ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿದಾರರ ದಿನ: ಆರೋಗ್ಯ ತಪಾಸಣೆ

Last Updated 20 ಡಿಸೆಂಬರ್ 2012, 8:52 IST
ಅಕ್ಷರ ಗಾತ್ರ

ಮುನಿರಾಬಾದ್: ಭಾರತೀಯ ಸ್ಟೇಟ್ ಬ್ಯಾಂಕ್‌ನ ಸ್ಥಳೀಯ ಶಾಖೆಯಲ್ಲಿ `ವಿಶ್ವ ಪಿಂಚಣಿದಾರರ ದಿನ'ದ ಅಂಗವಾಗಿ ಮಂಗಳವಾರ ಗ್ರಾಮದ ಪಿಂಚಣಿದಾರ ಗ್ರಾಹಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಆರ್ಥಿಕ ವ್ಯವಹಾರದ ಜೊತೆ ಸಮಾಜ ಸೇವೆ ಹೆಸರಿನಲ್ಲಿ ತನ್ನ ಗ್ರಾಹಕರು ಮತ್ತು ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದರ ಅಂಗವಾಗಿ ವಯಸ್ಸಾದ ಹಿರಿಯ ಪಿಂಚಣಿದಾರರಿಗೆ ಸ್ಥಳದಲ್ಲೇ `ರಕ್ತದೊತ್ತಡ ಮತ್ತು ಮಧುಮೇಹ'(ಬಿಪಿ, ಶುಗರ್) ತಪಾಸಣೆಯನ್ನು ಉಚಿತವಾಗಿ ನಡೆಸಿಕೊಟ್ಟಿತು.

ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್‌ನ ಮ್ಯಾನೇಜರ್ ಎಸ್.ಕೆ.ಶ್ರೀನಿವಾಸ, ವೈದ್ಯಕೀಯ ಕ್ಷೇತ್ರದಲ್ಲಿನ ಉನ್ನತ ಸಾಧನೆಯಿಂದ ಭಾರತೀಯರ ಜೀವಿತಾವಧಿ ಸ್ವಾತಂತ್ರ್ಯ ನಂತರ ಇದ್ದ 52 ವರ್ಷದಿಂದ ಸದ್ಯ 72 ವರ್ಷಕ್ಕೆ ಏರಿದೆ ಇದೊಂದು ಸಂತಸದ ವಿಚಾರ.

ಹಿರಿಯರಿಗೆ ಮುಖ್ಯವಾಗಿ ಕಾಡುವ ಬಿಪಿ ಮತ್ತು ಶುಗರ್‌ನ ತಪಾಸಣೆಯನ್ನು ತಮ್ಮ ಬ್ಯಾಂಕ್ ವತಿಯಿಂದ ಸ್ಥಳದಲ್ಲೇ ನಡೆಸಿ ಆರೋಗ್ಯ ಸಲಹೆ ನೀಡಲಾಗುತ್ತಿದೆ ಎಂದರು. ಅತಿಥಿಯಾಗಿ ಪಾಲ್ಗೊಂಡಿದ್ದ ಗ್ರಾಮ ಪಂಚಾಯಿತಿ ಸದಸ್ಯ ಬಾಲಚಂದ್ರನ್ ಮಾತನಾಡಿ, ಪಿಂಚಣಿದಾರರು ಬ್ಯಾಂಕ್‌ನಿಂದ ಹಣ ಪಡೆಯುವ ಸಂದರ್ಭದಲ್ಲಿ ವಿಳಂಬವಾಗಿ ಸಮಸ್ಯೆಯಾಗುತ್ತಿದೆ. ಇದನ್ನು ತಪ್ಪಿಸಲು ಪಿಂಚಣಿ ಪಡೆಯುವ ಒಂದುವಾರ ಕಾಲ ಶಾಖೆಯಲ್ಲಿ ವಿಶೇಷ ಕೌಂಟರ್‌ಅನ್ನು ತೆರೆದು ಅವರಿಗೆ ಅನುಕೂಲ ಮಾಡಿಕೊಡಬೇಕೆಂದು ಸಲಹೆ ನೀಡಿದರು. ತಪಾಸಣೆ ನಡೆಸಿದ ಡಾ.ಆನಂದ, ಪಿಂಚಣಿದಾರರ ಸಂಘದ ಪ್ರಧಾನ ಕಾರ್ಯದರ್ಶಿ ನರಸಿಂಹಯ್ಯ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ರವಿ ಮತ್ತು ಉಪಾಧ್ಯಕ್ಷ ಸಾದಿಕ್ ಮೆಹಬೂಬ್ ಇದ್ದರು. ಮುಖಂಡರಾದ ವೆಂಕೋಬ ದಾಸರ್ ಮತ್ತು ರವಿಕುಮಾರ್ ಉಪಸ್ಥಿತರಿದ್ದರು. ಮಹಿಳೆಯರು ಸೇರಿ ಸುಮಾರು 75 ಜನ ಪಿಂಚಣಿದಾರರು ಆರೋಗ್ಯ ತಪಾಸಣೆಗೊಳಪಟ್ಟರು. ಇದೇ ಸಂದರ್ಭದಲ್ಲಿ ಪಿಂಚಣಿ ಗ್ರಾಹಕರ ಸಮಸ್ಯೆಗಳನ್ನು ಆಲಿಸಿದ ಬ್ಯಾಂಕ್‌ನ ಮ್ಯಾನೇಜರ್ ಎಸ್.ಕೆ. ಶ್ರೀನಿವಾಸ, ವ್ಯಾವಹಾರಿಕ ಒತ್ತಡ, ಸಿಬ್ಬಂದಿ ಕೊರತೆ ಮತ್ತು ತಾಂತ್ರಿಕ ಕಾರಣಗಳಿಂದ ಕೆಲವು ಬಾರಿ ಸಮಸ್ಯೆಯಾಗಿದ್ದು ನಿಜ.

ಸಾಲಿನಲ್ಲಿ ನಿಲ್ಲುವ ಪ್ರಮೇಯ ತಪ್ಪಿಸಲು ಗ್ರಾಹಕರು `ಎಟಿಎಂ' ಕಾರ್ಡ್ ಬಳಸುವಂತೆ ಸಲಹೆ ನೀಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡುವತ್ತ ಗಮನಹರಿಸುತ್ತೇವೆ ಎಂದರು. ಪ್ರೇಮ್ ಸ್ಯಾಮ್ಯುಯೆಲ್ ಸ್ವಾಗತಿಸಿದರು. ಮಾರುತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT