್ಕಾರಿ ಸಂಸ್ಥೆಗಳಲ್ಲಿ ಇರಲಿದೆ. ಆಗಿಂದಾಗ್ಗೆ ಪ್ರಾಧಿಕಾರ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳನ್ನು ಗಮನಿಸಿ ತೀರ್ಮಾನ ತೆಗೆದುಕೊಳ್ಳುತ್ತದೆ. ನೌಕರರ ಹಣಕ್ಕೆ ಶೇ 100ರಷ್ಟು ಖಾತರಿ ಇರುತ್ತದೆ. ಆತಂಕಪಡುವ ಅಗತ್ಯವಿಲ್ಲ ಎಂಬುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸಿ.ಎನ್.ಸೀತಾರಾಂ ಅಭಿಪ್ರಾಯ.

ಎಲ್ಲ ರೀತಿಯ ಮಾರ್ಗಗಳನ್ನು ಪರಿಶೀಲಿಸಿದ ನಂತರವೇ ಸರ್ಕಾರ ‘ಎನ್‌ಪಿಎಸ್’ ಯೋಜನೆಗೆ ಒಪ್ಪಿಗೆ ಸೂಚಿಸಿದೆ. ಇದು ಉತ್ತಮ ಆಯ್ಕೆ. ನೌಕರರು ಆತಂಕಪಡುವ ಅಗತ್ಯವಿಲ್ಲ. ಅಂಗನವಾಡಿ ನೌಕರರಿಗೆ ಹೆಚ್ಚಿನ ಅನುಕೂಲವಾಗಬೇಕು ಎಂಬ ದೃಷ್ಟಿಯಿಂದಲೇ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂಬುದು ಅವರ ಸಮರ್ಥನೆ.

ಇಷ್ಟಾದರೂ ನೌಕರರು ವಿರೋಧ ಮಾಡುತ್ತಿರುವ ಹಿನ್ನೆಲೆಯಲ್ಲಿ ಇದೇ 21ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳು ಮತ್ತು ನೌಕರರ ಸಂಘಟನೆಯ ಪದಾಧಿಕಾರಿಗಳ ಸಭೆ ಕರೆದಿದ್ದು, ಅಂದು ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಅವೈಜ್ಞಾನಿಕ
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ರಾಜ್ಯ ಸರ್ಕಾರ ಪ್ರಕಟಿಸಿರುವ ಪಿಂಚಣಿ ಯೋಜನೆ ಅವೈಜ್ಞಾನಿಕವಾಗಿದ್ದು, ಇದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಹೋರಾಟ ಆರಂಭಿಸಿದೆ.

‘ಅಂಗನವಾಡಿ ನೌಕರರಿಗೆ ಸ್ವಾವಲಂಬನಾ ಪಿಂಚಣಿ ಯೋಜನೆ ಬೇಡ, ಎಲ್‌ಐಸಿ ಆಧಾರಿತ ಪಿಂಚಣಿ ಯೋಜನೆ ಜಾರಿಗೆ ತನ್ನಿ ಎಂದು ಕಳೆದ ನವೆಂಬರ್ 15ರಿಂದ ಹೋರಾಟ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಕಿವಿಗೊಡುತ್ತಿಲ್ಲ’ ಎಂಬುದು ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮಿ, ಸಹ ಕಾರ್ಯದರ್ಶಿ ಎಸ್.ಸರೋಜ ಅವರ ಅಸಮಾಧಾನ.

‘ಎನ್‌ಪಿಎಸ್ ಪಿಂಚಣಿ’ ಮೋಸ ಮಾಡುವ ಯೋಜನೆಯಾಗಿದ್ದು, ಯಾವುದೇ ಕಾರಣಕ್ಕೂ ಇದನ್ನು ಒಪ್ಪುವುದಿಲ್ಲ. ಪಿಂಚಣಿಯ ನಿಧಿಯನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಹೀಗಾಗಿ ಹೂಡಿಕೆಯ ಮೇಲಿನ ಆದಾಯದ ಬಗ್ಗೆ ಯಾವುದೇ ಭರವಸೆ ಇಲ್ಲ. ಆದಾಯವು ಮಾರುಕಟ್ಟೆಯ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಆದಾಯ ಹೆಚ್ಚು ಕಡಿಮೆ ಆಗಬಹುದು. ಅಸಲು, ಬಡ್ಡಿಯ ಬಗ್ಗೆ ಯಾವುದೇ ಖಾತರಿ ಇರುವುದಿಲ್ಲ ಎಂಬುದು ಅವರ ವಾದ.

ಏನಿದು ಎನ್‌ಪಿಎಸ್ ಲೈಟ್?
2006ರ ನಂತರ ಸರ್ಕಾರಿ ಸೇವೆಗೆ ಸೇರ್ಪಡೆಯಾದ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಎನ್‌ಪಿಎಸ್ ಪಿಂಚಣಿ ಯೋಜನೆ ಜಾರಿಗೊಳಿಸಿದ್ದು, ಅದೇ ಮಾದರಿಯಲ್ಲಿ ಅಂಗನವಾಡಿ ನೌಕರರಿಗೂ ಪಿಂಚಣಿ ಯೋಜನೆ ರೂಪಿಸಲಾಗಿದೆ.

ಸರ್ಕಾರಿ ನೌಕರರ ಪಿಂಚಣಿ ಯೋಜನೆಯನ್ನು ‘ಎನ್‌ಪಿಎಸ್’ ಎಂದು ಕರೆಯಲಾಗುತ್ತಿದ್ದರೆ, ಅಸಂಘಟಿತ ವಲಯದ ಕಾರ್ಮಿಕರ ಪಿಂಚಣಿ ಯೋಜನೆಯನ್ನು ‘ಎನ್‌ಪಿಎಸ್ ಲೈಟ್’ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಕೂಲಿ ಕಾರ್ಮಿಕರು, ಗಾರೆ ಕೆಲಸ ಮಾಡುವವರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರು ಸೇರಿದಂತೆ ಯಾರು ಬೇಕಾದರೂ ಎನ್‌ಪಿಎಸ್ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT