ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಚ್.ಡಿ ಪಡೆದರೂ ವಾರ್ಡರ್ ಉದ್ಯೋಗ!

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮೈಸೂರು: ಹೆಸರು ಡಾ.ಶ್ರೀಕಂಠಪ್ಪ ಸಿಂಪಗೇರ್. ಮೂಲತಃ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಶಿವಪೇಟೆ ಗ್ರಾಮದವರು. ವಿದ್ಯಾಭ್ಯಾಸ ಎಂ.ಎ, ಎಂಫಿಲ್, ಪಿಎಚ್.ಡಿ ಪದವಿ. ಹಾವೇರಿಯ ಕಾರಾಗೃಹದಲ್ಲಿ ವಾರ್ಡರ್ ಹುದ್ದೆ. ಮೈಸೂರಿನಲ್ಲಿ ತರಬೇತಿ ಪಡೆದ ರಾಜ್ಯದ ವಿವಿಧ ಜಿಲ್ಲೆಗಳ 102 ಪ್ರಶಿಕ್ಷಣಾರ್ಥಿಗಳ ಪೈಕಿ ಅತಿ ಹೆಚ್ಚು ವ್ಯಾಸಂಗ ಮಾಡಿರುವ ಹೆಗ್ಗಳಿಕೆ ಇವರದ್ದು.

ಕಾರಾಗೃಹ ಇಲಾಖೆಯಲ್ಲಿ 90 ದಿನಗಳ ತರಬೇತಿ ಪೂರೈಸಿದ ಪ್ರಶಿಕ್ಷಣಾರ್ಥಿಗಳಿಗೆ ನಗರದ ಕೇಂದ್ರ ಕಾರಾಗೃಹ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ಡಾ.ಶ್ರೀಕಂಠಪ್ಪ ಸಿಂಪಗೇರ್ ಎಲ್ಲರ ಗಮನ ಸೆಳೆದರು.

ಮನೆಯಲ್ಲಿ ಬಡತನ. ಜೀವನಕ್ಕೆ ಕೂಲಿಯೇ ಆಧಾರ. ಕುಟುಂಬದವರೆಲ್ಲ ಅವಿದ್ಯಾವಂತರು. ಬಡತನದ ನಡುವೆಯೇ ಶ್ರೀಕಂಠಪ್ಪ 1986 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದರು. ಸರ್ಕಾರಿ ನೌಕರಿ ಪಡೆಯಬೇಕೆಂಬ ತುಡಿತ ಇತ್ತು. ಕೊನೆಗೂ ಅದು ಫಲಿಸಿತು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಮೇರೆಗೆ 2001 ನೇ ಸಾಲಿನಲ್ಲಿ ಕಾರಾಗೃಹ ಇಲಾಖೆಯಲ್ಲಿ ವಾರ್ಡರ್ ಹುದ್ದೆ ಸಿಕ್ಕಿತು.

ಕೆಲಸ ಸಿಕ್ಕ ಮಾತ್ರಕ್ಕೆ ಶ್ರೀಕಂಠಪ್ಪ ಸಿಂಪಗೇರ್ ಅವರ ಜ್ಞಾನದ ದಾಹ ಇಂಗಲಿಲ್ಲ. ಮತ್ತೆ ಓದು ಮುಂದುವರೆಸಿ ಪದವಿ ಪಡೆಯಬೇಕೆಂದು ಹಂಬಲಿಸಿದರು. ರಾಜಧಾನಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಲೇ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪದವಿ, ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.  ನಂತರ ಸಂಶೋಧನೆ ಮಾಡಬೇಕೆಂದು ಬಯಸಿದರು. ಎಸ್ಸೆಸ್ಸೆಲ್ಸಿ, ಎಂ.ಫಿಲ್ ಮತ್ತು ಎಂಎ ಮೂರರಲ್ಲೂ ಶ್ರೀಕಂಠಪ್ಪ ಅವರು ಶೇ 65.5 ಅಂಕ ಗಳಿಸಿರುವುದು ಮತ್ತೊಂದು ವಿಶೇಷ.

ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸಬೇಕೆಂದು ಶ್ರೀಕಂಠಪ್ಪ ಸಿಂಪಗೇರ್ ನಿರ್ಧರಿಸಿದರು. ಧಾರವಾಡ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎ.ಟಿ.ಕಿತ್ತೂರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡುವ ಅವಕಾಶ ಲಭಿಸಿತು. 'ಕರ್ನಾಟಕದಲ್ಲಿ ಕಾರಾಗೃಹಗಳ ಆಡಳಿತ-ಒಂದು ಅಧ್ಯಯನ' ವಿಷಯ ಕುರಿತು ಸಂಶೋಧನೆ ಮಾಡಿ 2006 ನೇ ಸಾಲಿನಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಪಡೆದರು. ಡಾಕ್ಟರೇಟ್ ಪದವಿ ಪಡೆದರೂ ಹುದ್ದೆಯಲ್ಲಿ ಬಡ್ತಿ ಮಾತ್ರ ಸಿಗಲಿಲ್ಲವಲ್ಲ ಎಂಬ ಕೊರಗು ಶ್ರೀಕಂಠಪ್ಪ ಸಿಂಪಗೇರ್ ಅವರಲ್ಲಿ ಇದೆ. ಕಾಲ ಕಾಲಕ್ಕೆ ಇಲಾಖಾ ಪರೀಕ್ಷೆ ತೆಗೆದುಕೊಂಡು ತೇರ್ಗಡೆಯಾದರು. ಆದರೆ 12 ವರ್ಷಗಳಿಂದಲೂ ವಾರ್ಡರ್ ಹುದ್ದೆಯಲ್ಲೇ ಮುಂದುವರೆಯುತ್ತಲೇ ಇದ್ದಾರೆ.

12 ಪುಸ್ತಕಗಳ ಲೇಖಕ: ಶ್ರೀಕಂಠಪ್ಪ ಸಿಂಪಗೇರ್ ಅವರು ಉನ್ನತ ವ್ಯಾಸಂಗ ಮಾಡಿ ಸುಮ್ಮನಾಗಿಲ್ಲ. ಕರ್ತವ್ಯದ ನಡುವೆ ಸಿಗುವ ಬಿಡುವನ್ನು ಸದ್ಬಳಕೆ ಮಾಡಿಕೊಂಡು ಪುಸ್ತಕಗಳನ್ನು  ಬರೆದಿದ್ದಾರೆ. 'ನವೋದಯ' 'ಮೊರಾರ್ಜಿ ವಸತಿ ಶಾಲೆ', ಮಕ್ಕಳ ಪ್ರತಿಭೆಗೆ ಸಂಬಂಧಿಸಿದಂತೆ ಈಗಾಗಲೇ 12 ಪುಸ್ತಕಗಳನ್ನು ಬರೆದಿದ್ದಾರೆ. ಆಧ್ಯಾತ್ಮದ ಬಗ್ಗೆ ಇವರಿಗೆ ಹೆಚ್ಚು ಒಲವು. ಇದೀಗ 'ತರಂಗಶಾಸ್ತ್ರ' ಪುಸ್ತಕ ಹೊರತರಲು ಸಿದ್ಧತೆ ನಡೆಸಿದ್ದಾರೆ.

'ಕರ್ತವ್ಯ ನಿರ್ವಹಿಸುವಾಗಲೇ ಓದಿ ಪದವಿ, ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪದವಿ ಗಳಿಸಿದ ಬಗ್ಗೆ ತೃಪ್ತಿ ಇದೆ. ಆದರೆ ವಿದ್ಯಾರ್ಹತೆಗೆ ಅನುಗುಣವಾಗಿ ಹುದ್ದೆ ದೊರೆತಿಲ್ಲ ಎಂಬ ಕೊರಗು ಇದೆ. ಅನೇಕ ಬಾರಿ ಪರೀಕ್ಷೆ ಬರೆದಿದ್ದರೂ ಪ್ರಯೋಜನವಾಗಿಲ್ಲ. ಆದರೂ ಪ್ರಯತ್ನ ಮುಂದುವರೆಸಿದ್ದೇನೆ. ಜೀವನದಲ್ಲಿ ಮಹತ್ತರ ಸಾಧನೆ ಮಾಡಬೇಕೆಂಬ ತುಡಿತ ಇದೆ. ನಾನು ಅವಿವಾಹಿತ. ಮದುವೆ ವಿಚಾರ ಇನ್ನೂ ತಲೆಗೆ ಹೊಕ್ಕಿಲ್ಲ. ಅಧ್ಯಾತ್ಮವೇ ತಲೆ ತುಂಬಾ ತುಂಬಿಕೊಂಡಿದೆ. ಮುಂದಾದರೂ ಹುದ್ದೆಗೆ ತಕ್ಕ ಉದ್ಯೋಗ ದೊರಕುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದೇನೆ' ಎಂದು ಶ್ರೀಕಂಠಪ್ಪ ಸಿಂಪಗೇರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT